ಕಾಂಗ್ರೇಸ್‌ಗೆ ಸಚಿವರ ಸಾಥ್, ಬಿಜೆಪಿಗೆ ಕೋಟ್ಯಾನ್ ನೇತೃತ್ವ

ಮೂಲ್ಕಿ; ಮೂಲ್ಕಿ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಐದು ದಿನಗಳು ಮಾತ್ರ ಉಳಿದಿದ್ದು ಬುಧವಾರ ಪ್ರಮುಖ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಿಜೆಪಿಯು ವಿವಿಧ ಸಭೆಗಳನ್ನು ನಡೆಸಿ ಚುನಾವಣೆಯ ಅಖಾಡಕ್ಕೆ ಇಳಿದಿದೆ.
ಕಾಂಗ್ರೇಸ್; ರಾಜ್ಯದ ಆಡಳಿತ ಪಕ್ಷವಾದ ಕಾಂಗ್ರೇಸ್ಸಿನ ಚುಕ್ಕಾಣಿಯನ್ನು ಸ್ಥಳೀಯವಾಗಿ ಸಚಿವ ಕೆ.ಅಭಯಚಂದ್ರರವರು ಹಿಡಿದಿದ್ದು, ಅಭ್ಯರ್ಥಿಗಳನ್ನು ತಯಾರಿ ಮಾಡಲು ಕಾರ್ಯಪ್ರವೃತ್ತರಾಗಿದ್ದಾರೆ. ಇದರಲ್ಲಿ ಕಾಂಗ್ರೇಸ್ ಒಂದು ಹಂತ ಮುಂದೆ ಹೋಗಿದ್ದು ಎಲ್ಲಾ ಕ್ಷೇತ್ರಗಳಲ್ಲಿ ಸಂಭಾವ್ಯ ಅಭ್ಯರ್ಥಿಗಳನ್ನು ಶೋಧನೆ ಮಾಡಿಕೊಂಡು ಒಂದೊಂದು ಕ್ಷೇತ್ರದಲ್ಲಿ ತಲಾ ಮೂವರು ಅಭ್ಯರ್ಥಿಗಳ ಹೆಸರನ್ನು ಅಂತಿಮವಾಗಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ಸಭೆಯಲ್ಲಿ ಮಂಗಳವಾರ ಮಂಡಿಸಿದ್ದಾರೆ ಎಂದು ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲ್ಕಿಯ ಲಲಿತ್ ಮಹಲ್‌ನಲ್ಲಿ ಸಚಿವ ಅಭಯಚಂದ್ರರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಮರಳಿ ಕಾಂಗ್ರೇಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಮೂಲ್ಕಿ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಿ.ಎಂ.ಆಸಿಫ್ ತಿಳಿಸಿದ್ದಾರೆ.
ಕಾಂಗ್ರೆಸ್ಸ್‌ನಿಂದ ಬಡಗುಹಿತ್ಲುವಿನಲ್ಲಿ ಅಬ್ದುಲ್ ರಜಾಕ್, ಚರಂತಿ ಪೇಟೆಯಲ್ಲಿ ಮಾಜಿ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಕೊಳಚಿಕಂಬಳದಲ್ಲಿ ಮಾಜಿ ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಧರ್ಮಸಾನದಲ್ಲಿ ಪುತ್ತುಬಾವ, ವನಭೋಜನದಲ್ಲಿ ವಿನಯ, ಕೆ.ಎಸ್.ರಾವ್.ನಗರದ ನಾಲ್ಕು ಕ್ಷೇತ್ರದಲ್ಲಿ ಕ್ರಮವಾಗಿ ಬಿ.ಎಂ.ಆಸಿಫ್, ವಿಮಲಾ, ಬಶೀರ್ ಕುಳಾಯಿ, ಜೀವನ್ ಪೂಜಾರಿ, ಅಥವ ಹರಿಶ್ಚಂದ್ರ, ಇದ್ದರೆ ಲಿಂಗಪ್ಪಯ್ಯಕಾಡಿನ ಎರಡು ಕ್ಷೇತ್ರದಲ್ಲಿ ಚಂದ್ರವ್ವ ಹಾಗೂ ಕಲಾವತಿ, ಚಿತ್ರಾಪುವಿನಲ್ಲಿ ಕುಸುಮಾ ಎಂಬುವವರು ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ; ಪ್ರಮುಖ ಎದುರಾಳಿ ಪಕ್ಷವಾಗಿರುವ ಬಿಜೆಪಿಗೆ ಕಳೆದ ಬಾರಿ ಅಭಯಚಂದ್ರರ ವಿರುದ್ಧ ಪರಾಭವಗೊಂಡ ಉಮಾನಾಥ ಕೋಟ್ಯಾನ್‌ರವರನ್ನೇ ಸ್ಥಳೀಯವಾಗಿ ಅಭ್ಯರ್ಥಿಗಳು ನೆಚ್ಚಿಕೊಂಡಿದ್ದಾರೆ. ಬುಧವಾರವೂ ಒಂದೆರಡು ಕ್ಷೇತ್ರದ ಅಭ್ಯರ್ಥಿಗಳನ್ನು ಅಂತಿಮವಾಗಿ ಸ್ಥಳೀಯ ನಾಯಕರು ತಯಾರಿ ನಡೆಸಿದ್ದರು.
ಮೂಲ್ಕಿಯ ಸ್ವಾಗತ್ ಸಭಾಂಗಣದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್‌ರವರು ಬಿಜೆಪಿ ಕಾರ್ಯಕರ್ತರ ಸಭೆಯನ್ನು ನಡೆಸಿದ್ದು ಕ್ಷೇತ್ರದ ಉಸ್ತುವಾರಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು ಹಾಗೂ ಜಿಲ್ಲಾ ಉಪಾಧ್ಯಕ್ಷೆ ಕಸ್ತೂರಿ ಪಂಜರನ್ನು ನೇಮಕ ಮಾಡಲಾಗಿದೆ ಎಂದು ಹಿರಿಯ ನಾಯಕ ಉಮೇಶ್ ಮಾನಂಪಾಡಿ ಪತ್ರಿಕೆಗೆ ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಹಾಲಿ ಅಭ್ಯರ್ಥಿಗಳಾಗಿ ಬಡಗುಹಿತ್ಲುವಿನಲ್ಲಿ ಹಾಲಿ ಸದಸ್ಯರಾಗಿದ್ದ ಪುರುಷೋತ್ತಮ್, ಮಾನಂಪಾಡಿಯಲ್ಲಿ ಉಮೇಶ್ , ಚರಂತಿ ಪೇಟೆಯಲ್ಲಿ ಹರ್ಷರಾಜ್ ಶೆಟ್ಟಿ, ಕೊಳಚಿಕಂಬಳದಲ್ಲಿ ಸುನಿಲ್ ಆಳ್ವಾ, ಧರ್ಮಸಾನದಲ್ಲಿ ಪ್ರವೀಣ್, ವನಭೋಜನದಲ್ಲಿ ಮೀನಾಕ್ಷಿ, ಕೆ.ಎಸ್.ರಾವ್.ನಗರದಲ್ಲಿ ಶೈಲೇಶ್, ಚಿತ್ರಾಪುವಿನಲ್ಲಿ ಕುಸುಮಾ ಎಂಬುವವರು ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ.
ಜೆಡಿಎಸ್; ಕಾಂಗ್ರೇಸ್, ಬಿಜೆಪಿ ಕ್ಷೇತ್ರದಲ್ಲಿ ಚುನಾವಣೆಯ ಪ್ರಕ್ರಿಯೆಯನ್ನು ತೀವ್ರವಾಗಿ ನಡೆಸುತ್ತಿದ್ದು ಕಳೆದ ಬಾರಿ ಒಂದು ಸ್ಥಾನವನ್ನು ಪಡೆದು ತನ್ನ ಅಸ್ತಿತ್ವ ತೋರಿಸಿರುವ ಜೆಡಿಎಸ್ ಸಹ ಮಾಜಿ ಸಚಿವ ಅಮರನಾಥ ಶೆಟ್ಟಿಯವರ ಸಾರಥ್ಯದಲ್ಲಿ ಸಭೆಯನ್ನು ನಡೆಸಿ ಎಲ್ಲಾ ಕ್ಷೇತ್ರಗಳಲ್ಲಿ ಅಲ್ಲದಿದ್ದರು ತಮ್ಮ ಪಕ್ಷದ ಪ್ರಭಾವಿ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣದಲ್ಲಿ ನಿಲ್ಲಿಸಲು ಪ್ರಯತ್ನ ನಡೆಸಿದೆ ಎಂದು ಪ್ರಮುಖ ಯುವ ನಾಯಕ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಹೇಳಿದ್ದಾರೆ.
ಕೆ.ಎಸ್.ರಾವ್.ನಗರದಲ್ಲಿ ಈಗಲೂ ಅಮರನಾಥ ಶೆಟ್ಟರ ಬೆಂಬಲಿಗರಿದ್ದು, ಬಡಗುಹಿತ್ಲು, ಧರ್ಮಸಾನ, ಚರಂತಿ ಪೇಟೆ, ಮಾನಂಪಾಡಿಯಲ್ಲಿ ಅಭ್ಯರ್ಥಿಗಳ ಉಮೇದುವಾರಿಕೆ ಇದೆ ಎಂದು ಹೇಳಲಾಗಿದೆ.
ಉಳಿದಂತೆ ಮೂಲ್ಕಿ ಪಟ್ಟಣ ಪಂಚಾಯಿತಿಗೆ ಪ್ರಥಮವಾಗಿ ಎಸ್‌ಡಿಪಿಐ ಪಕ್ಷವು ಸಹ ಸುಮಾರು ಏಳು ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ ಎಂದು ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಹೇಳಿದ್ದಾರೆ. ಜೊತೆಗೆ ವಿಶೇಷವಾಗಿ ಆಮ್ ಆದ್ಮಿ ಪಕ್ಷವು ಸಹ ಸ್ಪರ್ಧೆ ನೀಡಲಿದ್ದು ಬಡುಗುಹಿತ್ಲುವಿನಿಂದ ತಾನು ಸ್ಪರ್ಧಿಸುತ್ತಿದ್ದೇನೆ ಎಂದು ಕಮಲಾಕ್ಷ ಎಂಬುವವರು ಪತ್ರಿಕೆಯೊಂದಿಗೆ ಹೇಳಿಕೊಂಡಿದ್ದಾರೆ.
2014ರ ಮೂಲ್ಕಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಸಾಮಾನ್ಯ (5), ಹಿಂದುಳಿದ ವರ್ಗದ (3)ಪುರುಷರಿಗೆ ಒಟ್ಟು 8 ಸ್ಥಾನಗಳಿದ್ದರೆ, ಮಹಿಳೆಯರಿಗೆ ಸಾಮಾನ್ಯ(4), ಹಿಂದುಳಿದ ವರ್ಗ (3) ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ತಲಾ ಒಂದು ಸ್ಥಾನ ಮೀಸಲಿದ್ದು ಮಹಿಳಾ ಪ್ರಾಬಲ್ಯ ಹೆಚ್ಚಾಗಲಿದೆ.

Kinnigoli 08011401

Pics by :Narendra Kerekadu

 

Comments

comments

Comments are closed.

Read previous post:
ಕಾರ್ನಾಡ್ ಯಂಗ್‌ಸ್ಟಾರ‍್ಸ್ ಅಸೋಸಿಯೇಶನ್ ವಾರ್ಷಿಕೋತ್ಸವ

ಮೂಲ್ಕಿ:ಯುವ ಪೀಳಿಗೆಯ ಉನ್ನತಿಗಾಗಿ ಯುವ ಸಂಘಟನೆಗಳು ಉತ್ತಮ ಶಿಕ್ಷಣ ಹಾಗೂ ಉದ್ಯೋಗ ಮತ್ತು ಕ್ರೀಡೆಯತ್ತ ಹೆಚ್ಚನ ಗಮನ ಹರಿಸುವುದರೊಂದಿಗೆ ಸಮಾಜ ಪಿಡುಗುಗಳಾದ ದುಶ್ಚಟಗಳ ನಿವಾರಣೆಗೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕು...

Close