ಪಕ್ಷೇತರನಾಗಿ ಟಾನಿಕ್ ನೀಡಲು ಸಜ್ಜಾದ ಕಮಲಾಕ್ಷ !!

ಮೂಲ್ಕಿ; ಇಲ್ಲಿನ ನಗರ ಪಂಚಾಯತ್ ಚುನಾವಣೆಗೆ ಮಹೂರ್ತ ಫಿಕ್ಸ್ ಆಗಿದ್ದು ಬಪ್ಪನಾಡು ಪ್ರಥಮ ವಾರ್ಡ್‌ನಲ್ಲಿ ಸ್ಪರ್ಧಿಸುತ್ತಿರುವ ಕಮಲಾಕ್ಷ ಬಡಗುಹಿತ್ಲು ಎಂಬ ತೂಕದ ವ್ಯಕ್ತಿ  ಪಕ್ಷೇತರನಾಗಿ ನಾಮಪತ್ರ ಸಲ್ಲಿಕೆಯಿಂದ ಈ ಬಾರಿ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಲ್ಲೂ ಸಂಚಲನ ಮೂಡಿಸುವ ಲಕ್ಷಣ ಕಾಣುತ್ತಿದೆ.
ಕಳೆದ ಬಾರಿ ಬಿಜೆಪಿಯನ್ನು ಕಮಲಾಕ್ಷರವರು ಪ್ರಬಲವಾಗಿ ಬೆಂಬಲಿಸಿ ಬಪ್ಪನಾಡು ದೇವಳದ ಅಧೀನದ ಬಡಗುಹಿತ್ಲು ವಾರ್ಡ್‌ನಲ್ಲಿ ಪುರುಷೋತ್ತಮರಾವ್‌ರವರು ಗೆದ್ದು ಬರಲು ಕಾರಣರಾದವರೇ ಈ ಬಾರಿ ಅದೇ ಬಿಜೆಪಿಯ ಪುರಷೋತ್ತಮರ ಎದುರಲ್ಲಿ ತೊಡೆತಟ್ಟಿ ಅಖಾಡಕ್ಕೆ ಇಳಿದಿದ್ದಾರೆ. ಕಮಲಾಕ್ಷರ ಆಪ್ತ ಸ್ನೇಹಿತ ಬಿಜೆಪಿಯ ಸುಖಾನಂದ ಶೆಟ್ಟರ ಅಕಾಲಿಕ ಮರಣದಿಂದ ಅವರನ್ನು ಸ್ಮರಿಸಿಕೊಂಡೇ ಪ್ರಾಮಾಣಿಕವಾಗಿ ದುಡಿದಿದ್ದರಲ್ಲದೇ ಕಾಂಗ್ರೇಸ್ಸಿನ ಹಳೆ ಹುಲಿಗಳ ನಡುವೆ ಹೋರಾಟ ನಡೆಸಿ ಬಿಜೆಪಿ ಜಯ ಗಳಿಸಲೂ ಯಶಸ್ವಿಯೂ ಆಗಿದ್ದರು.
ನಿನ್ನೆ ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಅವರ ಬೆಂಬಲಿಗರನ್ನು ನೋಡಿಯೇ ಈಗ ಕಾಂಗ್ರೆಸ್ ಹಾಗೂ ಬಿಜೆಪಿ ಎದೆಯಲ್ಲಿ ಡವಡವ ಶುರವಾಗಿದೆ. ಮೂಲ್ಕಿಯಲ್ಲಿ ಹಿಂದೂ ಯುವಸೇನೆಯ ಸ್ಥಾಪಕ ಗೋವಿಂದ ಕೋಟ್ಯಾನ್ ರಂತಹ ಹಿರಿಯರು ಸಹ ಕಮಲಾಕ್ಷರೊಂದಿಗೆ ಇರುವುದು ಆನೆಬಲ ಬಂದಂತಾಗಿದೆ.
ಕಮಲಾಕ್ಷರವರು ಪತ್ರಿಕೆಯೊಂದಿಗೆ ಮಾತನಾಡಿ ನಾನು ಕಳೆದ ಬಾರಿ ಬಿಜೆಪಿಯ ಅಭ್ಯರ್ಥಿ ಜಯ ಗಳಿಸಲು ತನ್ನಿಂದಾದಷ್ಟು ಜೀವದ ಹಂಗು ತೊರೆದು ಕೆಲಸ ಮಾಡಿದ್ದೆ. ಆದರೆ ಜಯ ಗಳಿಸಿದ ಮೇಲೆ ನಾವು ಬೇಡವಾದೆವು ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಯಾವುದೇ ಪಕ್ಷಕ್ಕೆ ಜೋತು ಬೀಳದೇ ಈಗಾಗಲೇ ಸ್ಥಳೀಯವಾಗಿ ಸಾಮಾಜಿಕ ಚಟುವಟಿಕೆಯನ್ನು ನಿಸ್ವಾರ್ಥದಿಂದ ಮಾಡಿಕೊಂಡು ಬಂದಿರುವ ತನಗೆ ಪರಿಸರದ ಬೆಂಬಲ ಸಿಕ್ಕಿದೆ ಆರಂಭದಲ್ಲಿ ಆಮ್ ಆದ್ಮಿ ಪಕ್ಷದಲ್ಲಿ ಸ್ಪರ್ಧಿಸಲು ಮನಸ್ಸಿದ್ದರೂ ಅದರ ಚಿಹ್ನೆಯ ಗೊಂದಲದಿಂದ ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ.  ಸ್ಥಳೀಯ ಪರಿಸರ ಅಭಿವೃದ್ಧಿ ಕಾಣಬೇಕು ಎಂಬ ದೃಷ್ಟಿಕೋನ ನನ್ನ ಸ್ಪರ್ಧೆಗೆ ಮೂಲ ಕಾರಣ ಎಂದು ಹೇಳಿದರು.
ಬಡಗುಹಿತ್ಲುವಿನಲ್ಲಿ ಬಿಜೆಪಿಯಿಂದ ಹಾಲಿ ಸದಸ್ಯ ಪುರುಷೋತ್ತಮ ಸ್ಪರ್ಧಿಸಲು ಉತ್ಸಾಹ ತೋರಿದ್ದು ಈಗ ಕಮಲಾಕ್ಷರವರ ಸ್ಪರ್ಧೆಯಿಂದ ವಾರ್ಡ್‌ನ್ನು ಅಷ್ಟು ಸುಲಭದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಬಿಜೆಪಿಯಲ್ಲಿಯೇ ನಡುಕ ಶುರುವಾಗಿದೆ. ಇಲ್ಲಿ ಬಿಲ್ಲವರೇ ಅಧಿಕ ಸಂಖ್ಯೆಯಲ್ಲಿರುವುದರಿಂದ ಸಹಜವಾಗಿಯೇ ಜಾತಿ ಭಾವನೆಯಿಂದ ಕಮಲಾಕ್ಷರನ್ನು ಬೆಂಬಲಿಸುವ ಸಾಧ್ಯತೆಯೇ ಹೆಚ್ಚು ಎನ್ನಲಾಗಿದೆ. ಈ ವಾರ್ಡಿನಲ್ಲಿ ಕಾಂಗ್ರೆಸ್ಸಿನಿಂದ ಅಬ್ದುಲ್ ರಜಾಕ್‌ರನ್ನು ಅಭ್ಯರ್ಥಿಯಾಗಲಿದ್ದಾರೆ. ರಜಾಕ್ ಹೊರಗಿನವರಾದರು ಬಹಳಷ್ಟು ಪರಿಚಿತ ವ್ಯಕ್ತಿ. ಅವರು ಈಗಾಗಲೇ ತಮ್ಮ ಪ್ರಚಾರವನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ವಾರ್ಡ್‌ನಲ್ಲಿಯೇ ಇದ್ದು ನಡೆಸುತ್ತಿದ್ದು ನಾಮಪತ್ರವನ್ನು ಅಧಿಕೃತವಾಗಿ ಇನ್ನಷ್ಟೇ ಸಲ್ಲಿಸಬೇಕಾಗಿದೆ. ಕೆಲವೊಂದು ಕೆಲಸ ಕಾರ್ಯವನ್ನು ಯಾವುದೇ ಮುಲಾಜಿಲ್ಲದೇ ಮಾಡಿಕೊಡುವ ವ್ಯಕ್ತಿ ಎಂದೇ ಪ್ರಸಿದ್ಧರಾಗಿರುವುದರಿಂದ ಒಂದಷ್ಟು ಮತಗಳು ಬಿದ್ದರು ಅದು ಗೆಲುವಿನ ಹತ್ತಿರ ಸೆಳೆಯುತ್ತದೆಯೇ ಎಂದು ಕಾದು ನೋಡಬೇಕು.
ಕೆ.ಎಸ್.ರಾವ್.ನಗರದಲ್ಲಿ ಮಿನಿ ಎಂಎಲ್‌ಎ ಎಂದೇ ಪರಿಚಿತರಾಗಿರುವ ಕಾಂಗ್ರೆಸ್ಸಿನ ಬಿ.ಎಂ.ಆಸಿಫ್‌ರ ಮುಂದೆ ಬಿಜೆಪಿಯ ಶೈಲೇಶ್ ಎಂಬುವವರು ವಾರ್ಡ್ 11ರಲ್ಲಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಆದರೆ ಆಸಿಫ್ ಇನ್ನಷ್ಟೇ ನಾಮಪತ್ರ ಸಲ್ಲಿಸಬೇಕಾಗಿದ್ದು ಇಲ್ಲಿ ಕೇವಲ 279 ಮತಗಳ ನಡುವೆ ಹೋರಾಟ ನಡೆಯಲಿದೆ.
ಮೂಲ್ಕಿಯ ಅತಿ ಕುತೂಹಲ ಕಣವೆಂದೇ ಪರಿಚಿತವಾಗಿರುವ ಚರಂತಿಪೇಟೆ (ವಾರ್ಡ್6)ಯಲ್ಲಿ ಪಕ್ಷೇತರರಾಗಿ ದಿನೇಶ್ ಶೆಣೈ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್ಸಿನಿಂದ ಶಶಿಕಾಂತ ಶೆಟ್ಟಿ ಹಾಗೂ ಬಿಜೆಪಿಯಿಂದ ಹರ್ಷರಾಜ್ ಶೆಟ್ಟಿಯವರ ನಡುವೆ ಸ್ಪರ್ಧೆ ನಡೆಯಲಿದೆ ಎಂದು ತಿಳಿದು ಬಂದಿದೆ ಕಳೆದ ವಾರ ಚರಂತಿಪೇಟೆ ರಸ್ತೆ ತಡೆ ಪ್ರತಿಭಟನೆಯ ಪುರಾಣವೂ ಸಹ ಇದೇ ವಾರ್ಡ್‌ನಲ್ಲಿ ನಡೆದಿದ್ದು ಪರ ವಿರೋಧದ ಇಬ್ಬರು ಬಂಟರ ನಡುವಿನ ಹೋರಾಟಕ್ಕೆ ಚುನಾವಣಾ ಕಣವು ಸಜ್ಜಾಗಲಿದೆ. ಇಲ್ಲಿ ಬಿಜೆಪಿಯ ಜಿಎಸ್‌ಬಿ ಮತಗಳನ್ನು ವಿಭಜನೆ ಮಾಡಲು ಪಕ್ಷೇತರರನ್ನು ಸ್ಪರ್ಧಿಸಲು ಕಾಂಗ್ರೆಸ್ ಪ್ರೇರಣೆ ನೀಡಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
ಇನ್ನುಳಿದಂತೆ ಎಸ್‌ಡಿಪಿಐ ಹಾಗೂ ಜೆಡಿಎಸ್ ಇನ್ನಷ್ಟೇ ಚುನಾವಣಕಣದಲ್ಲಿ ತೊಡಗಿಕೊಳ್ಳಬೇಕಾಗಿದ್ದು. ಸೋಮವಾರ ಜ.13ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ ಚುನಾವಣೆ ಅಖಾಡ ರಂಗೇರುತ್ತಿದೆ.

OLYMPUS DIGITAL CAMERAPuneethkrishna

Comments

comments

Comments are closed.

Read previous post:
ಕುಬೆವೂರು ಇಂಟರ್ ಲಾಕ್ ಅಳವಡಿಕೆ

ಕಿನ್ನಿಗೋಳಿ : ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಬೆವೂರು ಬಸ್ ನಿಲ್ದಾಣದಿಂದ ಬಾಳಿಕೆಗೆ ಹೋಗುವ ರಸ್ತೆಯನ್ನು 13ನೇ ಹಣಕಾಸು ಯೋಜನೆ ಹಾಗೂ ೨ ನೇ ವಾರ್ಡ್ ಗ್ರಾಮ...

Close