ಮೂಲ್ಕಿ ಪ.ಪಂ.ಚುನಾವಣೆ ಸ್ವಾರಸ್ಯ

ಮೂಲ್ಕಿ: ನಿಧಾನವಾಗಿ ಮೂಲ್ಕಿಯ ಪಟ್ಟಣ ಪಂಚಾಯಿತಿಯ ಚುನಾವಣ ಕಣವು ಸದ್ದಿಲ್ಲದೆ ರಂಗೇರುತ್ತಿದ್ದು, ಪ್ರಸ್ತುತ ಚುನಾವಣೆಯಲ್ಲಿ ಹಲವಾರು ಸ್ವಾರಸ್ಯಗಳಿದ್ದು ಅದರಲ್ಲಿ ಪ್ರಮುಖವಾಗಿ ವಾರ್ಡ್‌ವೊಂದರಲ್ಲಿ ಒರ್ವನ ಇಬ್ಬರು ಪತ್ನಿಯರೂ ಸಹ ಪರಸ್ಪರ ಎದುರಾಳಿಯಾಗಿರುವುದು ವಿಶೇಷವಾಗಿದೆ.
ವಾರ್ಡ್ 14ರಲ್ಲಿ (ಲಿಂಗಪ್ಪಯ್ಯಕಾಡು) ದೇವಪ್ಪ ಎಂಬುವವರ ಮೊದಲ ಪತ್ನಿ ಚಂದ್ರವ್ವ ಕಾಂಗ್ರೆಸ್‌ನಲ್ಲಿ ರ್ಸ್ಪರ್ಧಿಸುತ್ತಿದ್ದರೆ ಅವರ ಎದುರಾಳಿಯಾಗಿ ಆತನ ಎರಡನೇ ಪತ್ನಿ ಶಂಕ್ರವ್ವ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಇದು ಈ ಚುನಾವಣೆಯ ವಿಶೇಷತೆ ಆಗಿದೆ. ಇಬ್ಬರೂ ಜಿದ್ದಾಜಿದ್ದಿಯ ಪ್ರಚಾರ ನಡೆಸುತ್ತಿದ್ದಾರೆ.
ಕಳೆದ ಕಾಂಗ್ರೆಸ್ ಆಡಳಿತದ (2009) ಅವಧಿಯ ಮೊದಲ ಅಧ್ಯಕ್ಷರಾಗಿದ್ದ ಬಿ.ಎಂ.ಆಸಿಫ್, ಎರಡನೇ (2011)ಅವಧಿಯ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಈ ಎರಡೂ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಯೋಗೀಶ್ ಕೋಟ್ಯಾನ್ ಇವರು ಮೂವರು ಸಹ ನಿರಂತರ ಮೂರನೇ ಬಾರಿ ಸ್ಪರ್ಧಾ ಕಣದಲ್ಲಿದ್ದಾರೆ. ಕಾಂಗ್ರೆಸ್ಸಿನ ಶಶಿಕಾಂತ ಶೆಟ್ಟಿ, ಯೋಗೀಶ್ ಕೋಟ್ಯಾನ್, ಪುತ್ತುಬಾವ, ಅಬ್ದುಲ್ ರಜಾಕ್ ತಮ್ಮ ಸ್ವಕ್ಷೇತ್ರ ಬಿಟ್ಟು ಬೇರೆ ಕಡೆಗಳಲ್ಲಿ ಸ್ಪರ್ಧಿಸುತ್ತಿದ್ದು ಅವರೆಲ್ಲರಿಗು ಅವರ ಉಮೇದುವಾರಿಕೆಗೆ ಮತ ಹಾಕಿಕೊಳ್ಳುವ ಅವಕಾಶದಿಂದ ವಂಚಿತರಾಗಿದ್ದಾರೆ.
ಬಿಜೆಪಿಯ ಪುರುಷೋತ್ತಮರಾವ್, ವಸಂತಿ ಭಂಡಾರ್ತಿ, ಕಾಂಗ್ರೆಸ್ಸಿನ ಪುತ್ತುಬಾವ ಎರಡನೇ ಬಾರಿ ಸ್ಪರ್ಧೆಯಲ್ಲಿದ್ದಾರೆ. ವಾರ್ಡ್  1ರಲ್ಲಿ ಸ್ಪರ್ಧಿಸುತ್ತಿರುವ ಅಬ್ದುಲ್ ರಜಾಕ್ ಈ ಹಿಂದೆ ಲೋಕಸಭಾ ಕ್ಷೇತ್ರಕ್ಕೂ ಸ್ಪರ್ಧಿಸಿರುವ ಅನುಭವ ಇದ್ದರೆ ಕಳೆದ ಬಾರಿ ಜೆಡಿಎಸ್‌ನಿಂದ ತಮ್ಮ ಅದೃಷ್ಟ ಪರೀಕ್ಷೆ ನಡೆಸಿ ಸೋತಿದ್ದರೆ, ಈ ಬಾರಿ ಕಾಂಗ್ರೆಸ್‌ನ ಹುರಿಯಾಳಾಗಿದ್ದಾರೆ.
ಸ್ಪರ್ಧಿಯೊಬ್ಬರು ಕೇವಲ ಮೂರನೇ ತರಗತಿಯ ಕನಿಷ್ಠ ವಿದ್ಯಾಭ್ಯಾಸ ಪಡೆದಿದ್ದರೆ, 6ನೇವಾರ್ಡ್‌ನಿಂದ ಬಿಜೆಪಿಯಿಂದ ಸ್ಪರ್ಧಿಸಿರುವ ಹರ್ಷರಾಜ್ ಶೆಟ್ಟಿ ಒಂದು ಪದವಿ ಮೂರು ಸ್ನಾತಕೋತ್ತರ ಪದವಿಯ ಗರಿಷ್ಠ ಶಿಕ್ಷಣ ಪಡೆದು ಜಿಲ್ಲಾ ಯುವಜನ ಪ್ರಶಸ್ತಿ ಸಹಿತ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ವಾರ್ಡ್ 7ರಲ್ಲಿನ ಕಣದಲ್ಲಿರುವ ಬಿಜೆಪಿಯ ಸುನಿಲ್ ಆಳ್ವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಿದ್ದಾಗ ನಾಮ ನಿರ್ದೇಶನಗೊಂಡ ಸದಸ್ಯರಾಗಿದ್ದರು.
17ಸ್ಥಾನಕ್ಕೆ ಒಟ್ಟು 49 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಯಲ್ಲಿದ್ದು, ಕಣದಲ್ಲಿ 27 ಮಹಿಳೆಯರು, 22 ಪುರುಷರಿದ್ದರೆ, ಹಿಂದೂ ಧರ್ಮದವರು 36, ಮುಸ್ಲಿಂ 11, ಕ್ರೈಸ್ತರು ಇಬ್ಬರಿದ್ದಾರೆ. ಕಾಂಗ್ರೆಸ್, ಬಿಜೆಪಿ ಎಲ್ಲಾ 17 ಕ್ಷೇತ್ರದಲ್ಲಿ ನೇರಾ ನೇರ ಸ್ಪರ್ಧಿಸಿದೆ, ಜೆಡಿಎಸ್(9), ಎಸ್‌ಡಿಪಿಐ(2) ಸಹಿತ ಪಕ್ಷೇತರರು(4)ಕಣದಲ್ಲಿದ್ದಾರೆ. ವಾರ್ಡ್ 6ರಲ್ಲಿ ಗರಿಷ್ಠ ಐದು ಜನರು ಸ್ಪರ್ಧಾಳುಗಳಿದ್ದರೆ, 6ಕಡೆಗಳಲ್ಲಿ ಇಬ್ಬರೇ ಕಣದಲ್ಲಿದ್ದಾರೆ.
ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಸ್‌ಡಿಪಿಐ ಸಹಿತ ಯಾವ ಪಕ್ಷಗಳು ಸಹ ಸಾರ್ವಜನಿಕ ಸಭೆಯನ್ನು ನಡೆಸದೇ ಮನೆ ಮನೆಗೆ ತೆರಳಿ ಪ್ರಚಾರ ಮಾಡುವಲ್ಲಿ ಉತ್ಸಾಹ ತೋರಿದ್ದಾರೆ. ಸಭೆಗಳನ್ನು ನಡೆಸಲು ಪೊಲೀಸ್ ಇಲಾಖೆಗೆ ಯಾವುದೇ ಪಕ್ಷವು ಮನವಿ ಮಾಡಿಲ್ಲ. ಜ.23ರಂದು ಮಾತ್ರ ಬಿಜೆಪಿ ಪೇಟೆಯಲ್ಲಿ ನಡೆಸಲಿದೆ ಎಂದು ಹೇಳಿಕೊಂಡಿದೆ.
ಕಾಂಗ್ರೆಸ್‌ಗೆ ಸಚಿವ ಅಭಯಚಂದ್ರ, ಬಿಜೆಪಿಗೆ ಉಮಾನಾಥ ಕೋಟ್ಯಾನ್, ಜೆಡಿಎಸ್‌ಗೆ ಅಮರನಾಥ ಶೆಟ್ಟಿ ನೇತೃತ್ವ ವಹಿಸಿದ್ದಾರೆ.
ಪ್ರಸ್ತುತ ಚುನಾವಣೆಯಲ್ಲಿ ಆಯ್ಕೆಯಾಗುವ ಆಡಳಿತ ಸದಸ್ಯರು ಮುಂದಿನ ಐದು ವರ್ಷದ ಅವಧಿಯನ್ನು ಪೂರೈಸುವುದಿಲ್ಲ ಎಂಬ ಮಾತು ಅಧಿಕಾರಿ ವರ್ಗದಿಂದ ಕೇಳಿ ಬಂದಿದೆ. ಕಾರಣ ಸರ್ಕಾರವು ಮೂಲ್ಕಿ ಪಟ್ಟಣ ಪಂಚಾಯಿತಿಯನ್ನು ಗ್ರೇಟರ್ ಮಂಗಳೂರಿಗೆ ಸೇರಿಸುವ ಪ್ರಯತ್ನ ನಡೆಸಿದ್ದು ಚುನಾಯಿತ 17 ಸದಸ್ಯರ ಅವಧಿ ಮೊಟಕುಗೊಳ್ಳಲಿದೆ ಎನ್ನಲಾಗಿದೆ. 2011ರ ಜನಗಣತಿಯಂತೆ ಗ್ರೇಟರ್ ಮಂಗಳೂರು ಆದಲ್ಲಿ 17 ಸ್ಥಾನದಿಂದ ಕೇವಲ 5 ಸ್ಥಾನ ಮಾತ್ರ ಉಳಿಯಲಿದ್ದು ಮರು ಚುನಾವಣೆಯು ವರ್ಷದಲ್ಲಿಯೇ ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಎಲೆಕ್ಷನ್ ಕಿಕ್…

ಚುನಾವಣೆಯ ರಂಗು ಒಂದೆಡೆ ಏರುತ್ತಿದ್ದರೆ, ಮೂಲ್ಕಿ, ಕಿನ್ನಿಗೋಳಿ, ಪಡುಬಿದ್ರಿ ಬಾರ್ ವೈನ್ ಶಾಪ್‌ಗಳಲ್ಲಿ ವ್ಯವಹಾರ ಜಿಗಿತುಕೊಂಡಿದೆ ಎಂದು ಬಾರ್ ಮಲಕರೊಬ್ಬರು ಹೇಳಿಕೊಂಡಿದ್ದಾರೆ. ಇದರೊಂದಿಗೆ ಕೆಲವೊಂದು ವಾರ್ಡ್‌ಗಳಲ್ಲಿ ಸ್ಪರ್ಧಾಳುಗಳ ನಡುವಿನ ಹೋರಾಟವು ಬೆಟ್ಟಿಂಗ್‌ಗೆ ಅವಕಾಶ ಮಾಡಿಕೊಟ್ಟಿದ್ದು ನಿರ್ದಿಷ್ಟ ಸ್ಥಳಗಳಲ್ಲಿ ಈ ಅವ್ಯವಹಾರ ನಡೆಯುತ್ತಿದೆ ಎಂದು ಸ್ಪರ್ಧಾಳುವೊಬ್ಬರು ಪ್ರತಿಕ್ರಿಯಿಸಿದ್ದಾರೆ.

Kinnigoli 23011404Narendra Kerekadu

 

Comments

comments

Comments are closed.

Read previous post:
ಮೂಲ್ಕಿ: ಸತ್ಯನಾರಾಯಣ ಪೂಜೆ

ಮೂಲ್ಕಿ: ಬಿಲ್ಲವ ಸಮಾಜ ಮೂಲ್ಕಿಯಲ್ಲಿ ಗುರುವಾರ ಸಮೂಹಿಕ ಸತ್ಯನಾರಾಯಣ ಪೂಜೆ ಜರುಗಿತು. Bhagyawan Sanil

Close