ಐಕಳ ಗ್ರಾಮ ಸಭೆ

ಕಿನ್ನಿಗೋಳಿ : ಶುಕ್ರವಾರ ದಾಮಸ್‌ಕಟ್ಟೆ ಕಿರೆಂ ಚರ್ಚ್‌ನ ಮಿನಿ ಸಭಾ ಭವನದಲ್ಲಿ ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಅಧ್ಯಕ್ಷತೆಯಲ್ಲಿ ಐಕಳ ಗ್ರಾಮ ಪಂಚಾಯಿತಿಯ 2013-14ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ನಡೆಯಿತು.

ಗ್ರಾಮಸಭೆಗೆ ಅತ್ಯಧಿಕ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸುವಂತೆ ಪ್ರೋತ್ಸಾಹಿಸಲು, ಪಂಚಾಯತ್‌ರಾಜ್ ವ್ಯವಸ್ಥೆಯ ಆಧಾರಸ್ತಂಭದಂತಿರುವ ಗ್ರಾಮಸಭೆಯ ಮಹತ್ವವನ್ನು ತಿಳಿಯಪಡಿಸುವ ಗ್ರಾಮಸಭೆಯ ನೋಟಿಸನ್ನು ಐಕಳ ಪೊಂಪೈ ಕಾಲೇಜು ಎನ್.ಎಸ್.ಎಸ್. ಸ್ವಯಂಸೇವಕರು ಮತ್ತು ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಗ್ರಾಮಸ್ಥರ ಮನೆಗಳಿಗೆ ಭೇಟಿಯಿತ್ತು ಕರಪತ್ರಗಳನ್ನು ಹಂಚಿದ ಪರಿಣಾಮ ಗರಿಷ್ಠ ಸಂಖ್ಯೆಯಲ್ಲಿ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.

ಐಕಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಒಂದು ಕಲ್ಲಿನ ಕೋರೆಯಲ್ಲಿ ಬೃಹತ್ ಗಾತ್ರದ ಮೊಬಲ್ ಕ್ರಷರ್ ಬಂದಿಳಿದಿದ್ದು ಹಿಂದಿನ ವಿಶೇಷ ಗ್ರಾಮ ಸಭೆಯಲ್ಲಿ ಸ್ಥಳೀಯರು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಎಲ್ಲಾ 12 ಕಲ್ಲಿನ ಕೋರೆಗಳ ಕಾರ್ಯ ಸ್ಥಗಿತದ ಬಗ್ಗೆ ಗ್ರಾ. ಪಂ. ಸಭೆಯಲ್ಲಿ ನಿರ್ಣಯ ವಾದುದರಿಂದ ಕಲ್ಲಿನ ಕೋರೆಗಳು ಕಳೆದ ಕೆಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿಲ್ಲ ಆದುದರಿಂದ ನಮ್ಮಂತಹ ಬಡ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಉಪವಾಸವಿದ್ದು ಕೂಲಿಗಾಗಿ ಪರದಾಡುವಂತಾಗಿದೆ. ಹಾಗೂ ಕಲ್ಲಿನ ಕೋರೆಗಳನ್ನು ನಂಬಿ ಬದುಕುವ ಹಲವಾರು ಕುಟುಂಬಗಳು ಬೀದಿ ಪಾಲಾಗಲಿದೆ ಹಾಗಾಗಿ ಹಿಂದೆ ಪರವಾನಿಗೆ ಇದ್ದ ಅಲ್ಲದೆ ಗ್ರಾಮಕ್ಕೆ ಯಾವುದೇ ರೀತಿ ಹಾನಿ ಮಾಡದ ಸಣ್ಣ ಪ್ರಮಾಣದ ಜಲ್ಲಿ ಕ್ರಷರ್ ಕೋರೆಗಳಿಗೆ ಅನುಮತಿ ನೀಡಬೇಕು ಎಂದು ಅಲ್ಲಿನ ಕೂಲಿ ಕಾರ್ಮಿಕರು ಗ್ರಾಮ ಸಭೆಯಲ್ಲಿ ಒತ್ತಾಯಿಸಿದರು. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸುದಾದರೆ ಗ್ರಾಮಸ್ಥರ ಒಪ್ಪಿಗೆಯ ಮೇರೆಗೆ ಪರವಾನಿಗೆ ನೀಡುವ ಬಗ್ಗೆ ನಿರ್ಣಯಿಸಲಾಗುವುದು ಎಂದು ಉಪಾಧ್ಯಕ್ಷ ದಿವಾಕರ ಚೌಟ ಹೇಳಿದರು.
ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಕಲ್ಲು ಪರಿಸರದಲ್ಲಿ 1. 5  ಲಕ್ಷ ರೂ ವೆಚ್ಚದಲ್ಲಿ ನೀರಿನ ಪೈಪ್‌ಲೈನ್ ಕಾಮಗಾರಿ ಆಗಿದೆ. ಕಿಡಿಗೇಡಿಗಳು ಪೈಪ್‌ಲೈನ್ ಹಾಳುಗಡೆವಿದ್ದು ಮತ್ತೆ ದುರಸ್ತಿಯಾಗದಿರುವುದರಿಂದ ನೀರಿನ ಸಮಸ್ಯೆ ಇದ್ದು ನಮಗೆ ನ್ಯಾಯ ದೊರಕಿಸಿ ಎಂದು ನಾಗಕಲ್ಲು ಪರಿಸರದ ಗ್ರಾಮಸ್ಥರು ಒತ್ತಾಯಿಸಿದಾಗ ಮಾಜಿ ಅಧ್ಯಕ್ಷ ಯೋಗೀಶ್ ಕೊಟ್ಯಾನ್ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.
ನೀರು ಬಿಲ್ಲು ನಿರ್ವಹಣೆ, ಹಾಗೂ ಇತರ ಯೋಜನೆಗಳ ಖರ್ಚು ವೆಚ್ಚಗಳ ಪಟ್ಟಿಯನ್ನು ಗ್ರಾಮಸ್ಥರಿಗೂ ನೀಡಿ ಪಾರದರ್ಶಕತ್ವವನ್ನು ತೋರ್ಪಡಿಸಬೇಕೆಂದು ಸ್ವರಾಜ್ ಶೆಟ್ಟಿ ವಿನಂತಿಸಿದರು.
ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಸರಿಯಾದ ಅನುದಾನ ದೊರಕುತಿಲ್ಲ, ದಾಮಸ್‌ಕಟ್ಟೆ ಕೊಮಂಡೇಲು ಎಸ್ಸಿ, ಎಸ್ಟಿ ಕಾಲನಿಗೆ ಹೋಗುವ ರಸ್ತೆ ಹತ್ತು ವರ್ಷ ಕಳೆದರೂ ಡಾಮರೀಕರಣ ಆಗಲಿಲ್ಲ ಎಂಬ ಪ್ರಶ್ನೆಗೆ ಈ ಸಲದ ಯೋಜನೆಯಲ್ಲಿ ರಸ್ತೆಗೆ ತೇಪೆ ಹಚ್ಚುವ ಕಾಮಗಾರಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಐಕಳ ಪಂಚಾಯಿತಿಗೆ ಬೇರೆ ಪಂಚಾಯಿತಿಗಳಿಗಿಂತ ಶಾಸಕರ ಹಾಗೂ ಸಂಸದರ ಅನುದಾನದ ಯೋಜನೆಗಳು ಕಡಿಮೆ ಸಿಗುತ್ತಿವೆ ಯಾಕೆ..? ದಾಮಸಕಟ್ಟೆ ಯಿಂದ ಸಂಕಲಕರಿಯತನಕ ರಸ್ತೆ ಹದಗೆಟ್ಟಿದ್ದು ದುರಸ್ತಿ ಮಾಡಿ , ಕುದ್ರಿಪದವು ಪಟ್ಟೆ ಪರಿಸರದಲ್ಲಿ ರಸ್ತೆ ದುರಸ್ಥಿ ಹಾಗೂ ದಾರಿ ದೀಪ ಆಳವಡಿಸಿ, ವಸತಿ ರಹಿತರಿಗೆ ಮನೆ ನಿವೇಶನ ಮಂಜೂರು ಮಾಡಿ ಎಂಬ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಕೆ. ಶ್ಯಾಮಲ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು, ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು. ಕಿರೆಂ ಚರ್ಚ್ ಧರ್ಮ ಗುರು ಫಾ| ಪೌಲ್ ಪಿಂಟೋ, ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾ. ಪಂ. ಸದಸ್ಯ ನೆಲ್ಸನ್ ಲೋಬೋ, ಪಿಡಿಓ ಪ್ರೇಮ್ ಸಿಂಗ್, ಕಾರ್ಯದರ್ಶಿ ರವೀಂದ್ರ ಪೈ ಮೆಸ್ಕಾಂ ಅಧಿಕಾರಿ ಇಲ್ಯಾಸ್ ಮತ್ತಿತರರು ಉಪಸ್ಥಿತರಿದ್ದರು.

ಉಳೆಪಾಡಿ ಗ್ರಾಮಸ್ಥರು ಮನೆ ತೆರಿಗೆಯನ್ನು ಐಕಳ ಗ್ರಾಮ ಪಂಚಾಯಿತಿಯಲ್ಲಿ ಕಟ್ಟಿದರೆ ಮನೆ ತೀರ್ವೆ ಕಟ್ಟಲು ಬಳ್ಕುಂಜೆ ಗ್ರಾಮ ಪಂಚಾಯಿತಿಗೆ ಹೋಗಬೇಕಾಗುತ್ತದೆ. ಇಂತಹ ತಾಂತ್ರಿಕ ದೋಷವನ್ನು ಸರಿ ಪಡಿಸಿ ಐಕಳ ಪಂಚಾಯಿತಿಯಲ್ಲಿಯೇ ಕಟ್ಟುವಂತೆ ಮೇಲಾಧಿಕಾರಿಗಳಿಗೆ ಮನವಿ ನೀಡಬೇಕೆಂದು ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದರು.

Kinnigoli 25011403 Kinnigoli 25011404

Comments

comments

Comments are closed.

Read previous post:
ದುಶ್ಚಟಗಳ ಕುರಿತು ಅರಿವು ಕಾರ್ಯಕ್ರಮ

 ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ, ರೆಡ್ ರಿಬ್ಬನ್ ಕ್ಲಬ್, ಯೂತ್ ರೆಡ್ ಕ್ರಾಸ್ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಯುವ ಜನತೆಯ ಮೇಲೆ ದುಶ್ಚಟಗಳ...

Close