ನಂದಿನಿ ನದಿ ಮಾಲಿನ್ಯಗೊಳಿಸಬೇಡಿ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪರಿಸರದ ಹೋಟೆಲ್ ಕಟ್ಟಡ ಹಾಗೂ ಕಲ್ಯಾಣ ಮಂಟಪಗಳಿಂದ ಮಲೀನ ನೀರು ನಂದಿನಿ ನದಿಗೆ ಬಿಡುವುದರಿಂದ ಕುಡಿಯುವ ನೀರು ಕಲುಷಿತ ಗೊಳ್ಳುವುದು ಹಾಗೂ ಘನ ತ್ಯಾಜ್ಯಗಳ ಶೇಖರಣೆಯಿಂದ ಪರಿಸರ ಮಲೀನಗೊಳ್ಳುತ್ತಿದೆ. ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಗ್ರಾಮಸ್ಥರು ನದಿಯ ನೀರನ್ನು ಅವಲಂಬಿಸಿದ್ದಾರೆ. ಕಟೀಲು ದೇವಳದ ಹಾಗೂ ಪರಿಸರದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ ಎಂದು ಗ್ರಾಮಸ್ಥರು ಮೆನ್ನಬೆಟ್ಟು ಗ್ರಾಮ ಸಭೆಯಲ್ಲಿ ಮನವಿ ಮಾಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆಯಿತು.
ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ 3.58  ಕೋಟಿ ರೂ ವೆಚ್ಚದ ಒಳಚರಂಡಿ ಹಾಗೂ ಘನ ತ್ಯಾಜ್ಯಗಳ ವಿಲೇವಾರಿ ಯೋಜನೆ ಪ್ರಸ್ತಾಪವಿತ್ತು. ಬಳಿಕ ಯೋಜನೆಯ ವೆಚ್ಚ 15 ಕೋಟಿಗಳಿಗೆ ಹಿಗ್ಗಿದೆ. ಕಟೀಲು ದೇವಳದಿಂದ 7 ಕೋಟಿ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ 3 ಕೋಟಿ ನೀಡಲು ಸಮ್ಮತಿಸಿದ್ದು ಆದರೆ ಯೋಜನೆ ತಾಂತ್ರಿಕ ಸಮಸ್ಯೆಗಳಿಂದ ಕಾರ್ಯಗತವಾಗದೆ ಬಾಕಿ ಉಳಿದಿದೆ. ಈಗ ಎಸ್.ಟಿ.ಪಿ. ಯೋಜನೆಯ (ದ್ರವ ತ್ಯಾಜ್ಯ ) ಅನುದಾನದಿಂದ ಮುಂದಿನ 15 ದಿನಗಳೊಳಗೆ ತ್ಯಾಜ್ಯ ಗುಂಡಿ ನಿರ್ಮಾಣ ಮಾಡಿ ಕಟೀಲು ದೇವಳ ಹಾಗೂ ಹೋಟೆಲ್, ವಸತಿ ಗೃಹಗಳ ತ್ಯಾಜ್ಯದ ನೀರು ಕಶ್ಮಲಗಳನ್ನು ತ್ಯಾಜ್ಯ ಗುಂಡಿಯಲ್ಲಿ ಶೇಖರಿಸಿ ಪಂಪ್ ಮೂಲಕ ಬೇರೆ ಕಡೆಗೆ ಸಾಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಕಟೀಲು ದೇವಳದ ಆಡಳಿತಾಧಿಕಾರಿ ಕೃಷ್ಣಮೂರ್ತಿ ತಿಳಿಸಿದರು.

ಪರವಾನಿಗೆ ಇಲ್ಲದ ಅಂಗಡಿಗಳು
ಕಟೀಲಿನಲ್ಲಿ ಪರವಾನಿಗೆ ಇಲ್ಲದ ಅಂಗಡಿಗಳು ಈಗಲೂ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ ಈ ಬಗ್ಗೆ ಸಂಬಂಧ ಪಟ್ಟವರು ಯಾಕೆ ಕ್ರಮ ಕೈಗೊಳ್ಳುದಿಲ್ಲ ಎಂದು ಗ್ರಾಮಸ್ಥರು ಕೇಳಿದಾಗ ಈ ಬಗ್ಗೆ ದೇವಳದ ಆಡಳಿತಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಕಟೀಲು ದೇವಳಕ್ಕೆ ಒಳಪಟ್ಟಿರುವ ಬಸ್ ನಿಲ್ದಾಣವನ್ನು ಮೆನ್ನಬೆಟ್ಟು ಪಂಚಾಯಿತಿಗೆ ವಹಿಸಿ ಕೊಟ್ಟರೆ ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡಲಾಗುವುದು ಎಂದು ಕಟೀಲು ದೇವಳ ಆಡಳಿತಾಧಿಕಾರಿ ಅವರಲ್ಲಿ ಪಂಚಾಯಿತಿ ಆಡಳಿತ ವಿನಂತಿಸಿತು.

ಕಿನ್ನಿಗೋಳಿ ರೈತ ಸಂಪರ್ಕ ಕೇಂದ್ರ ಆಗಲಿ
ಮುಲ್ಕಿ ಹೋಬಳಿಯ ರೈತ ಸಂಪರ್ಕ ಕೇಂದ್ರ ಮುಲ್ಕಿಯಲ್ಲಿದೆ ಆದರೆ ಕಿನ್ನಿಗೋಳಿ ಪರಿಸರದಲ್ಲಿ ಹೆಚ್ಚಿನ ಕೃಷಿಕರಿದ್ದು ಮತ್ತು ಕಿನ್ನಿಗೋಳಿಯೇ ಮುಲ್ಕಿ ಹೋಬಳಿಗೆ ಕೇಂದ್ರ ಪ್ರದೇಶವಾಗಿದ್ದರಿಂದ ಇಲ್ಲಿಯೇ ರೈತ ಸಂಪರ್ಕ ಕೇಂದ್ರ ಪ್ರಾರಂಭಿಸಿ ಎಂದು ಕೃಷಿಕ ಶ್ರೀಧರ ಶೆಟ್ಟಿ ಹಾಗೂ ಸಂಜೀವ ಮಡಿವಾಳ ಒತ್ತಾಯಿಸಿದರು. ಈ ಬಗ್ಗೆ ಗ್ರಾ. ಪಂ. ನಿರ್ಣಯ ಮಾಡಿ ಕಳಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

1996 ರಿಂದ ಹಲವಾರು ಮನೆಗಳಿಗೆ ಮನೆ ನಂಬರ್, ಹಕ್ಕು ಪತ್ರ ಸಿಕ್ಕಿಲ್ಲ ಬಡವರಾದ ನಮ್ಮ ಸಮಸ್ಯೆಗೆ ಸ್ಪಂದಿಸಿ ಎಂದು ಸುಮಾರು 30 ಕ್ಕೂ ಮಹಿಳೆಯರು ಗ್ರಾಮ ಸಭೆಯಲ್ಲಿ ತಮ್ಮ ನಿವೇದನೆ ಹೇಳಿಕೊಂಡರು. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಲ್ಲಂಜೆ ಪರಿಸರದಲ್ಲಿ ಕುಮ್ಕಿ ಜಾಗದಲ್ಲಿ ಮನೆಕಟ್ಟಿ ವಾಸವಾಗಿದ್ದಾರೆ. ಕಾನೂನು ರೀತಿಯಲ್ಲಿ ಅವರಿಗೆ ಮನೆ ನಂಬರ್ ನೀಡಲು ಕಷ್ಟ ಸಾಧ್ಯ ಈ ಬಗ್ಗೆ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಕಳಿಸಲಾಗುವುದು ಎಂದು ಅಧ್ಯಕ್ಷ ಜನಾರ್ದನ ಕಿಲೆಂಜೂರು ತಿಳಿಸಿದರು.

ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ನಾಗರಾಜ್ ಎಚ್ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಜಿ. ಪಂ. ಸದಸ್ಯ ಈಶ್ವರ ಕಟೀಲ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರೋಜಿನಿ, ಪಿಡಿಒ ಪ್ರಕಾಶ್ ಬಿ. ಮತ್ತಿತರರು ಉಪಸ್ಥಿತರಿದ್ದರು.

Kinnigoli 1021401

Comments

comments

Comments are closed.

Read previous post:
ಕಿನ್ನಿಗೋಳಿ ಗ್ರಾಮ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 3 ನೇ ವಾರ್ಡ್‌ನಲ್ಲಿ ಗ್ರಾಮಸ್ಥರ ಅರಿವಿಗೆ ಬಾರದಂತೆ ಗ್ರಾ. ಪಂ. ಸದಸ್ಯರು ತಮ್ಮ ಮನೆಯ ದಾರಿಗೆ ಕಾಂಕ್ರಿಟ್ ರಸ್ತೆ ಮಾಡಿದ ಬಗ್ಗೆ...

Close