ಫೆ.18ರಂದು ಏಳಿಂಜೆಯಲ್ಲಿ ಲಕ್ಷ ಮೋದಕ ಹವನ

ಕಿನ್ನಿಗೋಳಿ: ಸುಮಾರು 900 ಸಂವತ್ಸರಗಳ ಇತಿಹಾಸವುಳ್ಳ ಕಿನ್ನಿಗೋಳಿ ಸಮೀಪದ ಏಳಿಂಜೆ ಕ್ಷೇತ್ರವೆಂದೇ ಸುಪ್ರಸಿದ್ಧವಾಗಿರುವ ಶ್ರೀ ಲಕ್ಷ್ಮೀಜನಾರ್ದನ ಮತ್ತು ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಮೋದಕ ಪ್ರಿಯ ಮಹಾಗಣಪತಿಗೆ ದಕ್ಷಿಣಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಫೆಬ್ರವರಿ 18 ಮಂಗಳವಾರ ಅಂಗಾರಿಕಾ ಸಂಕಷ್ಠಿಯ ದಿನ ದೇವರಿಗೆ ಅತೀ ವಿಶೇಷತೆಯ ಸಾಮೂಹಿಕ ಲಕ್ಷಮೋದಕ ಹವನ ಹಾಗೂ ಸಹಸ್ರ ನಾರಿಕೇಳ ಗಣಯಾಗ ನಡೆಯಲಿದೆ ಎಂದು ಅರ್ಚಕ ಸದಾನಂದ ಭಟ್ ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು
ಶ್ರೀ ವಿಶ್ವೇಶರ ತೀರ್ಥ ಸ್ವಾಮೀಜಿ (ಪೇಜಾವರ ಮಠ) ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ( ಸೋದೆ ಮಠ) ಮತ್ತು ಶ್ರೀ ಯೋಗಾನಂದ ಸ್ವಾಮೀಜಿ (ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆಯೂರು) ಇವರ ಶುಭಾಶೀರ್ವಾದಗಳೊಂದಿಗೆ ಶಿಬರೂರು ಶ್ರೀ ವೇದವ್ಯಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ಸಂಪ್ರದಾಯಬದ್ದ ನೈಸರ್ಗಿಕ ಸಂಪನ್ಮೂಲಗಳನ್ನೊಳಗೊಂಡ ಹೋಮ ಹವನಗಳು ನಡೆಯಲಿದೆ ಎಂದು ದೇವಳದ ಆಡಳಿತ ಮೊಕ್ತೇಸರ ಏಳಿಂಜೆ ಕೋಂಜಾಲು ಗುತ್ತು ಪ್ರಭಾಕರ ಶೆಟ್ಟಿ ತಿಳಿಸಿದರು.
ಸಂಕಷ್ಟಹರ ಚತುರ್ಥಿ ವೃತದ ಮಹಿಮೆ :
ಅತೀ ವಿಶಿಷ್ಟವಾದ ವೃತವನ್ನಾಚರಿಸಲು ಸಾಕ್ಷಾತ್ ಪಾರ್ವತಿದೇವಿಗೆ ಮಹಾಗಣಪತಿಯೇ ಉಪದೇಶಿಸಿದ ಎನ್ನಲಾಗಿದೆ ಅದರಲ್ಲೂ ಮಂಗಳವಾರ ಸಂಕಷ್ಟಹರ ವೃತ ಆಚರಿಸಿದರೆ ಅದಕ್ಕೆ ಬಹಳ ವಿಶಿಷ್ಟ ಫಲ ಸಿಗುವುದು. ಪ್ರಸ್ತುತ ಮಾಘ ಮಾಸದಲ್ಲಿ ದ್ವಿಜಪ್ರಿಯ ಮಹಾಗಣಪತಿ ಎನ್ನುವ ಹೆಸರಿನಲ್ಲಿ ದೇವ ಪೀಠದಲ್ಲಿ ಆರಾಧಿಸಲ್ಪಡುವ ಈ ಶುಭದಿನದಂದು ಬಹುಶಃ ಜಿಲ್ಲೆಯಲ್ಲೇ ಮೊದಲ ಬಾರಿಗೆ ಎರಡು ಮಹಾಯಾಗಗಳನ್ನು ಏಕಕಾಲದಲ್ಲಿ ಶ್ರೀ ಕ್ಷೇತ್ರ ಏಳಿಂಜೆಯಲ್ಲಿ ಸಂಘಟಿಸಲಾಗಿದೆ. ದೇವಳದ ಮುಂಬಾಗದಲ್ಲಿ ವಿಶಿಷ್ಟ ರೀತಿಯಲ್ಲಿ ಸಾಂಪ್ರಾದಾಯಿಕ ಮಡಲು ಚಪ್ಪರದ ಐದುಸಾವಿರ ಚದರ ಅಡಿಯ ಬೃಹತ್ ಯಾಗ ಶಾಲೆ ನಿರ್ಮಾಣ ಮಾಡಲಾಗಿದ್ದು ಹನ್ನೊಂದು ಅಗ್ನಿ ಕುಂಡಗಳಲ್ಲಿ ಏಕಕಾಲದಲ್ಲಿ ಸುಮಾರು 250 ಪುರೋಹಿತರು ಹಾಗೂ 250 ಬಾಣಸಿಗರು ಮೋದಕ ತಯಾರಿಸುವ ವ್ಯವಸ್ಥೆ ಮಾಡಲಾಗಿದೆ.
ಫೆ.17 ರಂದು ಸಂಜೆ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ವಾಸ್ತು ಹೋಮ ಪೂಜೆ. ಫೆ.18ರಂದು ಬೆಳಿಗ್ಗೆ 8.30ಕ್ಕೆ 108 ತೆಂಗಿನಕಾಯಿ ಗಣಹೋಮ ಸಂಜೆ 3.00ಕ್ಕೆ ಲಕ್ಷ ಮೋದಕ ಯಾಗ ಪ್ರಾರಂಭ, ಲಕ್ಷ ಮೋದಕ ಮಹಾ ಯಾಗ ಮತ್ತು ಸಹಸ್ರ ನಾರೀಕೇಳ ಗಣಯಾಗ , ರಾತ್ರಿ 7.30 ಕ್ಕೆ ಪೂರ್ಣಾಹುತಿ
ಬಳಿಕ ಮುಂಬಯಿಯ ಅಂತರಾಷ್ಟ್ರೀಯ ಖ್ಯಾತಿಯ ಕಲಾ ಜಗತ್ತು ತಂಡದವರಿಂದ ವಿಜಯ ಕುಮಾರ್ ಶೆಟ್ಟಿಯವರ ಶರಶಯ್ಯೆ ನಾಟಕ ನಡೆಯಲಿದೆ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಫಲಹಾರದ ವ್ಯವಸ್ಥೆ ಹಾಗೂ ರಾತ್ರಿ ಬಸ್ಸಿನ ವ್ಯವಸ್ಥೆ ಇದೆ.

ಫೆ. 16 ರಂದು ಕಬಡ್ಡಿ ಪಂದ್ಯಾಟ
ಫೆ. 15 ರಂದು ಕ್ಷೇತ್ರದಲ್ಲಿ ವರ್ಷಾವಧಿ ಉತ್ಸವ ಹಾಗೂ ಫೆ.16ರಂದು ಸ್ಥಳಿಯ ನವಚೇತನ ಯುವಕ ಮಂಡಲ ಏಳಿಂಜೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಹಾಗೂ ಏಳಿಂಜೆ, ಐಕಳ, ಪಟ್ಟೆ, ಉಳೆಪಾಡಿ ಗ್ರಾಮಸ್ಥರು ಸಹಯೋಗದಿಂದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾಟ ಮಧ್ಯಾಹ್ನ 2.00ರಿಂದ ರಾತ್ರಿ 10.00ರವರೆಗೆ ಶ್ರೀ ಲಕ್ಷ್ಮೀ ಜನಾರ್ದನ ಕ್ರೀಡಾಂಗಣದಲ್ಲಿ ಜರಗಲಿದೆ. ಪಂದ್ಯಾಟವನ್ನು ಯುವಜನ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಉದ್ಘಾಟಿಸಲಿದ್ದಾರೆ. ಕಬಡ್ಡಿ ಕ್ಷೇತ್ರದ ಸಾಧಕರಾದ ಜಯ ಶೆಟ್ಟಿ ಶಿಮಂತೂರು, ಛಾಯ ಜಯ ಶೆಟ್ಟಿ, ಉದಯ ಚೌಟ ಹಾಗೂ ವನಿತ ಅವರನ್ನು ಸನ್ಮಾನಿಸಲಾಗುವುದು ಎಂದು ನವಚೇತನ ಯುವಕ ಮಂಡಲದ ಗೌರವಾಧ್ಯಕ್ಷ ಕೊಂಜಾಲಗುತ್ತು ಅನಿಲ್ ಶೆಟ್ಟಿ ಹೇಳಿದರು

ಈ ಸಂದರ್ಭ ಅರ್ಚಕ ವೈ. ಗಣೇಶ್ ಭಟ್, ರಘುರಾಮ ಅಡ್ಯಂತಾಯ, ವೈ. ಕೃಷ್ಣ ಸಾಲ್ಯಾನ್, ಏಳಿಂಜೆ ಭಂಡಸಾಲೆ ಬಾಲಕೃಷ್ಣ ಶೆಟ್ಟಿ, ಶಂಭು ಶೆಟ್ಟಿ ಅಂಗಡಿಗುತ್ತು ಸಂಜೀವ ಶೆಟ್ಟಿ ಸ್ಥಳಂತಗುತ್ತು, ಕೃಷ್ಣ ಮೂಲ್ಯ ಸೋಮನಾಥ ರೈ, ಸಾಯಿನಾಥ ಶೆಟ್ಟಿ , ಲಕ್ಷ್ಮಣ್ ಬಿ. ಬಿ, ಸುಧಾಕರ ಸಾಲ್ಯಾನ್, ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli 12021411 Kinnigoli 12021412

Comments

comments

Comments are closed.

Read previous post:
ಏಳಿಂಜೆ ದೇವಳ ವರ್ಷಾವಧಿ ಜಾತ್ರೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ದೇವಳದಲ್ಲಿ ವರ್ಷಾವಧಿ ಜಾತ್ರೆಯ ಪ್ರಯುಕ್ತ ಧ್ವಜಾರೋಹಣ ಹಾಗೂ ದೇವರ ಉತ್ಸವ ಬಲಿ ನಡೆಯಿತು.

Close