ಶ್ರೀ ಕ್ಷೇತ್ರ ಏಳಿಂಜೆ ಲಕ್ಷಮೋದಕ ಮಹಾಯಾಗ

ಕಿನ್ನಿಗೋಳಿ : ದಕ್ಷಿಣ ಕನ್ನಡದಲ್ಲಿ ಹಲವಾರು ಗಣಪತಿ ಕ್ಷೇತ್ರಗಳು ಇವೆ. ಸುಮಾರು 900ಸಂವತ್ಸರಗಳ ಸುವರ್ಣ ಹೊಂದಿರುವ ಶ್ರೀ ಕ್ಷೇತ್ರ ಏಳಿಂಜೆಯೆಂದೇ ಪ್ರಸಿದ್ಧಿ ಹೋದಿರುವ ಶ್ರೀ ಲಕ್ಷ್ಮೀ ಜನಾರ್ದನ ಮತ್ತು ಮಹಾಗಣಪತಿ ದೇವಸ್ಥಾನದಲ್ಲೀಗ ಲೋಕ ಕಲ್ಯಾಣಾರ್ಥವಾಗಿ ಲಕ್ಷಮೋದಕ ಮಹಾಯಾಗದ ಸಂಭ್ರಮ.
ದಕ್ಷಿಣ ಕನ್ನಡದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲಕ್ಷ ಮೋದಕ ಮಹಾಯಾಗ ಮತ್ತು ಸಹಸ್ರನಾರಿಕೇಳ ಗಣಯಾಗ ಏಕಕಾಲದಲ್ಲಿ ನಡೆಯಲಿದೆ. ಏಳಿಂಜೆಯಲ್ಲಿ ಮೋದಕವನ್ನು ಕೈಯಲ್ಲಿ ಹಿಡಿದ ಬಾಲ ಗಣಪತಿಯೇ ಪ್ರಮುಖ ಆಕರ್ಷಣೆ. ಗಣಪತಿಯೊಂದಿಗೆ ಲಕ್ಷ್ಮೀ ಜನಾರ್ಧನ ಸ್ವಾಮಿಯೂ ಇದ್ದಾರೆ.

Elinje 01

ಲಕ್ಷಮೋದಕ ಯಾಗ ಹೊಸತ್ತು ಅಲ್ಲದಿದ್ದರೂ ಏಕ ಕಾಲಕ್ಕೆ ಹನ್ನೊಂದು ಬ್ರಹತ್ ಯಜ್ಞ ಕುಂಡದಲ್ಲಿ ಮೋದಕ ಆಹುತಿ ಒಂದೇ ದಿನ ಗಣಪತಿಗೆ ನಡೆಯುತ್ತಿರುವುದು ಇದೇ ಮೊದಲು. ಅಂಗಾರಕ ಸಂಕಷ್ಟಹರ ಗಣಪತಿ ವ್ರತವು ಬಂದಿರುವುದರಿಂದ, ಲಕ್ಷಮೋದಕ ಹೋಮಕ್ಕೆ ವಿಶೇಷ ಆದ್ಯತೆ.
ಯಾರು ಸಹಸ್ರ ಮೋದಕಗಳಿಂದ ಗಣಪತಿಯನ್ನು ಅರ್ಚಿಸುತ್ತಾರೊ ಅವರು ನೆನೆಸಿದ ಅಭೀಷ್ಟಗಳನ್ನು ಪಡೆಯುತ್ತಾರೆ. ಎನ್ನುತದೆ ಗಣಪತಿ ಅಥರ್ವ ಶೀರ್ಷ. ಗಣಪತಿ ಒಂದು ಗಣಗಳಿಗಷ್ಟೇ ಅಧಿಪತಿಯಲ್ಲ. ಆತ ವಿಶ್ವಂಭರ ಅಂದರೆ ಇಡೀ ವಿಶ್ವವನ್ನೇ ಅಂಭರವನ್ನಾಗಿಸಿ ಕೊಂಡಿದ್ದಾನೆ. ಕೆಲವರು ಗಣಪತಿ ಯನ್ನೇ ಪರಬ್ರಹ್ಮನೆಂದು ಆರಾಧಿಸುತ್ತಾರೆ. .

ಅಂಗಾರಕ ಸಂಕಷ್ಠಿ
ಮುಹಾ ಗಣಪತಿ ಆರಾಧಕರಿಗೆ ಸಂಕಷ್ಠಹರ ಗಣಪತಿ ವ್ರತ ಬಲು ಪ್ರಿಯ. ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಮಾತ್ರ ಕಾಣ ಸಿಗುವ ವಿಶೇಷ ಘಳಿಗೆ. ನಮ್ಮ ಶಾಸ್ತ್ರಗಳ ಪ್ರಕಾರ ಅಂಗಾರಕ ಎಂದರೆ ಮಂಗಳ ಅರ್ಥಾತ್ ಕುಜ. ಇವನದು ಸಿಂಧೂರ ವರ್ಣ, ಋಣ, ರೋಗಧಿ, ದಾರಿದ್ರ್ಯ, ಅಪಮೃತ್ಯುಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದ್ದಾನೆ. ಗಣಪತಿ ಉಪಾಸನೆಗೆ ಪ್ರಿಯವಾದ ವಾರವೇ ಮಂಗಳವಾರ. ಸಂಕಷ್ಠಹರ ಗಣಪತಿಯ ವ್ರತವನ್ನು ಪ್ರತಿ ತಿಂಗಳು ಒಂದೊಂದು ಗಣಪತಿಯ ಹೆಸರಿನಲ್ಲಿ ಆರಾಧಿಸುತ್ತಾರೆ. ಪ್ರಸ್ತುತ ಮಾಘಮಾಸದಲ್ಲಿ ಬರುವ ಅಂಗಾರಕ ಚತುರ್ಥಿ ವ್ರತದಂದು ದ್ವಿಜ ಪ್ರಿಯ ಮಹಾ ಗಣಪತಿ ಎನ್ನುವ ಹೆಸರಿನಲ್ಲಿ ಪೂಜಿಸುತ್ತಾರೆ. ಅಂದ ಹಾಗೆ ಗಣನಾಥನು ಸಿಂಧೂರ ಪ್ರಿಯ. ನಮ್ಮ ಪುರಾಣಗಳಲ್ಲಿ ಗಣಪತಿಯ ಆರಾಧನೆಯನ್ನು ಪ್ರದೋಷ ಕಾಲದಲ್ಲಿ ಮಾಡಿ, ಚಂದ್ರಾರ್ಘ್ಯವನ್ನು ಕೊಡುತ್ತಾರೋ ಅವರಿಗೆ ಸಕಲ ಇಷ್ಟಾರ್ಥಗಳನ್ನು ಲಭಿಸುತ್ತವೆ ಎನ್ನಲಾಗಿದೆ. ಅಂತೆಯೇ ಲಕ್ಷ ಮೋದಕ ಸಮರ್ಪಣೆಯನ್ನು ಅಂದರೆ ಮೋದಕ ಯಾಗದ ಪೂರ್ಣ ಹುತಿ ಕಾರ್ಯಕ್ರಮ ಮತ್ತು ಸಹಸ್ರ ನಾರಿಕೇಳ ಮಹಾಯಾಗವು ಚಂದ್ರಾರ್ಘ್ಯ ಕೊಡುವ ವೇಳೆಯಲ್ಲೇ ಸಂಪನ್ನವಾಗುವುದು ಕಾರ್ಯಕ್ರಮದ ವಿಶೇಷವಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು ೨೫೦ ಬಾಣಸಿಗರು ಮತ್ತು ಋತ್ವಿಕರು ಭಾಗವಹಿಸುತ್ತಿದ್ದಾರೆ.

ದೇಗುಲದ ಇತಿಹಾಸ
ಏಳಿಂಜೆ ಮಂಗಳೂರಿನಿಂದ ಸುಮಾರು ೩೫ ಕಿ.ಮೀ. ದೂರದಲ್ಲಿದೆ. ದೇಗುಲದ ಮೂಲ ದೇವರು ಲಕ್ಷ್ಮೀ ಜನಾರ್ಧನ. ಲಕ್ಷ್ಮೀ ಜನಾರ್ಧನ ವಿಗ್ರಹವನ್ನು ಮುಲ್ಕಿಯ ಸಾವಂತ ಅರಸರು ಪ್ರತಿಷ್ಠಾಪಿಸಿದ್ದಾರೆ. ಅವರು ತಮಗೆ ಮಕ್ಕಳಿಲ್ಲ ಎನ್ನುವ ಕಾರಣಕ್ಕೆ ಕಟ್ಟಿರುವ ದೇಗುಲ. ಚೌಡ್ರಸೀಮೆ, ಈಗಲೂ ರಾಜವಂಶಸ್ಥರು ಗ್ರಾಮದಲ್ಲಿದ್ದಾರೆ. ಅವರು ಇಂದಿಗೂ ದೇವರಿಗೆ ನದೆದುಕೊಳ್ಳುತ್ತಾರೆ. ಪ್ರಸ್ತುತ ದೇಗುಲದಲ್ಲಿರುವ ಗಣಪತಿ ವಿಗ್ರಹ ಮೊದಲಿಗೆ ಐಕಳ ಗ್ರಾಮದಲ್ಲಿತ್ತು. ಸೋದೆ ವಾದಿರಾಜ ಸ್ವಾಮಿಗಳಿಂದ ಪ್ರತಿಷ್ಠಾಪಿಸಲ್ಪಟ್ಟಿತ್ತು. ಈ ಗ್ರಾಮದ ಅರ್ಚಕರೇ, ಐಕಳ ಗ್ರಾಮಕ್ಕೆ ಗಣಪತಿಯ ಪೂಜೆಗಾಗಿ ಹೋಗುತ್ತಿದ್ದರು. ಆದರೆ ಅನಾರೋಗ್ಯದ ಕಾರಣ ಐಕಳ ಗ್ರಾಮಕ್ಕೆ ಹೋಗಿ ಗಣಪತಿಯ ಪೂಜೆಯನ್ನು ಅವರಿಗೆ ಸಲ್ಲಿಸಲು ಆಗಲಿಲ್ಲ, ಈ ಸಂಬಂಧ ಅವರು ಚಿಂತಿತರಾಗಿದ್ದಾಗ ಉಂಟಾದ ದೈವ ನಿದರ್ಶನದಂತೆಯೇ ಅರ್ಚಕರು ಐಕಳ ಗ್ರಾಮದಿಂದ ಏಳಿಂಜೆಗೆ ಗಣಪತಿಯ ವಿಗ್ರಹವನ್ನು ತಲೆಯ ಮೇಲೆ ಹೊತ್ತು ತಂದರೆಂಬ ಪ್ರತೀತಿಯಿದೆ. ಈ ಘಟನೆ ಸಂಭವಿಸಿ ಸುಮಾರು 900 ವರ್ಷಗಳೇ ಕಳೆದಿದೆ ಎನ್ನಲಾಗಿದೆ. ಹಾಗಾಗಿ, ಇಂದಿಗೂ ಐಕಳ ಗ್ರಾಮದ ಜನರು ತಮ್ಮೆಲ್ಲಾ ಕೋರಿಕೆಗಳನ್ನು ಈಡೇರಿಸಿಕೊಳ್ಳಲು ಏಳಿಂಜೆಗೆ ಬರುತ್ತಾರೆ.ಗಣಪತಿಗೆ ಪೂಜೆ ಸಲ್ಲಿಸಿ ಹೋಗುತ್ತಾರೆ. ದೇಗುಲ ಮುಲ್ಕಿ ಸಾಮಂತ ಅರಸರ ಕಾಲದಲ್ಲಿ ನಿರ್ಮಾಣವಾದುದು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು, ಶಿಲಾಶಾಸನಗಳು ಲಭ್ಯವಿದೆ.

Comments

comments

Comments are closed.

Read previous post:
ಏಳಿಂಜೆ ಕಬಡ್ಡಿ ಪಂದ್ಯಾಟ ವಿಜೇತರು

ಕಿನ್ನಿಗೋಳಿ: ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾಟದ ವಿಜೇತರ ವಿವರ ಪುರುಷರ...

Close