ದೂರು ಕೊಟ್ಟವನೇ ಆರೋಪಿಯಾದ..!

ಮುಲ್ಕಿ : ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಪಾವಂಜೆ ಬಳಿ ಕಳೆದ ವಾರದಲ್ಲಿ ಮೀನು ಸಾಗಾಟದ ಲಾರಿ ಚಾಲಕನಾದ ಶಿವಮೊಗ್ಗ ಸೊರಬದ ಕಾನ್‌ಕೆರೆ ರಸ್ತೆಯ ಅಹಮ್ಮದ್ ಎಂಬುವರ ಪುತ್ರ ಮೊಹಮ್ಮದ್ ಪೀರ್ ಸಾಬ್ (40) ಮೂಲ್ಕಿ ಠಾಣೆಗೆ ದೂರು ನೀಡಿ ಇಬ್ಬರು ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಬಂದು ಲಾರಿಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ತನ್ನಲ್ಲಿದ್ದ 2.67 ಲಕ್ಷ ಹಣವನ್ನು ಲೂಟಿ ಮಾಡಿದರು ಎಂದು ದೂರು ನೀಡಿದ್ದನು. ಈ ಬಗ್ಗೆ ಲಾರಿ ಮಾಲೀಕರೇ ಆತನ ಮೇಲೆ ಸಂಶಯ ವ್ಯಕ್ತಪಡಿಸಿ ಕೂಲಂಕುಶ ತನಿಖೆ ನಡೆಸಬೇಕು ಎಂದು ಮುಲ್ಕಿ  ಪೊಲೀಸರಲ್ಲಿ ದೂರು ನೀಡಿದ್ದು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ತನಿಖೆ ನಡೆಸಿದ ಪೊಲೀಸರು ದೂರು ನೀಡಿದ ಮೊಹಮ್ಮದ್ ಪೀರ್ ಸಾಹೇಬನೇ ಈ ಹಣ ಲೂಟಿ ಪ್ರಕರಣದ ರುವಾರಿಯಾಗಿದ್ದು ದೂರುದಾರನಾಗಿದ್ದ ಆತ ಈಗ ಪ್ರಕರಣದ ತನಿಖೆಯ ವೇಳೆ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಬ್ರಹ್ಮಾವರದ ಹೊನ್ನಾರ ಮಸೀದಿ ಬಳಿಯ ಸನಾಂ ಮಂಜಿಲ್‌ನ ಮಹಮ್ಮದ್ ಹುಸೇನ್‌ರ ಮಗ ಮಹಮ್ಮದ್ ತೌಫಿಕ್(24) ಮತ್ತು ಸುರತ್ಕಲ್ ಕಾನ ಕಟ್ಲದ ಜನತಾ ಕಾಲೋನಿಯ ಅಬ್ದುಲ್ ಖಾದರ್‌ರ ಮಗ ಮಹಮ್ಮದ್ ನಿಸಾರ್(22)ನನ್ನು ಭಾನುವಾರ ಬಂಧಿಸಿದ್ದಾರೆ.
ಮಲ್ಪೆಯಿಂದ ಕೇರಳದ ತಲಚ್ಚೇರಿ ಹಾಗೂ ಕಣ್ಣೂರಿಗೆ ಮೀನು ಮಾರಾಟ ಮಾಡಿ ಅದರ ಹಣವನ್ನು ಹಿಂದೆ ತರುವಾಗ ಮೊಹಮ್ಮದ್ ಪೀರ್ ತನ್ನ ಸ್ನೇಹಿತ ಮಹಮ್ಮದ್ ತೌಫಿಕ್‌ನನ್ನು ಸಂಪರ್ಕಿಸಿ ಲಾರಿಯಲ್ಲಿನ ಡಿಸೆಲ್‌ನ್ನು ಕಳ್ಳತನ ಮಾಡುವ ಎಂದು ಸಂಚು ರೂಪಿಸಿದ್ದರಿಂದ ತೌಫಿಕ್ ತನ್ನ ಸ್ನೇಹಿತ ಮಹಮ್ಮದ್ ನಿಸಾರ್‌ನೊಂದಿಗೆ ಕುಳಾಯಿ ಬಳಿಯಲ್ಲಿ ಲಾರಿಯನ್ನು ತಡೆದು ಅದನ್ನು ೧೦ನೇ ತೋಕೂರು ಬಳಿಯ ಬೋರುಗುಡ್ಡೆಯ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಡಿಸೆಲ್ ತೆಗೆಯುವ ವ್ಯವಸ್ಥಿತ ಸಂಚನ್ನು ರೂಪಿಸಿಕೊಂಡಿದ್ದರು.
ಅದರಂತೆ ಡಿಸೆಲ್ ತೆಗೆಯುತ್ತಿದ್ದಾಗ ಅಲ್ಲಿಗೆ ಇಬ್ಬರು ಅಪರಿಚಿತ ಯುವಕರು ಬೈಕಿನಲ್ಲಿ ಬಂದು ಮೂವರಿಗೂ ಹಲ್ಲೆ ಮಾಡಿ ಲಾರಿಯಲ್ಲಿದ್ದ ಹಣ ಸಹಿತ ಚಾಲಕ ಮೊಹಮ್ಮದ್ ಪೀರ್ ಸಾಹೇಬನ ಪರ್ಸ್ ಎಟಿಎಂ ಹಾಗೂ ಮೊಬೈಲನ್ನು ಕಸಿದು ಪರಾರಿಯಾಗಿದ್ದರು. ಈ ಬಗ್ಗೆ ಯಾವುದೇ ರೀತಿಯಲ್ಲಿ ಮಾಹಿತಿ ನೀಡದೆ ತನ್ನನ್ನು ಪಾವಂಜೆ ಬಳಿಯಲ್ಲಿ ಇಬ್ಬರು ಕಾರಿನಲ್ಲಿ ಬಂದು ಲೂಟಿ ಮಾಡಿದರು ಎಂದು ಮೂಲ್ಕಿ ಠಾಣೆಗೆ ದೂರು ನೀಡಿದ್ದ ಮೊಹಮ್ಮದ್ ಪೀರ್‌ನ ಚಲನ ವಲನದ ಬಗ್ಗೆ ಗುಪ್ತ ಮಾಹಿತಿಯನ್ನಾಧರಿಸಿ ಆತನನ್ನು ನೇರವಾಗಿ ಬಂಧಿಸಿ ವಿಚಾರಣೆ ನಡೆಸಿದಾಗ ನಿಜಾಂಶ ಬಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಲ್ ಕಳ್ಳತನ ನಡೆಸಲು ಸಹಕರಿಸಿದ್ದ ತೌಫೀಕ್ ಹಾಗೂ ನಿಸಾರ್ ಇಬ್ಬರೂ ಇನ್ನಿಬ್ಬರು ಸ್ನೇಹಿತರ ಸಹಾಯದಿಂದ ಲಾರಿಯಲ್ಲಿದ್ದ ಹಣವನ್ನು ಲೂಟಿ ಮಾಡುವ ಸಂಚು ರೂಪಿಸಿದ್ದರಲ್ಲದೇ ಅದರಲ್ಲಿ ಯಶಸ್ಸಾಗಿದ್ದರು. ಈಗ ಪೊಲೀಸರು ತೌಫಿಕ್ ಮತ್ತು ನಿಸಾರ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದು ಹಣವನ್ನು ಲೂಟಿ ಮಾಡಿದ ಕೃಷ್ಣಾಪುರ ನಿವಾಸಿ ನಿಯಾಝ್ ಹಾಗೂ ಜನತಾ ಕಾಲೋನಿಯ ಸಾನು ತಲೆ ಮರೆಸಿಕೊಂಡಿದ್ದು ಆವರಿಬ್ಬರನ್ನು ಬಂಧಿಸಲು ಬಲೆ ಬೀಸಿದ್ದಾರೆ. ಲೂಟಿ ಮಾಡಿದ ಹಣದಲ್ಲಿ 2017 ಲಕ್ಷವನ್ನು ಹಾಗೂ ಬೈಕ್, ಎಟಿಎಂ ಕಾರ್ಡ್, ಪರ್ಸ್, ಡಿಸೆಲ್ ಪೈಪ್, ಕ್ಯಾನ್‌ನ್ನು ವಶಪಡಿಸಿಕೊಂಡಿದ್ದು ಆರೋಪಿಗಳನ್ನು ಮೂಡಬಿದಿರೆಯ ನ್ಯಾಯಾಧೀಶರ ನಿವಾಸದಲ್ಲಿ ಭಾನುವಾರ ಹಾಜರು ಪಡಿಸಿದ್ದು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮೂಲ್ಕಿ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣದ ತನಿಖೆ ಮುಂದುವರಿದಿದೆ.

Comments

comments

Comments are closed.

Read previous post:
ಕ್ರೀಡೆಯೊಂದಿಗೆ ಸಾಮಾಜಿಕ ಚಟುವಟಿಕೆ ನಡೆಯಲಿ

ಮುಲ್ಕಿ: ಆಸಕ್ತಿದಾಯಕ ಕ್ರೀಡಾ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಗ್ರಾಮೀಣ ಮಟ್ಟದಲ್ಲೂ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ನಿರ್ಮಿಸಬೇಕು. ಕ್ರೀಡಾ ಸಂಘಟನೆಯೊಂದಿಗೆ ಸಾಮಾಜಿಕ ಚಟುವಟಿಕೆಯನ್ನು ಸಹ ಗ್ರಾಮದ ಅಭಿವೃದ್ಧಿಗಾಗಿ ನಡೆಸಿದಲ್ಲಿ ಜನರ...

Close