ಕೋಟ ಶ್ರೀನಿವಾಸ ಪೂಜಾರಿ ಸುದ್ದಿಗೋಷ್ಠಿ

ಕಿನ್ನಿಗೋಳಿ : ಕಾಂಗ್ರೆಸ್‌ನವರು ತಾಕತ್ತಿದ್ದರೆ ಎತ್ತಿನ ಹೊಳೆ ಯೋಜನೆ ಬಿಜೆಪಿಯವರದ್ದು ದಕ್ಷಿಣ ಕನ್ನಡದಲ್ಲಿ ಹೇಳದೆ ಚಿಕ್ಕಬಳ್ಳಾಪುರದಲ್ಲಿ ಕೂಡಾ ಹೇಳಲಿ ದ್ವಂದ್ವ ಹೇಳಿಕೆ ನೀಡಿ ಜನರನ್ನು ಮರಳು ಮಾಡದಿರಿ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಚುನಾವಣಾ ಪ್ರಚಾರಕ್ಕೆ ಕಿನ್ನಿಗೋಳಿಗೆ ಆಗಮಿಸಿದ ಅವರು ಯುಗಪುರುಷದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಎಂ.ಎಸ್ ಕೃಷ್ಣ ಸರಕಾರವಿದ್ದ ಸಂದರ್ಭ ಈ ಯೋಜನೆಯ ಪ್ರಸ್ತಾವನೆಯಿದ್ದು ಬಳಿಕ ಬಿಜೆಪಿ ಸರ್ಕಾರದಲ್ಲಿ ಈ ಯೋಜನೆಯ ಸಾಧಕ ಭಾಧಕ ಚರ್ಚೆಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ನೇತ್ರಾವತಿ ನದಿ ತಿರುವು ಯೋಜನೆಯಿಂದ ಸಮಸ್ಯೆಗಳು ಉಂಟಾಗುವ ಬಗ್ಗೆ ಅಧ್ಯಯನ ನಡೆಸಲು ನಿರ್ಣಯಿಸಲಾಗಿತ್ತು ಆದರೆ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಸ್ವಪಕ್ಷೀಯ ಶಾಸಕರು ಸಚಿವರು ಹಾಗೂ ವಿಪಕ್ಷೀಯರನ್ನು ಕತ್ತಲಲ್ಲಿಟ್ಟು ತರಾತುರಿಯಲ್ಲಿ 12500 ಕೋಟಿ ರೂ ಯೋಜನೆಗೆ ಶಿಲಾನ್ಯಾಸ ಮಾಡಿ ದಕ್ಷಿಣ ಕನ್ನಡ ಜನತೆಗೆ ವಂಚಿಸಿದ್ದಾರೆ.
ಲೋಕ ಸಭಾ ಚುನಾವಣೆಯಲ್ಲಿ ಜಾತಿ ರಾಜಕೀಯ ನಡೆಯುತ್ತಿದೆಯೇ? ಎಂಬ ಪ್ರಶ್ನೆಗೆ ಬಿಜೆಪಿಯು ಜಾತಿ ಆಧಾರಿತ ಪಕ್ಷವಲ್ಲ ರಾಷ್ಟ್ರೀಯ ಭದ್ರತೆ ಅಭಿವೃದ್ಧಿ ಭಯೋತ್ಪಾದನೆಯ ನಿವಾರಣೆ,ಬೆಲೆ ಏರಿಕೆಗೆ ಕಡಿವಾಣ ಹಾಗೂ ಸ್ವಾವಲಂಭಿ ರಾಷ್ಟ್ರ ನಿರ್ಮಾಣ ಯೋಜನೆಯನ್ನು ಉದ್ದೇಶ ದೊಂದಿಗೆ ಗುಜರಾತ್ ರಾಜ್ಯವನ್ನು ಉತ್ತುಂಗ ಸ್ಥಾಯಿಗೇರಿಸಿದ ನರೇಂದ್ರ ಮೊದಿ ಹಾಗೂ ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಹೆಚ್ಚು ಸಾಧನೆಗೈದ ನಳಿನ್ ಕುಮಾರ್ ಕಟೀಲು ರವರ ಹೆಸರಿನಲ್ಲಿ ಮತ ಯಾಚನೆ ನಡೆಸಲಾಗುತ್ತಿದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಓಲೈಕೆಯ ಮಾತುಗಳನ್ನಾಡುತ್ತಾ ಜನರನ್ನು ವಂಚಿಸಿ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಬಿಜೆಪಿಯಲ್ಲಿ ಬಿಲ್ಲವರಿಗೆ ಅಧಿಕಾರ ನೀಡಿಲ್ಲ ಎಂಬ ಕಾಂಗ್ರೆಸ್ ಬಾಲಿಶ ಆರೋಪದ ಬಗ್ಗೆ ಉತ್ತರಿಸಿದ ಕೋಟ ಶ್ರೀನಿವಾಸ ಪೂಜಾರಿ ಸಾಮಾನ್ಯ ಕಾರ್ಯಕರ್ತನಾಗಿರುವ ನನ್ನನ್ನು ಬಿಜೆಪಿ ಸಚಿವ ದರ್ಜೆಗೇರಿಸಿದೆ. ಬಿಜೆಪಿಯಲ್ಲಿ ಜಾತಿ ಪ್ರಾಧಾನ್ಯತೆಯಿಲ್ಲ. ಬಿಜೆಪಿಯಿಂದ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಹಾಗೂ ವಿವಿಧ ಪಂಚಾಯಿತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಲ್ಲವ ಜನಪ್ರತಿನಿಧಿಗಳಿದ್ದಾರೆ. ಕಾಂಗ್ರೆಸಿನಲ್ಲಿ ಅಧಿಕಾರಕ್ಕಾಗಿ ಲಾಲಸೆ ಇದ್ದು ಹಿರಿಯ ನಾಯಕರಾದ ಪೂಜಾರಿ ಅವರಿಗೆ ಟಿಕೇಟು ಪಡೆಯಲು ಸಾಮಾನ್ಯ ಕಾರ್ಯಕರ್ತ ಮೋನು ರವರೊಂದಿಗೆ ಹೋರಾಟ ನಡೆಸಬೇಕಾಗಿ ಬಂದದ್ದು ವಿಪರ್ಯಾಸ ಎಂದರು.
ರಾಜ್ಯದ ದೇವಾಲಯಗಳ ಕಾನೂನು ಬದ್ದ ಆಡಳಿತ ಮಂಡಳಿಗಳನ್ನು ಕಾಂಗ್ರೆಸ್ ಸರ್ಕಾರ ಏಕಾಏಕಿ ಬರ್ಕಾಸ್ತುಗೊಳಿಸಿದಾಗ ಕೆಲವರು ಕೋರ್ಟು ಮೆಟ್ಟಲು ಹತ್ತಿ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಜಯಗಳಿಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಸರ್ಕಾರ ಸುಪ್ರಿಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರೂ ಅಲ್ಲಿಯೂ ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿಯಲಾಗಿದೆ. ಮೂಡಬಿದ್ರೆ ಕಡಬ ಸಹಿತ ೪೨ ತಾಲೂಕು ರಚನೆ ಪ್ರಸ್ತಾವ ಮತ್ತು ಪ್ರತಿಯೊಂದು ತಾಲೂಕಿನ ಅಭಿವೃದ್ಧಿಗೆ 2 ಕೋಟಿ ರೂ ನೀಡುವ ಯೋಜನೆಯನ್ನು ಬಿಜೆಪಿ ಸರ್ಕಾರ ಮಾಡಿದ್ದರೆ, ಕಾಂಗ್ರೆಸ್ ಸರ್ಕಾರ ಅದಕ್ಕೆ ತಡೆ ಹಾಕಿ ಜನತೆಗೆ ವಂಚಿಸಿದೆ ಎಂದರು.
ವಸತಿ ರಹಿತ ಬಡ ವರ್ಗದ ಜನರಿಗಾಗಿ 94-ಸಿ ವ್ಯವಸ್ಥೆಯಡಿ ರಾಜ್ಯದಲ್ಲಿ ನಿರ್ವಸಿತ ಸುಮಾರು ೨೪ಸಾವಿರ ಮಂದಿಗೆ ಹಕ್ಕು ಪತ್ರ ಕೊಡುವ ಯೋಜನೆಗೆ ಅಂದಿನ ರಾಜ್ಯಪಾಲರು ಸಹಿ ಹಾಕದೆ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಹಿಹಾಕಿದ್ದು ಅದರಲ್ಲಿ೧೭ ಸಾವಿರ ಮಂದಿ ಜಿಲ್ಲೆಯ ಬಡವರಿದ್ದರು. ಆದರೂ ಮೂಡಬಿದ್ರೆಯ ಬಡ ಮಹಿಳೆಯ ಮನೆಯನ್ನು ಒಕ್ಕಲೆಬ್ಬಿಸಿ ಬೀದಿ ಪಾಲು ಮಾಡುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಪ್ರಭಾವ ಬೀರಿರುವುದು ಖಂಡನೀಯ ಎಂದರು.
ಜಿಲ್ಲೆಯ ಕಾಂಗ್ರೆಸ್ ಸಚಿವರುಗಳು ನಿಡ್ಡೋಡಿ ಯೋಜನೆ ಬಗ್ಗೆ ವಿರೋಧಬಾಸ ಹೇಳಿಕೆಗಳನ್ನು ನೀಡುತ್ತಿದ್ದಾರೆ ಈ ಬಗ್ಗೆ ಸದನದಲ್ಲಿ ಇಂಧನ ಸಚಿವ ಡಿ.ಕೆ ಶಿವಕುಮಾರ್ ರವರಲ್ಲಿ ಪ್ರಶ್ನೆ ಎತ್ತಿದಾಗ ರಾಜ್ಯದಿಂದ ಕೇಂದ್ರಕ್ಕೆ ಯೋಜನೆಯನ್ನು ವಿರೋಧಿಸಿ ಯಾವುದೇ ಪತ್ರ ಬರೆಯಲಾಗಿಲ್ಲ ಎಂದು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದರು.

ಸಸಿಹಿತ್ಲು ಪ್ರದೇಶದ ಕದಿಕೆ ಭಂಡಾರ ಮನೆಗೆ ಹೋಗುವ ರಸ್ತೆಯ ಬದಿಯಲ್ಲಿ ಕಾಂಡ್ಲ ವನ ನಾಶಮಾಡಿ ನದಿಗೆ ಮಣ್ಣು ತುಂಬಿಸುವ ಕಾನೂನು ಬಾಹಿರ ಕೃತ್ಯ ಕೆಲವು ಕಾಂಗ್ರೆಸ್ ನಾಯಕರ ಕೃಪೆಯಿಂದ ನಡೆಯುತ್ತಿದೆ. ಈ ಬಗ್ಗೆ ನಮ್ಮ ವಿರೋಧವಿದೆ ಎಂದು ಉಮಾನಾಥ ಕೋಟ್ಯಾನ್ ಹೇಳಿದರು.

ನಂತರ ಕೋಟ ಶ್ರೀನಿವಾಸ ಪೂಜಾರಿ ಕಿನ್ನಿಗೋಳಿ ಪೇಟೆ ಪರಿಸರದಲ್ಲಿ ಮತ ಯಾಚನೆ ನಡೆಸಿದರು.

ಈ ಸಂದರ್ಭ ಮುಲ್ಕಿ ಮೂಡಬಿದ್ರಿ ಮಂಡಲ ಅಧ್ಯಕ್ಷ ಸುಚರಿತ ಶೆಟ್ಟಿ, ಜಿಲ್ಲಾ ಮುಖಂಡರಾದ ಉಮಾನಾಥ ಕೋಟ್ಯಾನ್, ಭುವನಾಭಿರಾಮ ಉಡುಪ, ಈಶ್ವರ ಕಟೀಲು ,ಕಸ್ತೂರಿ ಪಂಜ, ಆಶಾ ರತ್ನಾಕರ ಸುವರ್ಣ, ದೇವಪ್ರಸಾದ್ ಪುನರೂರು, ಸಾವಿತ್ರಿ ಸುವರ್ಣ, ಭೇಬಿ ಸುಂದರ ಕೋಟ್ಯಾನ್, ರಿತೇಶ್ ಶೆಟ್ಟಿ ಜನಾರ್ಧನ ಕಿಲೆಂಜೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli-11041410Kinnigoli-11041408Kinnigoli-11041409

Comments

comments

Comments are closed.