ಕಟೀಲು ದೇವಳ ಜಾತ್ರಾ ಮಹೋತ್ಸವ ತೂಟೆದಾರ

ಕಿನ್ನಿಗೋಳಿ: ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವದ ವೇಳೆ ನಡೆಯುವ ತೂಟೆದಾರ (ತೆಂಗಿನ ಗರಿಗಳ ಕಟ್ಟುಗಳಿಗೆ ಬೆಂಕಿ ಹಚ್ಚಿ ಅದನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುವುದು) ಅರುಣಾಸುರನನ್ನು ಸಂಹರಿಸಿದ ದೇವಿ ವಿಜಯಿಯಾಗಿ ಬರುವ ವೇಳೆ ಈ ರೀತಿ ಬೆಂಕಿಯಿಂದ ಸ್ವಾಗತ ಕೋರಿದ ಸಮಯ ಎಂಬ ಪ್ರತೀತಿಯಿದ್ದು ಪರಂಪರೆಯಿಂದ ನಡೆದು ಬಂದಿರುವ ವಿಶೇಷವಾದ ಆಚರಣೆ ಮತ್ತು ನಂಬಿಕೆ.
ಕಟೀಲು ದೇವಳ ಜಾತ್ರೆಯ ಧ್ವಜಾರೋಹಣ ದಿನ ತೂಟೆದಾರ ಆಡುವ ಗ್ರಾಮಸ್ಥರು ಶುದ್ಧರಾಗಿ ಮಡಿಯುಟ್ಟು ದೇವಿಯ ಅನುಗ್ರಹ ಪ್ರಸಾದ ಸ್ವೀಕರಿಸಿದ ಬಳಿಕ ರಥೋತ್ಸವರೆಗೂ ಮದ್ಯ, ಮಾಂಸಾಹಾರ ತ್ಯಜಿಸಿ ಕೇವಲ ಒಪ್ಪತ್ತು ಊಟ ಮಾಡುವ ನಿಯಮ ಪಾಲಿಸುವವರು ಮಾತ್ರ ಬೆಂಕಿ ಸೇವೆಗೆ ಆರ್ಹರು ಎಂಬ ನಂಬಿಕೆ ಇದೆ.

ರಥೋತ್ಸವದ ಮುಂಜಾನೆ ಕವಾಟೋದ್ಘಾಟನೆ ಬಳಿಕ ಮಧ್ಯಾಹ್ನ ಮಹಾಪೂಜೆ. ಆ ನಂತರ ಬಹಳ ವಿಜೃಂಭಣೆಯಿಂದ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯುತ್ತವೆ. ಮಧ್ಯ ರಾತ್ರಿಯ ಹೊತ್ತಿಗೆ ಪಟಾಕಿ, ಸುಡು ಮದ್ದುಗಳ ಸಂಭ್ರಮದಲ್ಲಿ ಸಾವಿರಾರು ಜನರ ಸಮ್ಮಖದಲ್ಲಿ ರಥೋತ್ಸವ ನಡೆಯುತ್ತದೆ. ನಂತರ ದೇವಸ್ಥಾನಕ್ಕೆ ಸಂಬಂಧಪಟ್ಟ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ಮಧ್ಯೆ ನಡೆಯುವ ಈ ತೂಟೆದಾರದಲ್ಲಿ ಗ್ರಾಮದ ಹಚ್ಚಿನ ಭಕ್ತರು ಭಾಗವಹಿಸುತ್ತಾರೆ. ತೂಟೆದಾರ ಪ್ರದರ್ಶಿಸುವ ಗ್ರಾಮಸ್ಥರು ನಂದಿನಿ ನದಿಯಲ್ಲಿ ಸ್ನಾನ ಮುಗಿಸಿ ಮೈಮೇಲೆ ಕೇವಲ ಶಾಲು ಹಾಗೂ ಧೋತಿಯನ್ನು ಮಾತ್ರ ತೊಟ್ಟುಕೊಂಡು ರಕ್ತೆಶ್ವರೀ ಸನ್ನಿಧಿಯ ಬಳಿ ಮೂರು ಸುತ್ತುಗಳು ತೂಟೆದಾರ ನಡೆಸಿ ಅಲ್ಲಿಂದ ದೇವಸ್ಥಾನದ ರಥ ಬೀದಿಯಲ್ಲಿ 2 ತಂಡಗಳು ಒಬ್ಬರ ಮೇಲೊಬ್ಬರು ಉರಿಯುತ್ತಿರುವ ತೂಟೆಗಳನ್ನು ಎಸೆಯುತ್ತಾರೆ. ಹೀಗೆ ಮೂರು ಸುತ್ತುಗಳು ತೂಟೆದಾರ ನಡೆಯುತ್ತದೆ. ಇದು ಅತಿರೇಕಕ್ಕೆ ಹೋಗದಂತೆ ಮಧ್ಯದಲ್ಲಿ ಗ್ರಾಮಗಳಿಗೆ ಸಂಬಂಧಪಟ್ಟ ಗುತ್ತು ಬರ್ಕೆಯವರು ಹತೋಟಿಗೆ ತರುತ್ತಾರೆ. ನಂತರ ದೇವಸ್ಥಾನದ ಮುಂದೆ ತೂಟೆದಾರದಲ್ಲಿ ಪಾಲ್ಗೊಂಡವರಿಗೆ ಓಕುಳಿ ನೀರನ್ನು ತಯಾರಿಸಿ ಇಡುತ್ತಾರೆ. ಅದರಲ್ಲಿ ಸ್ನಾನ ಮಾಡಿ ಬರುತ್ತಾರೆ. ಉರಿಯುವ ಬೆಂಕಿ ತಮ್ಮ ಮೈ ಮೇಲೆ ಬಿದ್ದರೂ ಯಾವುದೇ ರೀತಿಯ ಸುಟ್ಟ ಗಾಯಗಳು ಆಗುವುದಿಲ್ಲ. ಒಂದು ವೇಳೆ ಚಿಕ್ಕ ಪುಟ್ಟ ಗಾಯಗಳು ನಡೆದರೂ ಅದಕ್ಕೆ ದೇವರ ಪ್ರಸಾದವೇ ಔಷಧಿ.

ವಿಶೇಷವೆಂದರೆ ತಮಗೆ ಆಪ್ತರಾದವರು ತೂಟೆದಾರದಲ್ಲಿ ವೈರಿಗಳಂತೆ ವರ್ತಿಸುತ್ತಾರೆ. ಆದರೆ ತೂಟೆದಾರ ಮುಗಿದಂತೆ ಎಲ್ಲರೂ ಒಂದಾಗುತ್ತಾರೆ. ನೂರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ತೂಟೆದಾರ ಜನರಿಗೆ ಮನರಂಜನೆ ಹಾಗೂ ಭಕ್ತಿಯ ಪರಾಕಾಷ್ಠೆಯ ನಿದರ್ಶನ. ಇದರ ಹಿಂದೆ ಧಾರ್ಮಿಕ ನಂಬಿಕೆಯು ಇದೆ.

Kateel-23041401 Kateel-23041402 Kateel-23041403

Comments

comments

Comments are closed.

Read previous post:
Kinnigoli-22041403
ಮುಕ್ಕ: ಕಾರಿಗೆ ಖಾಸಗಿ ಬಸ್ ಡಿಕ್ಕಿ

ಕಿನ್ನಿಗೋಳಿ : ಸುರತ್ಕಲ್ ಸಮೀಪದ ಮುಕ್ಕಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು,  ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ 10 ಮಂದಿ...

Close