ಐಕಳದಲ್ಲಿ ಚಿರತೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಡಿಕಲ್ಲು ಪುತ್ತುಕೋಡಿ ಬಳಿ ಸೋಮವಾರ ಮಧ್ಯಾಹ್ನ ಚಿರತೆಯೊಂದು ಪ್ರತ್ಯಕ್ಷವಾಗಿ ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ಉಂಟುಮಾಡಿತು. ವಿಷಯ ತಿಳಿದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸುವ ಹೊತ್ತ್ತಿಗೆ ಚಿರತೆ ಕಣ್ಮರೆಯಾಯಿತು.

ಕಳೆದ ಐದಾರು ತಿಂಗಳಿಂದ ಪಡುಪಣಂಬೂರು, ತೋಕೂರು, ಪುನರೂರು, ಮೆನ್ನಬೆಟ್ಟು, ಗುತ್ತಕಾಡು, ಕೊಲ್ಲೂರು, ಪರಿಸರದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದ ಸುದ್ದಿಯಾಗಿದ್ದು ಸೆರೆ ಹಿಡಿಯಲು ಯಾರಿಂದಲೂ ಸಾಧ್ಯವಾಗಿಲ್ಲ.
ಸೋಮವಾರ ಐಕಳ ಪರಿಸರದ ಬಾವಡಿಕಲ್ಲು ಪುತ್ತುಕೋಡಿಯಲ್ಲಿ ಮತ್ತೆ ಕಾಣಿಸಿಕೊಂಡಿದೆ. ಸುಮಾರು 11 ಗಂಟೆಯ ಹೊತ್ತಿಗೆ ಮಾವಿನ ಹಣ್ಣು ಹೆಕ್ಕಲು ಹೋದ ದಯಾನಂದರಿಗೆ ಪಕ್ಕದಲ್ಲೇ ಗುರ್ ಅಂದದ್ದು ಕೇಳಿಸಿ ನೋಡಿದರೆ ಪಕ್ಕದಲ್ಲೇ ಪೊದೆಯೊಂದರದಲ್ಲಿ ಸಿಕ್ಕಿಕೊಂಡ ಚಿರತೆ ಕಾಣಿಸಿತು. ಪಂಚಾಯತ್ ಸದಸ್ಯ ಮಾರ್ಕ್ ವಿಲಿಯಂ ಸಹಿತ ಸ್ಥಳಿಯರಿಗೆ ವಿಷಯ ತಿಳಿದಿದ್ದರೂ ಕೊಂಚ ತಡವಾಗಿ ಅರಣ್ಯಾಧಿಕಾರಿಗಳಿಗೆ ಸುದ್ದಿ ತಿಳಿಸಿದ್ದಾರೆ. ಮೂಡಬಿದ್ರೆಯಿಂದ ವಲಯ ಅರಣ್ಯಾಧಿಕಾರಿ ದಿನೇಶ್, ಪರಮೇಶ್ವರ್, ಸಿಬ್ಬಂದಿಗಳೊಂದಿಗೆ ಬರುವ ಹೊತ್ತಿಗೆ ಚಿರತೆ ಓಡಿಯಾಗಿತ್ತು.
ಚಿರತೆ ಅನೇಕ ದಿನಗಳಿಂದ ಊರಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ನಾಯಿಗಳನ್ನು ಕದ್ದೊಯ್ದಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಗೂಡು ತಂದು ಹಿಡಿಯಿರಿ ಎಂದರೂ ಸ್ಪಂದಿಸಿಲ್ಲ. ಮಕ್ಕಳು ಶಾಲೆಗೆ ಹೋಗುವಾಗ ಹೆದರುತ್ತಾರೆ. ನಮಗೂ ಭಯದ ವಾತಾವರಣ ಎಂದು ಪದ್ಮನಾಭದಾಸ್, ಚಂಚಲಾಕ್ಷಿ, ಸರಿತಾ, ಬಾಬುದಾಸ್ ಮುಂತಾದವರು ದೂರಿದರು.
ವಲಯ ಅರಣ್ಯಾಧಿಕಾರಿ ದಿನೇಶ್ ಪ್ರಕಾರ ಮೂಡುಬಿದ್ರೆ ವಲಯದಲ್ಲಿ ೧೫ಕ್ಕೂ ಹೆಚ್ಚು ಚಿರತೆಗಳಿದ್ದು, ನಿರಂತರ ಓಡಾಟದಲ್ಲಿವೆ. ಆದರೆ ಮಾನವರಿಗೆ ಯಾರಿಗೂ ತೊಂದರೆ ಕೊಟ್ಟ ಉದಾಹರಣೆಗಳಿಲ್ಲ. ಇಪ್ಪತ್ತೈದು ಕಿ.ಮೀ.ವ್ಯಾಪ್ತಿಯಲ್ಲಿ ಅವು ಸಂಚರಿಸುತ್ತಿದ್ದು, ಆಹಾರ ಹುಡುಕಿಕೊಂಡು ಆವಾಗಾವಾಗ ಬರುತ್ತವೆ. ಈಗಾಗಲೇ ಅನೇಕ ಕಡೆ ಬೋನುಗಳನ್ನು ಇಡಲಾಗಿದೆ. ಸಿಬಂದಿ ಕೊರತೆಯೂ ಇಲಾಖೆಗೆ ಇದ್ದು, ಐಕಳ ಪರಿಸರಕ್ಕೆ ಕುಂದಾಪುರದಿಂದ ಗೂಡು ಹಾಗೂ ಬಲೆ ತರಿಸಿ ಚಿರತೆ ಹಿಡಿಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

Kinnigoli-20051402
Kinnigoli-20051403

 

Comments

comments

Comments are closed.

Read previous post:
Kinnigoli-20051401
ಗ್ರಾಮೀಣ ಪ್ರದೇಶಗಳಲ್ಲಿ ಕಲೆಗೆ ಪ್ರೋತ್ಸಾಹ ಅಗತ್ಯ

ಕಿನ್ನಿಗೋಳಿ: ಕಲೆಗಳಿಗೆ ಗ್ರಾಮೀಣ ಮಟ್ಟದಲ್ಲಿ ಪ್ರೋತ್ಸಾಹ ಮಾರ್ಗದರ್ಶನ ನೀಡಿದಾಗ ಯಕ್ಷಗಾನ ಹಾಗೂ ಜಾನಪದ ಕಲೆಗಳು ಜೀವಂತಿಕೆ ಕಂಡುಕೊಳ್ಳುತ್ತದೆ. ಎಂದು ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು. ಕೆರೆಕಾಡು...

Close