ಸಿತ್ಲ ಪರಕಟ್ಟ ಕಿಂಡಿ ಆಣೆಕಟ್ಟು

ಕಟೀಲು : ನಂದಿನಿ ನದಿ ಕಟೀಲಿನಿಂದ ಹದಿನಾರು ಮೈಲು ದೂರದಲ್ಲಿ ಹುಟ್ಟಿ ಹದಿನಾರು ಮೈಲುಗಳ ಬಳಿಕ ಸಮುದ್ರ ಸೇರುತ್ತದೆ. ಅಂದರೆ ನದಿಯ ಉದ್ದ ಮೂವತ್ತೆರಡು ಮೈಲುಗಳು. ಸಣ್ಣ ನೀರಾವರಿ ಇಲಾಖೆಯ ಮಾಹಿತಿಯಂತೆ ನಂದಿನಿ ಉದ್ದ 40 ಕಿ.ಮೀ. ಜಲಾನಯನ ಇಲಾಖೆಯ ಪ್ರಕಾರ ನದಿಯ ಜಲಾಯನದ ವ್ಯಾಪ್ತಿ 9112 ಹೆಕ್ಟೇರ್ ಪ್ರದೇಶ. ಮುಚ್ಚೂರು, ಮೂಡುಪೆರಾರ, ಬಡಗ ಎಡಪದವು, ಪೆರ್ಮುದೆ, ಎಕ್ಕಾರು, ಮೆನ್ನಬೆಟ್ಟು, ಬಜಪೆ, ಸೂರಿಂಜೆ, ಚೇಳ್ಯಾಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ನದಿ ಹರಿದು ಹೋಗುತ್ತದೆ.
ನದಿಗೆ ಕನಕಬೆಟ್ಟು, ಪಿಜಿನಬೆಟ್ಟು, ಒಂಟಿಮಾರು,ಗುಂಡಾವು, ನೀರ್‌ಕೆರೆ, ಮುಚ್ಚೂರು ಕಾನ, ಕಾಯರ್‌ಮುಗೇರ್, ಮುಚ್ಚೂರು ಕೊಂಠಿಕಟ್ಟ, ಮಚ್ಚಾರು, ನಿಡ್ಡೋಡಿ, ಪರಕಟ್ಟ, ಅಜಾರು ಜಲಕದ ಕಟ್ಟೆ, ಕಟೀಲು, ಎಕ್ಕಾರು ಕಂಬಳಪದವು, ಶಿಬರೂರು, ಪುಚ್ಚಾಡಿ, ಸೂರಿಂಜೆ, ಚೇಳಾಯರುಗಳಲ್ಲಿ ರೈತರು ಹಾಗೂ ಇಲಾಖೆಗಳು ಕಟ್ಟಿದ ಕಿಂಡಿ ಅಣೆಕಟ್ಟುಗಳಿವೆ. ಒಂದೂವರೆ ಸಾವಿರ ಎಕರೆಗಳಿಗಿಂತಲೂ ಹೆಚ್ಚು ಕೃಷಿ ಭೂಮಿಗಳಿಗೆ ಈ ಕಟ್ಟಗಳು ನೀರಾಶ್ರಯ ನೀಡುತ್ತದೆ.
ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆ, ಅಂತರ್ಜಲ ಉನ್ನತಿ, ಕೃಷಿಗೆ ಸಹಕಾರ ಎಂಬ ಒತಪ್ರೋತ ಘೋಷಣೆಗಳು ಮಾತ್ರ ಎಂಬುದಕ್ಕೆ ಕಟೀಲು ಬಳಿಯ ಸಿತ್ಲ ಪರಕಟ್ಟ ಕಿಂಡಿ ಆಣೆಕಟ್ಟು ಉದಾಹರಣೆಯಾಗಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಮೆನ್ನಬೆಟ್ಟು ಹಾಗೂ ಎಕ್ಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕಟೀಲಿನಲ್ಲಿ ಹರಿಯುವ ನಂದಿನಿ ನದಿಗೆ ಸಿತ್ಲ ಪರಕಟ್ಟ ಬಳಿ ನಬಾರ್ಡ್‌ನಿಂದ ಸುಮಾರು ೪೦ಲಕ್ಷ ರೂ. ವೆಚ್ಚದಲ್ಲಿ ಕಿಂಡಿ ಆಣೆಕಟ್ಟು ನಿರ್ಮಾಣವಾಗಿತ್ತು. ಆದರೆ ಇವರೆಗೂ ಅಣೆಕಟ್ಟಿಗೆ ಹಲಗೆ ಹಾಕಲಾಗಿಲ್ಲ ತಾಂತ್ರಿಕ ತೊಂದರೆಗಳಿಗೆ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ತಲೆಕೆಡಿಸಿಕೊಳ್ಳದಿರುರುವುದು ವಿಪರ‍್ಯಾಸದ ಸಂಗತಿಯಾಗಿದೆ.

ಈ ಪ್ರದೇಶದಲ್ಲಿ ಸುಮಾರು 50 ವರ್ಷಗಳ ಹಿಂದೆ ಕಟ್ಟಿದ ಅಣೆಕಟ್ಟು ಪರಿಸರದ ಮುನ್ನೂರು ಎಕರೆಗೂ ಮಿಕ್ಕಿ ಕೃಷಿ ಭೂಮಿಗೆ ನೀರು ಉಣಿಸುತ್ತಿತ್ತು. ಪರಿಸರದ ನೂರಕ್ಕೂ ಮಿಕ್ಕಿ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುತ್ತಿತ್ತು. ವರ್ಷಂಪ್ರತಿ ಬರುವ ಮಳೆಗಾಲದ ನೆರೆಯ ಹೊಡೆತಕ್ಕೆ ಒಳಗಾಗಿ ಶಿಥಿಲಗೊಂಡು ಮುರಿದ ಬಳಿಕ ನಬಾರ್ಡ್ ಯೋಜನೆಯಲ್ಲಿ ಕಟ್ಟಿದ್ದ ಈ ಹೊಸ ಕಿಂಡಿ ಅಣೆಕಟ್ಟು ಬಳಕೆಯಾಗದೆ ಉಳಿದಿದೆ. ಕಾರಣ ನೆರೆಯ ಹೊಡೆತಕ್ಕೆ ನದಿಯ ಇಕ್ಕೆಲಗಳು ಪ್ರತಿ ವರ್ಷ ಕುಸಿದು ಬೀಳುತ್ತಿದೆ.
ಎರಡು ವರ್ಷ ಹಿಂದೆ ಸುರಿದ ಜಡಿ ಮಳೆಗೆ ನಿರ್ಮಾಣಗೊಂಡ ಪರಕಟ್ಟೆ ಕಿಂಡಿ ಅಣೆಕಟ್ಟುವಿನ ಬದಿಯ ಪಂಪು, ಬಾವಿ ಹಾಗೂ ತೆಂಗಿನ ಮರಗಳು ನಂದಿನಿ ನದಿಯಲ್ಲಿ ನೀರು ಪಾಲಾಗಿವೆ. ನದಿಯ ಇನ್ನೊಂದು ಬದಿಯಾದ ಎಕ್ಕಾರು ಗ್ರಾಮದ ಕುಕ್ಕುಂಡೇಲ್‌ನಲ್ಲಿ ತಡೆಗೋಡೆ ಹಾನಿಯಾಗಿದೆ. ನೀರಿನ ರಭಸಕ್ಕೆ ಹಳೆ ಕಿಂಡಿ ಅಣೆಕಟ್ಟು ಸ್ಲಾಬ್ ಕುಸಿದು ಹೊಸ ಅಣೆಕಟ್ಟಿಗೆ ತಡೆಯನ್ನು ಉಂಟು ಮಾಡಿವೆ. ಇದು ಕೂಡ ನೀರಿನ ಒಳ ಹರಿವು ಮತ್ತು ಕೃತಕ ನೆರೆಗೆ ಎಡೆಮಾಡಿಕೊಟ್ಟಿವೆ. ಈ ಪರಿಸರದ ತೋಟ, ಗದ್ದೆಗಳು ನದಿ ಪಾಲಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಅಣೆಕಟ್ಟಿನ ನದಿಯ ಎರಡೂ ಬದಿಗಳಲ್ಲಿ ತಡೆಗೋಡೆ ನಿರ್ಮಾಣವಾಗಬೇಕು. ಇಲ್ಲದಿದ್ದರೆ ಅಣೆಕಟ್ಟಿನಲ್ಲಿ ನೀರು ಸಂಗ್ರಹವಾಗುವಾಗ ಎರಡು ಬದಿಗಳು ಕುಸಿಯುವ ಭೀತಿ ಇದ್ದು, ಮಳೆಗಾಲದಲ್ಲಿ ನೆರೆ ಬರುವಾಗ ಕೊಚ್ಚಿಹೋಗಬಹುದು ಎಂದು ಅಲ್ಲಿನ ಕೃಷಿಕರ ಅಭಿಪ್ರಾಯ ಹಾಗೂ ಈಗಾಗಲೇ ಸ್ಥಳೀಯ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ನೀಡಲಾಗಿದೆ. ತಡೆಗೋಡೆ ನಿರ್ಮಾಣ ಕಾರ್ಯಗತವಾಗಬೇಕಾದರೆ ಇಲಾಖಾಧಿಕಾರಿಗಳ ಸ್ಪಂದನ ಮುಖ್ಯ.

Kateel24051402

ಅನಾಥ ಹಲಗೆಗಳು : 
ಕಾಮಾಗಾರಿ ಪೂರ್ತಿಯಾದರೂ ಇಲ್ಲಿನ ನಿರ್ವಹಣಾ ಸಮಿತಿಗೆ ಈ ಯೋಜನೆ ಹಸ್ತಾಂತರವಾಗಿಲ್ಲ. ಕಿಂಡಿ ಅಣೆಕಟ್ಟಿಗೆ ಅಳವಡಿಸಲು ತಂದ ಹಲಗೆಗಳ ರಾಶಿ ಅನಾಥವಾಗಿ ಬಿದ್ದಿವೆ. ಮಂದಿನ ಮಳೆಗಾಲದ ಬಳಿಕವಾದರೂ ಎಅರಡೂ ಬದಿಗಳಲ್ಲಿ ತಡೆಗೋಡೆ ನಿರ್ಮಿಸಿ ಹಲಗೆ ಹಾಕಿ ಅಣೆಕಟ್ಟು ಉಪ ಯೋಗಕ್ಕೆ ಬರುವಂತೆ ಮಾಡಬೇಕಾದ ಕರ್ತವ್ಯ ಜನಪ್ರತಿನಿಧಿಗಳಿದೆ. ಈ ಪ್ರದೇಶದ ಜನರು ಜನಪ್ರತಿನಿಧಿಗಳಲ್ಲಿ ಮನವಿಗಳನ್ನು ಹಾಗೂ ಸ್ಥಳಕ್ಕೆ ಕರೆಸಿ ಪರಿವೀಕ್ಷಣೆ ಮಾಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೃಷಿಯನ್ನು ನಂಬಿ ಬದುಕುವ ರೈತಾಪಿ ವರ್ಗ ಹಾಗೂ ಸಾವಿರಕ್ಕೂ ಅಧಿಕ ಮನೆಗಳ ಬಾವಿಯಲ್ಲಿ ಅಂತರ್ಜಲ ಹೆಚ್ಚಿಸಿ ಪರಿಸರದ ಕುಡಿಯುವ ನೀರಿನ ಬವಣೆ ಕಡಿಮೆ ಮಾಡಬಲ್ಲ ಈ ಅಣೆಕಟ್ಟಿನ ಬಗ್ಗೆ ಜನಪ್ರತಿನಿಧಿಗಳು ಕರುಣೆ ತೋರಿಸಬೇಕಾಗಿದೆ.

Kateel24051403

ವೈಜ್ಞಾನಿಕ ರೀತಿಯಲ್ಲಿ ತಡೆಗೋಡೆಯ ಬಗ್ಗೆ ನಿರ್ಮಾಣ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ಅಣೆಕಟ್ಟು ಬಾಗಿಲು ಹಾಕಿದಲ್ಲಿ ನೀರಿನ ಸೆಳೆತಕ್ಕೆ ಪರಿಸರದ ತೋಟ ಮತ್ತು ಜಮೀನು ಸಂಪೂರ್ಣ ಕೊಚ್ಚಿ ಹೋಗಿ ನೂರಾರು ಎಕರೆ ಪ್ರದೇಶ ನಾಶವಾಗಲಿದೆ.ಇನ್ನಾದರೂ ಕೃಷಿಕರ ಬವಣೆಯನ್ನು ಅರ್ಥೈಸಿ ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳು ಸಹಕರಿಸಬೇಕು.

ಜಗನ್ನಾಥ ಶೆಟ್ಟಿ ಸಿತ್ಲ ಕಟೀಲು,
ಪ್ರಗತಿಪರ ಕೃಷಿಕರು.

ಆಣೆಕಟ್ಟಿನ ತಡೆಗೋಡೆ ನಿರ್ಮಾಣಕ್ಕಾಗಿ ಶಾಸಕರು ಮತ್ತು ಸಂಸದರಿಗೆ ಮನವಿ ಸಲ್ಲಿಸಿದ್ದೇವೆ. ಸ್ಥಳ ಪರಿವೀಕ್ಷಣೆ ನಡೆದಿದ್ದು ಮುಂದಿನ ದಿನಗಳಲ್ಲಿ ತ್ವರಿತವಾಗಿ ತಡೆಗೋಡೆ ನಿರ್ಮಾಣಗೊಂಡು ಕೃಷಿಕರ ಬವಣೆ ನೀಗುವ ಭರವಸೆಯಿದೆ.
ಜನಾರ್ಧನ ಕಿಲೆಂಜೂರು
ಅಧ್ಯಕ್ಷರು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ

ಸುಮಾರು 40 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಆಣೆಕಟ್ಟು ಆಗಿದ್ದು ಬದಿಗಳ ತಡೆಗೋಡೆ ನಿರ್ಮಿಸಿದರೆ ಕೃಷಿಕರಿಗೆ ಹೆಚ್ಚು ಉಪಯೋಗವಾಗಲಿದೆ. ಸಣ್ಣ ನೀರಾವರಿ ಇಲಾಖೆಯಡಿ ಬರುವುದರಿಂದ ಜಿಪಂ ವ್ಯಾಪ್ತಿಗೆ ಬರುವುದಿಲ್ಲ ಆದರೂ ಸೂಕ್ತ ಕ್ರಮ ಕೈಗೊಳ್ಳಲು ಶ್ರಮಿಸುತ್ತಿದ್ದೇವೆ.
ಈಶ್ವರ ಕಟೀಲು
ಜಿಪಂ ಸದಸ್ಯರು.

Kateel24051401

Comments

comments

Comments are closed.

Read previous post:
Kinnigoli-23051402
ಸಿಮೆಂಟ್ ಮಿಕ್ಸರ್ ಲಾರಿ ಪಲ್ಟಿ

ಕಿನ್ನಿಗೋಳಿ:  ಕಿನ್ನಿಗೋಳಿ, ಮೂಡಬಿದ್ರೆ ರಾಜ್ಯ ಹೆದ್ದಾರಿಯ ಐಕಳ ಕಂಬಳಕ್ಕೆ ಹೋಗುವ ದಾರಿಯ ತಿರುವು ರಸ್ತೆ ಬಳಿ ಸಿಮೆಂಟ್ ಮಿಕ್ಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು,...

Close