ನಂದಿನಿ ನದಿ ಮರಳು ಕೃತಕ ನೆರೆಯ ನೆರಳು

ಕಿನ್ನಿಗೋಳಿ : ಸರಕಾರ ಕೆರೆ ನದಿಗಳ ನಿರ್ವಹಣೆ, ಅಭಿವೃದ್ಧಿ ಹೆಸರಲ್ಲಿ ಕೋಟಿಗಟ್ಟಲೆ ಹಣ ವ್ಯಯಿಸುತ್ತದೆ. ಆದರೆ ಬಹುತೇಕ ನದಿ ಕೆರೆಗಳ ಕಾಲುವೆ, ಗೇಟು, ಮಣ್ಣಿನ ಏರಿ ನಿರ್ವಹಣೆಯಿಲ್ಲದೆ ಗಿಡ-ಗಂಟಿ ಬೆಳೆದು ಹೂಳು ತುಂಬಿ ವಿನಾಶದಂಚಿಗೆ ಸಾಗುತ್ತಿವೆ. ಇಂತಹ ಸ್ಥಿತಿಯಲ್ಲಿ ಎಲ್ಲಿ ಅನ್ನದಾತ ತನ್ನ ಜಮೀನುಗಳಿಗೆ ನೀರು ಹರಿಸುವುದು ಹೇಗೆ? ಸಾಮಾನ್ಯವಾಗಿ ಪ್ರವಾಹ ರೈತರಿಗೆ ಸಹಾಯವಾಗಿ ಕೃಷಿ ಭೂಮಿಯನ್ನು ಫಲವತ್ತಾನ್ನಾಗಿ ಮಾಡುತ್ತದೆ. ಆದರೆ ಹೆಚ್ಚಿನ ಪ್ರವಾಹ ಹಾನಿಕಾರಕ. ಇದು ಬೆಳೆಗಳನ್ನು ನಾಶಪಡಿಸುತ್ತದೆ. ಸಾಮಾನ್ಯವಾಗಿ ಫಲವತ್ತಾದ ಭೂಮಿಯನ್ನು ದುರದೃಷ್ಟವಶಾತ್ ಮರಳು ಮುಚ್ಚಲ್ಪಡುತ್ತದೆ.

ಮರಳಿಗೀಗ ಚಿನ್ನದ ಬೆಲೆ. ಕರಾವಳಿಯ ಅನ್ನದಾತನ ಜೀವನಾಡಿಯಾಗಿರುವ ನಂದಿನಿ ನದಿ ಮರಳುಗಾರಿಕೆ ನಿಷೇದದಿಂದ ನದಿಯಲ್ಲಿ ಮರಳಿನ ಉಸುಕು ತುಂಬಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಮಳೆಗಾಲದಲ್ಲಿ ರೈತರ ಕೃಷಿ ಮುಳುಗಡೆಯಾಗಲಿದೆ ಒಟ್ಟಿನಲ್ಲಿ ನದಿತೀರದ ಜನರ ಪಾಲಿಗೆ ಸಮಸ್ಯೆಯಾಗಲಿದೆ. ಮಳೆಗಾಲ ಪ್ರಾರಂಭವಾಗಿದೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ, ನದಿ, ಕೆರೆ ಮತ್ತು ಹೊಳೆಗಳಲ್ಲಿ ನೀರು ತುಂಬಿದೆ ರೈತರ ಮೊಗದಲ್ಲಿ ಸಂತಸದ ಕಳೆ ಎದ್ದು ಕಾಣುತ್ತಿದೆ, ಸಾವಿರಾರು ಎಕರೆ ಕೃಷಿ ಪ್ರದೇಶವಿರುವ ಕಟೀಲು, ಕೊಡೆತ್ತೂರು ಕಿಲೆಂಜೂರು, ಶಿಬರೂರು, ಅತ್ತೂರು, ಪಂಜ ತೀರ ಪ್ರದೇಶವುಳ್ಳ ನಂದಿನಿ ನದಿ ತೀರದ ಗ್ರಾಮಗಳ ರೈತರಿಗೆ ಈ ವರ್ಷ ಕೂಡಾ ನೆರೆಯಂತಹ ತೀವ್ರ ಸಮಸ್ಯೆ ಎದುರಾಗಲಿದೆ. ಕಳೆದ ಏಳು ವರ್ಷಗಳಿಂದ ಮರಳು ತೆಗೆಯದೆ ಇದ್ದುದುದರಿಂದ ಸಮಸ್ಯೆ ಬಿಗಡಾಯಿಸಿದೆ ಯಾಕೆಂದರೆ ರಾಜ್ಯ ಸರಕಾರದ ಮರಳು ನೀತಿ ಈ ಭಾಗದ ರೈತರ ಪಾಲಿಗೆ ಮುಳುವಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ವರ್ಷಂಪ್ರತಿ ನದಿಯ ಮರಳು ತೆಗೆದರೆ ಮಳೆಗಾಲದಲ್ಲಿ ನೀರು ಹರಿದು ಹೋಗಿ ಸಮುದ್ರ ಸೇರುತ್ತದೆ. ಇದರಿಂದ ನೆರೆಯ ಸಮಸ್ಯೆ ತೀರಾ ಕಡಿಮೆ. ನಂದಿನಿ ನದಿಯಲ್ಲಿ ಮರಳು ತುಂಬಿದ್ದರಿಂದ, ಮಳೆಗಾಲದಲ್ಲಿ ನದಿಯಲ್ಲಿ ನೀರು ತುಂಬಿ ಹರಿಯುತ್ತದೆ ಅಲ್ಲದೆ ಇಲ್ಲಿನ ಪ್ರದೇಶಗಳು ಸಂಪೂರ್ಣ ಜಲಾವೃತವಾಗುತ್ತದೆ. ಒಂದೆರಡು ದಿನ ನಿರಂತರ ಮಳೆ ಬಂದಲ್ಲಿ ಜಲಾವೃತ್ತವಾಗಿ ಬೆಳೆಗಳು ಕೊಳೆಯುತ್ತದೆ. ಅಲ್ಲದೆ ಬೇಸಿಗೆ ಕಾಲದಲ್ಲಿ ಅಂತರ್ಜಲ ಮಟ್ಟ ಕುಸಿದು ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಯು ಉಂಟಾಗುತ್ತಿದೆ. ಎಂಬುದು ರೈತರ ಅಳಲು. ಮರಳುಗಾರಿಕೆ ಮರಳು ಮಾಫೀಯಾವಾಗಿ ಬದಲಾದರಿಂದ ರೈತರಿಗೆ ಈ ಸಮಸ್ಯೆ ಇನ್ನಿಲ್ಲಿದ ಕಿರಿಕಿರಿ ತಂದೊಡ್ಡಿದೆ. ಈ ಸಮಸ್ಸೆ ಪರಿಹಾರವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರು ಬೇಸಾಯವನ್ನೇ ಕೈ ಬಿಡಬೇಕಾದ ಸಂಭವ ಎದುರಾಗಲಿದೆ ಅದಕ್ಕಿಂತ ಮೊದಲು ಸಣ್ಣ ನೀರಾವರಿ ಇಲಾಖೆ ಇತ್ತ ಗಮನ ಹರಿಸಿದರೆ ರೈತರ ಸಮಸ್ಯೆ ಪರಿಹಾರ ಆಗುದರಲ್ಲಿ ಯಾವೂದೇ ಸಂಶಯವಿಲ್ಲ

ನದಿಯಲ್ಲಿ ಮರಳು, ಮಣ್ಣು, ಸಂಗ್ರಹದಿಂದಾಗಿ ನೀರು ನಿಲ್ಲುವುದಿಲ್ಲ. ನದಿಯಲ್ಲಿ ಎಲ್ಲೆಂದರಲ್ಲಿ ಕಸ, ಕಡ್ಡಿ, ಮುಳ್ಳಿನ ಗಿಡಗಳು ಬೆಳೆದಿವೆ. ಮರಳಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸುತ್ತಿದೆ. ಮರಳು ಹೂಳು ತೆಗೆಸದೆ ಇದ್ದರೆ ಜಮೀನಿಗೆ ಮಳೆಗಾಲದಲ್ಲಿ ನೀರು ನುಗ್ಗುವ ಅಪಾಯವಿದೆ. ಮೂರು ಬೆಳೆಗಳ ಬೇಸಾಯ ಬೆಳೆಯಲು ಅಸಾಧ್ಯ ಎಂದು ಸುತ್ತಲಿನ ಗ್ರಾಮಗಳ ರೈತರ ಅಳಲು. ಇದು ಪರಿಸರದ ಹತ್ತಾರು ಗ್ರಾಮಗಳ ನೂರಾರು ರೈತರ ಬದುಕಿನ ಪ್ರಶ್ನೆ ಕೂಡ.

ಕಿಂಡಿ ಅಣೆಕಟ್ಟುಗಳ ಸಮೀಪ ಹಾಗೂ ನದಿ ತಿರುವುಗಳಲ್ಲಿ ಸೂಕ್ತವಾದ ವೈಜ್ಷಾನಿಕ ರೀತಿಯ ತಡೆಗೋಡೆಗಳಿಲ್ಲದಿರುವುದರಿಂದ ಮರಳು ತುಂಬಿಕೊಂಡು ವರ್ಷದಿಂದ ವರ್ಷಕ್ಕೆ ನದಿ ತನ್ನ ದಿಕ್ಕು ಬದಲಿಸುವ ಪ್ರಮೇಯ ಜಾಸ್ತಿ ಎಂದು ಸುತ್ತಮುತ್ತಲಿನ ಹೊಲಗಳ ರೈತರು ಆತಂಕ ಪಡುವಂತಾಗಿದೆ. ನದಿ ತೀರದ ಗ್ರಾಮಸ್ಥರಿಗೆ ಮಳೆಗಾಲ ಆರಂಭವಾಯಿತೆಂದರೆ ಗೋಳು ತಪ್ಪಿದ್ದಲ್ಲ. ನದಿ ತಪ್ಪಲಿನ ಹೊಲದಲ್ಲಿನ ಬೆಳೆ ಹಾನಿ, ಸಂಚಾರ ಸಂಪರ್ಕ ಕಡಿತ. ಹೀಗೆ ನಾನಾ ಹಲವಾರು ರೀತಿಯ ರೀತಿ ಸಮಸ್ಯೆಗಳು ಉಂಟಾಗುತ್ತದೆ.

ಕಿನ್ನಿಗೋಳಿ ಪರಿಸರದ ಗ್ರಾಮಗಳ ಜೀವ ನದಿಯಾಗಿದ್ದ ನಂದಿನಿ ನದಿ ಮರಳು ತುಂಬಿ ಹೋಗಿದೆ. ಮರಳುಗಾರಿಕೆಗೆ ಸರಕಾರ ನಿಷೇದ ಹೇರಿದ್ದರಿಂದ ಮರಳುಗಾರಿಕೆಯನ್ನು ನಡೆಸಲು ಕಷ್ಟವಾಗುತ್ತದೆ. ಈ ನದಿಯ ಆರ್ಭಟಕ್ಕೆ ಸಿಲುಕಿರುವ ಜಮೀನುಗಳ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ಹತ್ತಾರು ವರ್ಷದಿಂದ ರೈತರು ಈ ಹೊಲಗಳಲ್ಲಿ ಬೆಳೆ ಬೆಳೆಯದಂತಾಗಿದೆ. ಈ ವರ್ಷವೂ ನದಿಯಲ್ಲಿ ರಾಶಿ ರಾಶಿ ಮರಳು ಸಂಗ್ರಹವಾಗುವ ಸಂಭವವಿದೆ.ಸಂಬಂಧಪಟ್ಟ ಇಲಾಖೆಗೆ ಗ್ರಾಮ ಪಂಚಾಯಿತಿಗಳು ಹಾಗೂ ಜನರು ಮನವಿ ನೀಡಿದ್ದರೂ ಇದರ ಬಗ್ಗೆ ಸೂಕ್ತ ಗಮನ ನೀಡಲಾಗಿಲ್ಲ ಎಂದು ಜನರಾಡಿಕೊಳ್ಳುತ್ತ್ತಿದ್ದಾರೆ.

ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಮರಳುಗಾರಿಕೆ ನಡೆಸಿ ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಹತೋಟಿಗೆ ತರಬೇಕು.

ಮರಳುಗಾರಿಕೆ ನಡೆಯದೆ ಪರಿಸರದ ಗ್ರಾಮಗಳ ರೈತರ ಪಾಲಿಗೆ ಪ್ರವಾಹದ ನೇರ ಪರಿಣಾಮ ಬಿದ್ದಿದೆ, ನಂದಿನಿ ನದಿಯಲ್ಲಿ ಮರಳು ತುಂಬಿದ್ದರಿಂದ ಮಳೆಗಾಲದಲ್ಲಿ ನೀರು ಸರಿಯಾಗಿ ಹರಿದು ಸಮುದ್ರ ಸೇರದೆ ನೆರೆಯಿಂದಾಗಿ ಸಾವಿರಾರು ಎಕರೆ ಕೃಷಿ ಭೂಮಿಯು ಮುಳುಗಡೆಯಾಗುತ್ತದೆ. ನೀರಾವರಿ ಇಲಾಖೆಗೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ.

ಜನಾರ್ದನ ಕಿಲೆಂಜೂರು
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ

ಮರಳು ನಿಲ್ಲುವುದರಿಂದ ನೀರು ಶೇಖರಣಾ ಸಾಮಾರ್ಥ್ಯ ಕಡಿಮೆಯಾಗುತ್ತಿದೆ. ನಿಯಮಿತ ಮಟ್ಟದ ಮರಳುಗಾರಿಕೆ ನದಿ ಪಾತ್ರದಲ್ಲಿ ನೀರಿನ ಸಂಗ್ರಹಣಾ ಮಟ್ಟವನ್ನು ಹೆಚ್ಚಳಗೊಳಿಸುತ್ತದೆ. ಪುಚ್ಚಾಡಿಕಿಮಡಿ ಅಣೆಕಟ್ಟುವಿನಲ್ಲಿ 2 ಕಿಂಡಿಗಳು ತೆಗೆಯದಿರುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು. ನದಿಯಲ್ಲಿಯೇ ಗಿಡಗಂಟಿಗಳು ಬೆಳೆದು ನೀರಿನ ಹರಿಯುವಿಕೆಗೆ ಪರೋಕ್ಷವಾಗಿ ಕಾರಣಾವಾಗುತ್ತಿದೆ.
ರಾಜೇಂದ್ರ ಕೆ. ಶೆಟ್ಟಿ ಕುಡ್ತಿಮಾರುಗುತ್ತು
ಪುಚ್ಚಾಡಿ ಕಿಂಡಿ ಅಣೆಕಟ್ಟು ನೀರು ಬಳಕೆದಾರರ ಸಂಘದ ಅಧ್ಯಕ್ಷ

ಮರಳು ನಿಲ್ಲುವುದರಿಂದ ಕೃತಕ ನೆರೆಯಿಂದ ಜಮೀನುಗಳು ಮುಳುಗುತ್ತವೆ. ಮರಳು ತೆಗೆಯುವಲ್ಲಿ ಜಿಲ್ಲಾಡಳಿತ ಸಾಮಾನ್ಯ ಜನರ ಬವಣೆ ಬಗ್ಗೆ ಗಮನ ಕೊಡಬೇಕಾಗಿದೆ. ತಡೆಗೋಡೆ ಇಲ್ಲದೆ ಭೂ ಸವಕಳಿಯ ಸಂಭವವಿದೆ.
ಪ್ರಸನ್ನ ಎಲ್. ಶೆಟ್ಟಿ ಅತ್ತೂರುಗುತ್ತು
ಪುಚ್ಚಾಡಿ ಕಿಂಡಿ ಅಣೆಕಟ್ಟು ನೀರು ಬಳಕೆದಾರರ ಸಂಘದ ಕಾರ್ಯದರ್ಶಿ

Kinnigoli-18061405 Kinnigoli-18061406 Kinnigoli-18061407

 

 

 

Comments

comments

Comments are closed.

Read previous post:
Kinnigoli-18061404
ತೊಟ್ಟಿಲಗುರಿ ದುರಂತಕ್ಕೆ ಒಂದು ವರ್ಷ

 ಬಜಪೆ : ಅಂದು ಜೂನ್ 18, 2012 ಬೆಳಗಿನ ಜಾವ 5 ಗಂಟೆಯ ಸಮಯ. ತೊಟ್ಟಿಲಗುರಿಯಲ್ಲಿ ರಾತ್ರಿಯಿಂದಲೂ ಜೋರಾದ ಗಾಳಿ-ಮಳೆ ಸುರಿಯುತ್ತಿದ್ದು, ಚಿಕ್ಕ ಚಿಕ್ಕ ಗುಡಿಸಲಿನಂತಿದ್ದ ಮನೆಗಳಲ್ಲಿ ಹಲವು ಮಂದಿ...

Close