ಕಟೀಲು ಕ್ಷೇತ್ರ : ಜಿಲ್ಲಾಧಿಕಾರಿ ಪರಿಶೀಲನೆ

ಕಟೀಲು : ಇಲ್ಲಿನ ದುರ್ಗಾಪರಮೇಶ್ವರೀ ದೇಗುಲಕ್ಕೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ದೇಗುಲದಲ್ಲಿ ಸ್ವಚ್ಛತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಗಮನ ಕೊಡುವಂತೆ ಸೂಚಿಸಿದರು. ಈ ಹಿನ್ನಲೆಯಲ್ಲಿ ಎಸಿಪಿಯನ್ನು ದೇಗುಲಕ್ಕೆ ಬಂದು ಮಾರ್ಗದರ್ಶನ ಮಾಡುವಂತೆ ತಿಳಿಸುವುದಾಗಿ ವಿವರಿಸಿದರು.
ದೇಗುಲದ ಪರಿಸರ, ಪಾಕಶಾಲೆ, ಬಸ್‌ನಿಲ್ದಾಣವನ್ನೆಲ್ಲ ಗಮನಿಸಿದ ಜಿಲ್ಲಾಧಿಕಾರಿ, ದೇವಸ್ಥಾನವು ಈಗಾಗಲೇ ಕೈಗೊಂಡಿರುವ ೪೫ಲಕ್ಷ ರೂ.ನ ಒಳಚರಂಡಿ, ತ್ಯಾಜ್ಯ ನಿರ್ವಹಣೆ ಹಾಗೂ ನೀರಿನ ಯೋಜನೆಗಳನ್ನು ಗಮನಿಸುವಂತೆ ಜಿಲ್ಲಾಪಂಚಾಯತ್ ಎಕ್ಸ್‌ಕ್ಯುಟಿವ್ ಇಂಜಿನಿಯರ್‌ಗೆ ತಿಳಿಸಿದರು.
ಬಸ್‌ನಿಲ್ದಾಣದ ಬಳಿ ಪ್ರವಾಸೋದ್ಯಮ ಇಲಾಖೆಯ ೧೩ಲಕ್ಷ ರೂ.ಅನುದಾನದಲ್ಲಿ ನಿರ್ಮಾಣಗೊಂಡಿದ್ದರೂ ಮುಚ್ಚಲ್ಪಟ್ಟಿರುವ ಶೌಚಾಲಯವನ್ನು ನಾಲ್ಕು ದಿನಗಳೊಳಗೆ ದೇಗುಲಕ್ಕೆ ಹಸ್ತಾಂತರಿಸುವಂತೆ ಪ್ರವಾಸೋದ್ಯಮ ಇಲಾಖೆಗೆ ಸೂಚಿಸಿದ ಜಿಲ್ಲಾಧಿಕಾರಿ, ಶೌಚಾಲಯವನ್ನು ಯಾತ್ರಿಗಳಿಗೆ ಉಚಿತವಾಗಿ ಬಳಸಲು ಅನುಕೂಲ ಮಾಡಿಕೊಡುವಂತೆ ಆಡಳಿತಾಧಿಕಾರಿಗೆ ಹೇಳಿದರು. ಎಸ್‌ಕೋಡಿಯಲ್ಲಿರುವ ಕಟೀಲು ದೇಗುಲದ ಜಾಹೀರಾತನ್ನು ಸರಿಪಡಿಸಬೇಕಾಗಿ ಪ್ರವಾಸೋದ್ಯಮ ಇಲಾಖಾಧಿಕಾರಿಗಳಿಗೆ ತಿಳಿಸಿದರು.
ನದಿಯಿಂದ ವಿದ್ಯುತ್ ತಯಾರಿಸುವ ಯೋಜನೆಗೆ ಐದು ಲಕ್ಷ ರೂ. ಖರ್ಚು ಮಾಡಿದ್ದರೂ, ದೇವಸ್ಥಾನಕ್ಕೆ ಹಸ್ತಾಂತರವಾಗದೆ, ಇನ್ನೂ ಘಟಕ ಕಾರ‍್ಯಾರಂಭ ಮಾಡದಿರುವ ವಿವರ ಕೇಳಿದ ಜಿಲ್ಲಾಧಿಕಾರಿ, ಕೂಡಲೇ ಈ ಬಗ್ಗೆ ವಿವರ ನೀಡುವಂತೆ ದೇಗುಲದ ಆಡಳಿತ ಹಾಗೂ ಮೆಸ್ಕಾಂ ಮುಖ್ಯಸ್ಥರಿಗೆ ಸೂಚಿಸಿದರು. ಹೊಸದಾಗಿ ಟೆಂಡರು ಆಗಿರುವ ಜನರೇಟರ್ ಬದಲಾಗಿ ಸೋಲಾರ್ ಜನರೇಟರ್ ಖರೀದಿಸುವಂತೆ ತಿಳಿಸಿದರು.
ಪಂಚಾಯತ್ ಪರವಾನಿಗೆ ಇಲ್ಲದಿದ್ದರೂ ಮುಚ್ಚದಿರುವ 9 ಅಂಗಡಿಗಳ ಬಗ್ಗೆ ಮಾಹಿತಿ ತಿಳಿದ ಜಿಲ್ಲಾಧಿಕಾರಿ ದೇಗುಲದಲ್ಲಿರುವ ಎಲ್ಲ ನ್ಯಾಯಾಲಯದಲ್ಲಿರುವ ಕೇಸುಗಳ ವಿವರ ಕೇಳಿದರು. ಸೀರೆ ಏಲಂ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಸೀರೆ ಲೆಕ್ಕಗಳ ಪೂರ್ತಿ ವಿವರ ಕೊಡುವಂತೆ ಸೂಚಿಸಿದರು.
ವಿಶೇಷ ಸೇವೆಗಳನ್ನು ದೇವಸ್ಥಾನದ ವತಿಯಿಂದಲೇ ನಡೆಸಬೇಕೆಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆಡಳಿತಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ದೇಗುಲದ ಪೂರ್ತಿ ಜಮೀನಿನ ಸರ್ವೇ ಕಾರ್ಯ ನಡೆಸುವಂತೆ ಕಂದಾಯ ಇಲಾಖಾಧಿಕಾರಿಗಳಿಗೆ ಆದೇಶಿಸಿದ ಜಿಲ್ಲಾಧಿಕಾರಿ ಈ ಮೂಲಕ ದೇಗುಲದ ಜಮೀನು ಅತಿಕ್ರಮಣವಾಗಿರುವುದರ ಮಾಹಿತಿ ಪಡೆಯಲಾಗುವುದು ಎಂದರು.
ಮಾಂಜದಲ್ಲಿ ನಿರ್ಮಾಣವಾಗಿರುವ ಗೋಶಾಲೆ ಇರುವ 7.8ಎಕರೆ ಗೋಮಾಳವನ್ನು ದೇಗುಲಕ್ಕೆ ಹಸ್ತಾಂತರಿಸುವ ಕುರಿತು ಜಿಲ್ಲಾಧಿಕಾರಿಗೆ ಮನವಿ ಮಾಡಲಾಯಿತು.
ದೇಗುಲ ಹಾಗೂ ಸ್ಥಳೀಯ ಅಂಗಡಿ ಹೊಟೇಲುಗಳವರು ಬಿಸಾಡುವ ತ್ಯಾಜ್ಯವನ್ನು ಕಂಡ ಜಿಲ್ಲಾಧಿಕಾರಿ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸ್ವಚ್ಛ ಮಾಡಲು ಸೂಚಿಸಲಾಗುವುದು ಎಂದರು.
ರಥಬೀದಿಯಲ್ಲಿ ವಾಹನಗಳು ಬ್ಲಾಕ್ ಆಗುತ್ತಿದ್ದು, ವಾಹನ ಮುಕ್ತ ರಥಬೀದಿಯ ಬಗ್ಗೆ ಗಮನ ಸೆಳೆದಾಗ, ಬೈಪಾಸ್ ರಸ್ತೆ ಹಾಗೂ ರಸ್ತೆ ಅಗಲೀಕರಣದ ಬಗ್ಗೆ ಮುಜರಾಯಿ ಇಲಾಖೆ ಮೂಲಕ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗುವುದು. ಶೀಘ್ರ ಬೈಪಾಸ್ ಹಾಗೂ ರಸ್ತೆ ಅಗಲೀಕರಣಕ್ಕೆ ಕ್ರಮಕೈಗೊಳ್ಳಲಾಗುವುದೆಂದರು.
ವಾಣಿಜ್ಯ ಸಂಕೀರ್ಣ, ವಿದ್ಯಾಲಯಗಳು, ವಿದ್ಯುತ್, ಕುದ್ರು ಸೇರಿದಂತೆ ದೇಗುಲದಲ್ಲಿ ಸುಮಾರು ಐದು ಕೋಟಿ ರೂ.ಗೂ ಮಿಕ್ಕಿದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದರಲ್ಲಿ ದೇಗುಲದಲ್ಲದೆ ಭಕ್ತರ ಕಾಣಿಕೆಯೂ ರೂ. ಎರಡು ಕೋಟಿಯಷ್ಟಿದೆ. ಕಾಮಗಾರಿಗಳಲ್ಲಿ ಗುಣಮಟ್ಟ ಗಮನಿಸಬೇಕಾಗಿದೆ. ಒಂದೆಡೆ ಅಭಿವೃದ್ಧಿ ಕಾರ್ಯಗಳು ಆಗುತ್ತಿದ್ದಂತೆ ದೇಗುಲದ ಆಡಳಿತ ಸಮಸ್ಯೆಗಳ ಬಗ್ಗೆ ಸಾವಿರಾರು ದೂರುಗಳೂ ಬರುತ್ತಿವೆ ಎಂದು ಹೇಳಿದ ಜಿಲ್ಲಾಧಿಕಾರಿ ಇಬ್ರಾಹಿಂ ಪೋಲೀಸ್ ಔಟ್‌ಪೋಸ್ಟ್ ಬಗ್ಗೆ ಕೂಡಲೇ ಕಾರ್ಯಪ್ರವೃತ್ತವಾಗುವುದಾಗಿ ತಿಳಿಸಿದರು.
ಆಡಳಿತಾಧಿಕಾರಿ ನಿಂಗಯ್ಯ, ಮುಜರಾಯಿ ಇಲಾಖೆಯ ಪ್ರಭಾಕರ್, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಪ್ರಬಂಧಕ ವಿಶ್ವೇಶ್ವರ ರಾವ್ ಮತ್ತಿತರರಿದ್ದರು.

Kateel-24061401 Kateel-24061402 Kateel-24061403 Kateel-24061404

Comments

comments

Comments are closed.

Read previous post:
Kinnigoli-23061402
ಧ. ಗ್ರಾ. ಯೋ. ವಿಮಾ ಸೌಲಭ್ಯ ವಿತರಣೆ

ಕಿನ್ನಿಗೋಳಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೆನ್ನಬೆಟ್ಟು ವಿಭಾಗದ ಸದಸ್ಯರಿಗೆ ಜೀವನ್ ಮಧುರ ಪಾಲಿಸಿಯಿಂದ ನೀಡುವ ಮರಣ ಸಾಂತ್ವನ ಧನ ಹಾಗೂ ಸಂಪೂರ್ಣ ಸುರಕ್ಷಾ ಯೋಜನೆಯಿಂದ...

Close