ನೆರೆ ಭೀತಿಯಲ್ಲಿ ಪಂಜ ಗ್ರಾಮಸ್ಥರು

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಪಂಜ ಮಧ್ಯ ಖಡ್ಗೇಶ್ವರಿ ದೇವಳವನ್ನು ಸಂಪರ್ಕಿಸುವ ಸುಮಾರು 118.51 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ರಸ್ತೆ ಕಾಮಗಾರಿ ವಿಳಂಬ ಗೊಂಡಿರುವ ಪರಿಣಾಮ ಪಂಜ, ಉಲ್ಯ, ಬೈಲಗುತ್ತು, ಮೊಗಪಾಡಿ ಮಧ್ಯ ಗ್ರಾಮಗಳ ಗ್ರಾಮಸ್ಥರು ಮುಂಬರುವ ಜಡಿ ಮಳೆಗೆ ಸಮಸ್ಯೆಗಳನ್ನು ಎದುರಿಸುವ ಭೀತಿಯಲ್ಲಿದ್ದಾರೆ.
ಸುಮಾರು 1.75 ಕಿಮೀ ಉದ್ದದ ಈ ರಸ್ತೆಯು ಫೆಬ್ರವರಿಯಲ್ಲಿ ಪ್ರಾರಂಭಗೊಂಡಿದ್ದರೂ ಇಲ್ಲಿಯವರೆಗೆ ಮಣ್ಣುಹಾಕಿ ರಸ್ತೆ ಎತ್ತರಿಸಿ ಜಲ್ಲಿ ರಸ್ತೆಯನ್ನು ನಿರ್ಮಾಗೊಂಡು ಮಳೆಗಾಲ ಬಂದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ.
ಮಳೆಗಾಲದಲ್ಲಿ ಎತ್ತರಿಸಿದ ರಸ್ತೆಯ ಎರಡೂ ಪಕ್ಕದಲ್ಲಿ ಮಣ್ಣು ಕೊಚ್ಚಿಹೋದರೆ ರಸ್ತೆಯಲ್ಲಿ ಜಲ್ಲಿ ಮೇಲೆದ್ದು ವಾಹನಗಳ ಸಂಚಾರಕ್ಕೆ ಬಹಳ ತಡೆಯುಂಟಾಗುವ ಸಮಸ್ಯೆಯಾಗಲಿದೆ. ಮಳೆ ನೀರು ಸರಾಗವಾಗಿ ಹರಿಯಲು ಸೂಕ್ತ ವ್ಯವಸ್ಥೆಯಿಲ್ಲದಿರುವುದರಿಂದ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ರಸ್ತೆಯ ಮಣ್ಣು ಕುಸಿಯದಂತೆ ಕಲ್ಲು ಕಟ್ಟುವ ಕೆಲಸ ಅರ್ಧದಲ್ಲಿ ನಿಂತಿದ್ದು ಮಳೆ ಹೆಚ್ಚಾದಂತೆ ಮಣ್ಣು ಕುಸಿದು ರಸ್ತೆ ಕುಸಿಯುವ ಸ್ಥಿತಿ ಉಂಟಾಗಬಹುದು ಅಲ್ಲದೆ ಇಕ್ಕೆಲಗಳ ಗದ್ದೆಗಳಲ್ಲಿ ಮಣ್ಣು ಕೆಸರು ತುಂಬಿ ಬೆಳೆ ನಾಶವಾಗುವ ಸಂಭವ ಜಾಸ್ತಿಯಾಗಿದೆ ಎಂದು ಗ್ರಾಮಸ್ಥರು ಆತಂಕ ಪಡುತ್ತಿದ್ದಾರೆ.

ಕೃತಕ ನೆರೆ ಭೀತಿ:
ಬೈಲ ಗುತ್ತು ಬಳಿ ನಂದಿನಿ ನದಿ ಹರಿವಿಗೆ ಚಿಕ್ಕ ಸೇತುವೆ ನಿರ್ಮಾಣವಾಗಿದ್ದು ಬೈಲಗುತ್ತು ಬಯಲಿನ ಸಮೀಪ ೧೦ಮೀಟರ್ ಅಗಲದ ನದಿ ಕವಲಿನ ನೀರು ಹರಿಯುವ ಪಾತ್ರದಲ್ಲಿ ಅಗಲ ತೀರಾ ಕಿರಿದುಗೊಳಿಸಿ ಸೇತುವೆಗೆ ಕೇವಲ ೧ಮೀಟರ್ ವ್ಯಾಸದ ಪೈಪುಗಳನ್ನು ಹಾಕಲಾಗಿದೆ ಇಷ್ಟು ಚಿಕ್ಕ ವ್ಯಾಸದ ಪೈಪಿನಲ್ಲಿ ನೆರೆ ನೀರು ಹರಿಯಲು ಸಾಧ್ಯವೇ ಏನಾದರು ಕಸಕಡ್ಡಿ ಗಿಡ ಗಂಟಿಗಳು ಸಿಕ್ಕಿಹಾಕಿಕೊಂಡರೆ ಬೈಲಗುತ್ತು ಹಾಗೂ ಮೊಗಪಾಡಿ ಪ್ರದೇಶಗಳು ಮುಳುಗುವುದು ಗ್ಯಾರಂಟಿ ಎಂದು ಗ್ರಾಮಸ್ಥರು ಹೇಳುತ್ತಾರೆ ಈ ಪ್ರದೇಶದಲ್ಲಿಯೂ ಕಪ್ಪುಕಲ್ಲು ಕಟ್ಟುವ ಕಾಮಗಾರಿ ಅಪೂರ್ಣವಾಗಿದ್ದು ನೆರೆ ಬಂದರೆ ಈವರೆಗೆ ನಿರ್ಮಿಸಿದ ಕಾಮಗಾರಿ ಕೂಡಾ ಸಮಪೂರ್ಣ ನಾಶವಾಗುವ ಸಂಭವವಿದೆ. ನೀರು ಹರಿದು ಹೋಗಲು ಹತ್ತು ಕಡೆ ಮೋರಿ ರೂಪದ ರಚನೆಯಾಗಿದ್ದು ಅಲ್ಲಿ ಕೂಡ ನೀರಿನ ಹರಿವಿಗೆ ತೊಂದರೆಯಾಗಲಿದೆ.
ಪಂಜ ಉಲ್ಯ ಪರಿಸರಕ್ಕಿಂತ ಜಾಸ್ತಿ ಈ ಬಾರಿ ಬೈಲಗುತ್ತು ಹಾಗೂ ಮೊಗಪಾಡಿನಲ್ಲಿರುವ ಮನೆಯವರು ಕೃತಕ ನೆರೆ ಭೀತಿ ಎದುರಿಸುತ್ತಿದ್ದಾರೆ.

ಉಲ್ಯ ತಡೆಗೋಡೆ:
ಉಲ್ಯ ಗ್ರಾಮದಲ್ಲಿ ಕಳೆದ ಮಳೆಗಾಲ ಸಮಯದಲ್ಲಿ ತಡೆಗೋಡೆ ಸಂಪೂರ್ಣ ಕುಸಿದು ಸಾವಿರಾರು ಎಕರೆ ಭತ್ತದ ಕೃಷಿ, ತೋಟಗಳು ಮುಳುಗಿ ಹಾಗೂ ಹಲವಾರು ಮನೆಗಳು ಕುಸಿದು ಲಕ್ಷಾಂತರ ರೂಪಾಯಿಗಳು ನಷ್ಟವಾಗಿತ್ತು. ಬಳಿಕ ಸರ್ಕಾರದ ಅನುದಾನದಲ್ಲಿ ಕುಸಿದ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣಗೊಂಡಿದ್ದು ಉಳಿದ ಶಿಥಿಲ ಮಣ್ಣಿನ ದಿಬ್ಬದಂತ ಪ್ರದೇಶವನ್ನು ಹಾಗೇಯೇ ಬಿಟ್ಟಿರುವುದರಿಂದ ನೀರಿನ ರಭಸಕ್ಕೆ ಮಣ್ಣಿನ ತಡೆಗೋಡೆ ಮುರಿದು ಬೀಳುವ ಸಂಭವವಿದ್ದು ನೆರೆಯ ಕರಾಳ ಛಾಯೆ ಎದುರಾಗಿದೆ. ನೂತನವಾಗಿ ನಿರ್ಮಿಸಿದ ತಡೆಗೋಡೆ ನಡು ನಡುವೆ ತೆಂಗಿನ ಮರಗಳನ್ನು ಹಾಗೇ ಬಿಟ್ಟಿರುವ ಪರಿಣಾಮ ಮುಂದೆ ಮರ ಬೇಳೇದಾಗ ಅದರ ಬೇರು ಬೆಳೆದು ಹಾಗೂ ಮರ ಸತ್ತಾಗ ಆ ಭಾಗ ಟೊಳ್ಳಾಗಿ ತಡೆಗೋಡೆ ನಾಶವಾಗುವ ಭೀತಿ ಅಲ್ಲದೆ ತಡೆಗೋಡೆ ನಿರ್ಮಾಣ ಸಮಯದಲ್ಲಿ ಸರಿಯಾದ ನೀರಿನ ಕ್ಯೂರಿಂಗ್ ಆಗದೆ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಆದರೆ ಸ್ಥಳಿಯರ ಅನುಭವಿ ಮಾತುಗಳನ್ನು ಯಾರು ಕೇಳುವವರಿಲ್ಲದೆ ಕೃತಕ ನೆರೆ ಬರಲು ಪರೋಕ್ಷವಾಗಿ ಸಂಬಂಧಪಟ್ಟವರು ಕಾರಣೀಭೂತರಾಗುವುದರಲ್ಲಿ ಸಂಶಯವಿಲ್ಲ ಎಂದು ಗ್ರಾಮಸ್ಥರು ದುಗುಡ ವ್ಯಕ್ತ ಪಡಿಸಿದ್ದಾರೆ.

ಪಕ್ಷಿಕೆರೆಯಿಂದ ಪಂಜದ ವರೆಗೆಮಣ್ಣು ಜಲ್ಲಿಹಾಕಿ ನಿರ್ಮಾಣ ಗೊಂಡ ರಸ್ತೆಗೆ ಮಳೆಗಾಲದ ಮೊದಲು ಡಾಮರ್ ಹಾಕಿದಲ್ಲಿ ಸಂಚಾರ ಸುಗಮವಾಗುತ್ತಿತ್ತು. ಮೊದಲ ಮಳೆಗೆ ನೀರಿನೊಂದಿಗೆ ಮಣ್ಣು ಸೇರಿ ಈ ಪ್ರದೇಶದಲ್ಲಿ ಜಲ್ಲಿ ಎದ್ದಿದ್ದು ರಿಕ್ಷಾ ಚಾಲಕ ಹಾಗೂ ಇತರ ವಾಹನಗಳಿಗೆ ವಾಹನ ಚಲಾಯಿಸುವುದು ಕಷ್ಟ ಸಾಧ್ಯವಾಗಿದೆ. ಎಂದು ರಿಕ್ಷಾ ಚಾಲಕರ ಅಂಬೋಣ.

ಪಂಜ, ಮೊಗಪಾಡಿ, ಉಲ್ಯ, ಕೊಕುಡೆ ಪರಿಸರದಲ್ಲಿ ಸಾವಿರಾರು ಜನರು ನೆಲೆಸಿದ್ದು ಮಳೆಗಾಲದ ಜಡಿ ಮಳೆ ಹಾಗೂ ಘಟ್ಟದ ಬದಿಯಿಂದ ರಭಸದಿಂದ ಬರುವ ನೆರೆ ನೀರಿನಿಂದಾಗಿ ಈ ಪ್ರದೇಶ ವಸ್ತುಶಃ ದ್ವೀಪದಂತಾಗುವ ಸಮಸ್ಯೆ ಬರುವ ಮೊದಲು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಇನ್ನಾದರೂ ವೈಜ್ಞಾನಿಕ ರೀತಿಯಲ್ಲಿ ಸ್ಪಂದಿಸ ಬೇಕಾಗಿದೆ.

Kinnigoli-04071411 Kinnigoli-04071412 Kinnigoli-04071413 Kinnigoli-04071414

ನಮ್ಮ ಗ್ರಾಮ ನಮ್ಮ ರಸ್ತೆ ಉತ್ತಮವಾದ ಯೋಜನೆಯಾಗಿದೆ. ಆದರೆ ರಸ್ತೆ ಬದಿಗಳಲ್ಲಿ ಕಲ್ಲು ಕಟ್ಟದೆ ಕೃಷಿಕರ ಗದ್ದೆಗಳಿಗೆ ಕೆಸರು ಮಣ್ಣು ಬೀಳುವುದು ಗ್ಯಾರಂಟಿ. ಹಾಗಾಗಿ ಬೈಲಗುತ್ತು ಮೊಗಪಾಡಿ ಗ್ರಾಮ ಮುಳುಗಡೆ ಸಂಭವ ಜಾಸ್ತಿ. ಈಗಲೂ ಶೀಘ್ರ ಕಾಮಗಾರಿ ನಡೆಸಿದರೆ ಸಮಸ್ಯೆ ಸುಧಾರಿಸಬಹುದು. ಅಥವಾ ಜನಪ್ರತಿನಿಧಿಗಳು ಪರ್ಯಾಯ ವ್ಯವಸ್ಥೆ ಬಗ್ಗೆ ಚಿಂತನೆ ನಡೆಸಬೇಕಾಗಿದೆ.

ಶೇಖರ ಶೆಟ್ಟಿ
ಕೃಷಿಕರು ಪಂಜ

ಊರಿಗೆ ಉಪಕಾರವಾಗಲಿ ಎಂದು ಸ್ಥಳ ಬಿಟ್ಟುಕೊಟ್ಟಿದ್ದೇವೆ ಆದರೆ ದೂರಾಲೋಚನೆಯಿಲ್ಲದ ಹಗೂ ವಿಳಂಬ ಕಾಮಗಾರಿಯಿಂದ ಗ್ರಾಮಸ್ಥರ ಬೆಳೆಗೆ ನಷ್ಟವಾಗುವ ಪ್ರಮೇಯ ಬಂದಿದೆ. ನೆರೆಯೊಂದಿಗೆ ಕೊಳಚೆ ಕೆಸರು ಮಣ್ಣು ನೀರು ಹತ್ತಿರದ ಬಾವಿಗಳಿಗೆ ಬೀಳುವ ಸಂಭವಿದೆ. ಗದ್ದೆಗಳಲ್ಲಿ ಮಣ್ಣಿನ ಕೊರೆತದಿಂದ ಕೃಷಿ ಭೂಮಿ ಬರಡಾಗುವ ಗುಮಾನಿ ಇದೆ.
ಸದಾನಂದ ಶೆಟ್ಟಿ
ಕೃಷಿಕರು ಪಂಜ

ಕಾಮಗಾರಿ ವಿಳಂಬ ಒಂದು ಸಮಸ್ಯೆಯಾದರೆ ನೀರು ಹರಿದು ಹೋಗಲು ಚಿಕ್ಕ ಚಿಕ್ಕ ವ್ಯಾಸವುಳ್ಳ ಪೈಪ್‌ಗಳು ಹಾಗೂ ಗಟ್ಟಿಯಾಗಿ ಕುಳಿತುಕೊಳ್ಳದ ಮಣ್ಣು ನೆರೆಗೆ ಪರೋಕ್ಷ ಕಾರಣವಾಗಲಿದೆ. ಮಳೆಗಾಲದ ನಂತರವಾದರೂ ಜಿಲ್ಲಾಡಳಿತ ಇದರ ಬಗ್ಗೆ ಗಮನ ಹರಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
ಈಶ್ವರ ಕಟೀಲ್
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯರು.

 

Comments

comments

Comments are closed.

Read previous post:
Kinnigoli-04071408
ಪಡುಪಣಂಬೂರು ಗ್ರಾಮಸಭೆ

ಕಿನ್ನಿಗೋಳಿ : ಪಡುಪಣಂಬೂರು ಗ್ರಾಮ ಪಂಚಾಯಿತಿಯ 2014-15 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಎಸ್. ಕೋಡಿಯ ತೋಕೂರು ಕುಲಾಲ ಸಂಘದ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೊಲ್ಲು...

Close