ಮನೆಗೆ ನುಗ್ಗಿ ದರೋಡೆಗೆ ಯತ್ನ

 ಕಿನ್ನಿಗೋಳಿ : ಕಿನ್ನಿಗೋಳಿಯ ಮುಖ್ಯರಸ್ತೆಯ ಮನೆಯೊಂದಕ್ಕೆ ಐದು ಜನರ ತಂಡವೊಂದು ತಡರಾತ್ರಿ ನುಗ್ಗಿ ಮನೆಯ ಸಾಕುನಾಯಿಯನ್ನು ಕೊಂದು ಬಿಸಾಡಿ ಮನೆಯಲ್ಲಿದ್ದ ಮೂರು ಜನರ ಕೈ ಕಾಲು ಕಟ್ಟಿಹಾಕಿ ಮನೆಯೆಲ್ಲಾ ಜಾಲಾಡಿ ದರೋಡೆಗೆ ವಿಫಲ ಯತ್ನ ನಡೆಸಿದ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.
ಕಿನ್ನಿಗೋಳಿ ಮುಖ್ಯರಸ್ತೆಯ ಭಟ್ಟಕೋಡಿಯ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ರೋಟರಿ ಭವನದ ಪಕ್ಕದ ಲವ್ ಪ್ಯಾರಡೈಜ್ ಎಂಬ ಒಂದು ಅಂತಸ್ತಿನ ತಾರಸಿ ಮನೆಯು ದರೋಡೆಗೆ ಒಳಗಾಗಿದ್ದು, ಮನೆಯಲ್ಲಿದ್ದ ವೃದ್ಧೆ ಸ್ಟೇಫಾನಿಯಾ ಡಿಸೋಜಾ ಹಾಗೂ ಮನೆಯಲ್ಲಿ ರಾತ್ರಿ ಸಮಯ ಮಲಗಲೆಂದು ಬರುತ್ತಿದ್ದ ಎದುರು ಮನೆಯ ಜೆಸಿಂತಾ ಅರಾನ್ಹಾ ಹಾಗೂ ಆಕೆಯ ಮಗ ಕ್ಲಾಡಿ ಅರಾನ್ಹಾ ಅವರು ದರೋಡೆಕೋರರ ದಾಳಿಗೊಳಗಾಗಿದ್ದಾರೆ.

ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವ ಎಡ್ವರ್ಡ್ ರೊನಾಲ್ಡ್ ಡಿಸೋಜಾ ಮಾಲೀಕತ್ವದ ಈ ಮನೆಯಲ್ಲಿ ಅವರ ಚಿಕ್ಕಮ್ಮ ನಿವೃತ್ತ ಶಿಕ್ಷಕಿ ೯೪ ವರ್ಷದ ಸ್ಟೆಫಾನಿಯಾ ಡಿಸೋಜಾ ಒಂಟಿಯಾಗಿ ವಾಸವಾಗಿದ್ದು ಅವರಿಗೆ ರಾತ್ರಿ ಸಮಯದಲ್ಲಿ ಎದುರು ಮನೆಯ ಜೆಸಿಂತಾ ಅರಾನ್ಹಾ ಹಾಗೂ ಆಕೆಯ ಮಗ ಕ್ಲಾಡಿ ಅರಾನ್ಹಾ ಮಲಗಲೆಂದು ಬರುತ್ತಿದ್ದರು.
ಗುರುವಾರ ತಡರಾತ್ರಿ ಸುಮಾರು 1.30ಕ್ಕೆ ಐದು ಜನರ ತಂಡ ಏಕಾಏಕಿ ಮನೆಯ ಹಿಂದುಗಡೆ ಬಾಗಿಲಿನಿಂದ ಬಂದು ಮನೆಯಲ್ಲಿದ್ದ ಮೂರು ಜನರನ್ನು ಸೀರೆಯ ಸಹಾಯದಿಂದ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆಯನ್ನು ತುರುಕಿ ಮನೆಯಲ್ಲಿದ್ದ ಕಪಾಟುಗಳನ್ನೆಲ್ಲಾ ಜಾಲಾಡಿ ಎನೂ ಸಿಗದಾಗ ಮನೆಯಲ್ಲಿದ್ದ ನಗದು ಹಾಗೂ ಚಿನ್ನಗಾಗಿ ವೃದ್ಧೆ ಸ್ಟೆಫಾನಿಯಾ ಡಿಸೋಜಾ ಅವರನ್ನು ಹಿಂಸಿಸಿ, ಬೆದರಿಸಿ ಪೀಡಿಸಿದರು ಎಂದು ಪೊಲೀಸರಲ್ಲಿ ವೃದ್ಧೆ ವಿವರಿಸಿದ್ದಾರೆ.

ವೃದ್ಧೆಯ ಪರ್ಸ್‌ನ್ನು ಜಾಲಾಡಿದ ದರೋಡೆಕೋರರು ಅದರಲ್ಲಿನ ಒಂದು ಸಾವಿರ ನಗರದನ್ನು ಅಪಹರಿಸಿದರು ಆದರೆ ಪರ್ಸ್‌ನಲ್ಲಿದ್ದ ಚಿನ್ನದ ಸರವು ಉಳಿದಿತ್ತು ಎಂದು ಹೇಳಿದ್ದಾರೆ.

ದರೋಡೆಕೋರರು ಮನೆಯಲ್ಲಿ ಸಾಕುತ್ತಿದ್ದ ನಾಯಿಗೆ ವಿಷ ಪದಾರ್ಥ ನೀಡಿ ಕೊಂದು ಅದರ ಶವವನ್ನು ಪಕ್ಕದ ನಿರ್ಮಾಣ ಹಂತದ ಕಟ್ಟಡದಲ್ಲಿ ಬಿಸಾಡಿದ್ದಾರೆ. ಎದುರಿನಲ್ಲಿದ್ದ ಅಲ್ಲದೇ ಸಿ.ಸಿ.ಕ್ಯಾಮರಾಗೆ ಬಿಳಿಬಟ್ಟೆಯನ್ನು ಸುತ್ತಿದ್ದು ಮನೆಯ ಹಿಂದುಗಡೆಯ ಕ್ಯಾಮಾರಾದ ದಿಕ್ಕನ್ನು ಬದಲಾಯಿಸಿ ಹಿಂದುಗಡೆಯ ಬಾಗಿಲನ್ನು ಒಡೆದು ವ್ಯವಸ್ಥಿತವಾಗಿಯೇ ಮನೆಗೆ ನುಗ್ಗಿದ್ದಾರೆ.
ಮನೆಯವರು ಹೇಳುವಂತೆ ಮನೆಗೆ ನುಗ್ಗಿದ ದರೋಡೆಕೋರರು ಸುಮಾರು 35ರಿಂದ40 ವರ್ಷದ ಆಸುಪಾಸಿನ ವ್ಯಕ್ತಿಗಳಾಗಿದ್ದು ಇಬ್ಬರು ಹಿಂದಿ ಮಾತನಾಡಿದರೆ ಇನ್ನಿಬ್ಬರು ತುಳೂ ಹಾಗೂ ಒಬ್ಬ ಕನ್ನಡ ಮಾತನಾಡುತ್ತಿದ್ದನು ರಾತ್ರಿ 1.30ಕ್ಕೆ ಬಂದವರು ಮುಂಜಾನೆ ೫ ಗಂಟೆಯವರೆಗೆ ಮನೆಯನ್ನು ಜಾಲಾಡಿದ್ದಾರೆ ಕೊನೆಗೆ ಚೈನೊಂದನ್ನು ಮಾತ್ರ ಕಸಿದು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದು, ಶ್ವಾನದಳ ಬಂದು ಮನೆಯ ಆವರಣ ಗೋಡೆಯವರೆಗೆ ಮಾತ್ರ ಸಾಗಿತು, ಬೆರಳಚ್ಚು ತಜ್ಞರ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಮನೆಯ ಹಿತೈಷಿ ಗಣೇಶ್ ಹೊಸಕಾವೇರಿ ಎಂಬವರು ಮೂಲ್ಕಿ ಠಾಣೆಗೆ ದೂರು ನೀಡಿದ್ದಾರೆ. ಗಾಯಗೊಂಡ ವೃದ್ಧೆ ಸ್ಟೆಫಾನಿಯಾ ಡಿಸೋಜಾ ಕಿನ್ನಿಗೋಳಿಯ ಕಾನ್ಸೆಟ್ಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿ ಮನೆಗೆ ಬಂದಿದ್ದಾರೆ.
ಸ್ಥಳಕ್ಕೆ ಮಂಗಳೂರಿನ ಕಮಿಷನರ್ ಆರ್.ಹಿತೇಂದ್ರ, ಡಿಸಿಪಿ ವಿಷ್ಣುವರ್ಧನ, ಎಸಿಪಿ ರವಿಕುಮಾರ್, ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.

ಕಳ್ಳರಲ್ಲಿ ಮಾನವೀಯತೆ..?

ವೃದ್ಧೆ ಸ್ಟೆಫಾನಿಯಾ ಡಿಸೋಜಾ ಅವರನ್ನು ದರೋಡೆಕೋರರು ಎಳೆದಾಟ ನಡೆಸಿಸ ಸಂದರ್ಭ ಅವರ ಕೈಗೆ ಗಾಯವಾಗಿ ರಕ್ತ ಹರಿಯುತ್ತಿದ್ದಾಗ ದರೋಡೆಕೋರರಲ್ಲಿ ಕನ್ನಡ ಮಾತನಾಡುವವನೊಬ್ಬ ಅಜ್ಜಿ ನೀವು ಸತ್ಯವಂತರು, ಧರ್ಮಿಷ್ಠರು ನಿಷ್ಠರು, ನಿಮ್ಮ ಕೈಯಲ್ಲಿ ಗಾಯವಾಗಿದೆಯಲ್ಲ ಅದಕ್ಕೆ ಚಿಕಿತ್ಸೆ ಮಾಡಿಸಿ ಎಂದು ಕದ್ದ ಒಂದು ಸಾವಿರದಲ್ಲಿ ನೂರು ರೂ. ಕೊಟ್ಟನಲ್ಲದೇ ಮನೆಯಿಂದ ಹೋಗುವಾಗ ಮೂವರ ಕೈಕಾಲಿಗೆ ಕಟ್ಟಿದ್ದ ಸೀರೆಯನ್ನು ಬಿಚ್ಚಿ, ನೀರು ಕೊಟ್ಟು ಸಂತೈಸಿ ಹೋಗಿದ್ದಾರೆ. ಮನೆಯ ನಾಯಿಯನ್ನು ಮಾತ್ರ ನಿರ್ದಯವಾಗಿ ಕೊಂದಿದ್ದಾರೆ.

Kinnigoli-04071402 Kinnigoli-04071403 Kinnigoli-04071404 Kinnigoli-04071405 Kinnigoli-04071406 Kinnigoli-04071407

Comments

comments

Comments are closed.