ಕಿನ್ನಿಗೊಳಿ ಗ್ರಾಮ ಸಭೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 3 ನೇ ವಾರ್ಡ್‌ನ ನವ ನಗರದಲ್ಲಿನ ರಸ್ತೆಯ ಜಾಗಕ್ಕೆ ಸಂಬಂಧಪಟ್ಟ ಖಾಸಗಿ ಭೂಮಿ ಮಾಲೀಕರು ಇನ್ನೂ ಪಂಚಾಯಿತಿಗೆ ದಾನ ಪತ್ರ ಕೊಟ್ಟಿರುವುದಿಲ್ಲ ಆದರೆ ಶಾಸಕರ ನಿಧಿಯಿಂದ ಈ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು ಇದೀಗ ಕಾಮಾಗಾರಿ ಮುಗಿದಿದ್ದರೂ ಪುನ: ಗ್ರಾಮ ಪಂಚಾಯಿತಿಯ ಅನುದಾನದಿಂದ 91552 ರೂ. ಹಾಗೂ 57415 ರೂ. ಗಳ ಎರಡು ಕಂತುಗಳಲ್ಲಿ ಹೇಗೆ ಹಣ ಬಿಡುಗಡೆಯಾಗಿದೆ? ಇದು ಹೇಗೆ ಸಾಧ್ಯ? ಗ್ರಾಮಸ್ಥರಿಗೆ ಸುಳ್ಳು ಮಾಹಿತಿ ನೀಡಬೇಡಿ ಎಂದು ಕಿನ್ನಿಗೋಳಿ ಗ್ರಾಮ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಮಂಗಳವಾರ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಕಿನ್ನಿಗೋಳಿ ಚರ್ಚ್ ಸಭಾಭವನದಲ್ಲಿ ನಡೆಯಿತು.
ಮೆನ್ನಬೆಟ್ಟು ಪಂಚಾಯಿತಿಯು ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ತಮ್ಮ ವ್ಯಾಪ್ತಿಯ ರಸ್ತೆ ಬದಿ ಚರಂಡಿಯನ್ನು ರಿಪೇರಿ ಮಾಡಿ ಸ್ವಚಗೊಳಿಸಿದೆ. ಆದರೆ ಕಿನ್ನಿಗೋಳಿ ಪಂಚಾಯಿತಿಯ ವ್ಯಾಪ್ತಿಯ ರಸ್ತೆ ಚರಂಡಿಯು ದುರಸ್ಥಿ ಕಂಡಿಲ್ಲ ಯಾಕೆ? ಎಂಬ ಗ್ರಾಮಸ್ಥರು ಪ್ರಶ್ನೆ ಮಾಡಿದಾಗ ಹೇಳಿಕೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ ಉತ್ತರಿಸಿ ರಸ್ತೆಯ ಚರಂಡಿ ರಿಪೇರಿ ಮಾಡಲು ಲೋಕೊಪಯೋಗಿ ಇಲಾಖೆಯ ಅನುಮತಿ ಬೇಕಾಗಿದೆ. ಕಾನೂನು ಪ್ರಕಾರ ಅದನ್ನು ಪಂಚಾಯಿತಿ ಮುಟ್ಟುವಂತಿಲ್ಲ ಎಂದರು. ಆಗ ಗ್ರಾಮಸ್ಥರು ಲೋಕೊಪಯೋಗಿ ಇಲಾಖೆಯ ಸುಪರ್ದಿಯಲ್ಲಿರುವ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳ ಕರ ವಸೂಲಿ ಪಂಚಾಯಿತಿ ಏಕೆ ಮಾಡುತ್ತಿದೆ ಎಂದು ಕುಹಕವಾಡಿದರು. ಲೋಕೊಪಯೋಗಿ ಇಲಾಖೆಯು ಚರಂಡಿ ರಿಪೇರಿ ಮಾಡಲು ಪಂಚಾಯಿತಿಗಳಿಗೆ ಕೆಲವು ವರ್ಷಗಳ ಹಿಂದೆಯೇ ಅನುಮತಿ ನೀಡಿದೆ ಮತ್ತೊಬ್ಬ ಗ್ರಾಮಸ್ಥರು ಹೇಳಿದರು.

ತಾಳಿಪಾಡಿ ವಾರ್ಡಿಗೆ ಸಾಕಷ್ಟು ಅನುದಾನ ನೀಡುತ್ತೀರಿ ತುಡಾಮ ವಾರ್ಡಿಗೆ ಏಕಿಲ್ಲ ? ತುಡಾಮದಲ್ಲಿ ದಿನದ ೨೪ ಗಂಟೆಯೂ ಸರಕಾರದ ಬೋರ್‌ವೆಲ್ ನಿಂದ ಪಂಚಾಯಿತಿಯು ನೀರು ತೆಗೆಯುತ್ತಿದ್ದು ಹಾಗಾಗಿ ಹತ್ತಿರದ ಬಾವಿಯಲ್ಲಿ ನೀರಿನ ಸೆಲೆ ಕಡಿಮೆಯಾಗುತ್ತದೆ ಇದರ ಬಗ್ಗೆ ಗಮನ ನೀಡಿ ಎಂದು ತುಡಾಮ ಗ್ರಾಮಸ್ಥರು ಭಿನ್ನವಿಸಿಕೊಂಡರು.

ಸ್ವಚ್ಥ ಗ್ರಾಮ ಯೋಜನೆ ಅವ್ಯವಸ್ಥೆ
ಕಿನ್ನಿಗೋಳಿಯ ಬಾರ್, ಹೋಟೆಲ್ ಹಾಗೂ ವಾಣಿಜ್ಯ ಸಂಕೀರ್ಣಗಳ ಕೊಳಚೆ ಮಲೀನ ನೀರು ಕಿನ್ನಿಗೋಳಿ ಬಸ್ ನಿಲ್ದಾಣದ ಪಕ್ಕದಲ್ಲಿ ಹರಿದು ಹೋಗಿ ಬಿತ್ತುಲ್ ಪರಿಸರದಲ್ಲಿ ಶೇಖರಣೆಗೊಂಡು ಪರಿಸರದ ಮನೆಗಳ ಬಾವಿಗಳು ಕಲುಷಿತಗೊಂಡಿವೆ. 12 ವರ್ಷಗಳಿಂದಿರುವ ಕೊಳಚೆ ನೀರು ಹಾಗೂ ಚರಂಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಗ್ರಾಮಸ್ಥ ರಾಫಾಯಲ್ ರೆಬೆಲ್ಲೊ ತಿಳಿಸಿದರು. ಮುಂದಿನ ದಿನಗಳಲ್ಲಿ ಪರಿಸರದಲ್ಲಿ ದ್ರವ ತ್ಯಾಜ್ಯ ಘಟಕ ನಿರ್ಮಾಣ ಮಾಡಲಾಗುವುದು ಎಂದು ಪಂಚಾಯಿತಿ ಆಡಳಿತ ತಿಳಿಸಿತು.
ರಾಜಾಂಗಣದ ಹತ್ತಿರದ ಹೊಸತಾಗಿ ನಿರ್ಮಾಣಗೊಂಡ ಅಪಾರ್ಟ್‌ಮೆಂಟ್ ಒಂದರಲ್ಲಿ ರಾತ್ರಿ ಹೊತ್ತು ಶೌಚಾಲಯ ಹಾಗೂ ಮಲೀನ ನೀರು ಸಮೀಪದ ಚರಂಡಿಗೆ ಬಿಡುವುದರಿಂದ ಪರಿಸರದ ಬಾವಿ ಹಾಗೂ ಹತ್ತಿರದ ೧೫ ಮನೆಗಳವರಿಗೆ ವಿಪರೀತ ದುರ್ನಾತ ಬರುತ್ತಿದ್ದು ರೋಗಕ್ಕೆ ನಾಂದಿಯಾಗಬಲ್ಲುದು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದಲ್ಲಿ ಪ್ರತಿಭಟನೆ ಹಾಗೂ ಸಂಬಂಧಪಟ್ಟ ಉನ್ನತಾಧಿಕಾರಿಗೆ ದೂರು ನೀಡುತ್ತೇವೆ. ಎಲ್ಲಾ ಅಪಾರ್ಟ್‌ಮೆಂಟ್‌ಗಳಿಗೆ ಅವರವರ ಜಾಗದಲ್ಲಿ ತ್ಯಾಜ್ಯ ದ್ರವ ಶುದ್ಧೀಕರಣ ಘಟಕ ನಿರ್ಮಿಸಲು ಆದೇಶ ನೀಡಬೇಕೆಂದು ಗ್ರಾಮಸ್ಥರು ತಿಳಿ ಹೇಳಿದರು.
ಇಲ್ಲಿಯವರೆಗೆ ಮೆನ್ನಬೆಟ್ಟು ಪಂಚಾಯಿತಿಯ ಸಹಬಾಗಿತ್ವದಲ್ಲಿ ಘನ ತ್ಯಾಜ್ಯ ಘಟಕ ವಿಲೇವಾರಿ ಮಾಡುತ್ತಿದ್ದು ಮುಂದೆ ಕಿನ್ನಿಗೋಳಿ ಪಂಚಾಯಿತಿಯು ತ್ಯಾಜ್ಯ ವಿಲೇವಾರಿಗಾಗಿ ಸ್ವಂತ ನೆಲೆಯಲ್ಲಿ ಸ್ಥಾಪನೆ ಮಾಡಲಿದೆ ಎಂದು ಪಂಚಾಯಿತಿ ಆಡಳಿತ ತಿಳಿಸಿತು.

ಕಿನ್ನಿಗೋಳಿ ಸಹಿತ 17  ಗ್ರಾಮಗಳಿಗೆ ಸುಮಾರು 17 ಕೋಟಿ ರೂ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರವಾಗಿ ಕಾಮಗಾರಿ ಮುಗಿಸಲಾಗುವುದು ಎಂದು ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದರೂ ಇವರೆಗೂ ಕಾರ್ಯಗತವಾಗಿಲ್ಲ ಯಾಕೇ ಎಂದು ಗ್ರಾಮಸ್ಥರ ಪ್ರಶ್ನೆಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಹಾಗೂ ಜಿಲ್ಲಾ ಪಂಚಾಯಿತಿ ಇಂಜೀನಿಯರ್ ವಿಶ್ವನಾಥ್ ಮಾತನಾಡಿ ಬಹುತೇಕ ಕಾಮಗಾರಿ ಮುಗಿದಿದ್ದು ಮುಂದಿನ ಮೂರು ತಿಂಗಳಿನ ಒಳಗೆ ಸಂಪೂರ್ಣ ಕಾಮಗಾರಿ ಮುಗಿಯಬಲ್ಲುದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ ಎಂದು ಉತ್ತರಿಸಿದರು.

ಕೆಲವರು ವಾರ್ಡ್ 4 ರಲ್ಲಿ ನೀರಿನ ಸಂಪರ್ಕಕ್ಕಾಗಿ 2 ವರ್ಷಗಳ ಮೊದಲೇ ಹಣ ಕಟ್ಟಿದರೂ ಇನ್ನೂ ಸಂಪರ್ಕ ಕಲ್ಪಿಸಲಾಗಿಲ್ಲ ಯಾಕೆ ವಾರ್ಡ್ ಬಗ್ಗೆ ತಾರತಮ್ಯ ಯಾಕೆ ಎಂದು ಸೆಲಿನ್ ಫೆರ್ನಾಂಡೀಸ್ ತಮ್ಮ ಅಳಲನ್ನು ತೋಡಿಕೊಂಡರು.

ಕಿನ್ನಿಗೋಳಿ ಗ್ರಾ. ಪಂ ಮಾರ್ಕೆಟ್‌ನಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಪ್ರಾಯೋಜಿತ ಹೈಟೆಕ್ ಮೀನುಗಾರಿಕಾ ಮಾರ್ಕೆಟ್ ಇನ್ನೂ ಕೂಡ ನೆನೆಗುದಿಗೆ ಬಿದ್ದಿದೆ. ಮಾರ್ಕೆಟ್ ಪ್ರಧಾನ ಪ್ರವೇಶ ದ್ವಾರ ಇಕ್ಕಟ್ಟಾಗಿದ್ದು ರಸ್ತೆ ಬದಿ ವ್ಯಾಪಾರಿಗಳ ತೊಂದರೆಗಳಿಂದಾಗಿ ಗುರುವಾರ ಒಳ ಪ್ರವೇಶ ಮಾಡಲು ಪರದಾಡಬೇಕಾದ ಪರಿಸ್ಥಿತಿ ಇದೆ. ಪಂಚಾಯಿತಿ ಸ್ವಾದೀನದ ಮಾರ್ಕೆಟ್ ಬಳಿಯ ಕಟ್ಟಡಗಳಲ್ಲಿ ಒಳ ಬಾಡಿಗೆ ಕೊಟ್ಟಿದ್ದಾರೆ ಇದರಿಂದ ಪಂಚಾಯಿತಿಗೆ ನಷ್ಟವಾಗುತ್ತಿದೆ. ಬಾಡಿಗೆ ವಹಿಸಿದವರಿಗೆ ಮಾತ್ರ ಪರವಾನಿಗೆ ನೀಡಬೇಕು ಇತರರಿಗೆ ನೀಡದಂತೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮಸ್ಥ ಗಂಗಾಧರ ರಾವ್ ಮಾತನಾಡಿ ಕಿನ್ನಿಗೋಳಿ ಪೇಟೆಯ ಪುಟ್‌ಪಾತ್‌ನ್ನು ಅಂಗಡಿಯವರು ಆಕ್ರಮಿಸಿದ್ದಾರೆ ಇದನ್ನು ತೆರವು ಮಾಡಿಸಬೇಕು. ನೆಲಗುಡ್ಡೆಯಲ್ಲಿ ನೀರಿನ ಒವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಬೇಕು ಇಲ್ಲದಿದರೆ ನಾನೇ ಮುತುವರ್ಜಿ ವಹಿಸಿ ಟ್ಯಾಂಕ್ ನಿರ್ಮಾಣ ಮಾಡುತ್ತೇನೆ ಎಂದು ಪಂಚಾಯಿತಿಗೆ ಸವಾಲೆಸೆದರು.

೨೦೦೮-೦೯ ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪಂಚಾಯಿತಿಯ ಆವರಣದಲ್ಲಿ ಸ್ಥಳ ಕಾದಿರಿಸಿದರೂ ಆರೋಗ್ಯ ಕೇಂದ್ರ ನಿರ್ಮಾಣವಾಗಿಲ್ಲ, ಮನೆ ತೆರಿಗೆ ಪರಿಷ್ಕರಣೆ ಸಭೆ ನಡೆಯದಿರುವುದು, ವಾರ್ಡ್೩ ರಲ್ಲಿ ಆರೇಳು ತಿಂಗಳಿನಿಂದ ಕೆಸರು ಮಿಶ್ರಿತ ಕುಡಿಯುವ ನೀರಿನ ಸಮಸ್ಯೆ, ರುದ್ರ ಭೂಮಿಗೆ ಜಾಗ, ಶಾಂತಿಪಲ್ಕೆಯಲ್ಲಿ ಅಂಗನವಾಡಿ ಸಮಸ್ಯೆ, ಪಂಚಾಯಿತಿಯಲ್ಲಿ ಮಳೆ ದಾಖಲಿಸುವ ವೃಷ್ಠಿ (ಮಳೆ)ಮಾಪಕದ ವ್ಯವಸ್ಥೆ ಹಾಗೂ ಸರಕಾರದ ಯೋಜನೆಗಳ, ಸವಲತ್ತುಗಳ ಬಗ್ಗೆ ಗ್ರಾಮ ಸಭೆಯಲ್ಲಿ ಆರೋಗ್ಯಕರವಾಗಿ ಚರ್ಚೆಗೊಂಡವು.
ಸಹಾಯಕ ಕೃಷಿ ನಿರ್ದೇಶಕ ನಾಗರಾಜ್ ಎಚ್. ನೋಡಲ್ ಅದಿಕಾರಿಯಾಗಿ ಕಾರ್ಯನಿರ್ವಹಿದರು. ಗ್ರಾಮ ಪಂ. ಉಪಾಧ್ಯಕ್ಷ ಜೆರೋಮ್ ಜಾನ್ಸನ್ ಡಿಸೋಜ, , ಕಾರ್ಯದರ್ಶಿ ಒಲಿವರ್ ಓಸ್ವಾಲ್ದ್ ಪಿಂಟೊ, ಕಂದಾಯ ಇಲಾಖೆಯ ಕಿರಣ್, ಪಶುಸಂಗೋಪನ ಇಲಾಖೆಯ ಸತ್ಯಶಂಕರ್, ಮೆಸ್ಕಾಂ ಇಲಾಖೆಯ ಇಲ್ಯಾಸ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-15071405

Kinnigoli-15071406 Kinnigoli-15071407

Comments

comments

Comments are closed.

Read previous post:
Kinnigoli-15071403
ಪಟ್ಟೆ ಜೋಕುಲು ಕಂಬಳ ತಂಡಕ್ಕೆ ಪ್ರಶಸ್ತಿ

ಹಳೆಯಂಗಡಿ : ಪಾವಂಜೆಯಲ್ಲಿ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ರಿಲೀಜಿಯಸ್ ಟ್ರಸ್ಟ್‌ನ ಸಂಯೋಜನೆಯಲ್ಲಿ ಎರಡು ದಿನಗಳಲ್ಲಿ ನಡೆದ ತುಳುನಾಡ ಕೃಷಿ ಜನಪದೋತ್ಸವದ ಸಾರ್ವಜನಿಕರ ವಿಭಾಗದಲ್ಲಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯ ಪುರುಷರ...

Close