ಜಾನಪದ ಸೊಗಡು ಬಾಳೆ ಹಾಕುವ ಕ್ರಮ

ಕಿನ್ನಿಗೋಳಿ: ಕರಾವಳಿಯ ತುಳು ನಾಡು ತನ್ನದೇ ಆದ ಜಾನಪದ ಸಂಸ್ಕ್ರತಿ ಆಚರಣೆಗಳನ್ನು ಹೊಂದಿದೆ. ತುಳು ಭಾಷಿಗರು ತಮ್ಮ ದೈನಂದಿನ ಬದುಕಿನಲ್ಲಿ ಸ್ಥಳೀಯ ಆಚರಣೆಗಳಾದ ದೈವಾರಾಧನೆ ನಾಗಾರಾಧನೆ ಹಾಗೂ ತುಳುನಾಡಿನ ಪ್ರತಿಯೊಂದು ಸಂಸ್ಕ್ರತಿಯೂ ಹಬ್ಬದಂತೆ ಆಚರಿಸುವುದು ಅಲ್ಲದೆ ಇದರಲ್ಲಿ ವೈಜ್ಞಾನಿಕ ಅಂಶಗಳಿರುವುದು ಸೋಜಿಗದ ವಿಷಯ.
ಕರಾವಳಿಯ ತುಳು ಭಾಷಿಕರು ಕೃಷಿಯನ್ನೇ ಪ್ರಧಾನ ಕಸುಬನ್ನಾಗಿ ಹಿಂದಿನ ಕಾಲದಿಂದಲೂ ರೂಢಿಸಿಕೊಂಡಿದ್ದಾರೆ. ಕರಾವಳಿಯ ರೈತರು ತಮ್ಮ ಹಿರಿಯರ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಹಲವಾರು ಸಂಸ್ಕ್ರತಿಗಳನ್ನು ಈಗಲೂ ಆಚರಿಸಿಕೊಂಡು ಬರುತ್ತಿದ್ದಾರೆ ಅವುಗಳಲ್ಲಿ ಬಾಳೆ ಹಾಕುವ ಕ್ರಮ ಒಂದಾಗಿದೆ.
ಹಿಂದಿನ ಕಾಲದಲ್ಲಿ ಈ ಆಚರಣೆಯು ಕರಾವಳಿಯ ಹೆಚ್ಚಿನ ಗುತ್ತು ಹಾಗೂ ಬರ್ಕೆ ಮನೆತನಗಳಲ್ಲಿ ನಡೆಯುತ್ತಿತ್ತು ಆದರೆ ಇಂದು ಕೆಲವು ಮಾಗಣೆಗಳಲ್ಲಿ ಮಾತ್ರ ಕಂಡು ಬರುತ್ತಿದೆ. ಅಂತಹ ಒಂದು ಸಂಸ್ಕ್ರತಿಯನ್ನು ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಬಳಿಯ ಮೊಗಪಾಡಿಗುತ್ತುವಿನಲ್ಲಿ ಶ್ರೀನಾಥ್ ಹೆಗ್ಡೆಯವರ ಮುಂದಾಳತ್ವದಲ್ಲಿ ಈಗಲೂ ನಡೆದುಕೊಂಡು ಬಂದಿದೆ. ಗುತ್ತು ಮನೆಯ ಮುಂದೆ ಇರುವ ಬಾಕ್ಯಾರು ಗದ್ದೆಗೆ ಕದಳಿ ಬಾಳೆಯನ್ನು ನೆಟ್ಟು ನಂತರ ಗದ್ದೆಯನ್ನು ನಾಟಿ ಅಥವಾ ಬಿತ್ತುವ ಪ್ರಕ್ರಿಯೆಯು ನಡೆಯುತ್ತದೆ, (ತುಳುವಿನಲ್ಲಿ ಬಾರೆ ಪಾಡುನು ಅಂತ ಕರೆಯುತ್ತಾರೆ)
ಗುತ್ತು ಮನೆತನದ ಗದ್ದೆಗಳಲ್ಲಿ ಇದುವೇ ಮುಖ್ಯ ಗದ್ದೆಯಾಗಿರುತ್ತದೆ. ಊರ ಪುರೋಹಿತರ ಬಳಿ ಹೋಗಿ ಬಾಳೆ ಹಾಕಲು ದಿನಾಂಕ ನಿಗದಿ ಪಡಿಸಲಾಗುತ್ತದೆ. ಆ ದಿನ ಬೆಳ್ಳಿಗ್ಗೆ ಗ್ರಾಮದ ಪೂರೋಹಿತರನ್ನು ಆಹ್ವಾನಿಸಿ ಗುತ್ತಿನ ಚಾವಡಿಯಲ್ಲಿ ತಾವು ನಂಬಿದ ದೈವದೇವರುಗಳ ಮುಂದೆ ಬಾಳೆಗಿಡ ಇಟ್ಟು, ಗಣಪತಿ ದೇವರಿಗೆ ಮತ್ತು ಇತರ ದೈವ ದೇವರುಗಳಿಗೆ ವಿಶೇಷ ಪೂಜೆ ಧಾರ್ಮಿಕ ಪೂಜಾ ವಿವಿಧಾನಗಳನ್ನು ನಡೆಸಿ ನಂತರ ಪ್ರಾರ್ಥನೆ ಸಲ್ಲಿಸಿ ಪುರೋಹಿತರು ಮತ್ತು ಗುತ್ತು ಮನೆತನದವರು ಬಾಳೆ ಗಿಡವನ್ನು ಪೂಜಿಸಿ ಗುತ್ತು ಮನೆಯ ಎದುರುಗಡೆ ಇರುವ ಬಾಕ್ಯಾರು ಗದ್ದೆಯ ಮಧ್ಯದಲ್ಲಿ ನೆಡಲಾಗುತ್ತದೆ. ತಮ್ಮ ಬೆಳೆಯು ಹುಲಸಾಗಿ ಯಾವುದೇ ಹಾನಿಗೀಡಾಗದೆ ಬೆಳೆಯಲಿ ಎಂದು ಪ್ರಾರ್ಥಿಸಿ ಗದ್ದೆಯಿಂದ ಮೇಲೇರಿ ಬರುತ್ತಾರೆ, ಆನಂತರ ಗದ್ದೆಯನ್ನು ನಾಟಿ ಮಾಡಲಾಗುತ್ತದೆ ಅಥವಾ ಬಿತ್ತಲಾಗುತ್ತದೆ. ಬಾಕ್ಯಾರು ಗದ್ದೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ನಾಟಿ ಮಾಡುವುದು ಒಂದು ವಿಶೇಷ ಅಲ್ಲದೆ ಒಂದೇ ದಿನದಲ್ಲಿ ಈ ದೊಡ್ಡ ಗದ್ದೆಯನ್ನು ನಾಟಿ ಮಾಡಬೇಕೆಂಬ ಒಂದು ಪ್ರತೀತಿಯೂ ಇದೆ. ಇಂತಹ ಗದ್ದೆಗಳಿಗೆ ಸೂತಕದವರು ಇಳಿಯುವಂತಿಲ್ಲ.
ಈ ಆಚರಣೆಯ ಹಿಂದೆ ಧಾರ್ಮಿಕ ನಂಬಿಕೆಯೂ ಇದೆ ಬಾಳೆ ಗಿಡವೂ ಅತ್ಯಂತ ಬೇಗ ಫಲ ನೀಡುವ ಗಿಡವಾದರಿಂದ ಬಾಳೆಗಿಡದಂತೆ ತಮ್ಮ ಬೆಳೆಯೂ ಬೇಗ ಫಲ ಕೊಡಲಿ ಎಂಬುದು ನಂಬಿಕೆ ವಿಶ್ವಾಸ. ಸಂಸ್ಕ್ರತಿ ಅಳಿದು ಹೋಗುತ್ತಿರುವ ಇಂದಿನ ದಿನಗಳಲ್ಲಿ ಅಲ್ಲೊಂದು ಇಲ್ಲೊಂದು ಆಚರಣೆಗಳು ನಡೆಯುತ್ತಿರುವುದು ಸಂತೋಷವೇ ಸರಿ.

ವೈಜ್ಞಾನಿಕ ತಳಹದಿಯುಳ್ಳ ಈ ಜಾನಪದೀಯ ಸಂಸ್ಕ್ರತಿಯನ್ನು ಶ್ರೀನಾಥ್ ಹೆಗ್ಡೆಯವರ ಗುತ್ತು ಮನೆತನ ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಧಾರ್ಮಿಕ ನಂಬಿಕೆಯಡಿ ಈ ರೀತಿಯ ಸಂಸ್ಕೃತಿಯನ್ನು ಮೂಡಿಸಿದ ಹಿರಿಯರ ಪರಿಸರ ಪ್ರಜ್ಞೆ ಅನುಕರಣೀಯವಾಗಿದೆ. ಕೃಷಿ ಚಟುವಟಿಕೆಗಳ ಬಗ್ಗೆ ಪರಿಜ್ಞಾನ, ಆಸಕ್ತಿ ಮತ್ತು ಧಾರ್ಮಿಕ ನಂಬಿಕೆಯ ವಿಚಾರಯೋಗ್ಯ ರೀತಿ ರಿವಾಜನ್ನು ಉಳಿಸಿ ಯುವ ಜನತೆಗೆ ಪರಿಸರದ ಮಹತ್ವವನ್ನು ತಿಳಿಹೇಳುವ ಕಾರ್ಯ ಆಗಬೇಕಾಗಿದೆ.
ಸುರೇಶ್ ಭಟ್ ಪಂಜ
ಪಂಜ ಮಹಾಗಣಪತಿ ಮಂದಿರದ ಪ್ರಧಾನ ಅರ್ಚಕರು.

Kinnigoli 16071409

Comments

comments

Comments are closed.

Read previous post:
Kinnigoli 16071408
ಅಧ್ಯಕ್ಷರಾಗಿ ತಿಲಕ್ ರಾಜ್ ಶೆಟ್ಟಿ ಆಯ್ಕೆ

ಕಿನ್ನಿಗೋಳಿ: ನಡುಗೋಡು ದ.ಕ. ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯ ಹಳೇ ವಿದ್ಯಾರ್ಥಿ ಸಂಘದ 2014-15ನೇ ಸಾಲಿನ ಅಧ್ಯಕ್ಷರಾಗಿ ತಿಲಕ್ ರಾಜ್ ಶೆಟ್ಟಿ ಆಯ್ಕೆಯಾದರು, ಗೌರವ ಸಲಹೆಗಾರರಾಗಿ ಚರಣ್ ಶೆಟ್ಟಿ,...

Close