ಮನೆಗೆ ನುಗ್ಗಿ ಲಕ್ಷಾಂತರ ಚಿನ್ನಾಭರಣ ನಗದು ಕಳ್ಳತನ

ಮೂಲ್ಕಿ:  ಹಳೆಯಂಗಡಿ ಬಳಿಯ ತೊಕೂರು ಶ್ರೀ ಸುಬ್ರಹ್ಮಣ್ಯ ಗಣಪತಿ ದೇವಸ್ಥಾನದ ಬಳಿಯ ಲೈಟ್‌ಹೌಸ್ ರಸ್ತೆಯಲ್ಲಿನ ಮನೆಯೊಂದಕ್ಕೆ ಭಾನುವಾರ ತಡ ರಾತ್ರಿ ಸುಮಾರು ಎರಡೂವರೆ ಗಂಟೆಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸಹಿತ ನಗದನ್ನು ದೋಚಿ ಪರಾರಿಯಾದ ಘಟನೆ ಸೋಮವಾರ ಮುಂಜಾನೆ ಬೆಳಕಿಗೆ ಬಂದಿದೆ.
ಹಳೆಯಂಗಡಿಯಲ್ಲಿ ಬೇಕರಿ ವ್ಯವಹಾರ ನಡೆಸುತ್ತಿರುವ ಲಿಯೋ ಕುಟಿನ್ಹೋರವರ ಮನೆಯಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಮನೆಯ ಮಲಗುವ ಕೋಣೆಯಲ್ಲಿ ಕಪಾಟಿನಲ್ಲಿಟ್ಟಿದ್ದ 12 ಪವನ್ ವಿವಿಧ ಚಿನ್ನಾಭರಣ ಹಾಗೂ 9 ಸಾವಿರ ರೂ. ನಗದನ್ನು ಕಳ್ಳರು ಕದ್ದಿದ್ದಾರೆ ಎಂದು ತಿಳಿದು ಬಂದಿದೆ. ವಿಶೇಷವೆಂದರೆ ಅದೇ ಕೋಣೆಯಲ್ಲಿ ಕಪಾಟಿನ ಬಳಿಯಲ್ಲೇ ಲಿಯೋ ದಂಪತಿಗಳು ಮಲಗಿದ್ದರೂ ಕಳ್ಳತನದ ಅರಿವಾಗಲೇ ಇಲ್ಲ. ಆದರೆ ಕಳ್ಳತನ ಮಾಡಿ ಕೋಣೆಯಿಂದ ಹೊರ ಬರುವಾಗ ಮಗನಿಗೆ ಎಚ್ಚರವಾಗಿ ಕಳ್ಳನನ್ನು ನೋಡಿದ್ದು ತನ್ನ ತಂದೆ ಎಂದುಕೊಂಡು ಪುನ: ನಿದ್ರೆಗೆ ಜಾರಿದ್ದಾನೆ.
ಹಿಂಬಾಗಿಲಿನಿಂದ ಬಂದ ಕಳ್ಳರು
ಇಬ್ಬರಿಂದ ಮೂವರು ಕಳ್ಳರು ಮಾರುತಿ ಕಾರಿನಲ್ಲಿ ಬಂದು ಲಿಯೋರವರ ಮನೆಯ ಒಳಬಾಗಿಲಿನ ಚಿಲಕವನ್ನು ಕಿಟಕಿಯ ಮೂಲಕ ಕಬ್ಬಿಣದ ಕೊಕ್ಕೆಯಿಂದ ತೆಗೆದು ಚಿಲಕ ಹಾಕಿರದ ಹಿಂಬಾಗಿಲಿನಿಂದ ಒಳನುಗ್ಗಿದ್ದು ಚಿನ್ನಾಭರಣ ಇರುವ ಕೋಣೆಗೆ ಬಂದು ಕಳ್ಳತನ ಮಾಡಿದ್ದಾರೆ.ಕಳ್ಳರು ವ್ಯವಸ್ಥಿತ ರೀತಿಯಲ್ಲಿ ತಮ್ಮ ಕೃತ್ಯ ನಡೆಸಲು ಮನೆಯ ನಾಯಿಗೆ ಮತ್ತು ಬರಿಸುವ ಆಹಾರ ನೀಡಿ ಪ್ರಜ್ಞೆ ತಪ್ಪಿಸಿದ್ದು ತನಿಖೆಯ ವೇಳೆ ಬಯಲಾಗಿದೆ. ನಾಯಿ ಗಡದ್ದಾಗಿ ನಿದ್ದೆ ಮಾಡಿದ್ದು ಇಂದು ಬೆಳಿಗ್ಗೆ ಸ್ಥಳಕ್ಕೆ ಪೊಲೀಸರು ಬಂದ ಮೇಲೆಯೇ ಎಚ್ಚರವಾಗಿ ಎದ್ದು ನಿಂತಿದೆ.
ಈ ನಡುವೆ ಕಳ್ಳರು ಪಕ್ಕದ ಮನೆಯ ಯಾದವ ಕುಲಾಲ್ ಎಂಬುವರ ಮನೆಗೂ ನುಗ್ಗಿ ಕಳ್ಳತನ ನಡೆಸಲು ವಿಫಲ ಯತ್ನ ನಡೆಸಿದ್ದು ಅವರು ಶಬ್ದವಾದುದರಿಂದ ಎದ್ದು ದೀಪ ಹಾಕಿದ್ದು ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ನೆರೆಮನೆಯವರೇ ಆದ ಯಾದವ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಅಲ್ಲಿಂದ ಓಡಿ ಹೋಗುವಾಗ ಯಾದವ ಕುಲಾಲರ ಮನೆಯ ಪಕ್ಕ ಕಬ್ಬಿಣದ ಕೊಕ್ಕೆಯನ್ನು ಬಿಸಾಡಿ ಹೋಗಿದ್ದಾರೆ.
ಪರಿಚಿತರದ್ದೇ ಕೃತ್ಯ ಶಂಕೆ
ಮನೆಯಲ್ಲಿರುವವರ ಆಗು ಹೋಗುಗಳನ್ನು ಗಮನಿಸಿಯೇ ಈ ಕೃತ್ಯದಲ್ಲಿ ಶಾಮಿಲಾಗಿರಬಹುದು ಎಂದು ಪೊಲೀಸರು ಸಂಶಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಮೂಲ್ಕಿ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದು ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ. ಈ ಕಳ್ಳತನದಲ್ಲಿ ಮನೆಯ ಪರಿಚಯ ಹಾಗೂ ಸಂಪೂರ್ಣವಾಗಿ ಮನೆಯ ಮಾಹಿತಿ ಇದ್ದವರೇ ನಡೆಸಿರುವ ಸಾಧ್ಯತೆ ಇದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Kinnigoli-12081401 Kinnigoli-12081402 Kinnigoli-12081403 Kinnigoli-12081404

Comments

comments

Comments are closed.

Read previous post:
Kinnigoli-12081401
ರೋಟರಿ ಸದಸ್ಯರಿಂದ ರಂಝಾನ್ ಕೂಟ

ಮೂಲ್ಕಿ: ಪ್ರಪಂಚದ ನಿರ್ಮಾತನಾದ ಭಗವಂತನ್ನು ಪ್ರಾರ್ಥಿಸುವುದರೊಂದಿಗೆ ನಡೆಸುವ ಉಪವಾಸ ವೃತವು ನಮ್ಮನ್ನು ದೈಹಿಕ ಮತ್ತು ಮಾನಸಿಕವಾಗಿ ಶುದ್ದೀಕರಿಸಿ ಇಹ ಮತ್ತು ಪರದಲ್ಲಿ ಉನ್ನತಿಗಳಿಸುವಂತೆ ಮಾಡುತ್ತದೆ ಎಂದು ಮೂಲ್ಕಿ...

Close