ಅಂಗರಗುಡ್ಡೆ-ಸಮಾಜ ಸೇವೆ ಮೂಲಕ ಸ್ವಾತಂತ್ರ್ಯ ಆಚರಣೆ

ಮೂಲ್ಕಿ: ದೇಶದೆಲ್ಲೆಡೆ ಶುಕ್ರವಾರ ೬೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಲ್ಲಲ್ಲಿ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಮಾಡಿ, ವಂದೇಮಾತರಂ ಹಾಡಿ, ಸಂಭ್ರಮ ಸಡಗರದಲ್ಲಿ ಆಚರಣೆ ನಡೆಸಿ, ಜನಗಣಮನದ ರಾಷ್ಟ್ರಗೀತೆಯೊಂದಿಗೆ ಮಂಗಳ ಹಾಡಿ ಮನೆ ಮನೆಗೆ ತೆರಳಿರುವುದು ಸಾಮಾನ್ಯ ಆದರೆ ಮೂಲ್ಕಿ ಬಳಿಯ ಗ್ರಾಮೀಣ ಪ್ರದೇಶವಾದ ಕೆಂಚನಕೆರೆಯ ಅಂಗರಗುಡ್ಡೆಯ ಶ್ರೀ ರಾಮ ಭಜನಾ ಮಂಡಳಿಯು ಬೇರೆ ಪ್ರದೇಶದ ಬಡ ಕುಟುಂಬಕ್ಕೆ ಆಸರೆಯಾಗಿ ವಿಶಿಷ್ಟ ಸಮಾಜ ಸೇವೆಯನ್ನು ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಸೇವಾ ದಿನವನ್ನಾಗಿ ಆಚರಿಸಿಕೊಂಡಿದ್ದರು.
ಅಂಗರಗುಡ್ಡೆಯ ಶ್ರೀ ರಾಮ ಭಜನಾ ಮಂಡಳಿಯ ಪ್ರಮುಖರು ಶುಕ್ರವಾರ ತಮ್ಮಲ್ಲಿಯೇ ಸಮೀಕ್ಷೆಯೊಂದನ್ನು ನಡೆಸಿಕೊಂಡು ತೀರ ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನು ಹುಡುಕಿಕೊಂಡು ಹೊರಟು ಅವರಿಗೆ ಧನ ಸಹಾಯವನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಹಳೆಯಂಗಡಿಯ ಇಂದಿರಾ ನಗರದ ಬಡ ಮಹಿಳೆ ಪುಷ್ಪಾ ಭಂಡಾರಿಯವರು ಕ್ಯಾನ್ಸರ್ ರೋಗದಿಂದ ತನ್ನ ಚಿಕಿತ್ಸೆಗಾಗಿ ಹಣವನ್ನು ಹೊಂದಿಸಲಾಗದೇ ಬಳಲುತ್ತಿದ್ದುದನ್ನು ಗಮನಿಸಿದ ಭಜನಾ ಮಂಡಳಿಯವರು ನೇರವಾಗಿ ಅವರ ಮನೆಗೆ ಶುಕ್ರವಾರ ತೆರಳಿ ಐದು ಸಾವಿರ ಮೊತ್ತದ ಹಣವನ್ನು ನೀಡಿ ಮುಂದೆಯೂ ನಿಮ್ಮೊಂದಿಗೆ ನಾವಿದ್ದೇವೆ ಎಂದು ಧೈರ್ಯ ಹೇಳಿ ಅವರಿಗೆ ಮುಕ್ತ ಮನಸ್ಸಿನಿಂದ ನೆರವು ನೀಡಿದ್ದಾರೆ.
ಅಲ್ಲಿಂದ ಮುಂದೆ ಸಾಗಿದ ಭಜನಾ ಮಂಡಳಿಯ ತಂಡವು ಬಜಪೆಯ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿನ ಲೇಔಟ್‌ವೊಂದರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಪದ್ಮನಾಭ ಮತ್ತು ಸುಶೀಲಾ ಎಂಬ ಬಡಕುಟುಂಬದ ಪರಿಸ್ಥಿತಿಯನ್ನು ಇತ್ತೀಚೆಗೆ ಮಾದ್ಯಮದ ಮೂಲಕ ವಿವರಿಸಿದ್ದನ್ನು ಗಮನಿಸಿ ಆ ಮನೆಯ ಐದರ ಹರೆಯ ಮುಗ್ದ ಬಾಲಕಿ ಶ್ರೀನಿಧಿಯ ಮಾನಸಿಕ ಬುದ್ದಿಮಾಂದ್ಯದ ಪರಿಸ್ಥಿತಿಗೆ ಸ್ಪಂಧಿಸಿ ಆಕೆಯ ಚಿಕಿತ್ಸೆಗೆ ನೆರವಾಗಲು ಏಳು ಸಾವಿರದ ನಗದನ್ನು ನೀಡಿ ಮುಂದಿನ ಹೆಚ್ಚುವರಿ ಚಿಕಿತ್ಸೆಗೆ ವಿವಿಧ ದಾನಿಗಳಿಂದ ಸಂಗ್ರಹಿಸಿ ನೀಡುವ ಭರವಸೆಯನ್ನು ನೀಡಿದ್ದಾರೆ.
ಕೇವಲ ಈ ಎರಡು ಸಮಾಜ ಸ್ಪಂದನೆ ಉದಾಹರಣೆಯಷ್ಟೇ ಆದರೆ ಶ್ರೀ ರಾಮ ಭಜನಾ ಮಂಡಳಿಯು ಭಜನಾ ಸಂಕೀರ್ತನೆ, ನವರಾತ್ರಿ, ಯುಗಾದಿ, ಕೃಷ್ಣಾಷ್ಟಮಿ, ಗಣೇಶೋತ್ಸವ, ಭಜನಾ ಮಂಗಲೋತ್ಸವ ಹೀಗೆ ಧಾರ್ಮಿಕ ಕಾರ್ಯಕ್ರಮವನ್ನು ನಡೆಸುವ ಜೊತೆ ಜೊತೆಗೆ ಪ್ರತೀವರ್ಷ ವಿವಿಧ ರೀತಿಯಲ್ಲಿ ಸಾರ್ವಜನಿಕ ಆಚರಣೆಯನ್ನು ಮಾಡಿಕೊಂಡು ಬಂದಿರುವ ಪರಿಪಾಠ ಬೆಳೆದಿದೆ. ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಬಡ ಕುಟುಂಬಕ್ಕೆ ಪಡಿತರ ಸಾಮಗ್ರಿಯನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿರುವ ಜೊತೆಗೆ ಶ್ರಮದಾನದ ಮೂಲಕ ಬಡವರ್ಗದ ಮನೆ, ಆವರಣ ಗೋಡೆ ನಿರ್ಮಾಣ, ಸಾರ್ವಜನಿಕ ರಸ್ತೆ, ಚರಂಡಿಯನ್ನು ಶ್ರಮದಾನದ ಮೂಲಕ ದುರಸ್ಥಿಯಂತಹ ಚಟುವಟಿಕೆಗೆ ಸಾರಥ್ಯವನ್ನು ಭಜನಾ ಮಂದಿರದ ಮೂಲಕ ನೆರವೇರಿಸಿಕೊಂಡು ಬಂದಿದೆ ಎಂದು ಮಂಡಳಿಯ ಸಕ್ರೀಯ ಸದಸ್ಯ ಹಾಗೂ ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್ ಹೇಳಿಕೊಳ್ಳುತ್ತಾರೆ.
ಸ್ವಾತಂತ್ರ್ಯ ದಿನಾಚರಣೆಯನ್ನು ಶುಕ್ರವಾರ ಸೇವಾ ದಿನವನ್ನಾಗಿ ಮಾಡಿಕೊಂಡಿದ್ದ ತಂಡದಲ್ಲಿ ಮಂಡಳಿಯ ಅಧ್ಯಕ್ಷ ವಿಜಯ ಪೂಜಾರಿ, ಸದಸ್ಯರಾದ ಸತೀಶ್ ಆಚಾರ್ಯ, ತಾರನಾಥ ದೇವಾಡಿಗ, ಸಂತೋಷ್ ಶೆಟ್ಟಿ, ಮೋಹನ್ ಕುಮಾರ್, ಜೀವನ್ ಶೆಟ್ಟಿ, ದಿನೇಶ್ ಪೂಜಾರಿ ಇದ್ದರು. ಶ್ರೀ ರಾಮ ಭಜನಾ ಮಂಡಳಿ ಸಮಾಜಕ್ಕೆ ಮಾದರಿಯಾಗಿರುವುದರೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಹೊಸಅರ್ಥವನ್ನು ಕಲ್ಪಿಸಿದೆ.

Kinnigoli-17081402 Kinnigoli-17081403

Narendra Kerekadu

Comments

comments

Comments are closed.

Read previous post:
Kinnigoli-17081401
ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ-ಅಭಿನಂದನೆ

ಕಿನ್ನಿಗೋಳಿ: ಪಕ್ಷಿಕೆರೆ ಕೊಯಿಕುಡೆ ಹರಿಪಾದ ಶ್ರೀ ಹರಿಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಅಭಿನಂದಿಸಲಾಯಿತು. ತುಳು ಅಕಾಡಮಿ ಮಾಜಿ...

Close