ಹಳೆಯಂಗಡಿ ಎಚ್. ನಾರಾಯಣ ಸನಿಲ್

ಮೂಲ್ಕಿ: ಹಳೆಯಂಗಡಿಯ “ವಸಂತ ಭವನ”ದ ನಿವಾಸಿ ಹಿರಿಯ ಸಮಾಜ ಸೇವಕ ಎಚ್.ನಾರಾಯಣ ಸನಿಲ್ (93) ಭಾನುವಾರ ಮುಂಜಾನೆ ಮುಕ್ಕ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಹಳೆಯಂಗಡಿ ಗ್ರಾಮ ಪಂಚಾಯಿತಿಯಲ್ಲಿ ಸುಧೀರ್ಘ 35 ವರ್ಷದ ಅವಧಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ಹಳೆಯಂಗಡಿ-ಪಡುಪಣಂಬೂರು ಸಹಕಾರಿ ವ್ಯವಸಾಯ ಬ್ಯಾಂಕಿನ ಇದರ ಸ್ಥಾಪಕ ನಿರ್ದೇಶಕರಾಗಿ 50 ವರ್ಷಗಳ ಅವಧಿಯಲ್ಲಿ ಉಪಾಧ್ಯಕ್ಷರು ಮತ್ತು ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು. ಹಳೆಯಂಗಡಿಯ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸ್ಥಾಪನೆಗೆ ಕಾರಣೀಕರ್ತರಾಗಿ ಮತ್ತು ಎರಡೂ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಶಿಕ್ಷಣಕ್ಕೆ ಮಹತ್ವವನ್ನು ನೀಡಿದ್ದರು. ವೃತ್ತಿಯಲ್ಲಿ ಪಿ.ಡಬ್ಲ್ಯು.ಡಿಯ ’ಎ’ ಗ್ರೇಡ್‌ನ ಸಿವಿಲ್ ಗುತ್ತಿಗೆದಾರರಾಗಿದ್ದು ಪ್ರವೃತ್ತಿಯಲ್ಲಿ ಕೊಡುಗೈ ದಾನಿಯಾಗಿದ್ದರು. 1999ರಲ್ಲಿ ನಾರಾಯಣ ಸನಿಲ್‌ರವರ 77ನೇ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ’ಶ್ರೀ ನಾರಾಯಣ ಸನಿಲ್ ಸರ್ಕಾರಿ ಪದವಿ ಪೂರ್ವ ಕಾಲೇಜು’ ಎಂದು ಪುನರ್ ನಾಮಕರಣ ಮಾಡಿ ಹಳೆಯಂಗಡಿಯ ನಾಗರಿಕರ ಮನವಿಯಂತೆ ಸರ್ಕಾರವು ಗೌರವ ನೀಡಿದೆ.
ಹಳೆಯಂಗಡಿಯ ಬಿಲ್ಲವ ಸಂಘದ ಗೌರವಾಧ್ಯಕ್ಷ, ಸಾವರ್ಜನಿಕ ಗಣೇಶೋತ್ಸವ ಸಮಿತಿಯ ಸ್ಥಾಪಕ ಅಧ್ಯಕ್ಷ, ಯು.ಬಿ.ಎಂ.ಸಿ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಸಸಿಹಿತ್ಲು ಭಗವತೀ ದೇವಸ್ಥಾನದ ಜೀಣೋದ್ಧಾರ ಸಮಿತಿಯ ಅಧ್ಯಕ್ಷ, ಮಂಗಳೂರು ತಾಲೂಕು ಬೋರ್ಡ್‌ನ ಉಪಾಧ್ಯಕ್ಷ, ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಕೂಳೂರು ಶಾಖೆಯ ಅಧ್ಯಕ್ಷ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್‌ನ ನಿದೇರ್ಶಕ, ಮೂಲ್ಕಿ ಅರಸು ಕಂಬಳ ಸಮಿತಿಯ ಅಧ್ಯಕ್ಷ, ಮೂಲ್ಕಿ ಸರ್ಕಾರಿ ಆಸ್ಪತ್ರೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ರಾಜ್ಯ ಪ್ರಶಸ್ತಿ ವಿಜೇತ ಶ್ರೀ ವಿದ್ಯಾವಿನಾಯಕ ರಜತಸೇವಾ ಟ್ರಸ್ಟ್‌ನ ಖಾಯಂ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದಾರೆ. ನಾರಾಯಣ ಸನಿಲ್‌ರವರು ಗ್ರಾಮ ಪಂಚಾಯಿತಿಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಹಳೆಯಂಗಡಿ ಕದಿಕೆ ರಸ್ತೆಯನ್ನು ’ಶ್ರೀ ನಾರಾಯಣ ಸನಿಲ್ ರಸ್ತೆ’ ಎಂದು ಗ್ರಾಮ ಪಂಚಾಯಿತಿಯಿಂದ ನಿರ್ಮಿಸಲಾಗಿದೆ. ಪ್ರಾಥಮಿಕ ಶಾಲಾ ಪಠ್ಯ ಪುಸ್ತಕದಲ್ಲಿ ಮಾದರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ನಾರಾಯಣ ಸನಿಲ್ ಎಂಬ ಪಾಠವಿದೆ. ಹಳೆಯಂಗಡಿ ಮಹಿಳಾ ಮಂಡಲಕ್ಕೆ ಉಚಿತವಾಗಿ ಜಮೀನು ನೀಡಿ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ್ದರು. ಹಳೆಯಂಗಡಿ ಪರಿಸರದಲ್ಲಿ ಕುಟುಂಬದ ಆಂತರಿಕ ನ್ಯಾಯಗಳು, ಸ್ಥಳೀಯ ಸಮಸ್ಯೆಗಳು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತದೆ ಇತ್ಯರ್ಥ ಪಡಿಸುವ ಪರಿಪಾಠಕ್ಕೆ ಪ್ರಸಿದ್ಧರಾಗಿದ್ದರು.

Kinnigoli-02091401

Bhagyavan Sanil

 

Comments

comments

Comments are closed.

Read previous post:
Kinnigoli-01091412
ಶಾಲಾ ಶಿಕ್ಷಕರ ಪ್ರತಿಭಾ ಸ್ಪರ್ದೆ ವೈವಿಧ್ಯ-2014

ಮೂಲ್ಕಿ: ಮೂಲ್ಕಿ ವಲಯ ಹಾಗೂ ಮೂಲ್ಕಿ ರೋಟರಿ ಇಂಟರ‍್ಯಾಕ್ಟ್ ಕ್ಲಬ್ ಶಾಲಾ ಶಿಕ್ಷಕರ ಪ್ರತಿಭಾ ಸ್ಪರ್ದೆ ವೈವಿಧ್ಯ-2014 ರ ಸಮಗ್ರ ಪ್ರಶಸ್ತಿಯನ್ನು ಮೂಲ್ಕಿಕಿಲ್ಪಾಡಿ ಬೆಥನಿ ಅಂಗ್ಲ ಮಾದ್ಯಮ...

Close