ಕಟೀಲು 21ನೇ ವರ್ಷದ ಮಕ್ಕಳ ಧ್ವನಿ

ಕಿನ್ನಿಗೋಳಿ: ಎಳವೆಯಲ್ಲಿಯೇ ತಾಯಿಯಂದಿರು ಮಕ್ಕಳಿಗೆ ಸಾಹಿತ್ಯದ ಪ್ರಥಮ ಗುರುವಾಗಬೇಕು ಹಳೆಯ ಜೋಗುಳದ ಮೂಲಕ ಜಾನಪದ, ಸಾಹಿತ್ಯಭರಿತ ಪದ್ಯಗಳನ್ನು ಹಾಡಿ ಮಗುವನ್ನು ಮಲಗಿಸುವುದನ್ನು ಬಿಟ್ಟು ಮೊಬೈಲ್ ಹಾಡುಗಳನ್ನು ಉಪಯೋಗಿದಲ್ಲಿ ಮಗು ಮುಂದೆ ಪ್ರಾಯ ಪ್ರಬುದ್ಧರಾದಾಗ ಸುಸಂಸ್ಕೃತರಾಗುವರೇ? ಈ ಬಗ್ಗೆ ಚಿಂತನೆ ನಡೆಯಬೇಕಾಗಿದೆ. ಎಂದು ಕಾಸರಗೋಡು ಜಿಲ್ಲೆಯ ಉಪ್ಪಳದ ಪೈವಳಿಕೆ ಸರಕಾರಿ ಉನ್ನತ ಪ್ರೌಢ ಶಾಲೆಯ ಶ್ರದ್ಧಾ ಎನ್ ಹೇಳಿದರು.
ಉಡುಪಿ ಕಾಸರಗೋಡು ಜಿಲ್ಲೆ ಸಹಿತ ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮಂಗಳೂರು ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜಿನ ಜಂಟೀ ಸಹಯೋಗದೊಂದಿಗೆ ಕಟೀಲು ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ 21ನೇ ವರ್ಷದ ಮಕ್ಕಳ ಧ್ವನಿ 2014 ಮಕ್ಕಳ ಸಾಹಿತ್ಯಿಕ ಸಾಂಸ್ಕೃತಿಕ ಸಮ್ಮೇಳನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳಿಗೆ ಸಾಹಿತ್ಯದ ಆಸಕ್ತಿಯೇ ಇಲ್ಲ ಎನ್ನುವುದು ಬರೀ ಸುಳ್ಳು. ಆಸಕ್ತಿ, ಅಭಿರುಚಿ ಮೂಡಿಸುವ ಕೆಲಸ ಹಿರಿಯರಿಂದ ಹಾಗೂ ಶಿಕ್ಷಕರಿಂದಾಗಬೇಕು. ಮಕ್ಕಳಲ್ಲಿ ಕಾವ್ಯ, ಕಥಾ ಸಂಕಲಗಳು ಹಾಗೂ ಭಾಷಾಭಿಮಾನ ಬೆಳೆಸುವ ಕಾರ್ಯ ಸಮಾಜದಿಂದಾಗಬೇಕು. ಕಾಸರಗೋಡು ಗಡಿ ಪ್ರದೇಶದ ಶಾಲೆಗಳಲ್ಲಿ ಕನ್ನಡ ಪಠ್ಯದಲ್ಲಿ ಸಾಹಿತ್ಯದ ಕೊರತೆ ಇದ್ದು ಅದನ್ನು ಪರಿಶೀಲಿಸಿ ತಿದ್ದಿ ತೀಡುವ ಕೆಲಸ ನುರಿತ ಸಾಹಿತಿಗಳಿಂದಾಗಬೇಕು, ವಿದ್ಯಾರ್ಥಿಗಳು ಪ್ರಸಿದ್ದ ಕವಿಗಳ ಸಾಹಿತ್ಯವನ್ನು ಓದುವ ಹವ್ಯಾಸ ಮೂಡಿಸಿಕೊಳ್ಳಬೇಕು. ಈಗಿನ ತಂತ್ರಜ್ಞಾನ ಯುಗದಲ್ಲಿ ಅಂರ್ತಜಾಲ ಸಾಹಿತ್ಯಾಸಕ್ತರಿಗೆ ಪೂರಕ ಮಾಹಿತಿ ನೀಡುತ್ತಿದೆ ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಕಟೀಲು ದೇವಳದ ಆಡಳಿತಾಧಿಕಾರಿ ನಿಂಗಯ್ಯ ದೀಪ ಬೆಳಗಿಸುವ ಮೂಲಕ ಮಕ್ಕಳ ಧ್ವನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಟೀಲು ದೇವಳ ಅನುವಂಶಿಕ ಮೊಕ್ತೇಸರ ಕೆ.ವಾಸುದೇವ ಆಸ್ರಣ್ಣ ಆಶೀರ್ವಚನಗೈದರು. ಕಟೀಲು ದೇವಳ ಅರ್ಚಕರಾದ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತು ವೆಂಕಟರಮಣ ಆಸ್ರಣ್ಣ ಶುಭಾಶಂಸನೆಗೈದರು. ದ.ಕ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಉಪಾಧ್ಯಕ್ಷ ಪ್ರೊ.ಸಿ. ಉಪೇಂದ್ರ ಸೋಮಯಾಜಿ ಸಂದೇಶ ವಾಚಿಸಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ದರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರಾ, ಕೇರಳ ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್, ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಮಕ್ಕಳ ಸಾಹಿತ್ಯ ಸಂಗಮದ ಕಾರ್ಯದರ್ಶಿ ಬಿ.ಶ್ರೀನಿವಾಸ ರಾವ್ ಮತ್ತು ಸಾವಿತ್ರಿ ಎಸ್. ರಾವ್ ಅತಿಥಿಗಳಾಗಿದ್ದರು.
ದ.ಕ.. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಪ್ರೊ. ಜಯರಾಮ ಪೂಂಜ ಸ್ವಾಗತಿಸಿದರು. ಕಾರ್ಯದರ್ಶಿ ಬಿ.ಶ್ರೀನಿವಾಸ ರಾವ್ ವಂದಿಸಿದರು. ಸಾವಿತ್ರಿ ಎಸ್. ರಾವ್ ಪ್ರಸ್ತಾವನೆಗೈದರು. ಕಟೀಲು ಪ.ಪೂ ಕಾಲೇಜು ಉಪನ್ಯಾಸಕ ಗೋಪೀನಾಥ ಹೆಗ್ಡೆ ನಿರೂಪಿಸಿದರು.

ಆಕರ್ಷಕ ಮೆರವಣಿಗೆ:
ಉದ್ಘಾಟನಾ ಕಾರ್ಯಕ್ರಮದ ಮುನ್ನ ಅತಿಥಿಗಳು ಆಹ್ವಾನಿತ ಗಣ್ಯರು ಹಾಗೂ ವಿದ್ಯಾರ್ಥಿಗಳು ಶಾಲಾ ವಾಧ್ಯ ಗೋಷ್ಠಿಯೊಂದಿಗೆ ಮಕ್ಕಳ ಧ್ವನಿಯ ಅಧ್ಯಕ್ಷೆ ಶ್ರದ್ಧಾ ಎನ್. ಅವರನ್ನು ಸಾಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಸಮ್ಮೇಳನದ ಸಭಾಂಗಣಕ್ಕೆ ಕರೆ ತಂದರು.

5 ವರ್ಷದ ಬಾಲಕ ಪುತ್ತೂರು ಸಾತ್ವಿಕ್ ನಾಯಕ್ ವಿಶೇಷ ಜಾದೂ ಮೂಲಕ ಸಮ್ಮೆಳನದ ಉದ್ಘಾಟನಾ ಸಮಾರಂಭದ ಅತಿಥಿಗಳಿಗೆ ನೀಡಲಾಗುವ ಶಲ್ಯಗಳನ್ನು ಅನಾವರಣಗೊಳಿಸಿದರಲ್ಲದೆ ಹಾಗೂ ಕಟೀಲು ಶ್ರೀದೇವಿಯ ಭಾವಚಿತ್ರವನ್ನು ನಿರ್ವಾತದಿಂದ ಸೃಷ್ಟಿಸಿ ಅಚ್ಚರಿ ಮೂಡಿಸಿದರು.

2013 ರಲ್ಲಿ ತೆರೆ, ಪುಸ್ತಕ ಪ್ರಕಟಿಸಿದ ಶ್ರದ್ಧಾ ಎನ್ ಪೈವಳಿಕೆ, ನನಗೂ ಎರಡು ರೆಕ್ಕೆಗಳಿದ್ದರೆ ಪುಸ್ತಕ ಪ್ರಕಟಿಸಿದ ವಿನಯ ಕೆ ಪೆರ‍್ವ, ಕೋಗಿಲೆ ಹಾಡು, ಪ್ರಕಟಿಸಿದ ಶ್ರಾವ್ಯ ಕೊಳ್ನಾಡು ಹಾಗೂ ಅನನ್ಯ ಬೆಳ್ತಂಗಡಿ ಅವರನ್ನು ಮಕ್ಕಳ ಸಾಹಿತ್ಯ ಸಂಗಮದ ಗೌರವ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಗೌರವಧನ ಪ್ರಾಯೋಜಿಸಿ ವಿತರಿಸಿದರು.

Kinnigoli-08091404 Kinnigoli-08091405

Comments

comments

Comments are closed.

Read previous post:
Kinnigoli-08091403
ಕಿನ್ನಿಗೋಳಿ ಶಿಕ್ಷಕರ ದಿನಾಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಲಯನ್ಸ್ ಹಾಗೂ ಲಯನೆಸ್ ಕ್ಲಬ್‌ಗಳ ಆಶ್ರಯದಲ್ಲಿ ಶುಕ್ರವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಕರಾಟೆ ಶಿಕ್ಷಕ ಈಶ್ವರ್ ಕಟೀಲ್,...

Close