ಪ್ರಗತಿಪರ ಕೃಷಿಕ ಮೈಕಲ್ ರೊಡ್ರಿಗಸ್

ಯುವಜನತೆ ಕೃಷಿ ಚಟುವಟಿಕೆಗಳಿಂದ ದೂರಸರಿದು, ಆಧುನಿಕ ಕಾಲದ ನಗರ ಸಂಸ್ಕೃತಿಗೆ ಮನಸೋಲುತ್ತಿರದು ವಿಷಾದನೀಯ. ಮನೆಯ ಎದುರು ಮಲ್ಲಿಗೆ ಗಿಡ, ಹಿಂದುಗಡೆ ಬಳ್ಳಿಗಳಲ್ಲಿ ನೇತಾಡುತ್ತಿರುವ ಹೀರೆಕಾಯಿ,ಅಲ್ಲಲ್ಲಿ ಗೇರು ಸಸಿ ಅದನ್ನು ತಬ್ಬಿಕೊಡಿರುವ ಸೊರೆ ಕಾಯಿ ಬಳ್ಳಿ, ಹೀಗೆ ಹತ್ತು ಹಲವು ತರಕಾರಿ ಗಿಡಗಳು ಇದು ಉತ್ತರ ಕರ್ನಾಟಕದ ರೈತರ ಕಥೆಯಲ್ಲ ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿನ್ನಿಗೋಳಿ ಸಮೀಪದ ಕೊಲ್ಲೂರು ಗ್ರಾಮದ ಗ್ರಾಮಾಂತರ ಪ್ರದೇಶದಲ್ಲಿ ವಾಸವಾಗಿ ತಮ್ಮ ಅಲ್ಪ ಜಮೀನಿನಲ್ಲಿ ತೋಟಗಾರಿಕಾ ಕೃಷಿಯಲ್ಲಿ ಒಳ್ಳೆ ಪಸಲು ತೆಗೆಯುವ ಮೈಕಲ್ ರೊಡ್ರಿಗಸ್ ಎಂಬ ಯುವ ಕೃಷಿಕನ ಜೀವನ ಪದ್ದತಿ. ಅವರು ವಿದೇಶದಲ್ಲಿನ ಉದ್ಯೋಗ ತ್ಯಜಿಸಿ ಮಲ್ಲಿಗೆ ಕೃಷಿಯಲ್ಲಿ ಮಾಡಿದ ಸಾಧನೆ ಅನನ್ಯ. ಊರಿನ ಎಕರೆಗಟ್ಟಲೆ ಜಮೀನನ್ನು ಬಿಟ್ಟು ಬೊಂಬಾಯಿ ಅಥವಾ ವಿದೇಶಕ್ಕೆ ಹಾರುವ ಯುವಕರಿಗೆ ಆದರ್ಶ ಪ್ರಾಯವಾಗಿರುವ ಮೈಕಲ್ ಅವರ ಸಾಹಸಕ್ಕೆ ಮೆಚ್ಚಲೇ ಬೇಕು.

ಕೃಷಿಕರಾಗಿರುವ ಅವುಲಿನ್ ರೊಡ್ರಿಗಸ್ ಮತ್ತು ಎವುಲಿನ್ ರೊಡ್ರಿಗಸ್ ದಂಪತಿಯ ಒಂಬತ್ತು ಮಕ್ಕಳಲ್ಲಿ ಎಳನೇ ಮಗನಾದ ಮೈಕಲ್ ರೊಡ್ರಿಗಸ್ ಐ.ಟಿ.ಐ ವಿದ್ಯಾಭ್ಯಾಸ ಮುಗಿಸಿದ ನಂತರ ಹೊರದೇಶದಲ್ಲಿ ವೃತ್ತಿ ಜೀವನ ಆರಂಭಿಸಿದರು. ಕೃಷಿಯ ಬಗ್ಗೆ ಬಾಲ್ಯದಲ್ಲಿಯೇ ಗಿಡಗಳನ್ನು ಬೆಳೆಸುವುದರಲ್ಲಿ ಮೂಡಿ ಬಂದ ಆಸಕ್ತಿ ಅಲ್ಲದೆ ವಂಶಪಾರಂಪರ್ಯವಾಗಿ ಬಂದ ಬಳುವಳಿಯಿಂದಾಗಿ, ಸಹಜವಾಗಿ ಕೃಷಿ ಚಟುವಟಿಕೆಗಳನ್ನು ವೃತ್ತಿಯಿಂದ ಪ್ರವೃತ್ತಿಯಾಗಿ ಬಳಸಿಕೊಂಡರು.

ಸಾಧಿಸುವ ಚಲ ಇದ್ದರೆ ಎನ್ನನ್ನು ಸಾಧಿಸಬಹುದು, ಇದು ಕೇವಲ ಮಾತಿಗೆ ಸೀಮಿತವಾಗಿರದೆ ಸಾದನೆ ಮಾಡಿ ಯಶಸ್ಸು ಕಂಡ ಮೈಕಲ್ ಕಳೆದ 12ವರ್ಷಗಳ ಹಿಂದೆ ಕಿನ್ನಿಗೋಳಿ ಸಮೀಪದ ಕೊಲ್ಲೂರಿನ ತಮ್ಮ 1.76ಎಕ್ರೆ ಗುಡ್ಡೆಯಲ್ಲಿ ಮಲ್ಲಿಗೆ ಹಾಗೂ ಇತರ ತರಕಾರಿ ಹಾಗೂ ತೆಂಗು, ಗೇರು ಮಾವು ಗಿಡಗಳನ್ನು ಬೆಳೆಯುವ ಬಗ್ಗೆ ಚಿಂತನೆ ನಡೆಸಿದರು. ಅನಂತರ ಈ ಕುರಿತು ಜಿಲ್ಲೆಯಲ್ಲಿ ಹಾಗೂ ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳಿಂದ ಮಾರ್ಗದರ್ಶನ ಪಡೆದುಕೊಂಡರು. ತೆಂಗು ಬೆಳೆಯುವಲ್ಲಿಗೆ ತೆರಳಿ ಅಧ್ಯಯನ. ಕೃಷಿಯ ಮಹತ್ವವನ್ನು ಅರಿತರು. ಮೊದಲಿಗೆ ಸಾಂಪ್ರದಾಯಿಕ ವಿಧಾನದಲ್ಲಿ ಕೃಷಿಯನ್ನು ಆರಂಭಿಸಲಾಯಿತು. ತದನಂತರ ಅದರಲ್ಲಿ ಹಂತ ಹಂತವಾಗಿ ಹೊಸ ಪ್ರಯೋಗಗಳನ್ನು ಮಾಡುತ್ತಾ, ಕೃಷಿಯನ್ನು ಆಧುನೀಕರಣಗೊಳಿಸಿದರು. ಮಲ್ಲಿಗೆ ಕೃಷಿಗೆ ಸಂಬಂಧಿಸಿದ ಕಮ್ಮಟ, ಕಾರ್ಯಾಗಾರಗಳಲ್ಲಿ ಪಾಲ್ಗೊಂಡರಲ್ಲದೆ, ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳನ್ನು ಅಭ್ಯಸಿಸಿ, ವಿಜ್ಞಾನಿಗಳ ಸಲಹೆ, ಸ್ಥಳೀಯ ಕೃಷಿ ಅಧಿಕಾರಿಗಳ ಸಹಕಾರ ಬಳಸಿ ಅವುಗಳನ್ನು ತಮ್ಮ ಕೃಷಿ ಕಾರ್ಯದಲ್ಲಿ ಪ್ರಯೋಗಿಸಿ ಯಶಸ್ಸಿಯಾಗುತ್ತಿದ್ದಂತೆ, ಕೃಷಿಯನ್ನೇ ಪ್ರಮುಖ ವೃತ್ತಿಯನ್ನಾಗಿಸಿದರು.

ಸಾಧನೆ
ಕಳೆದ 12ವರ್ಷಗಳ ಹಿಂದೆ ಈ ಜಾಗದಲ್ಲಿ ಮನೆ ಕಟ್ಟಿದ ಮೈಖಲ್, ಮನೆ ನಿರ್ಮಾಣದ ಇಂಜೀನಿಯರ್ ಅವರ ಈ ಬರಡು ಗುಡ್ಡ ಪ್ರದೇಶದಲ್ಲಿ ಹೇಗೆ ಬೆಳೆ ಬೆಳೆಯಬಲ್ಲಿರಿ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಮಲ್ಲಿಗೆ ಕೃಷಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಮೈಕಲ್ ಕೆಲವೇ ವರ್ಷಗಳಲ್ಲಿ ಹಲವಾರು ಸಾಧನೆ ಮೆರೆದರು. ಅವರಿಗೆ ಸಾವಯವ ಗೊಬ್ಬರ ಬಳಕೆಯಿಂದ ಉತ್ತಮ ಇಳುವರಿ ದೊರೆಯಿತು. ಸುಮಾರು 42 ಮಲ್ಲಿಗೆ ಗಿಡಗಳನ್ನು ನೆಟ್ಟಿದ್ದು ಈಗ ವರ್ಷ ಒಂದರಲ್ಲಿ 25 ಸಾವಿರ ರೂಪಾಯಿ ವೆಚ್ಚ ಮಾಡಿ ಸುಮಾರು 2 ರಿಂದ 4  ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇವರ ಸಾಧನೆಯೆಂದರೆ ವರ್ಷದ ಎಲ್ಲಾ ತಿಂಗಳುಗಳಲ್ಲಿ ಮಲ್ಲಿಗೆ ಪಸಲು ಸಿಗುತ್ತಿರುವುದು ಅವರ ಹೆಗ್ಗಳಿಕೆ. ಗ್ರಾಮೀಣ ಪ್ರದೇಶ ಗಳಲ್ಲೂ ಕೃಷಿ ಕೂಲಿ ಕಾರರು ಅಲಭ್ಯ ವಾಗಿ ರುವ ಇಂದಿನ ದಿನ ಗಳಲ್ಲಿ ಕಾರ್ಮಿಕ ರನ್ನು ಅವಲಂಬಿಸದೆಯೂ ಯಶಸ್ವಿ ಕೃಷಿಕ ರಾಗಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಗಿಡಗಳನ್ನು ನಾವು ಮಕ್ಕಳಂತೆ ಪಾಲನೆ ಮಾಡಬೇಕು. ಕಾಲ ಕಾಲಕ್ಕೆ ನೆಟ್ಟು ಬೆಳೆಸಿದ ಗಿಡಗಳಿಗೂ ಆರೈಕೆ ಮಾಡಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂಬುದು ಅವರ ಪ್ರತಿಕ್ರಿಯೆ. ಜಾಗದ ಸುತ್ತಲೂ ಗೋಡೆ ಆವರಣದ ಕಟ್ಟುವ ಬದಲು ಅನನಾಸು ಗಿಡಗಳನ್ನು ನೆಟ್ಟು ಅದರಲ್ಲೂ ಇಳುವರಿ ಪಡೆಯುತ್ತಿರುವುದು ಅವರ ನೈಪುಣ್ಯ.

ಒಂದೇ ಬೆಳೆಯನ್ನು ಬೆಳೆಯುವ ಬದಲು ಮಿಶ್ರ ಬೆಳೆಗೆ ಹೆಚ್ಚಿನ ಆದ್ಯತೆ ಕೊಟ್ಟು 5 ಸೆಂಟ್ಸ್ ಜಾಗದಲ್ಲಿ ಕೇವಲ ಹೈಬಿಡ್ ತಳಿಯ ಹೀರೆ ಗಿಡಗಳನ್ನು ಬೆಳೆದು ಒಂದು ಸೀಸನ್ ನಲ್ಲಿ 20 ಸಾವಿರ ರೂಗಳನ್ನು ಗಳಿಸುತ್ತಿದ್ದಾರೆ. ಮನೆಯಲ್ಲಿ ಹೂವಿನ ತೋಟ ಬೆಳೆಯದೆ ಸಂಪಾದನೆ ನೀಡುವಂತ ಅಬ್ಬಮಲ್ಲಿಗೆ ಬೆಳೆದು 25  ಸಾವಿರ ಗಳಿಸುತ್ತಿದ್ದಾರೆ. ಹೀಗೆ ತೆಂಗಿನ ಮರದ ಬುಡದಲ್ಲಿ ಕರಿ ಮೆಣಸು, ತೊಂಡೆಕಾಯಿ, ಸುವರ್ಣ ಗೆಡ್ಡೆ, ಉಳ್ಳಾಲ ತಳಿಯ ಗೇರು ಗಿಡಗಳ ಬುಡದಲ್ಲಿ ಸೊರೆ ಕಾಯಿ ಬೆಳೆ, ನಡು ನಡುವೆ ದನಗಳಿಗಾಗಿ ಹುಲ್ಲನ್ನು ಬೆಳೆದು, ಹೀಗೆ ತಮ್ಮ ಭೂಮಿಯಲ್ಲಿ ಸ್ವಲ್ಪವೂ ಜಾಗ ಬಿಡದೆ ಬೋರು ಗುಡ್ಡೆಯಂತಿದ್ದ ಜಾಗವನ್ನು ಹಚ್ಚ ಹಸಿರಾಗಿಸಿದರು, ಈಗ ಪ್ರತಿಯೊಂದು ತರಕಾರಿ ಗಿಡಗಳಲ್ಲಿ ಸಾವಿರಾರು ರೂಪಾಯಿ ಆದಾಯ ಗಳಿಸುತ್ತಾರೆ.
ಈ ಮಳೆಗಾಲದಲ್ಲಿ ಗೋಣಿ ಚೀಲದಲ್ಲಿ ಶುಂಠಿ ಹಾಗೂ ಬೆಂಡೆ ಗಿಡಗಳನ್ನು ನೆಟ್ಟು ಉತ್ತಮ ಗೊಬ್ಬರ ಮಣ್ಣು ನೀಡಿ ಪ್ರಾಯೋಗಿಕವಾಗಿ ಯಾವ ರೀತಿಯಲ್ಲಿ ಫಸಲು ಬರಬಹುದು ಎಂದು ಕಾದು ನೋಡುತ್ತಿದ್ದಾರೆ.
ಗಿಡ ಅಥವಾ ಬೀಜಗಳನ್ನು ಆಯ್ಕೆ ಮಾಡುವಾಗ ಒಳ್ಳೆಯ ತಳಿಯ ಬಗ್ಗೆ ವಿಚಾರ ವಿರ್ಮಶೆ ಮಾಡಿ ಅಲ್ಪ ಅವಧಿಯಲ್ಲಿ ಉತ್ತಮ ಪಸಲು ಗಳಿಸುತ್ತಾರೆ ತಾವು ಮಾಡುವ ಕೆಲಸಕ್ಕೆ ಪತ್ನಿಜೂಲಿಯಾನಾ, ಮಕ್ಕಳಾದ ಮೆಲಿಷಾ ಮತ್ತು ಮನೀಷ್ ಶ್ರದ್ದೆಯಿಂದ ಅವರಿಗೆ ಸಹಕರಿಸುತ್ತಿದ್ದಾರೆ. ಅವರು ಬೆಳೆಸಿದ ತರಕಾರಿಗೆ ಸ್ಥಳೀಯವಾಗಿ ಉತ್ತಮ ಬೇಡಿಕೆ ಇದೆ. ಇನ್ನೊಂದು ವಿಶೇಷವೆಂದರೆ ಇವರು ಯಾವುದೇ ರಾಸಾಯನಿಕಗಳನ್ನು ಬಳಸದೆ ಸಾವಯವ ರೀತಿಯ ಹಟ್ಟಿ ಗೊಬ್ಬರ ಬಳಸುತ್ತಾರೆ ಮತ್ತು ಹೆಚ್ಚಿನ ಫಸಲಿನ ವೇಳೆಯಾದ ಫೆಬ್ರವರಿ ರಿಂದ ಮೇವರೆಗೆ ಕೂಲಿಯಾಳುಗಳನ್ನು ಬಳಸಿ ಇತರ ತಿಂಗಳಲ್ಲಿ ಮನೆಯವರು ಸೇರಿ ಕೃಷಿ ಕೆಲಸ ಮಾಡುತ್ತಿರುತ್ತಾರೆ.

ಕಡಿಮೆ ಬಂಡವಾಳ, ಅಧಿಕ ಆದಾಯ
ಹೆಚ್ಚು ಪ್ರಮಾಣದ ನೀರು ಗಿಡಗಳ ಬೆಳವಣಿಗೆಗೆ ಉತ್ತಮವಲ್ಲ. ಆದರೆ ಬೇಸಗೆಯಲ್ಲಿ ಸ್ವಲ್ಪ ಹೆಚ್ಚಿಸುವುದು ಅಗತ್ಯ. ನೆಟ್ಟ ಗಿಡಗಳಲ್ಲಿ ಕೀಟಗಳು ಕಂಡುಬಂದ ತಕ್ಷಣ ಅವುಗಳನ್ನು ನಾಶಪಡಿಸಿ. ಕೀಟನಾಶಕಗಳನ್ನು ಬಳಸುವ ಬದಲಿಗೆ ನಿಯಮಿತವಾಗಿ ಗಿಡಗಳಿಗೆ ಬೇವಿನ ಎಣ್ಣೆಯನ್ನು ಸಿಂಪಡಿಸುತ್ತಿರುವುದು ಉತ್ತಮ. ಇಂತಹ ತೋಟಗಾರಿಕೆ ವಿಧಾನಗಳಲ್ಲಿ ಕಡಿಮೆ ಬಂಡವಾಳ ವಿನಿಯೋಗಿಸಬೇಕಾಗಿರುವ ಕಾರಣ ಮಾರುಕಟ್ಟೆಯಿಂದ ಗೊಬ್ಬರ ಖರೀದಿಸಿ ತರುವುದು ದುಬಾರಿ ಹಾಗಾಗಿ ನಾವು ನೆಟ್ಟ ಗಿಡಗಳಿಂದಲೇ ಲಭ್ಯವಾಗುವ ತ್ಯಾಜ್ಯಗಳನ್ನು ಸರಿಯಾದ ರೀತಿಯಲ್ಲಿ ಕಾಂಪೋಸ್ಟ್ ಗೊಬ್ಬರವನ್ನಾಗಿಸಿ ಅವುಗಳನ್ನೇ ಬಳಸಿದಲ್ಲಿ ಲಾಭವೂ ಅಧಿಕ ಇಳುವರಿಯೂ ಅಧಿಕ ಎಂಬುದು ಅವರ ಯೋಚನೆ.

ತಾನು ಬೆಳೆಯುವ ಎಲ್ಲ ಗಿಡ ಮರಗಳಿಗೂ, ತೋಟದಲ್ಲಿ ಸಿಗುವ ಕಸ, ನಿರುಪಯುಕ್ತ ವಸ್ತುಗಳನ್ನು ಬಳಸಿ ತಯಾರಿಸಿದ ಗೊಬ್ಬರ ಹಾಗೂ ಜೈವಿಕ ಗೊಬ್ಬರಕ್ಕೆ ಸೇರಿಸಿ ಗೊಬ್ಬರದ ಪೌಷ್ಟಿಕಾಂಶವನ್ನು ಹೆಚ್ಚಿಸಿ ಬಳಸುವುದು ಇವರು ಕಂಡುಕೊಂಡ ಉಪಾಯ. ತಮ್ಮಲ್ಲಿಗೆ ಬಂದ ಆಸಕ್ತ ಕೃಷಿಕರಿಗೆ ಮಾಹಿತಿ ನೀಡುವವರಲ್ಲದೆ, ಹೀಗೆ ಮುಂದೆಯೂ ಕೃಷಿಯಲ್ಲಿ ಇನ್ನಷ್ಟು ಸಾಧನೆ ಮಾಡುವ ಉತ್ಕಟ ಬಯಕೆ.

ಸಾವಯವ ಕೃಷಿಯಲ್ಲಿ ಸಂತೃಪ್ತ ಜೀವನ

ಮಾರಕಟ್ಟೆಯಲ್ಲಿ ಗಗನಮುಖೀಯಾಗಿರುವ ತರಕಾರಿ ಬೆಲೆಗಳು, ರಾಸಾಯನಿಕ ಗೊಬ್ಬರಗಳಿಂದ ಬೆಳೆಸಲಾಗಿರುವ ತರಕಾರಿಗಳ ಸೇವನೆಯಿಂದ ದೇಹದ ಮೇಲೆ ಉಂಟಾಗುವ ದುಷ್ಪರಿಣಾಮಗಳು, ಹೆಚ್ಚಿನ ಬೆಲೆ ತೆತ್ತರೂ ಹೊಟ್ಟೆ ತುಂಬ ತಿನ್ನಲು ಸಿಗದಿರುವ ನಮ್ಮ ಇಷ್ಟದ ತರಕಾರಿ ಪದಾರ್ಥಗಳು. ಹೀಗೆ20ಕ್ಕೂ ಹೆಚ್ಚು ಬಗೆಯ ಸೊಪ್ಪು, ತರಕಾರಿ ಗಿಡಗಳನ್ನು ಬೆಳೆದು ಅವುಗಳಿಂದ ದೊರಕುವ ಸಮೃದ್ಧ ಫಸಲನ್ನು ಸಂತೃಪ್ತಿಯಿಂದ ಉಣ್ಣುತ್ತಿದ್ದಾರೆ. ಆ ಆಸಕ್ತಿಯೇ ಇಂದು ಮೈಕಲ್ ರೊಡ್ರಿಗಸ್ ಅವರನ್ನು “ಪ್ರಗತಿಪರ ಗ್ರಾಮೀಣ ಕೃಷಿಕ’ರನ್ನಾಗಿ ರೂಪಿಸಿದೆ.

 10 ವರ್ಷ ಸೌದಿ ದೇಶದಲ್ಲಿ ನೆಲೆಸಿ ದಿನ ಪೂರ್ತಿ ದುಡಿದು ಉತ್ತಮ ಸಂಭಾವನೆ ಪಡೆಯುತ್ತಿದ್ದರೂ ಯಾವೂದೇ ಮಾನಸಿಕ ನೆಮ್ಮದಿ ಇರುತ್ತಿರಲ್ಲಿಲ್ಲ ಆದರೆ ಊರಿಗೆ ಬಂದು ನೆಲೆಸಿದ ಮೇಲೆ ಆರ್ಥಿಕವಾಗಿ ಅಲ್ಲದೆ ಮಾನಸಿಕವಾಗಿ ನೆಮ್ಮದಿ ಕಂಡುಕೊಂಡಿದ್ದೇನೆ ಅಲ್ಲದೆ ಶರೀರದ ಆರೋಗ್ಯವು ಉತ್ಕ್ರಷ್ಟವಾಗಿದೆ. ಕೃಷಿಯಲ್ಲಿ ಲಾಭವಿದೆ. ಆದರೆ ನಾವು ಲಾಭಕ್ಕೋಸ್ಕರವೇ ಕೃಷಿ ಮಾಡಬಾರದು. ಕೃಷಿಯಲ್ಲಿ ಪಡೆಯುವ ಫಸಲು ನಮ್ಮ ದಿನ ನಿತ್ಯದ ಜೀವನಕ್ಕೆ ಲಾಭದಾಯಕವಾಗಿದೆ. ಅನೇಕರು ಅಧಿಕ ಬೆಳೆ ಬರಬೇಕೆಂದು ವಿಷಯುಕ್ತ ರಾಸಾಯನಿಕಗಳನ್ನು ಸಿಂಪಡಿಸುತ್ತಾರೆ. ಅದರಿಂದ ಮಣ್ಣಿಗೆ ಹಾನಿಯಾಗುತ್ತದೆ. ನಮಗೆ ಕೃಷಿಯಿಂದ ಖುಷಿ ಸಿಗಬೇಕಾದರೆ ಮನಸ್ಸಿಗೆ ಖುಷಿ ಕೊಡುವ ಕೃಷಿ ಕೆಲಸದಿಂದ ಬರುವ ಪ್ರತಿಫಲ ನಮಗೆ ಹೇಳಲು ಅಸಾಧ್ಯವಾದ ಸಂತಸ ದೊರೆಯುತ್ತದೆ

– ಮೈಕಲ್ ರೊಡ್ರಿಗಸ್

 

Kinnigoli26091401 Kinnigoli26091402 Kinnigoli26091403 Kinnigoli26091404

Comments

comments

Comments are closed.

Read previous post:
Kinnigoli-25091404
ವಿಜಯಾ ಬ್ಯಾಂಕ್ ರೈತರ ಸೌಕರ್ಯಗಳಿಗೆ ಸಹಕಾರಿ

ಮೂಲ್ಕಿ: ಗ್ರಾಮೀಣ ಪ್ರದೇಶದ ರೈತರ ಮೂಲ ಭೂತ ಸೌಕರ್ಯಗಳಿಗೆ ಸಹಕಾರಿಯಾಗಿ ನಗರ ಪ್ರದೇಶದ ಸಾರ್ವಜನಿಕರ ಆರ್ಥಿಕ ಶಕ್ತಿಯಾಗಿರುವ ವಿಜಯಾ ಬ್ಯಾಂಕ್ ಪ್ರವರ್ತಿತ ಮೂಲ್ಕಿ ವಿಜಯಾ ರೈತರ ಸೇವಾ...

Close