ಮೂಲ್ಕಿ ಬಸ್ಸು ನಿಲ್ದಾಣದಲ್ಲಿ ಬಿಕ್ಷುಕರ ಕಾಟ

ಮೂಲ್ಕಿ: ಬಸ್ಸು ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥರು , ಬಿಕ್ಷುಕರ ಕಾಟ ಮಿತಿಮೀರುತ್ತಿದ್ದು ಇದರಿಂದ ಪ್ರಯಾಣಿಕರು, ಸಾರ್ವಜನಿಕರು ತೀವ್ರ ತೊಂದರೆಗೀಡಾಗಿದ್ದಾರೆ.ದಿನಕ್ಕೊಂದು ಮಾನಸಿಕ ಅಸ್ವಸ್ಥರು  ಹೊಸದಾಗಿ ಬಸ್ಸು ನಿಲ್ದಾಣಕ್ಕೆ ಸೇರ್ಪಡೆಯಾಗುತ್ತಿದ್ದು ಇದರಿಂದ ಬದಿಯ ಅಂಗಡಿ ಸಹಿತ ಬಸ್ಸು ನಿಲ್ದಾಣದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ  ಪುಕ್ಕಟೆ ಮನರಂಜನೆ ಕಾಣಸಿಗುತ್ತಿದೆ.

ಬಸ್ಸು ನಿಲ್ದಾಣಕ್ಕೆ ವಾಸ್ತು ದೋಷ?   ಮೂಲ್ಕಿ ಬಸ್ಸು ನಿಲ್ದಾಣಕ್ಕೆ ಗ್ರಹಚಾರ ಬಡಿದಂತೆ ಇದೆ ಎಂದು ಹೇಳಿದರೆ ತಪ್ಪಾಗಲಾರದು, ಕಾರಣ ಬಸ್ಸು ನಿಲ್ಲುವುದು ಒಂದು ಕಡೆಯಾದರೆ ಗಾವುದ ದೂರದಲ್ಲಿ ಬಸ್ಸು ನಿಲ್ದಾಣವಿದ್ದು ಬಸ್ಸು ನಿಲ್ದಾಣದಲ್ಲಿ ಇರುವುದೇ ಗೋಚರಿಸುತ್ತಿಲ್ಲ. ಒಳ್ಳೆಯ ಸುವ್ಯವಸ್ಥಿತ ಬಸ್ಸು ನಿಲ್ದಾಣವಿದ್ದರೂ ಪ್ರಯಾಣಿಕರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಸ್ಸು ನಿಲ್ದಾಣಕ್ಕೆ ವಾಸ್ತು ದೋಷ ಉಂಟಾಗಿದ್ದು ಇದರಿಂದಲೇ ನಿಲ್ದಾಣ ಪ್ರಯಾಣಿಕರಿಂದ ತುಂಬಿರುವ ಬದಲು ಬಿಕ್ಷುಕ, ಮಾನಸಿಕ ಅಸ್ವಸ್ಥರು  ತುಂಬಿರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಕಳೆದ ಹಲವಾರು ತಿಂಗಳಿನಿಂದ ಬಸ್ಸು ನಿಲ್ದಾಣದಲ್ಲಿ ಇದೀಗ ಮೂವರು ಬಿಕ್ಷುಕರು, ಖಾಯಂ ಆಗಿದ್ದು ಒಬ್ಬರು ದೇವರ ಪೂಜೆ ಮಾಡಿಕೊಂಡು ಬೊಬ್ಬೆ ಹಾಕುತ್ತಾ ಸ್ಥಳೀಯರಿಗೆ ಮನರಂಜನೆ ಕೊಡುತ್ತಿದ್ದರೆ ಮಹಿಳಾ ಪ್ರಯಾಣಿಕರು ರೇಜಿಗೆ ಸಿಲುಕುತ್ತಿದ್ದಾರೆ. ಇವರಿಂದ ಆಗುವ ತೊಂದರೆ ತಪ್ಪಿಸಲು ಮಹಿಳೆಯರು ಕೆಲವರು ಬಿಸಿಲಿನಲ್ಲೇ ಬಸ್ಸಿಗಾಗಿ ಕಾಯುತ್ತಾರೆ ಅಥವಾ ಬದಿಯ ಅಂಗಡಿಯ ಜಗಲಿಯಲ್ಲಿ ನಿಂತಿರುತ್ತಾರೆ. ಇಷ್ಟು ಮಾತ್ರವಲ್ಲದೆ ಈ ಬಿಕ್ಷುಕರು, ಮಾನಸಿಕ ಅಸ್ವಸ್ಥರು  ಅಂಗಡಿಗಳ ಬಾಗಿಲಿನಲ್ಲೇ ಗಲೀಜು ಮಾಡುತ್ತಿದ್ದಾರೆ. ಮಾನಸಿಕ ಅಸ್ವಸ್ಥರ ಜತೆ ಮಾತನಾಡಲು ಹೋದರೆ ನಾವೇ ಹುಚ್ಚರಾಗುವ ಪ್ರಮೇಯ ಬರುತ್ತದೆ ಇದಕ್ಕೊಂದು ಅಂತ್ಯ ಹಾಡಲೇ ಬೇಕು ಎಂದು ಸ್ಥಳೀಯ ಮೊಬೈಲು ಅಂಗಡಿಯ ನಾಗರಾಜ ಹೇಳುತ್ತಾರೆ.

ಪೋಲೀಸರ ಅಸಹಾಯಕತೆ    ಮಾನಸಿಕ ಅಸ್ವಸ್ಥರು ಅತೀ ಹುಚ್ಚಾಟಿಕೆ ಕಂಡು ಸ್ಥಳೀಯರು ಗುರುವಾರ ಮೂಲ್ಕಿ ಪೋಲೀಸರಿಗೆ ದೂರು ನೀಡಿದ್ದು ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೆ ವಿನ: ಏನೂ ಮಾಡಲಾಗಲಿಲ್ಲ.ಪೋಲೀಸರು ಬಂದ ಕೂಡಲೇ ಮಾನಸಿಕ ಅಸ್ವಸ್ಥಯೊಬ್ಬಳು ಮಹಿಳಾ ಪೋಲೀಸೊಬ್ಬಳಿಗೆ ದೇವರ ಪೂಜೆಯ ಪ್ರಸಾದ ಕೊಡಲು ಬಂದ ಘಟನೆಯೂ ನಡೆಯಿತು. ಸ್ಥಳೀಯ ಸಮಾಜಸೇವಕ ದಲಿತ ಸಂಘರ್ಷ ಸಮಿತಿಯ ವಿಶುಕುಮಾರ ಪತ್ರಿಕೆಯೊಂದಿಗೆ ಮಾತನಾಡಿ ಪಚ್ಚನಾಡಿ ಬಿಕ್ಷುಕರ ಪುನರ್ವಸತಿ ಕೇಂದ್ರದ ಶಾರದ ಎಂಬವರ ಜತೆ ಬಿಕ್ಷುಕರ, ಮಾನಸಿಕ ಅಸ್ವಸ್ಥರ ಸ್ಥಳಾಂತರದ ಬಗ್ಗೆ ಮಾತನಾಡಿದ್ದೇವೆ ಶುಕ್ರವಾರ ಬಂದು ತೆರವುಗೊಳಿಸುವ ಎಂದು ಭರವಸೆ ನೀಡಿದ್ದಾರೆ. ಇದು ಕಾರ‍್ಯಗತವಾಗದಿದ್ದರೆ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ದೂರು ನೀಡಲಾಗುವುದು ಎಂದು ಪತ್ರಿಕೆಗೆ ತಿಳಿಸಿದ್ದಾರೆ.

Puneethkrishna

Kinnigoli-13101404

Comments

comments

Comments are closed.

Read previous post:
Kinnigoli-13101402
ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವುದು ಆದ್ಯ ಕರ್ತವ್ಯ

ಮೂಲ್ಕಿ: ಉತ್ತಮ ಶಿಕ್ಷಣ ನೀಡಿ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಜೀವನದಲ್ಲಿ ಉನ್ನತಿಗಳಿಸಲು ಸಹಕರಿಸಿದ ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವುದು ಆದ್ಯ ಕರ್ತವ್ಯ ಎಂದು ಮೂಲ್ಕಿ ಸೀಮೆ ಅರಸರಾದ...

Close