ಕಂಬಳ ಸಮಿತಿ ಸುದ್ದಿಗೋಷ್ಠಿ

ಕಿನ್ನಿಗೋಳಿ : ಅವಿಭಜಿತ ದಕ್ಷಿಣಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯಾದ್ಯಂತ ಜಾನಪದ ಸಂಸ್ಕ್ರತಿ, ಧಾರ್ಮಿಕ ಇತಿಹಾಸವುಳ್ಳ ಜಾನಪದ ಕ್ರೀಡೆ ಕಂಬಳವನ್ನು ಉಳಿಸಲು ಕಾನೂನು ಸಮರಕ್ಕೆ ಸಿದ್ದರಾಗಿದ್ದೇವೆ ಅಲ್ಲದೆ ನ. 29 ಶನಿವಾರ ಮಂಗಳೂರಿನಲ್ಲಿ ಬೃಹತ್ ಶಾಂತಿಯುತ ಪ್ರತಿಭಟನಾ ಜಾಥಾ ನಡೆಯಲಿದೆ ಎಂದು ಐಕಳ ಕಂಬಳ ಸಮಿತಿಯ ಗೌರವಾಧ್ಯಕ್ಷ ಡಾ. ಬೆಳಪು ದೇವಿ ಪ್ರಸಾದ್ ಶೆಟ್ಟಿ ಐಕಳಬಾವ ಹೇಳಿದರು.
ಬುಧವಾರ ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿ ಮತ್ತು ಐಕಳ ಕಂಬಳ ಸಮಿತಿ ವತಿಯಿಂದ ಕಿನ್ನಿಗೋಳಿ ಯುಗಪುರುಷದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಸುಮಾರು 900 ವರ್ಷಗಳ ಇತಿಹಾಸ ಇರುವ ಕಂಬಳವನ್ನು ತುಳುನಾಡಿನಲ್ಲಿ ನಿಷೇಧಿಸುತ್ತಿರುವುದು ವಿಷಾದನೀಯ. ಮುಂದಿನ ದಿನಗಳಲ್ಲಿ ಕಂಬಳವನ್ನು ನಡೆಸುತ್ತೇವೆ. ತಮಿಳುನಾಡಿನ ಜಲ್ಲಿ ಕಟ್ಟು ಕ್ರೀಡೆಯಲ್ಲಿ ಕೋಣಗಳು ಹಾಗೂ ಜನರಿಗಾಗುವ ಜೀವ ಹಾನಿಯ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಾಲಯವು ನಿಷೇಧಾಜ್ಞೆ ಹೊರಡಿಸಿದ್ದು ಅದರಲ್ಲಿ ಕೋಣಗಳನ್ನು ಬಿಟ್ಟರೆ ಕರಾವಳಿಯ ಕಂಬಳಗಳ ಪ್ರಸ್ತಾವ ಇಲ್ಲದಿರುವುದರಿಂದ ಕರ್ನಾಟಕ ರಾಜ್ಯದ ಶಾಸಕರು, ಸಚಿವರು ಸಂಸದರು ತ್ವರಿತವಾಗಿ ರಾಜ್ಯ ಸರ್ಕಾರದ ಮೂಲಕ ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಕೆಲಸ ಮಾಡಬೇಕಾಗಿದೆ. ನಗರ ವಾಸಿ ಹಾಗೂ ಉದ್ಯಮಿಗಳಾದ ರಾಜ್ಯ ಪ್ರಾಣಿ ದಯಾ ಸಮಿತಿಯವರಿಗೆ ಗ್ರಾಮೀಣ ಬದುಕಿನ ಅರಿವಿಲ್ಲ ಇಂತಹವರನ್ನು ನೇಮಿಸಿರುವ ಸರಕಾರದ ಕ್ರಮ ಖಂಡನೀಯ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನದಟ್ಟುವಂತೆ ಜಿಲ್ಲೆಯಾದ್ಯಂತದ ಸಂಘ ಸಂಸ್ಥೆಗಳು ಒಟ್ಟುಗೂಡಿ ಬೃಹತ್ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು. ಎಂದರು.
ಐಕಳ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಚಿತ್ತರಂಜನ್ ಭಂಡಾರಿ ಮಾತನಾಡಿ, ಕಳೆದ ಮೇ ತಿಂಗಳಲ್ಲಿ ಬಂದಿರುವ ಆದೇಶದ ಬಗ್ಗೆ ಅಧಿಕಾರಿಗಳು ಆರು ತಿಂಗಳ ಬಳಿಕ ಕಂಬಳ ದಿನ ನಿಗದಿಯಾಗಿ ಕೇವಲ 2 ದಿನಗಳಿರುವಾಗ ರಾಜ್ಯ ಸರ್ಕಾರ, ಜನ ಪ್ರತಿನಿಧಿಗಳಿಗೆ ತಿಳಿಸದೆಯೇ ಕಂಬಳಕ್ಕೆ ನಿಷೇಧ ಹೇರಿದ ಹಿಂದೆ ಕೈವಾಡದ ಗುಮಾನಿಯಿದೆ. ರಾಜ್ಯದಲ್ಲಿ ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಜನರಿಗೆ, ಪ್ರಾಣಿಗಳಿಗೆ, ಜಲಚರ ಜೀವಿಗಳಿಗೆ ಮಾರಕವಾಗಿರುವ ಕೈಗಾರಿಕೆಗಳು ಹಾಗೂ ವರ್ಷಗಳು ಕಳೆದರೂ ಆಗದಂತ ಹದಗೆಟ್ಟರಸ್ತೆಗಳಿವೆ ಇದರಿಂದಾಗಿ ಸಹಸ್ರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಇದರ ಬಗ್ಗೆ ಪ್ರಾಣಿ ದಯಾ ಸಮಿತಿಯವರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಡಿ.ವಿ.ಸದಾನಂದ ಗೌಡರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭ ಕಂಬಳ ಕ್ರೀಡೆಗೆ ಸರ್ಕಾರ 1 ಕೋಟಿ ಅನುದಾನ ಮೀಸಲಿರಿಸಿತ್ತು ಬಳಿಕ ಕಂಬಳ ಉಳಿಕೆಗೆ ಶ್ರಮಿಸಿದ ಕೋಣಗಳ ಯಜಮಾನರಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿದ್ದು. ಸರಕಾರಿ ಪ್ರಾಯೋಜಿತ ಕಂಬಳವು ನಡೆಯುತ್ತಿದ್ದು ಸರಕಾರ ನಿಷೇಧದ ಬಗ್ಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಕಂಬಳ ಕ್ರೀಡೆಯು ವರ್ಷದಿಂದ ವರ್ಷಕ್ಕೆ ಆಧುನಿಕತೆ ವೈಜ್ಞಾನಿಕ ರೀತಿಯಲ್ಲಿ ಬದಲಾವಣೆಗೊಳ್ಳುತಿದೆ. ಮಾನ್ಯ ನ್ಯಾಯಾಲಯವು ಸೂಕ್ತ ಬದಲಾವಣೆಗಳನ್ನು ನಿರ್ದೇಶಿಸಿದಲ್ಲಿ ಅದನ್ನು ಪಾಲಿಸಲು ಬದ್ದರಿದ್ದೇವೆ ಎಂದ ಅವರು ಯಾವ ಕಾರಣಕ್ಕೂ ಕಂಬಳ ನಿಲ್ಲಿಸುವ ಪ್ರಶ್ನೆ ಇಲ್ಲ. ಎಲ್ಲಾ ರಾಜಕೀಯ ಹಾಗೂ ರಾಜಕೀಯೇತರ ಸಂಘ ಸಂಸ್ಥೆಗಳು, ವಿದ್ಯಾಥಿ ಸಂಘಟನೆಗಳು ಬೆಂಬಲಿಸಿದ್ದು ಸರಕಾರ ಮತ್ತು ಜನಪ್ರತಿನಿಧಿಗಳ ಕಣ್ಣು ತೆರೆಸಲು ಜಾನಪದ ಕ್ರೀಡೆಗೆ ಯಾವುದೇ ಆತಂಕ ಬರದಂತೆ ಶಾಂತಿಯುತ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಅಧ್ಯಕ್ಷ ರಾಮಚಂದ್ರ ನಾಯ್ಕ್ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಮೂಲ್ಕಿ ಅರಸು ಕಂಬಳ ಸಮಿತಿಯ ಪಯ್ಯೊಟ್ಟು ಸದಾಶಿವ ಸಾಲ್ಯಾನ್, ಮೂಲ್ಕಿ ಬಂಟರ ಸಂಘದ ಸಂತೋಷ ಕುಮಾರ್ ಹೆಗ್ಡೆ , ಕಿನ್ನಿಗೋಳಿ ಬಸ್ಸು ಮಾಲಿಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ , ಯುಗಪುರುಷದ ಭುವನಾಭಿರಾಮ ಉಡುಪ, ಐಕಳ ಕಂಬಳ ಸಮಿತಿಯ ಸ್ವರಾಜ್ ಶೆಟ್ಟಿ , ಪ್ರಕಾಶ್ ಶೆಟ್ಟಿ , ಜಯಪಾಲ ಶೆಟ್ಟಿ ,ಕೃಷ್ಣ ಮಾರ್ಲ, ಲೋಕೇಶ್ ಶೆಟ್ಟಿ ಮುಚ್ಚೂರು, ಲೀಲಾಧರ ಶೆಟ್ಟಿ , ಸಂಜೀವ ಶೆಟ್ಟಿ ಸ್ಥಳಂತ ಗುತ್ತು, ಶಶಿಧರ ಐಕಳ ಸುಧಾಕರ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-27111403 Kinnigoli-27111404

Comments

comments

Comments are closed.

Read previous post:
Kinnigoli-27111412 - Copy
ಕವನ ಸಂಕಲನ ಕೃತಿ ಬಿಡುಗಡೆ

ಮೂಲ್ಕಿ: ಶಿಕ್ಷಕರು ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವ ಕಾರ್ಯ ಮಾಡಿದಲ್ಲಿ ಸಾಹಿತ್ಯದ ಬೆಳವಣಿಗೆ ಸಾಧ್ಯವೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು...

Close