ಪಿಡಿಓಯವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಕಿನ್ನಿಗೋಳಿ: ಸುಮಾರು ವರ್ಷಗಳಿಂದ ಸ್ವಚ್ಚತೆಯಲ್ಲಿ ನಿರ್ಲಕ್ಷ ಭಾವನೆಗಳನ್ನು ತಳೆಯುತ್ತಿದ್ದ ಪಂಚಾಯಿತಿ ಆಡಳಿತ ಹಾಗೂ ಹಾರಿಕೆ ಉತ್ತರಗಳು, ಮೂಲ ಭೂತ ವ್ಯವಸ್ಥೆಗಳನ್ನು ಆಗ್ರಹಿಸಿದಾಗ ನಿರ್ಲಕ್ಷ ಹಾಗೂ ಏಕಪಕ್ಷೀಯವಾಗಿ ಉತ್ತರಿಸುತ್ತಿದ್ದ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜಾರನ್ನು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ಕಿನ್ನಿಗೋಳಿ ಪಂಚಾಯಿತಿಯ ದ್ವಿತೀಯ ಹಂತದ ಗ್ರಾಮ ಸಭೆಯಲ್ಲಿ ನಡೆಯಿತು.

ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡು ಸಭೆಗಳಲ್ಲಿ ಹೇಳುವ ಸಮಸ್ಯೆಗಳಿಗೆ ಗ್ರಾಮ ಸಭೆಯಲ್ಲಿ ಸರಿಯಾದ ಪರಿಹಾರ ನೀಡದೆ. ತಕರಾರು ಅಥವಾ ಬೇಡಿಕೆಯ ಅರ್ಜಿಗಳು ದೂರುಗಳು ಬಂದಲ್ಲಿ ಬಂದೇ ಇಲ್ಲ ಎಂದು ವಾದಿಸಿ ಪಂಚಾಯಿತಿ ಆಡಳಿತದ ಗಮನಕ್ಕೆ ತಾರದೆ ಜನ ಸಾಮಾನ್ಯರಿಗೆ ಏನೆನೋ ಕಾನೂನು ತೊಡಕಿನ ಸಬೂಬು ನೀಡಿ ವಂಚಿಸುತ್ತಾರೆ ಮಾತ್ರವಲ್ಲ ಅಧ್ಯಕ್ಷರು ಮತ್ತು ಸದಸ್ಯರನ್ನು ತಬ್ಬಿಬ್ಬರನ್ನಾಗಿಸುವ ಮನೋಭಾವವನ್ನು ಪಿಡಿಒ ಹೊಂದಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಮಸ್ಥರು ದೂರು ಹಾಗೂ ಅಹವಾಲುಗಳ ನಕಲು ಪ್ರತಿಗಳನ್ನು ಗ್ರಾಮಸ್ಥರು ಸಭೆಯಲ್ಲಿ ನೀಡಿದಾಗ ಪಿಡಿಓ ಸಮೇತ ಎಲ್ಲರೂ ನಿರುತ್ತರಾಗಿ ನಿಂತರು.
ಇತ್ತೀಚೆಗೆ ಪದ್ಮನೂರಿನ ಬಳಿ ದೇಶದ ಪ್ರದಾನಿಯವರ ಕರೆಯಂತೆ ಸುಮಾರು ೨೦೦ಕ್ಕೂ ಅಧಿಕ ಗ್ರಾಮಸ್ಥರು ಸೇರಿ ಸಂಪೂರ್ಣ ಸ್ವಚ್ಚಗೊಳಿಸಿ ಕಿನ್ನಿಗೋಳಿ ಪಂಚಾಯಿತಿಯನ್ನು ಶೇಖರಣೆ ಯಾದ ಕಸದ ರಾಶಿಗಳನ್ನು ತೆಗೆಯಲು ಮನವಿ ನೀಡಿದ್ದರೂ ಹಲವು ಸಮಯದ ಬಳಿಕ ಕಸವಿಲೇವಾರಿ ಮಾಡದೆ ಪಂಚಾಯತಿ ನಿರ್ಲಕ್ಷದಿಂದ ವರ್ತಿಸಿದೆ. ಗ್ರಾಮ ಸಭೆಯಲ್ಲಿ ನಿರ್ಣಯಿಸಿದ ಮತ್ತು ಗ್ರಾಮಸ್ಥರು ಆಗ್ರಹಿಸಿದ ವಿಷಯಗಳಿಗೆ ಕವಡೆ ಕಾಸಿನ ಬೆಲೆ ಇಲ್ಲವಾದ್ದಲ್ಲಿ ಗ್ರಾಮ ಸಭೆ ಯಾವ ಪುರುಷಾರ್ಥಕ್ಕೆ ಎಂದು ಗ್ರಾಮಸ್ಥ ಜೋಸೆಪ್ ಕ್ವಾಡ್ರಸ್ ಆಕ್ಷೇಪಿಸಿದರು.
ತಾಳಿಪ್ಪಾಡಿ ಗ್ರಾಮದ ಗಡಿ ಭಾಗದ ಜನರು ಕರ ಮತ್ತು ವಿವಿಧ ಸೆಸ್ಸುಗಳನ್ನು ಪಾವತಿ ಮಾಡುವುದು ಕಿನ್ನಿಗೋಳಿ ಗ್ರಾಮ ಪಂಚಾಯತಿಗಾದರೂ ಮಳೆಗಾಲದಲ್ಲಿ ತೋಡು ಸರಿಪಡಿಸಲು ಮನವಿ ನೀಡಿದರೆ ಕಿಲ್ಪಾಡಿ ಗ್ರಾಮ ಪಂಚಾಯತಿಗೆ ಮನವಿ ನೀಡಿ ಎಂದು ಸಾಗಹಾಕುತ್ತಿರುವುದು ಯಾವ ನ್ಯಾಯ ಎಂದು ಗ್ರಾಮಸ್ಥರು ಆಕ್ಷೇಪಿಸಿದರು.

ಕಿನ್ನಿಗೋಳಿ ಬಸ್ಸು ನಿಲ್ದಾಣ ಹಾಗೂ ಪೇಟೆಯ ಅವ್ಯವಸ್ಥಿತ ಪಾರ್ಕಿಂಗ್, ಹೊಸ ಕಾವೇರಿ ಬಳಿ ಸಾರ್ವಜನಿಕರ ವಿರೋಧವನ್ನು ಲೆಕ್ಕಿಸದೆ ಮದ್ರಸ ಕಟ್ಟಡ ವಿಸ್ತರಣೆಗೆ ಅವಕಾಶ ನೀಡಿದ್ದು, ಕುಡಿಯುವ ನೀರಿನ ಸಮಸ್ಯೆ, ದಾರಿ ದೀಪ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು.
ಕಿನ್ನಿಗೋಳಿ ಪಂಚಾಯತಿ ಅಧ್ಯಕ್ಷೆ ಶ್ಯಾಮಲಾ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಶಿಶು ಅಭಿವೃದ್ಧಿ ಅಧಿಕಾರಿ ಶ್ಯಾಮಲಾ.ಕೆ ನೋಡಲ್ ಅಧಿಕಾರಿಯಾಗಿದ್ದರು.
ಉಪಾಧ್ಯಕ್ಷ ಜಾನ್ಸನ್ ಜೊರೊಮ್ ಡಿಸೋಜಾ, ತಾ.ಪಂ. ರಾಜು ಕುಂದರ್, ಇಂಜಿನಿಯರ್ ವಿಶ್ವನಾಥ, ಶಿಕ್ಷಣ ಇಲಾಖೆಯ ಜಗದೀಶ ನಾವಡ, ಸಹಾಯಕ ಕೃಷಿ ಅಧಿಕಾರಿ ಎಂ.ಬಾಲಕೃಷ್ಣ, ಮೆಸ್ಕಾಂ ಅಧಿಕಾರಿ ಕೇಶವ ನಾಯ್ಕ, ಕೆಮ್ರಾಲ್ ಆರೋಗ್ಯಾಧಿಕಾರಿ ಡಾ.ಭಾಸ್ಕರ್ ಕೋಟ್ಯಾನ್, ಮೂಲ್ಕಿ ಠಾಣಾ ಎಎಸ್‌ಐ ಮೋಹನ್, ಗ್ರಾಮ ಕರಣಿಕ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-29011504

Comments

comments

Comments are closed.

Read previous post:
Kinnigoli-28011504
ಬಪ್ಪನಾಡು ಯಕ್ಷಗಾನ ಕಲಾವಿದರಿಗೆ ಸನ್ಮಾನ

ಕಿನ್ನಿಗೋಳಿ: ಕಟೀಲು ಮಲ್ಲಿಗೆಅಂಗಡಿ ಭ್ರಾಮರೀ ಫ್ರೆಂಡ್ಸ್ ಕ್ಲಬ್ ವತಿಯಿಂದ ನಡೆದ ಯಕ್ಷಗಾನ ಸಂದರ್ಭ ಬಪ್ಪನಾಡು ಯಕ್ಷಗಾನ ಮೇಳದ ಕಲಾವಿದರಾದ ಸುಂದರ ಬಂಗಾಡಿ, ರಾಧಾಕೃಷ್ಣ ನಾವಡರನ್ನು ಸನ್ಮಾನಿಸಲಾಯಿತು. ಈ ಸಂದರ್ಭ...

Close