ನಿರಂಜನ ಸ್ವಾಮೀಜಿ ಅನ್ನಪೂರ್ಣೇಶ್ವರಿಯೊಂದಿಗೆ ಲೀನ

ಬಜ್ಪೆ: ಆಧ್ಯಾತ್ಮ ಸಾಧನೆಯ ಜೊತೆಗೆ, ಅನ್ನಪೂರ್ಣೆಯ ಸಾಧಕನಾಗಿ ಅನುಗ್ರಹಿತ ಅನ್ನದಾನಿ, ವಿದ್ಯಾದಾನಿ ಎಂದು ಕರೆಸಿಕೊಂಡು ಜನನುರಾಗಿಯಾಗಿದ್ದ ಬಜ್ಪೆ ಸಮೀಪದ ಸುಂಕದಕಟ್ಟೆಯ ಅನ್ನಪೂರ್ಣೇಶ್ವರಿ ದೇವಸ್ಥಾನ ಹಾಗೂ ಮುಂಬೈ ಮಹಾಲಕ್ಷ್ಮಿ ಸಾಥ್‌ರಸ್ತೆಯಲ್ಲಿನ ಅನ್ನಪೂರ್ಣೇಶ್ವರಿ ದೇವಸ್ಥಾನ ನಿರ್ಮಿಸಿ ಆಧ್ಯಾತ್ಮ ಪ್ರಸಾರ ಮಾಡುತ್ತಿದ್ದ ಶ್ರೀ ಶ್ರೀ ಶ್ರೀ ನಿರಂಜನ ಸ್ವಾಮೀಜಿಯವರು ಶುಕ್ರವಾರ ಸಂಜೆ ನಾಲ್ಕರ ಸುಮಾರಿಗೆ ಅನ್ನಪೂರ್ಣೆಯೊಂದಿಗೆ ಲೀನವಾದರು. ಇವರಿಗೆ 84 ವರ್ಷ ವಯಸ್ಸಾಗಿತ್ತು.
ಗುರುವಾರ ಮುಂಜಾನೆ ಮುಂಬೈ ಸಾಥ್‌ರಸ್ತೆಯ ಅನ್ನಪೂರ್ಣೇಶ್ವರಿ ದೇವಳದ ತನ್ನ ನಿವಾಸದಲ್ಲಿ ಶ್ರೀಗಳು ಹೃದಯಸ್ತಂನಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದರು. ಮೊನ್ನೆ ದೇವಳದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕಿಟ್ಟ ಬಳಿಕ ಅವರ ಪಾರ್ಥೀವ ಶರೀರವನ್ನು ವಿಮಾನದ ಮೂಲಕ ಬಜ್ಪೆ ವಿಮಾನ ನಿಲ್ದಾಣಕ್ಕೆ ಕರೆತರಲಾಗಿತ್ತು.
ಶ್ರೀಗಳ ಶರೀರವನ್ನು ದ.ಕ. ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂ, ಡಿಸಿಪಿ ವಿಷ್ಣುವರ್ಧನ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಎದುರುಗೊಂಡು ಬಳಿಕ ಅಂಬ್ಯುಲೆನ್ಸ್‌ನಲ್ಲಿ ಕುಳ್ಳಿರಿಸಿ ಪುಷ್ಪಾರ್ಚನೆಗೈಯ್ಯುವ ಮೂಲಕ ಸುಂಕದಕಟ್ಟೆಗೆ ಕರೆದೊಯ್ಯಲಾಯಿತು.

ಸ್ವಾಮೀಜಿ ಕಂಡೊಡನೆ ಗಳ ಗಳ ಅತ್ತ ಭಕ್ತರು:
ಸ್ವಾಮೀಜಿಯವರ ಪಾರ್ಥೀವ ಶರೀರವನ್ನು ದೇವಸ್ಥಾನದ ಆವರಣದಲ್ಲಿರುವ ಅವರ ಸ್ವಗೃಹಕ್ಕೆ ಕರೆದೊಯ್ಯುತ್ತಿದ್ದಂತೆ ಅವರ ಭಕ್ತರು ತಂದೆ ಕಳೆದುಕೊಂಡ ಮಗುವಿನಂತೆ ಗಳಗಳ ಅಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಒಂದರ್ಥದಲ್ಲಿ ನೂಕು ನುಗ್ಗಲು ಉಂಟುಮಾಡುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.
ಶ್ರೀಗಳ ಶರೀರವನ್ನು ಅವರ ನಿವಾಸಲ್ಲಿಟ್ಟು ಸಕಲ ವೈದಿಕ ಪೂಜೆ ಸಲ್ಲಿಸಿದ ಬಳಿಕ ತುಪ್ಪ ಹಾಗೂ ಕ್ಷೀರದಲ್ಲಿ ಸ್ನಾನ ಮಾಡಿಸಿ, ಮಂಗಳಕರವಾದ ಉಡುಪು, ಶಿರವಸ್ತ್ರ ಧರಿಸಿ ವೇದಘೋಷ, ವಾದುಘೋಷದೊಂದಿಗೆ ಸಮಾಧಿ ಸ್ಥಳಕ್ಕೆ ಕರೆದೊಯ್ಯಲಾಯಿತು.
ದೇವಸ್ಥಾನದ ವಾಸ್ತುಪ್ರಕಾರ ದೇವಳದ ಎಡಪಾರ್ಶ್ವದಲ್ಲಿ ಸಿದ್ಧಪಡಿಸಿದ್ದ ಸಮಾಧಿ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಿನ್ನೆ ಬೆಳಗ್ಗಿನಿಂದ ಸಂಜೆಯ ತನಕ ಸುಮಾರು ಹತ್ತು ಸಾವಿರಕ್ಕಿಂತಲೂ ಅಧಿಕ ಭಕ್ತರು ತುಳಸಿ ಮಾಲೆ ಹಾಗೂ ಮಲ್ಲಿಗೆ ಮಾಲೆಯನ್ನು ಶ್ರೀಗಳಿಗೆ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಜಾತಿ, ಮತ ಬೇಧವಿಲ್ಲದೆ ಅಂತಿಮ ದರ್ಶನ ಭಾಗ್ಯವನ್ನು ಪಡೆದಿದ್ದು ವಿಶೇಷವಾಗಿತ್ತು.

ಸಮಾಧಿ ಸ್ಥಿತಿಯಲ್ಲಿ ಪಂಚಭೂತಗಳಲ್ಲಿ ಲೀನ:
ಸ್ವಾಮೀಜಿಗಳು ಮೃತಪಟ್ಟರೆ ಅವರ ದೇಹವನ್ನು ಸಮಾಧಿಯ ಮೂಲಕ ಪಂಚಭೂತಗಳಲ್ಲಿ ಲೀನಗೊಳಿಸಲಾಗುತ್ತದೆ. ದೇವಸ್ಥಾನದ ಎಡಪಾರ್ಶ್ವದಲ್ಲಿ ವಾಸ್ತು ಪ್ರಕಾರ ಬೃಹತ್ ಬೈದಾನದಲ್ಲಿ ಸಮಾಧಿ ಸ್ಥಳವನ್ನು ನಿರ್ಮಿಸಲಾಗಿತ್ತು.
9.5 ಅಡಿ ಆಳ, 5.5 ಅಡಿ ಸುತ್ತಳತೆ ಇರುವ ಕಲ್ಲಿನ ಆವರಣ ಗೋಡೆ ನಿರ್ಮಿಸಿದ ಗುಂಡಿಯೊಂದನ್ನು ನಿರ್ಮಿಸಲಾಗಿತ್ತು. ಮಹೂರ್ತದಂತೆ ಘಳಿಗೆ ನೋಡಿಕೊಂಡು ಶ್ರೀಗಳ ಶರೀರವನ್ನು ಸುಮಾರು ಸಂಜೆ ನಾಲ್ಕರ ಸಮಾಧಿ ಸ್ಥಳಕ್ಕೆ ಕರೆದೊಕೊಂಡ ಬರಲಾಯಿತು. ಈ ವೇಳೆ ವೇಘೋಷ, ಮಂತ್ರಘೋಷ, ವಾದ್ಯಘೋಷಗಳು ಮೊಳಗಿದವು.
ಕೊಲ್ಯದ ರಮಾನಂದ ಶ್ರೀಗಳ ನಿರ್ದೇಶನದಂತೆ ಕುಡುಪು ನರಸಿಂಹ ತಂತ್ರಿಗಳ ಮಾರ್ಗದರ್ಶನದಲ್ಲಿ ಅವರ ಸಮಾಧಿಕಾರ್ಯ ನಡೆದವು.
ಶ್ರೀಗಳ ಪಾರ್ಥೀವ ಶರೀರವನ್ನು ಪದ್ಮಾಸನ ಭಂಗಿಯಲ್ಲಿ ಮಣೆಯಲ್ಲಿ ಕುಳ್ಳಿರಿಸಿ ಐದು ಬಗೆ ಪೂಜೆ ಸಲ್ಲಿಸಲಾಯಿತು. ಆರತಿ, ಕೊಳಿಗೆ ಸೌಟು, ದಾರಾಪಾತ್ರ, ಘಂಟೆ, ದೀಪ, ಎಣ್ಣೆ ಹಾಗೂ ಮುಖದ ಭಾಗದಲ್ಲಿ ಶಂಖವನ್ನಿಡಲಾಯಿತು. ಬಳಿಕ ಆರು ಬಗೆಯ ವಸ್ತುಗಳಾದ ತುಳಸಿ, ಬಿಲ್ವಪತ್ರ, ವಿಭೂತಿ, ಕರ್ಪೂರ, ಪುಷ್ಪ ಹಾಗೂ ಮರಳನ್ನು ಉಪಯೋಗಿಸಲಾಯಿತು.
ವಿಭೂತಿಯನ್ನು ಶ್ರೀಗಳ ದೇಹಕ್ಕೆ ಮೆತ್ತಿಸಿಕೊಂಡು ಬಳಿಕ ಉಳಿದ ಬಗೆಯ ವಸ್ತುಗಳನ್ನು ಸ್ಫುರಿಸಲಾಯಿತು. ವೇದ, ಮಂತ್ರಗಳ ಪಠಣೆಯೊಂದಿಗೆ ಒಂದೊಂದೇ ವಸ್ತುಗಳನ್ನು ಹಾಕಿಕೊಂಡು ಚಪ್ಪಡಿಕಲ್ಲುಗಳನ್ನು ಮುಚ್ಚಿಕೊಂಡು ಶ್ರೀಗಳನ್ನು ಸಮಾಧಿ ಮಾಡಲಾಯಿತು. ಸಮಾಧಿಗೆ ಮಣ್ಣು ಉಪಯೋಗಿಸುವುದಿಲ್ಲ. ಸಮಾಧಿ ಸ್ಥಳ ಸ್ಮಾರಕವಾಗುವ ಸಾಧ್ಯತೆ ಇದೆ.
ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಒಡಿಯೂರು ಸ್ವಾಮೀಜಿ, ವಿಶ್ವವಿಖ್ಯಾತಾನಂದ ಸ್ವಾಮೀಜಿ ಮುಂತಾದವರು ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡರು. ಜೊತೆಗೆ ರಮಾನಾಥ ರೈ, ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಹಿಂದೂ ಸಂಘಟನೆಗಳ ನಾನಾ ಪ್ರಮುಖರು ಉಪಸ್ಥಿತರಿದ್ದರು.

Nishanth Shetty

Bajpe-22051508 Bajpe-22051515 Bajpe-22051509 Bajpe-22051510 Bajpe-22051511 Bajpe-22051512 Bajpe-22051513 Bajpe-22051514

Comments

comments

Comments are closed.

Read previous post:
ಕೇಂದ್ರ ಸರ್ಕಾರದ ಕೊಡುಗೆ

ಮೂಲ್ಕಿ: ಗೃಹರಕ್ಷಕದಳ ಮೂಲ್ಕಿ ಘಟಕಕ್ಕೆ ಕೇಂದ್ರ ಸರ್ಕಾರದ ಕೊಡುಗೆಯಾಗಿ ಪ್ರಕೃತಿ ವಿಕೋಪ ಹಾಗೂ ತುರ್ತು ಪರಿಸ್ಥಿತಿ ಸಂದರ್ಭ ಉಪಯೋಗಕ್ಕಾಗಿ ಸುಮಾರು 2.5 ಲಕ್ಷ ವೆಚ್ಚದ ಆಸ್ಕಾ ವಿದ್ಯುತ್...

Close