ಕಸದಿಂದ ರಸ : ಪಲ್ಲೆಕುದ್ರುವಿನಲ್ಲಿ ಬಣ್ಣದ ಹೂದೋಟ

ಕಿನ್ನಿಗೋಳಿ: ಬಣ್ಣಗಳನ್ನು ಮೈದೆಳೆದು ಮದುಮಗಳಂತೆ ಸಿಂಗಾರಗೊಂಡಿರುವ ಹಳೆ ಮಣ್ಣಿನ ಪಾತ್ರೆಗಳು, ಮನೆಯ ಹೂದೋಟದಲ್ಲಿ ಹೂವುಗಳ ಮಧ್ಯೆ ಕಾಣುತ್ತಿರುವ ಬಣ್ಣ ಬಣ್ಣದ ಕೋಳಿ ಮೊಟ್ಟೆಗಳು, ವಿವಿಧ ತರದ ನೀರಿನ ಬಾಟಲ್‌ಗಳಲ್ಲಿ ರಚಿಸಿರುವ ಬಗೆ ಬಗೆಯ ಹೂಗಳು, ನಿಪುಣ ಕಲಾವಿದರ ಕೈಯಲ್ಲಿ ಕಲೆಯ ಕಲ್ಲನೆ ಹೇಗಿರಬಹುದು ಎಂಬುದಕ್ಕೆ ಪಲ್ಲೆಕುದ್ರು ಸುಮತಿಯವರೇ ಸಾಕ್ಷಿ.

ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಗ್ರಾಮದ ಪಲ್ಲೆಕುದ್ರು ಎಂಬ ಹಳ್ಳಿ ಪರಿಸರದಲ್ಲಿ ವಾಸಿಸುತ್ತಿರುವ ಪಲ್ಲೆಕುದ್ರು ಸುಮತಿಯವರಿಗೆ ಎಳವೆಯಲ್ಲಿಯೇ ಬಣ್ಣ ಮತ್ತು ವಠಾರ ಶುಚಿಯಾಗಿಡುವುದೇ ಒಂದು ಹವ್ಯಾಸವಾಗಿ ಬೆಳೆದು ಬಿಟ್ಟಿದೆ.
ಕಸದಿಂದ ರಸ ಎಂಬಂತೆ ಅನೇಕ ಕಲಾಕೃತಿಯನ್ನು ರಚಿಸಿ ಈಗಿನ ಯುವ ಜನರನ್ನು ನಾಚಿಸುವಂತೆ ಕೋಳಿ ಮೊಟ್ಟೆ, ಹಳೆಯ ಬಾಟಲ್ ಗಳು, ಹತ್ತಿಯ ಕೋಡುಗಳು, ಒಣಗಿದ ಹಳೆಯ ಮರ, ಹಳೆಯ ಮಣ್ಣಿನ ಪಾತ್ರೆಗಳು, ಹಳೆಯ ಹಂಚು ಹೀಗೆ ನಿರುಪಯೋಗಿ ವಸ್ತುಗಳು ಇವರ ಕೈಯಿಂದ ಬಣ್ಣ ಬಳಿಸಲ್ಪಟ್ಟು ಹೊಸತನ ಕಂಡುಕೊಳ್ಳುತ್ತಿದೆ.
ಹಳೆಯ ಒಣಗಿದ ಪಾರಿಜಾತ ಮರದ ಬೊಡ್ಡೆಗೆ ಬಣ್ಣ ಬಳಿದಾಗ ಅದು ಪ್ರಾಚ್ಯ ವಸ್ತು ಅಂಗಡಿಗಳಲ್ಲಿ ಕಂಡು ಬರುವಂತಹ ಕಾಫಿ ಮರದ ಬೊಡ್ಡೆಯಂತೆ ಕಂಡು ಬರುತ್ತಿದೆ. ಬಳಸಿದ ಖಾಲಿ ಮೊಟ್ಟೆಗೆ ಬೇರೆ ಬೇರೆ ಬಣ್ಣ ಬಳಿದು ಹೂವಿನಂತೆ ಕಂಡರೆ, ಕೆಲವು ಹೂವಿನ ಮಧ್ಯೆ ನಿಜ ಹೂವಿನಂತೆ ಕಂಗೊಳಿಸುತ್ತಿದೆ, ದೊಡ್ದ ಜಾತಿಯ ಎಲೆಗಳನ್ನು ಒಣಗಿಸಿ ಅದಕ್ಕೆ ಹಸಿರು ಬಣ್ಣ ಬಳಿದು ಹಳೆಯ ಮರಕ್ಕೆ ಅಂಟಿಸಿದಾಗ ಜೀವಂತ ಮರದಂತೆ ಕಂಡು ಬರುತ್ತಿದೆ. ಹಳೆಯ ಹಂಚುಗಳಿಗೆ ಬೇರೆ ಬೇರೆ ಬಣ್ಣ ಬಳಿದು ಸರದಿಯಲ್ಲಿ ಇಟ್ಟಿದ್ದು, ನೋಡಲು ಅತ್ಯಂತ ಆಕರ್ಷಣೀಯವಾಗಿದೆ. ಹಳೆಯ ಮಣ್ಣಿನ ಪಾತ್ರೆಗಳು ಬಣ್ಣಗಳಿಂದ ತುಂಬಿದ್ದು ಕೃಷ್ಣಜನ್ಮಾಷ್ಟಮಿಯ ಮೊಸರು ಕುಡಿಕೆಗೆ ತಯಾರಾದ ಪಾತ್ರೆಗಳಂತೆ ಕಂಡು ಬರುತ್ತದೆ, ಹೊಲ ಗದ್ದೆಗಳ ಹುಲ್ಲುಗಳನ್ನು ಮನೆಯ ಅಂಗಳದಲ್ಲಿ ಹುಲ್ಲಿನ ಹಾಸಿನಂತೆ ಬೆಳೆಸಿದ್ದು ಎಂತಹವರನ್ನು ಮಂತ್ರಮುಗ್ಧರನ್ನಾಗಿಸಿದೆ. ಪರಿಸರದಲ್ಲಿ ಸಿಗುವ ವಿವಿಧ ಬಗೆಯ ವಸ್ತುಗಳು ಹಾಗೂ ಹುಲ್ಲುಗಳಿಂದ ಮಾಡಿರುವ ಬುಟ್ಟಿಗಳು ಕಪಾಟಿನಲ್ಲಿನ ಅಲಂಕಾರಿಕ ವಸ್ತುಗಳಾಗಿವೆ. ಮನೆಯ ಒಳಗೂ ಅನೇಕ ಕಲಾಕೃತಿಗಳು ಜೀವಂತಿಕೆಯನ್ನು ಪಡಕೊಂಡಿದೆ. ಈ ಎಲ್ಲಾ ಕಲಾಕೃತಿಗಳನ್ನು ಸಹನೆ ತಾಳ್ಮೆ ಶ್ರದ್ಧೆಯಿಂದ ಏರು ಹರೆಯದ 74 ವರ್ಷದ ಸುಮತಿ ಶೆಟ್ಟಿಯವರು ಬಣ್ಣ ಬಳಿದಿದ್ದಾರೆ ಎಂದರೆ ಎಲ್ಲರಿಗೂ ಸೋಜಿಗವೆನಿಸದೆ ಇರದು.
ಸುಮತಿ ಶೆಟ್ಟಿ ಅವರಿಗೆ ಮೂರು ಮಕ್ಕಳು. ಮೂವರೂ ಮುಂಬಯಿ ನಿವಾಸಿಗಲಾಗಿದ್ದಾರೆ. ಆದರೆ ಸುಮತಿಯವರಿಗೆ ಹಳ್ಳಿ ಪ್ರದೇಶವೆಂದರೆ ತುಂಬಾ ಇಷ್ಟವಾಗಿದ್ದು ಸಮಯ ಸಿಕ್ಕಾಗೆಲ್ಲ ಊರಿಗೆ ಬಂದು ಇಂತಹ ಕೆಲಸ ಮಾಡುವಲ್ಲಿ ಆತ್ಮ ಸಂತೋಷ ಪಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಕಲಾಕೃತಿಗಳ ಬಗ್ಗೆ ಕಲ್ಪನೆ ಹಾಗೂ ಹವ್ಯಾಸಗಳನ್ನು ಹೊಂದಿದ್ದು, ವಿವಿಧ ಕಡೆಗಳಲ್ಲಿ ನೋಡಿದ್ದನ್ನು ತನ್ನ ಕಲ್ಪನೆಯ ಮೂಲಕ ವಸ್ತುವಿಗೆ ರೂಪ ನೈಜತೆ ಬಗ್ಗೆ ಒತ್ತುನೀಡಿ ಕಲಾಕೃತಿಗಳನ್ನು ರಚಿಸುತ್ತಾರೆ, ತನಗೆ ಅನಾರೋಗ್ಯ ಕಾಡುತ್ತಿದ್ದರೂ ಕಲಾಕೃತಿ ಮತ್ತು ಮನೆಯ ಮುಂದಿನ ಅಂಗಳ ಪರಿಸರ ಸ್ವಚ್ಚವಾಗಿಡುವುದನ್ನು ಮಾತ್ರ ಮರೆಯುವುದಿಲ್ಲ.
ಹಲವು ಯಕ್ಷಗಾನ ಭಾಗವತಿಕೆಯ ಹಾಡುಗಳು ಕಂಠಪಾಠದಂತೆ ನಿರರ್ಗಳವಾಗಿ ಛಂದೋಬದ್ಧವಾಗಿ ಹೇಳುವುದು ಇವರ ಹಿರಿಮೆ. ವಿಶಿಷ್ಟತೆಯನ್ನು ಹೊಂದಿರುವ ದಾಖಲೆಗಳು, ಲೇಖನಗಳನ್ನು ಹಳೆಯ ಪುಸ್ತಕಗಳಲ್ಲಿ ಅಂಟಿಸಿ ಸಂಗ್ರಹಿಸುವ ಇವರ ಹವ್ಯಾಸಗಳ ಸಾಧನೆ ಒಬ್ಬ ಮಾದರಿ ಮಹಿಳೆಯಂತಿದೆ.

ಯುವ ಪೀಳಿಗೆ ಇಂತಹ ಖರ್ಚು ವೆಚ್ಚಯಿರದಿರುವ ಹವ್ಯಾಸವನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡರೆ ಸಮಯದ ಸದ್ಬಳಕೆ, ಏಕಾಗ್ರತೆ, ಶ್ರದ್ಧೆ ಹಾಗೂ ಮನೋವಿಕಾಸದ ದಾರಿದೀಪವಾಗಬಲ್ಲುದು.
ಪಲ್ಲೆಕುದ್ರು ಸುಮತಿ ಶೆಟ್ಟಿ

Kinnigoli-09061501 Kinnigoli-09061502 Kinnigoli-09061503 Kinnigoli-09061504

Comments

comments

Comments are closed.

Read previous post:
Mulki-08061505
ಸ್ವಚ್ಚತಾ ಅಭಿಯಾನ

ಮುಲ್ಕಿ: ಪರಿಸರವನ್ನು ಸ್ವಚ್ಚವಾಗಿಡುವ ಮೂಲಕ ಆರೋಗ್ಯಪೂರ್ಣವಾದ ವಾತಾವರಣ ಮೂಡಿಸಲು ಸಾಧ್ಯವಿದ್ದು ಸರ್ಕಾರಿ ಸೊತ್ತುಗಳನ್ನು ನಮ್ಮ ಸ್ವಂತದಂತೆ ಕಾಪಾಡಿಕೊಳ್ಳುವ ಅಗತ್ಯವಿದ್ದು ಮಕ್ಕಳಲ್ಲಿ ಈ ಬಗ್ಗೆ ಜಾಗ್ರತಿ ಮೂಡಿಸುವ ಕಾರ್ಯ ಮಾಡಬೇಕೆಂದು...

Close