ಭಾರತ ಭತ್ತದ ತಳಿಗಳ ಕಣಜ

ಕಿನ್ನಿಗೋಳಿ: ಭಾರತ ಭತ್ತದ ತಳಿಗಳ ಕಣಜ. ಹಳ್ಳಿಯ ಜೀವನ ಮೈಗೂಡಿಸಿದ ರೈತರು ಭತ್ತದ ಕೃಷಿ ಮತ್ತು ಸಂಸ್ಕೃತಿಯನ್ನು ಪೋಷಿಸುತ್ತಾ ಬಂದಿದ್ದಾರೆ. ಆಯಾ ಪ್ರದೇಶ, ವಾತಾವರಣ, ಆಹಾರ ಪದ್ಧತಿಗೆ ಸೂಕ್ತವಾದ ವಿವಿಧ ಬಗೆಯ ತಳಿಗಳು ರೈತರಿಂದ ಅಭಿವೃದ್ಧಿಗೊಂಡು ಬೆಳೆಯಲ್ಪಡುತ್ತಿವೆ.
ಅಕ್ಕಿಗೊಂದು, ಅವಲಕ್ಕಿಗೊಂದು, ಕುಚ್ಚಲಕ್ಕಿಗೊಂದು, ತಂಬಿಟ್ಟಿಗೊಂದು, ರೊಟ್ಟಿಗೊಂದು, ಕಜ್ಜಾಯಕ್ಕೊಂದು, ಬಿರಿಯಾನಿಗೊಂದು, ಬಾಣಂತಿಯರಿಗೊಂದು ಹಾಗೆ ವಿವಿಧ ಬಳಕೆಗೂ ತರೆಹವಾರಿ ತಳಿಗಳು ಭಾರತದಲ್ಲಿ ಕಾಣಸಿಗುತ್ತದೆ. ನಾವು ಇವತ್ತು ಗದ್ದೆಯೊಂದಿಗೆ ಸಂಸ್ಕೃತಿಗಳನ್ನು ದೂರ ಮಾಡುತ್ತಾ ಬರುತ್ತಿದ್ದೇವೆ. ಜನಪದೀಯ ಪಾಡ್ದನ ಓಬೇಲೆ ಹಾಡುಗಳು ಕಣ್ಮರೆ ಆಗುತ್ತಿವೆ. ವಾಣಿಜ್ಯ ಬೆಳೆಗಳು ಹೆಚ್ಚಾದಾಗ ಭತ್ತದ ಬೇಸಾಯ ಕಡಿಮೆಯಾಗುತ್ತಿದೆ.

ಆಧುನಿಕ ತಂತ್ರಜ್ಞಾನಕ್ಕೆ ಮಾರುಹೋಗಿ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಕಡೆಗಣಿಸುತ್ತಿರುವ ಸಂಧರ್ಭದಲ್ಲಿ ಪೆನ್ ಪುಸ್ತಕ, ಮೊಬೈಲ್, ಕಂಪ್ಯೂಟರ್ ಎಂದು ಗದ್ದೆ ತೋಟದ ಕಡೆ ಮುಖ ಹಾಕದ ವಿದ್ಯಾರ್ಥಿಗಳು ಕಿನ್ನಿಗೋಳಿ ಸಮೀಪದ ಐಕಳ ಪಟ್ಟೆ ಜಾರಂದಾಯ ದೈವಸ್ಥಾನದ ಬಳಿಯ ಉಜ್ಜು ಪೂಜಾರಿಯವರ ಗದ್ದೆಯಲ್ಲಿ ಐಕಳ ಪೊಂಪೈ ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ನಾಟಿ ಕೆಲಸ ಗೊತ್ತಿಲ್ಲದ್ದಿದ್ದರೂ ಅತೀ ಉತ್ಸಾಹದಿಂದ ಭತ್ತದ ನಾಟಿ ಕೆಲಸ ಮಾಡಿದ್ದಾರೆ. ಊರಿನ ನುರಿತ ಕೃಷಿಕರು ಮತ್ತು ಶಿಕ್ಷಕರು ನಾಟಿಯ ಬಗ್ಗೆ ಎಳೆ ಎಳೆಯಾಗಿ ವಿದ್ಯಾರ್ಥಿಗಳಿಗೆ ವಿವರಿಸಿ ತಾವೂ ಅವರ ಜೊತೆ ನಾಟಿ ಮಾಡಿ ಗದ್ದೆಯಲ್ಲಿ ಹೇಳುವ ಜಾನಪದ ಕವಿತಾ ರೂಪದ ಪಾಡ್ದನ ಹಾಡುತಿದ್ದರು. ಭತ್ತ ಬೇಸಾಯದಲ್ಲಿ ಪರಿಣಿತಿ ಹೊಂದಿರುವ ಮಹಿಳೆಯರು ಓಬೇಲೆ ಹಾಡುಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳನ್ನು ಅಲಿಖಿತ ಜಾನಪದ ಸಂಸ್ಕ್ರತಿಯ ಕಂಠ ಪಾಠದಂತೆ ತುಳು ಜ್ಞಾನ ಭಂಡಾರವನ್ನು ಮಕ್ಕಳಿಗೆ ತಿಳಿಯಪಡಿಸಿ ಹುರಿದುಂಬಿಸಿದಾಗ ಅವಕ್ಕಾಗಿ ನೋಡುವ ಪರಿಸ್ಥಿತಿ ವಿದ್ಯಾರ್ಥಿಗಳಲ್ಲಿ ಕಂಡು ಬಂತು. ಮಹಿಳೆಯರು ಹಾಡಿದ ಹಾಡನ್ನು ವಿದ್ಯಾರ್ಥಿಗಳು ಹಾಡಿ ನೇಜಿ ನೆಡುತ್ತಾ ಸಂಭ್ರಮಿಸಿದರು.
ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವ ತಿಳಿಸಿ ಭತ್ತ ಬಿತ್ತುವುದರಿಂದ ಹಿಡಿದು ಭತ್ತಕೊಯ್ಲುವರೆಗಿನ ಎಲ್ಲಾ ಮಜಲುಗಳನ್ನು ಅಲ್ಲದೆ ಸಾವಯವ ಕೃಷಿಯ ಶ್ರೀ ಪದ್ಧತಿಯ ನಾಟಿ ಪ್ರಾತ್ಯಕ್ಷತೆ ಮೂಲಕ ಮನದಟ್ಟು ಮಾಡಲಾಯಿತು. ಕೃಷಿ ಚಟುವಟಿಕೆ ಗಳ ಬಗ್ಗೆ ಇಂದಿನ ಮಕ್ಕಳಿಗೆ ತಿಳಿಯಪಡಿಸುವ ಕಾರ್ಯ ಮಹತ್ತರ. ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವುದರೊಂದಿಗೆ ಕೃಷಿ ಜೀವನವನ್ನು ಆಸಕ್ತಿಯಿಂದ ಅಭ್ಯಾಸ ಮಾಡಿದರು. ಎನ್ನೆಸ್ಸೆಸ್‌ನ ಒಟ್ಟು ೪೩ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳ ಪ್ರಕಾರ ಇಂತಹ ಚಟುವಟಿಕೆ ಬಗ್ಗೆ ಇಂದಿನ ಯುವ ಜನಾಂಗಕ್ಕೆ ತಿಳಿಯ ಪಡಿಸುವ ಅಗತ್ಯತೆ ನಮ್ಮಲ್ಲಿ ಬೆಳೆಯಬೇಕು. ಭತ್ತ ಬೆಳೆದ ಅನಂತರ ಗದ್ದೆಯನ್ನು ಪಾಳು ಬಿಡದೆ ತರಕಾರಿ ಬೆಳೆಗಳನ್ನು ಬೆಳೆದು ಆರ್ಥಿಕ ಬಲ ತುಂಬಿಕೊಳ್ಳುವುದು ಹಾಗೂ ಇಲಾಖಾ ಸೌಲಭ್ಯಗಳನ್ನು ಪಡೆದು ರೈತ ಆರ್ಥಿಕತೆಯ ಬಗ್ಗೆ ದೃಷ್ಟಿ ಹಾಯಿಸಲು ವಿದ್ಯಾರ್ಥಿಗಳು ತಮ್ಮ ಮನೆಯವರನ್ನು ಮತ್ತು ಸಮಾಜವನ್ನು ಕೃಷಿಯ ಬಗ್ಗೆ ಪ್ರೇರೇಪಿಸುವ ಹಾಗಾಗಬೇಕು.
ರೈತರು, ಬಳಕೆದಾರರು, ಸರ್ಕಾರೇತರ ಸಂಸ್ಥೆಗಳು, ಮಾಧ್ಯಮಗಳು, ವಿಜ್ಞಾನಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ಕಾನೂನು ರೂಪುಗೊಳಿಸುವವರು ಹಾಗೂ ಎಲ್ಲಾ ಸಾರ್ವಜನಿಕರು ಸೇರಿ ಇದನ್ನು ಬಲಗೊಳಿಸಬೇಕು, ಇದು ನಿರಂತರವಾಗಿ ನಡೆಯುವಂತೆ ಕಾರ್ಯಕ್ರಮ ರೂಪಿಸಬೇಕು.
ವಿದ್ಯಾರ್ಥಿಗಳ ಚಿತ್ತ ಕೃಷಿಯತ್ತ ಸೆಳೆಯುವ ಪ್ರಯತ್ನ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕಲಾತ್ಮಕವಾಗಿ ರೂಪಿಸುವುದರ ಜೊತೆಗೆ ಬದುಕಿಗೆ ಅನಿವಾರ್ಯವಾಗಿರುವ ಕೃಷಿಯತ್ತಲೂ ಆಕರ್ಷಿಸುವ ವಿನೂತನ ಪ್ರಯತ್ನವನ್ನು ಪೊಂಪೈ ಕಾಲೇಜು ಮಾಡುತ್ತಿರುವುದು ಶ್ಲಾಘನೀಯ

ಪದ್ಮಿನಿ ವಸಂತ್ ಪಟ್ಟೆ
ಐಕಳ ಪಂಚಾಯಿತಿ ಮಾಜಿ ಅಧ್ಯಕ್ಷೆ

ಇಲ್ಲಿಯವರೆಗೆ ಗದ್ದೆಗೆ ಇಳಿಯದ ಮಕ್ಕಳು ಕೆಸರು ಗದ್ದೆಗೆ ಇಳಿದು ಬೇಸಾಯದ ಅನುಭವ ಪಡೆದೆವು ವಿನಾಶದ ಅಂಚಿನಲ್ಲಿರುವ ಬೇಸಾಯದ ಬಗ್ಗೆ ವಿವಿಧ ವಿಷಯಗಳು ತಿಳಿದವು. ಭತ್ತ ಕೃಷಿಯನ್ನು ಉಳಿಸುವ ಸ್ಪಷ್ಟ ಚಿತ್ರಣ ಮಕ್ಕಳಲ್ಲಿ ಮೂಡಿದರೆ ಮಾತ್ರ ಭತ್ತ ಸಂಸ್ಕೃತಿ ಉಳಿಯಲು ಸಾದ್ಯ.

ಪೊಂಪೈ ಕಾಲೇಜು ಎನ್.ಎಸ್.ಎಸ್. ವಿದ್ಯಾರ್ಥಿಗಳು

ಭಾರತದ ಕೃಷಿ ಪದ್ದತಿ ನಶಿಸಿ ಹೋಗುವ ಮುನ್ನ ನಮ್ಮ ಮುಂದಿನ ಜನಾಂಗಕ್ಕೆ ಇಂತಹ ಬೇಸಾಯದ ಬಗ್ಗೆ ಮಕ್ಕಳಿಗೆ ತಿಳಿಸಿ ಕೊಡುವ ಅಗತ್ಯ ಇದೆ. ಮುಂದಿನ ಜನಾಂಗದ ಪಾಠಶಾಲೆಯಾಗಿಯೂ ಬೆಳೆಯಲಿ

ಡಾ. ಜಾನ್ ಕ್ಲಾರೆನ್ಸ್ ಮಿರಾಂದ
ಪ್ರಾಂಶುಪಾಲ ಪೊಂಪೈ ಕಾಲೇಜು

ನಮ್ಮ ಗ್ರಾಮಗಳ ಸುಸ್ಥಿರತೆಗಾಗಿ, ಪರಿಸರ ಸಮತೋಲನಕ್ಕಾಗಿ, ಸಾಂಸ್ಕೃತಿಕ ಸಂರಕ್ಷಣೆಗಾಗಿ ಮುಂದಿನ ಜನಾಂಗಕ್ಕಾಗಿ ಭತ್ತ ಸಂಸ್ಕೃತಿ ಮತ್ತು ಪರಂಪರೆ ಬತ್ತದಂತೆ ನೋಡಿಕೊಳ್ಳುವುದು. ಬಹಳ ಮುಖ್ಯವಾದ ಮತ್ತು ತುರ್ತಾಗಿ ಆಗಬೇಕಾದ ಕೆಲಸವಿದು.
ಸತೀಶ್ ಬಿ
ಕಿನ್ನಿಗೋಳಿ ವಲಯ ಮೇಲ್ವಿಚಾರಕರು
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು
ಶ್ರೀ ಪದ್ಧತಿಯಲ್ಲಿ ಬಿತ್ತನೆ ಬೀಜ ಹಾಗೂ ನೀರಿನ ಬಳಕೆ ಬೇರೆ ಬೆಳೆಗಳಿಂತ ಕಡಿಮೆಯಾಗಿದೆ.ಕನಿಷ್ಟ ಕೂಲಿಯಾಳು ಬಳಸಿ ದುಡಿಮೆಯ ಉಳಿತಾಯ ಸಾವಯವ ಗೊಬ್ಬರ ಬಳಸಿಕೀಟ ಮತ್ತು ರೋಗಗಳ ಬಾಧೆ ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಹೆಚ್ಚಿನ ಇಳುವರಿ ಹುಲ್ಲು ಹಾಗೂ ಜೊಳ್ಳು ಕಾಳಿನ ಸಮಸ್ಯೆ ಕಡಿಮೆ ಮತ್ತು ಕಾಳಿನ ತೂಕ ಜಾಸ್ತಿಯಾಗುತ್ತದೆ.

Kinnigoli-110701

Comments

comments

Comments are closed.