ಪೈಪ್ ಕಾಂಪೋಸ್ಟ್

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಪೈಪ್ ಕಾಂಪೋಸ್ಟ್ ಘಟಕದ ಉಧ್ಘಾಟನೆ ಮಂಗಳವಾರ ನಡೆಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ರಾಜು ಕುಂದರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಉಪಾಧ್ಯಕ್ಷೆ ಸುಜಾತ ಪೂಜಾರಿ, ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಶಾಲಿನಿ, ರವೀಂದ್ರ ದೇವಾಡಿಗ , ಸಂತೋಷ್, ವಾಣಿ, ಸುಲೋಚನಿ, ಪೂರ್ಣಿಮ, ಜೀಟಾ ಸುನೀತಾ ರೊಡ್ರಿಗಸ್ ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

ಕಿನ್ನಿಗೋಳಿ ಪಂಚಾಯಿತಿಯಲ್ಲಿ ನೂತನವಾಗಿ ನಿರ್ಮಾಣ ಮಾಡಿದ ಪೈಪ್ ಕಾಂಪೋಸ್ಟ್ ಗೊಬ್ಬರ ತಯಾರಿಕಾ ಘಟಕ ಎಲ್ಲರಿಗೂ ಮಾದರಿಯಾಗಲಿದೆ 6-12 ಇಂಚು ವ್ಯಾಸದ 6 ಅಡಿ ಎತ್ತರದ ಪೈಪನ್ನು ಒಂದೂವರೆ ಅಡಿ ಆಳದಲ್ಲಿ ನೆಡಬೇಕು. ಪೈಪಿಗೆ ಕಸ ಹಾಕುವ ಮೊದಲು 1 ಕೆ.ಜಿ ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಅದರೊಂದಿಗೆ 2 ಬೋಗುಣಿ ಸೆಗಣಿಯನ್ನು ಕಲಸಿ ಪೈಪಿಗೆ ಹಾಕಬೇಕು. ಇದಕ್ಕೆ ಭೂಮಿಯಲ್ಲಿ ಕರಗುವ ವಸ್ತುಗಳನ್ನು ಚೂರು ಚೂರಾಗಿಸಿ ಹಾಕಬಹುದು. ವಾರಕ್ಕೊಮ್ಮೆ ಅರ್ಧ ಮಗ್ ನೀರು ಮತ್ತು ಒಂದು ಹಿಡಿ ಮಣ್ಣು ಹಾಕಿದಾಗ ಉತ್ತಮ ಗೊಬ್ಬರ ಸಿಗುವ ಸಾಧ್ಯತೆಗಳು ಜಾಸ್ತಿ. ಪೈಪಿನ ಮೇಲ್ಭಾಗ ಮರದ ತುಂಡು ಅಥವಾ ಹೆಂಚಿನಿಂದ ಮುಚ್ಚಬಹುದು. ಮೂರು ತಿಂಗಳು ಹಾಗೇಯೇ ಬಿಟ್ಟು ನಂತರ ತೆಗೆದಾಗ ಅತ್ಯುತ್ತಮ ಫಲವತ್ತಾದ ಸಾವಯವ ಗೊಬ್ಬರ ಸಿಗುತ್ತದೆ. ಇದಕ್ಕೆ ತಗಲುವ ವೆಚ್ಚ ಕೇವಲ 350 ರೂಪಾಯಿಗಳು ಮಾತ್ರ. ಇದನ್ನು ಜನಸಾಮಾನ್ಯರು ಬಳಸಿದಾಗ ತ್ಯಾಜ್ಯ ಸಮಸ್ಯೆಯನ್ನು ಕೂಡಾ ತಕ್ಕ ಮಟ್ಟಿಗೆ ನಿವಾರಿಸಬಹುದು.

ಸರಳ ಹಾಗೂ ಪರಿಸರದ ಸ್ವಚ್ಚತೆಗೆ ಮಹತ್ವ ನೀಡುವ ಈ ಯೋಜನೆಯ ನಿರ್ವಹಣೆಗೆ ಅಧಿಕ ಸ್ಥಳ ಬೇಕಾಗಿಲ್ಲ. ಮಾತ್ರವಲ್ಲದೆ ಈ ಪೈಪ್ ಕಂಪೋಸ್ಟ್‌ನಿಂದ ಲಭಿಸಿದ ಸಾವಯವ ಗೊಬ್ಬರವನ್ನು ನಮ್ಮ ಮನೆಯ ಹೂ, ತರಕಾರಿ ಸಹಿತ ಇನ್ನಿತರ ಬೆಳೆಗಳಿಗೆ ಇದನ್ನು ಬಳಸಬಹುದು. ತ್ಯಾಜ್ಯಗಳನ್ನು ತೆರೆದ ಸ್ಥಳದಲ್ಲಿ ಎಸೆಯದೆ ಇಂತಹ ಕಂಪೋಸ್ಟ್ ಮಾಡುವುದರಿಂದ ಸೊಳ್ಳೆ ಇನ್ನಿತರ ಜೀವಿಗಳಿಂದ ಹರಡುವ ಸಾಂಕ್ರಾಮಿಕ ರೋಗ ಗಳಿಂದಲೂ ಮುಕ್ತರಾಗಬಹುದು.

ಸ್ವಚ್ಚತೆಯ ನೂತನ ಪರಿಕಲ್ಪನೆಯಾಗಿದೆ. ರೈತರಿಗೆ ಅತೀ ಉಪಯುಕ್ತವಾದ ಕಾಂಪೋಸ್ಟ್ ಗೊಬ್ಬರವನ್ನು ಅತೀ ಕಡಿಮೆ ಖರ್ಚಿನಲ್ಲಿ ಅಲ್ಪ ಜಾಗದಲ್ಲೂ ಹಾಗೂ ಕನಿಷ್ಠ ಪಕ್ಷ ೩ ಸೆಂಟ್ಸ್ ಸ್ಥಳದಲ್ಲಿ ಮನೆ ಕಟ್ಟಿದವರು ಕೂಡ ತಯಾರಿಸಬಹುದು. ನೈರ್ಮಲ್ಯ, ಸಾಂಕ್ರಾಮಿಕ ರೋಗಮುಕ್ತತೆಯೊಂದಿಗೆ ಜೈವಿಕ ಗೊಬ್ಬರವನ್ನು ಪಡೆಯುವಲ್ಲಿ ಸಾಫಲ್ಯತೆ ಸಿಗಲಿದೆ.
ಅರುಣ್ ಪ್ರದೀಪ್ ಡಿಸೋಜ
ಕಿನ್ನಿಗೋಳಿ ಪಂಚಾಯಿತಿ ಪಿ.ಡಿ.ಒ

Kinnigoli-25081501

Comments

comments

Comments are closed.