ಶಿಮಂತೂರು ಶಾರದಾ ಫ್ರೌಡಶಾಲೆ ತೆರೆಮರೆಗೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಶಿಮಂತೂರು ಶಾರದಾ ಫ್ರೌಡಶಾಲೆಯ ಪ್ರಸ್ತುತ ಮುಚ್ಚುಗಡೆಯ ಬೀತಿಯಲ್ಲಿದೆ. ಸಾಕ್ಷಾತ್ ವಿದ್ಯಾ ದೇವತೆಯ ಹೆಸರಿನ ಶಾಲೆಗೆ ಸುವರ್ಣ ಸಂಭ್ರಮದ ವರ್ಷ. ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಪರಿಸರದ ಊರ ಜನರು ಸುವರ್ಣ ಮಹೋತ್ಸವ ಆಚರಿಸಲಾಗದ ಬಿಕ್ಕಟ್ಟಿಗೆ ತಲುಪಿದೆ. ಶಿಕ್ಷಣ ಕಾನೂನಿನ ವ್ಯಾಖ್ಯಾನ ಹಾಗೂ ಶಾಲೆಯಲ್ಲಿನ ಮಕ್ಕಳ ಸಂಖ್ಯೆ ಕ್ಷೀಣವಾಗುವ ಕಾರಣ ನೀಡಿ ಅಲ್ಲದೆ ಸರ್ಕಾರಕ್ಕೆ ಆರ್ಥಿಕ ಹೊರೆ ಆಗುತ್ತಿರುವುದರಿಂದ ಶಾಲೆಯನ್ನು ಏಕೆ “ಮುಚ್ಚಬಾರದು” ಎಂಬ ಸುತ್ತೋಲೆ ಶಿಮಂತೂರಿನ ಶಾಲೆಯ ಪರಿಸ್ಥಿತಿ ಡೋಲಾಯಮಾನವಾಗಿದೆ. ಅಲ್ಲಲ್ಲಿ ತಲೆಯೆತ್ತುತ್ತಿರುವ ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆ ಹಾಗೂ ಹೆತ್ತವರ ಇಂಗ್ಲೀಷ್ ವ್ಯಾಮೋಹಕ್ಕೆ ಕನ್ನಡ ಮಧ್ಯಮ ಶಾಲೆಗಳು ನೇಪಧ್ಯಕ್ಕೆ ಸರಿಯುತ್ತಿರುವುದು ವಿಷಾದನೀಯ.
ಕಿನ್ನಿಗೋಳಿ ಪರಿಸರದ ಗ್ರಾಮೀಣ ಪ್ರದೇಶವಾದ ಶಿಮಂತೂರಿನಲ್ಲಿ ೧೯೬೫ರಲ್ಲಿ ತಾಳಿಪಾಡಿ ಬಾಲಕೃಷ್ಣ ಶಾಸ್ತ್ರಿಯವರು ಈ ಭಾಗದ ವಿದ್ಯಾರ್ಥಿಗಳು ದೂರದ ಶಾಲೆಗೆ ಹೋಗದೆ ಶಿಕ್ಷಣ ಮೊಟಕುಗೊಳಿಸುತ್ತಿರುವ ಸ್ಥಿತಿಯನ್ನು ಗಮನಿಸಿ ಮಕ್ಕಳು ಫ್ರೌಡ ಶಾಲಾ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಶಾರದಾ ಎಜುಕೇಶನ್ ಸೊಸೈಟಿ ಎಂಬ ಸಂಸ್ಥೆ ಹುಟ್ಟು ಹಾಕಿ ಶಾಲೆ ಪ್ರಾರಂಭಿಸಿದರು ಶೈಕ್ಷಣಿಕ ವರ್ಷದಲ್ಲಿ ಸುಮಾರು 400-450 ವಿದ್ಯಾರ್ಥಿಗಳು ಪ್ರವೇಶಾತಿಯನ್ನು ಪಡೆಯುತ್ತಿದ್ದ ಶಾಲೆ ಇತ್ತಿಚಿನ ವರ್ಷಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವನ್ನು ಕಂಡಿತ್ತು. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 8,9,10 ನೇ ತರಗತಿಗಳಲ್ಲಿ ಒಟ್ಟು ಕೇವಲ 35 ವಿದ್ಯಾರ್ಥಿಗಳಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳು ಪ್ರತಿಷ್ಠಿತ ಪೇಟೆಗಳ ಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮಾರುಹೋಗಿರುವುದು ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿರಬಹುದು.
ಸರಕಾರದ ಕಾನೂನು ಮತ್ತು ಶಿಕ್ಷಣ ಇಲಾಖಾ ಮಾಹಿತಿ ಪ್ರಕಾರ ಒಂದು ತರಗತಿಯಲ್ಲಿ ಕನಿಷ್ಠ 25 ವಿದ್ಯಾರ್ಥಿಗಳಿದ್ದರೆ ಮಾತ್ರ ಆ ಶಾಲೆ ಉಳಿಯಬಹುದು. ಆದರೆ ಪ್ರಸ್ತುತ ಈ ಶಾಲೆಯಲ್ಲಿ 7 ಮಂದಿ ಶಿಕ್ಷಕರಿದ್ದರೂ ಎಂಟನೇ ತರಗತಿಯಲ್ಲಿ 9, ಒಂಬತ್ತನೇ ತರಗತಿಯಲ್ಲಿ 15, ಹತ್ತನೇ ತರಗತಿಯಲ್ಲಿ 11 ವಿದ್ಯಾರ್ಥಿಗಳು ಮಾತ್ರ ಶಿಕ್ಷಣ ಪಡೆಯುತ್ತಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣ ಕನ್ನಡದ ಬಗ್ಗೆ ಕೀಳರಿಮೆ ಮತ್ತು ಇಂಗ್ಲಿಷ್ ಭಾಷಾ ವ್ಯಾಮೋಹ ಎಂದು ಆಡಳಿತ ಮಂಡಳಿ ಹಾಗೂ ಶಿಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಐದು ವರ್ಷಗಳ ಹಿಂದಿನಿಂದಲೇ ಗ್ರಾಮಸ್ಥರ ಒತ್ತಡ ಹಾಗೂ ಮಕ್ಕಳ ಪೋಷಕರ ಬೇಡಿಕೆ ಈಡೇರಿಸಲು ಶಾಲೆಯ ಪಕ್ಕದಲ್ಲಿಯೇ ಆಡಳಿತ ಮಂಡಳಿಯು ಹೊಸದಾದ ಶಾರದಾ ಆಂಗ್ಲಮಾಧ್ಯಮ ಶಾಲೆ ಪ್ರಾರಂಭಿಸಿದ್ದು ಪ್ರಾಥಮಿಕ ಹಂತದಲ್ಲಿಯೇ 350 ಮಕ್ಕಳ ಸೇರ್ಪಡೆ ಆಗಿರುವುದು ಈ ಕನ್ನಡ ಶಾಲೆಯ ಅವನತಿಗೆ ಪರೋಕ್ಷ ಕಾರಣವಾಗಿದೆ ಎಂದು ಎಲ್ಲರೂ ಒಪ್ಪಿಕೊಳ್ಳುವ ನಿಜ ಸಂಗತಿ.
ಫ್ರೌಡಶಾಲೆಯಲ್ಲಿ ಮಕ್ಕಳ ಕೊರತೆ ಕಂಡು ಬಂದಾಗ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸೇರಿಕೊಂಡು ಹತ್ತಾರು ಕಿ.ಮೀ. ದೂರದ ಅಕ್ಕ ಪಕ್ಕದ ಊರಿನಲ್ಲಿ ಮಕ್ಕಳನ್ನು ಕರೆತಂದು ಅವರಿಗೆ ಶುಲ್ಕ ವಿನಾಯಿತಿ, ಉಚಿತ ಪುಸ್ತಕ, ಶಾಲಾ ಸಮ ವಸ್ತ್ರ ಅಲ್ಲದೆ ಉಚಿತ ವಾಹನ ಪ್ರಯಾಣದ ಸೌಕರ್ಯ ಮಕ್ಕಳಿಗೆ ನೀಡಿದರೂ ಫಲಪ್ರದವಾಗದ ಕೊರಗು ಎದ್ದು ಕಾಣುಸುತ್ತಿದೆ.
ಜಾಗತಿಕ ಬಂಟರ ಸಂಘಟನೆಯಿಂದ ಗುರುತಿಸಿಕೊಂಡು ರಾಜ್ಯೋತ್ಸವ ಪ್ರಶಸ್ತಿ ಪಡೆದ ಮುಂಬಯಿ ಉದ್ಯಮಿ ಐಕಳ ಹರೀಶ್ ಶೆಟ್ಟಿ, ಸ್ಥಳೀಯ ಪ್ರಸಿದ್ಧ ವೈದ್ಯರಾದ ಡಾ.ಗುರುಪ್ರಸಾದ್ ಸಹಿತ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಂಡ ಹೆಗ್ಗಳಿಕೆ ಶಾರದಾ ಫ್ರೌಡಶಾಲೆಗೆ ಇದೆ. ಸಮೀಪದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದು ಮತ್ತು ಭವಿಷ್ಯದಲ್ಲಿ ಪ್ರೌಢಶಾಲೆಯ ಹಾದಿಯಲ್ಲೇ ಸಾಗುತ್ತಿದೆ. ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ರವರೆಗೆ ತರಗತಿ ಇದ್ದು ಒಟ್ಟು 35 ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಸರಕಾರದಿಂದ ಓರ್ವ ಶಿಕ್ಷಕರೇ ನೇಮಕಗೊಂಡಿದ್ದು ಮೂರು ಜನ ಗೌರವಶಿಕ್ಷಕರನ್ನು ಆಡಳಿತ ಮಂಡಳಿ ವೇತನ ನೀಡಿ ನಡೆಸುತ್ತಿದೆ. ಈ ಪ್ರಾಥಮಿಕ ಶಾಲೆಯಲ್ಲಿ ಕಲಿತ ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪ್ರಸ್ತುತ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶಾಲೆಯನ್ನು ಉಳಿಸಲು ಬಹಳಷ್ಟು ಶ್ರಮ ವಹಿಸಿದರೂ ಸರಕಾರ ಆದೇಶಕ್ಕೆ ಮನ್ನಣೆ ನೀಡಿ ತಲೆ ಬಾಗಲೇಬೇಕಾಗಿದೆ ಎಂದು ಹೇಳುತ್ತಾರೆ.
ಕಳೆದ 11 ವರ್ಷದಿಂದ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ರುವ ಪೃಥ್ವೀಶ್ ಕರಿಕೆಯವರು ಈಗ ಹಿಂಬಡ್ತಿಯೊಂದಿಗೆ ಕಟೀಲು ಶಾಲೆಗೆ ತೆರಳಬೇಕಾದ ಅನಿವಾರ್ಯತೆಯ ಜೊತೆಗೆ ಇನ್ನುಳಿದ ಆರು ಮಂದಿ ಶಿಕ್ಷಕರು ಸಹ ಶಿರ್ತಾಡಿ, ಕೋಟೆಕಾರ್, ಮೂಡಬಿದ್ರಿತಂಹ ದೂರದ ಶಾಲೆಗೆ ತೆರಳಲು ಈಗಾಗಲೇ ಪ್ರತ್ಯೇಕವಾಗಿ ಕೌನ್ಸಿಲಿಂಗ್‌ನ್ನು ಇಲಾಖೆಯು ನಡೆಸಿದೆ. ಕಳೆದ 35 ವರ್ಷದಿಂದ ಶಾಲೆಯ ಕಚೇರಿಯನ್ನು ನಿರ್ವಹಣೆ ಮಾಡುತ್ತಿರುವ ಕೆ.ರಾಮರವರಿಗೆ ಇನ್ನೂ ಯಾವುದೇ ಬದಲಿ ಹುದ್ದೆಯನ್ನು ಇಲಾಖೆಯು ಕಲ್ಪಿಸಿಲ್ಲ ಆದರೆ ಇವೆರೆಲ್ಲರಿಗೂ ಶಾಲೆಯ ಪರಿಸರದಿಂದ ಹೊರ ಹೋಗಬೇಕಾದ ಮಾನಸಿಕ ಒತ್ತಡ ವಿಚಲಿತರನ್ನಾಗಿ ಮಾಡಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ದಾಖಲಾತಿ ರದ್ದುಪಡಿಸಿಕೊಂಡು ಶಾಲೆಯ 8 ಮತ್ತು 9ರ ವಿದ್ಯಾರ್ಥಿಗಳನ್ನು ಪರಿಸರದ ಬೇರೆ ಶಾಲೆಗೆ ವರ್ಗಾಹಿಸಿ ಸಂಪೂರ್ಣವಾಗಿ ಸರ್ಕಾರಿ ಆದೇಶವನ್ನು ಪಾಲಿಸುವ ಹಂತಕ್ಕೆ ಆಡಳಿತ ಮಂಡಳಿಯು ಸೆ. 29ರಂದು ನಡೆಸಿದ ಸೊಸೈಟಿಯ ಮಹಾಸಭೆಯಲ್ಲಿ ನಿರ್ಧರಿಸಿದೆ. ಸರ್ಕಾರಿ ಆದೇಶ ಉಲ್ಲಂಘಿಸಿದಲ್ಲಿ ಸರ್ಕಾರಿ ಅನುದಾನ ಹಾಗೂ ಮಾನ್ಯತೆಯು ರದ್ದುಗೊಳಿಸುವ ಕ್ರಮಕ್ಕೆ ಮುಂದಾಗುತ್ತದೆ ಆಗ ಶಿಕ್ಷಕರು ವೇತನ ಪಡೆಯುವಲ್ಲಿ ಅತಂತ್ರ ಸ್ಥಿತಿಗೆ ಒಳಗಾಗುತ್ತಾರೆ ಎಂಬ ಉದ್ದೇಶದಿಂದಲೂ ಮಂಡಳಿ ಈ ಪೂರ್ವ ನಿರ್ಧಾರ ನಡೆಸಿದೆ.

ಮುಖ್ಯಾಂಶಗಳು….

* ಸುಮಾರು 10 ಎಕರೆ ವಿಶಾಲವಾದ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ.
* ಫ್ರೌಡಶಾಲೆಯಲ್ಲಿ 7 ಮಂದಿ ಶಿಕ್ಷಕರು, 35 ವಿದ್ಯಾರ್ಥಿಗಳು.
* ಪಕ್ಕದ ಇಂಗ್ಲಿಷ್‌ನ ಪ್ರಾಥಮಿಕ ವಿಭಾಗದಲ್ಲಿ 350 ವಿದ್ಯಾರ್ಥಿಗಳು.
* ಪ್ರಾಥಮಿಕ ಶಾಲೆಯು ಸಹ ಫ್ರೌಡಶಾಲೆಯ ಹಾದಿಯನ್ನಿಡಿದಿದೆ.
* ಸುವರ್ಣ ಸಂಭ್ರಮದಲ್ಲಿ ಮುಚ್ಚುಗಡೆಯ ದುಖಃ
* ಪರಿಸರದ ಎಳತ್ತೂರು, ಕಕ್ವ ಸರ್ಕಾರಿ ಪ್ರಾಥಮಿಕ ಶಾಲೆಯೂ ಬಂದ್.

ಸರ್ಕಾರವು ಒಂದು ಕಡೆ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಹೇಳಿಕೊಂಡರು, ವಿದ್ಯಾರ್ಥಿಗಳ ಕೊರತೆಯನ್ನು ಮುಂದಿಟ್ಟುಕೊಂಡು ಮತ್ತೊಂದು ಕಡೆ ಅನುದಾನ ಮತ್ತು ಮಾನ್ಯತೆ ರದ್ದಿನ ಬೆದರಿಕೆ ನೀಡಿ ಶಾಲೆಗಳನ್ನು ಮುಚ್ಚುತ್ತಿರುವುದಕ್ಕೆ ಶಾರದಾ ಫ್ರೌಡಶಾಲೆಯೇ ಒಂದು ಉತ್ತಮ ಉದಾಹರಣೆ, ಇಂಗ್ಲಿಷ್ ಭಾಷೆಗೆ ಅತಿಯಾದ ಮಾನ್ಯತೆ ನೀಡಿದ್ದರಿಂದ ಕನ್ನಡ ಶಾಲೆಯ ಭಾಷಾ ಪ್ರೇಮ ಉಳಿಸಿಕೊಳ್ಳಲು ಹೆಣಗಾಡಬೇಕಾಗಿದೆ

:-ಹರಿಕೃಷ್ಣ ಪುನರೂರು, ಆಡಳಿತ ಮಂಡಳಿ, ಮಾಜಿ ರಾಜ್ಯಾಧ್ಯಕ್ಷರು ಕಸಾಪ ಬೆಂಗಳೂರು.

ಸರ್ಕಾರಿ ಸೂಚನೆಯನ್ನು ಆಡಳಿತ ಮಂಡಳಿ ಅನಿವಾರ್ಯವಾಗಿ ಪಾಲಿಸಬೇಕಾಗಿದೆ. ನಾವು ಸಹ ಅವರ ವಿರುದ್ಧ ಹೋಗಲು ಆಗುವುದಿಲ್ಲ, ಶಿಕ್ಷಕರಿಗೆ ಬೇರೆ ಕಡೆಗಳಲ್ಲಿ ತಮ್ಮ ವೃತ್ತಿ ಮುಂದುವರಿಸಬಹುದು ಆದರೆ ಇಲ್ಲಿನ ಮಕ್ಕಳ ಬಾಂಧವ್ಯ, ಪರಿಸರ, ಸಹೋದ್ಯೋಗಿಗಳ ಒಡನಾಟ ಎಲ್ಲವೂ ಮರೆಯಬೇಕಾಗುತ್ತದೆ. ಕನ್ನಡ ಶಾಲೆಗಳ ಬಗ್ಗೆ ಇನ್ನಾದರು ಎಲ್ಲರೂ ಎಚ್ಚರಗೊಂಡು ಏಕರೂಪದ ಶಿಕ್ಷಣ ನೀತಿ ತಂದಲ್ಲಿ ಶಾಲೆಗಳು ಉಳಿಯುವ ಸಾಧ್ಯತೆ ಇದೆ. ಇಲ್ಲದಿದ್ದಲ್ಲಿ ಇದೇ ಪರಿಸ್ಥಿತಿ ಇನ್ನಿತರ ಕಡೆಗಳಲ್ಲಿ ಮುಂದುವರಿಯುತ್ತದೆ.

:-ಪೃಥ್ವೀಶ್ ಕರಿಕೆ, ಮುಖ್ಯ ಶಿಕ್ಷಕ, ಶಾರದಾ ಫ್ರೌಡಶಾಲೆ ಶಿಮಂತೂರು.

Kinnigoli-02101510 Kinnigoli-02101511 Kinnigoli-02101512 Kinnigoli-02101513

Comments

comments

Comments are closed.

Read previous post:
Kinnigoli-02101506
ಕೃಷಿ ಬದುಕಿನ ಸಂತೃಪ್ತಿ ಜೀವನ

ಕಿನ್ನಿಗೋಳಿ : ಕೈ ತುಂಬಾ ಸಂಬಳದ ಬದುಕನ್ನು ಬಿಟ್ಟು ಸರಳತೆಯ ಕೃಷಿ ಹೊಲದ ದುಡಿಮೆಯಲ್ಲಿ ಬದುಕಿನ ಸಂತೃಪ್ತಿ ಜೀವನ ಪಡೆಯುವುದೇ ಸಾರ್ಥಕ ಜೀವನ ಕಟ್ಟಿಕೊಂಡ ಯುವಕ, ಇಂದಿನ ಯುವ...

Close