ಅಭಿವೃದ್ಧಿಯ ನೀರೀಕ್ಷೆಯಲ್ಲಿ ಕಟೀಲು ಗ್ರಾಮ ಪಂಚಾಯಿತಿ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯಿಂದ ಬೇರ್ಪಟ್ಟ ಕೊಂಡೆಮೂಲ ಗ್ರಾಮ ಪಂಚಾಯಿತಿ ಈಗ ಕಟೀಲು ಗ್ರಾಮ ಪಂಚಾಯಿತಿ ಎಂದು ಪುನರ್ ನಾಮಕರಣವಾಗಿದೆ. ಕಟೀಲು ಪಂಚಾಯಿತಿ ಅಭಿವೃದ್ಧಿಗಾಗಿ ಕಾದು ಕುಳಿತಿದೆ. ಕಟೀಲು ಪೇಟೆ ಮಾತ್ರ ಅಭಿವೃದ್ದಿಯಲ್ಲಿರುವ ಈ ಪಂಚಾಯಿತಿ ನಂದಿನಿ ನದಿಯ ತೀರವನ್ನು ಹೊಂದಿಕೊಂಡಿರುವ ಕೃಷಿ ಪ್ರಧಾನ ಕೊಂಡೆಮೂಲ, ನಡುಗೋಡು, ಕಿಲೆಂಜೂರು ಗ್ರಾಮಗಳು ಒಳಗೊಂಡ ವೈಶಿಷ್ಟತೆ ಹೊಂದಿದ್ದು 12 ಸದಸ್ಯ ಸಂಖ್ಯಾ ಬಲ ಹೊಂದಿದೆ. ಪ್ರವಾಸಿ ಕೇಂದ್ರ, ಧಾರ್ಮಿಕ ಕೇಂದ್ರ ಹಾಗೂ ಪುರಾಣ ಪ್ರಸಿದ್ದ ಕಟೀಲು ದೇವಳ, ಕಟೀಲು ಚರ್ಚ್ ಮಾತ್ರವಲ್ಲದೆ ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನ, ಅಜಾರು, ಮಿತ್ತಬೈಲು, ಕಿಲೆಂಜೂರು ಧೂಮಾವತಿ ದೈವಸ್ಥಾನಗಳು ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ. ಹಲವು ವರ್ಷಗಳ ಹಿಂದೆ ಮಂಡಲ ಪಂಚಾಯಿತಿ ಆಡಳಿತವಿರುವಾಗ ಮಲ್ಲಿಗೆಯಂಗಡಿಯಲ್ಲಿ ಕಟೀಲು ಗ್ರಾಮ ಪಂಚಾಯಿತಿಯ ಕಟ್ಟಡ ಈಗಲೂ ಇದೆ. ಕೊಂಡೆಮೂಲ ಗ್ರಾಮವು 144.53 ಹೆಕ್ಟೇರ್ ವಿಸ್ತೀರ್ಣ 2816 ಜನಸಂಖ್ಯೆ (1358 ಗಂಡು, 1428 ಹೆಣ್ಣು) ನಡುಗೋಡು ಗ್ರಾಮವು 289.35 ಹೆಕ್ಟೇರ್ ವಿಸ್ತೀರ್ಣ 1511 ಜನಸಂಖ್ಯೆ (722 ಗಂಡು, 789 ಹೆಣ್ಣು) ಹಾಗೂ ಕಿಲೆಂಜೂರು ಗ್ರಾಮವು 136.55 ಹೆಕ್ಟೇರ್ ವಿಸ್ತೀರ್ಣ 666 ಜನಸಂಖ್ಯೆ (308 ಗಂಟು, 358 ಹೆಣ್ಣು) ಒಟ್ಟು 670.73 ಹೆಕ್ಟೆರ್ ವಿಸ್ತೀರ್ಣದ ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4993 ಜನಸಂಖ್ಯೆ ಹೊಂದಿದೆ. 3 ಹಿರಿಯ ಪ್ರಾಥಮಿಕ ಶಾಲೆಗಳು, 2 ಪ್ರೌಢಶಾಲೆಗಳು 1 ಪದವಿ ಪೂರ್ವ ಶಾಲೆ ಹಾಗೂ 1 ಪದವಿ ಕಾಲೇಜು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ. 4 ಕಲ್ಯಾಣ ಮಂಟಪಗಳು ಮತ್ತು 1 ಸಮುದಾಯ ಭವನ, 1 ದೇವಳ (ಕಟೀಲು), 6 ದೈವಸ್ಥಾನಗಳು ಮತ್ತು 1 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೊಳಗೊಂಡಿದೆ. ಸ್ವಂತ ಸೂರನ್ನು ಹೊಂದಿಲ್ಲದ ಕಟೀಲು ಪಂಚಾಯಿತಿ ಪ್ರಸ್ತುತ ಮೆನ್ನಬೆಟ್ಟು ಪಂಚಾಯಿತಿಯ ಸಭಾಂಗಣವನ್ನು ಕಛೇರಿ ಕೆಲಸಕ್ಕಾಗಿ ಉಪಯೋಗಿಸಿಕೊಳ್ಳುತ್ತಿದೆ. ಪ್ರತಿಯೊಂದು ಪಂಚಾಯಿತಿಗೆ ಸರಕಾರದಿಂದ 10 ಲಕ್ಷ ಅನುದಾನವಿದ್ದು ಕಟೀಲು ಪಂಚಾಯಿತಿ ಗ್ರೇಡ್ 2 ಪಂಚಾಯಿತಿ ಆಗಿದೆ. ಈಗಾಗಲೇ ಮಲ್ಲಿಗೆಯಂಗಡಿ ಉಲ್ಲಂಜೆ ಜಂಕ್ಷನ್ ಬಳಿಯ ಪೂಪಾಡಿ ಕಟ್ಟೆಯ ಬಳಿಯ ನಿವೇಶನವನ್ನು ಗುರುತಿಸಲಾಗಿದ್ದು ಸರ್ವೆನಂಬರ್ 22 ರಲ್ಲಿನ ಸುಮಾರು 8 ಎಕರೆ ಸರಕಾರಿ ಜಮೀನಿನಲ್ಲಿ ಕೇಂದ್ರ ಸರಕಾರದ ಮಹಾತ್ಮಗಾಂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರೂ. 21 ಲಕ್ಷ ಅನುದಾನದ ಕಟ್ಟಡ ಕಟ್ಟಲು ಮಂಜೂರಾತಿ ದೊರಕಿದೆ. ಕೇಂದ್ರ ಸರಕಾರದ 14ನೇ ಹಣಕಾಸು ಯೋಜನೆಯಲ್ಲಿ ರೂ. 10.50 ಲಕ್ಷ ಮಂಜೂರಾಗಿದೆ. ಕಟೀಲು ದೇವಳದಲ್ಲಿ ಗೋಶಾಲೆ ನಿರ್ಮಾಣವಾಗಿದ್ದು ಈ ಪಂಚಾಯಿತಿಗೆ ಪೂರಕವಾಗಿ 25 ಲಕ್ಷದ ಘನ ಹಾಗೂ ದ್ರವ ತ್ಯಾಜ್ಯ ಘಟಕ ನಿರ್ಮಾಣ ಗೊಂಡಿದೆ. ಪಂಚಾಯಿತಿಯ ಅಭಿವೃದ್ಧಿ ಸಾಧ್ಯವಾಗಬೇಕಾದರೆ ದೇವಳದ ಪಾತ್ರ ಬಹು ಮುಖ್ಯವಾಗಿದೆ.

ಕಟೀಲು ಗ್ರಾಮ ಪಂಚಾಯಿತಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಮಾತ್ರ ಪ್ರಮುಖ ಆದಾಯದ ಮೂಲವಾಗಿದೆ ಹಾಗೂ ಬೆರಳೆಣಿಕೆಯ ಸಣ್ಣ ಪುಟ್ಟ ಅಂಗಡಿ ಮುಂಗ್ಗಟ್ಟುಗಳು ಆದಾಯ ಮೂಲಗಳಾಗಿದ್ದು ಅಭಿವೃದ್ಧಿಗಾಗಿ ಪೂರ್ತಿ ಸರಕಾರವನ್ನೇ ಅವಲಂಭಿಸಬೇಕಾದ ಅನಿವಾರ್ಯತೆ ಸದ್ಯಕ್ಕಿದೆ. ಕಟೀಲು ಗ್ರಾಮ ಪಂಚಾಯಿತಿ ಪೂರ್ಣ ಪ್ರಮಾಣದ ಕೃಷಿ ಆಧಾರಿತ ಗ್ರಾಮ ಹಾಗೂ ಇಂದಿನ ತನಕ ಅಪಾರ್ಟ್‌ಮೆಂಟ್ ಸೌಲಭ್ಯವಿಲ್ಲದ ಗ್ರಾಮ ಪಂಚಾಯಿತಿ ಆಗಿರುವುದು ವಿಶೇಷವಾಗಿದೆ. ಸಣ್ಣ ನೀರಾವರಿ ಇಲಾಖೆಯ 5 ಕಿಂಡಿ ಅಣೆಕಟ್ಟೆಗಳಿದ್ದು ನೀರಾವರಿಗಾಗಿ ಅಣೆಕಟ್ಟು ಬಾಗಿಲುಗಳನ್ನು ಹಾಕಲಾಗುತ್ತಿದ್ದು ಕುಡಿಯುವ ನೀರಿನ ಯೋಜನೆಗಾಗಿ ಈ ಅಣೆಕಟ್ಟುಗಳನ್ನು ಬಳಸಲಾಗುತ್ತಿದೆ.

ನಡುಗೋಡು ಗ್ರಾಮದ ಮಲ್ಲಿಗೆಯಂಗಡಿ ಬಳಿ ಪ್ರಾರಂಭಗೊಂಡು ಕುದ್ಕೋಳಿಗೆ ಸಂಪರ್ಕ ರಸ್ತೆ ನಿರ್ಮಾಣವಾದಲ್ಲಿ ಕಿಲೆಂಜೂರು ಸುರತ್ಕಲ್ ಪೇಟೆಗೆ ಬಹು ಹತ್ತಿರದ ದಾರಿ ಸಾಧ್ಯವಾಗಲಿದೆ. ಮಾತ್ರವಲ್ಲ ಈ ಪ್ರದೇಶದ ಸಂಪರ್ಕ ಒಳ ರಸ್ತೆಗಳು ಅಭಿವೃದ್ಧಿಯಾಗಬೇಕಿದೆ. ಈ ಗ್ರಾಮ ಪ್ರದೇಶಗಳು ಕಟೀಲು ನಂದಿನಿ ನದಿ ವ್ಯಾಪ್ತಿಯಲ್ಲಿ ಬರುವ ಕಾರಣ ಕುಡಿಯುವ ನೀರಿನ ಸಮಸ್ಯೆ ಬಹಳ ಕಡಿಮೆ. ಈ ಪ್ರದೇಶದ ಅಂತರ್ಜಲ ಮೂಲಗಳು ಸಮೀಪದ ಮೆನ್ನಬೆಟ್ಟು ಗ್ರಾಮದ ಕುಡಿಯವ ನೀರಿನ ಸಮಸ್ಯೆ ಪರಿಹರಿಸಿದೆ. ನಿರ್ಮಲ ಭಾರತ್ ಮಿಷನ್ ವತಿಯಿಂದ 2 ಲಕ್ಷರೂ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಿದೆ. ಸುವರ್ಣ ಗ್ರಾಮ ಯೋಜನೆ ವತಿಯಿಂದ 1.03 ಲಕ್ಷರೂ ವೆಚ್ಚದಲ್ಲಿ ಸೋಲಾರ್ ದಾರಿ ದೀಪಗಳು ಮಂಜೂರಾಗಿವೆ.

ಕಟೀಲು ಪಂಚಾಯತಿ ಅಧ್ಯಕ್ಷರಾಗಿ ಗೀತಾ ಪೂಜಾರ್ತಿ, ಉಪಾಧ್ಯಕ್ಷರಾಗಿ ಕಿರಣ್ ಕುಮಾರ್ ಶೆಟ್ಟಿ, ಪಿಡಿಒ ನಾಗೇಶ್ ಸುವರ್ಣ ಕಾರ್ಯನಿರ್ವಹಿಸುತ್ತಿದ್ದು ಪಂಚಾಯತಿ ನಿರ್ವಹಣೆಗೆ 5 ಸಿಬ್ಬಂದಿ ನಿಯೋಜನೆಯಾಗಬೇಕಿದೆ.

ಆಗ ಬೇಕಾದದ್ದು ಮುಜರಾಯಿ ಇಲಾಖೆ ಹಾಗೂ ಸರಕಾರ ಒಟ್ಟುಗೂಡಿ ಕಟೀಲು ಪೇಟೆಯಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಒಳಚರಂಡಿ ವ್ಯವಸ್ಥೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿ ದೇವಳಕ್ಕೆ ಬರುವ ಪ್ರಯಾಣಿಕರಿಗೆ ಸೂಕ್ತ ಭದ್ರತೆ ಒದಗಿಸಬೇಕಾಗಿದೆ. ಹಬ್ಬ ಹರಿದಿನಗಳಲ್ಲಿ ದೇವಳದಲ್ಲಿ ಜನಜಂಗುಳಿ ಜಾಸ್ತಿಯಗುವುದರಿಂದ ಜಿಲ್ಲಾಡಳಿತ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಾಗಿದೆ. ರಸ್ತೆಗಳು ಅಗಲವಾಗಬೇಕು ರಥಭೀದಿಯಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗುವಂತೆ ನೋಡಿಕೊಂಡು ವಾಹನಗಳ ಚಲನೆಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಅತ್ಯಾಧುನಿಕ ಶೈಲಿಯ ಹೆಚ್ಚಿನ ಸಂಖ್ಯೆಯ ನೀರಿನ ವ್ಯವಸ್ಥೆಯುಳ್ಳ ಶೌಚಾಲಯಗಳು ನಿರ್ಮಾಣವಾಗಬೇಕಾಗಿದೆ. ಮುಂದೆ ಆಗುವ ಪಂಚಾಯಿತಿ ಕಟ್ಟಡ ಸಮೀಪವೇ ಗ್ರಾಮಕರಣಿಕರ ಕಛೇರಿ, ಮೀನು, ತರಕಾರಿ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣಗಳು ಆಗಬೇಕಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಬೇಕು. ನಡುಗೋಡು ಮಿತ್ತಬೈಲು ಕಿಲೆಂಜೂರು ಪರಿಸರದಲ್ಲಿ ನಿರಂತರ ಮಳೆ ಬಂದರೆ ನೆರೆ ಬಂದು ದ್ವೀಪವಾಗುತ್ತದೆ. ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ತ್ವರಿತವಾಗಿ 35 ಲಕ್ಷ ಕಾಮಾಗಾರಿಯ ಕೃಷಿ ಉತ್ಪಾದನಾ ಮಾರುಕಟ್ಟೆ ಆಗಬೇಕಾಗಿದೆ

ನೂತನ ಪಂಚಾಯತಿಯ ಪ್ರಥಮ ಅಧ್ಯಕ್ಷರಾಗುವ ಸದವಕಾಶ ಮತ್ತು ಸದಸ್ಯರ ಸಹಕಾರದಿಂದ ಸಮರ್ಪಕವಾದ ಜನಪಯೋಗಿ ಯೋಜನೆಗಳನ್ನು ಬಳಸಿಕೊಂಡು ಗ್ರಾಮದ ಜನರ ಮೂಲಭೂತ ಸೌಕರ್ಯಗಳಿಗೆ ಒತ್ತುಕೊಟ್ಟು ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳುತ್ತೇನೆ. ಗೀತಾ ಪೂಜಾರ್ತಿ ಕಟೀಲು ಪಂಚಾಯಿತಿ ಅಧ್ಯಕ್ಷೆ

ನೂತನ ನಿರ್ಮಿತ ಪಂಚಾಯತಿ ಕಛೇರಿ ಆವರಣದಲ್ಲಿ ಸುಸಜ್ಜಿತ ಸಭಾಂಗಣ, ಪಂಚಾಯತಿ ಕಚೇರಿ, ಕೃಷಿ ಮತ್ತು ಮೀನು ಮಾರುಕಟ್ಟೆ, ಮಾತ್ರವಲ್ಲದೆ ಕಂದಾಯ, ಪಶು ಸಂಗೋಪನೆ ಹಾಗೂ ಕೃಷಿ ಇಲಾಖೆಯ ಕಛೇರಿ, ಪ್ರಾರಂಭಿಸುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಸವಲತ್ತುಗಳು ಒಂದೇ ಸೂರಿನಡಿ ದೊರಕುವಂತೆ ಮಾಡುವ ಪ್ರಯತ್ನ ನಮ್ಮದಾಗಿದೆ. ಸರಕಾರ ಹಾಗೂ ಇಲಾಖಾ ಅನುಮತಿ ಅನುದಾನಕ್ಕಾಗಿ ಕಾಯುತ್ತಿದ್ದೇವೆ. ಜನಾರ್ದನ ಕಿಲೆಂಜೂರು ಮೆನ್ನಬೆಟ್ಟು ಪಂ. ಮಾಜಿ ಅಧ್ಯಕ್ಷ ಪ್ರಸ್ತುತ ಕಟೀಲು ಪಂ. ಸದಸ್ಯ

ದೇಶದಲ್ಲಿ ಪ್ರಸಿದ್ದಿ ಹೊಂದಿರುವ ಧಾರ್ಮಿಕ ಕ್ಷೇತ್ರವಾದ ಕಟೀಲು ದೇವಳಕ್ಕೆ ಪ್ರವಾಸೋಧ್ಯಮವನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಆಧುನಿಕ ಸೌಕರ್ಯಗಳನ್ನು ಕೇಂದ್ರ ಸರಕಾರ, ಕರ್ನಾಟಕ ಸರಕಾರ ಹಾಗೂ ಮುಜರಾಯಿ ಇಲಾಖೆ ಈ ಪಂಚಾಯಿತಿಗೆ ಅನುದಾನ ದೊರಕಿಸಿಕೊಡಬೇಕಾಗಿದೆ. ಈಶ್ವರ್ ಕಟೀಲು ಜಿಲ್ಲಾ ಪಂಚಾಯಿತಿ ಸದಸ್ಯ ಕಟೀಲು

Kateel-19111502

 

Comments

comments

Comments are closed.

Read previous post:
Kateel-19111501
ಕಟೀಲು ರಸ್ತೆ ತಡೆ ಪ್ರತಿಭಟನೆ

ಕಿನ್ನಿಗೋಳಿ: ಹಲವಾರು ವರ್ಷಗಳಿಂದ ಡಾಮರೀಕರಣ ಗೊಳ್ಳದ ಕಟೀಲು ಸಮೀಪದ ಗಿಡಿಗೆರೆ-ಕೊಂಡೇಲ ರಸ್ತೆಯಲ್ಲಿ ಕೊಂಡೇಲ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಣೆ ನಡೆಸಿದರು.

Close