ಮಹಮ್ಮಾಯಿ ದೇವಳದಲ್ಲಿ ಕಳ್ಳತನ

ಕಿನ್ನಿಗೋಳಿ : ಕಿನ್ನಿಗೋಳಿ ಮೂಡಬಿದ್ರೆ ರಾಜ್ಯ ಹೆದ್ದಾರಿ ಮೂರುಕಾವೇರಿ ಬಳಿಯ ಶ್ರೀ ಮಹಮ್ಮಾಯಿ ದೇವಳದ ಗರ್ಭಗುಡಿ ಹೊಕ್ಕ ಕಳ್ಳರು ದೇವರ ರಜತ ಪ್ರಭಾವಳಿ ಹಾಗೂ ಚಿನ್ನದ ಕಿವಿಯೋಲೆಯನ್ನು ಹಾಗೂ ಕಾಣಿಕೆ ಡಬ್ಬಿಯ ಒಂದಿಷ್ಟು ಹಣವನ್ನು ಕದ್ದೊಯ್ದ ಘಟನೆ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ದೇವಳಕ್ಕೆ ಭಾನುವಾರ ತಡ ರಾತ್ರಿ ಕಳ್ಳರು ನುಗ್ಗಿ ಸುಮಾರು ಎರಡೂವರೆ ಲಕ್ಷ ರೂ ಬೆಲೆ ಬಾಳುವ ನಗ ನಗದನ್ನು ಕಳವುಗೈದಿದ್ದಾರೆ ಎಂದು ಅಂದಾಜಿಸಲಾಗಿದೆ.
ದೇವಳದ ಗರ್ಭಗುಡಿಯ ಚಿಲಕ ಹೊಡೆದು ದೇವಿಯ ಮೂರು ಕಿಲೋ ಗ್ರಾಂ ತೂಕದ ಬೆಳ್ಳಿಯ ಪ್ರಭಾವಳಿ, ಎರಡು ಪವನ್ ತೂಕದ ಚಿನ್ನದ ಕಿವಿಯೋಲೆ, ಚಾಮುಂಡೇಶ್ವರೀ ಗುಡಿಯ 200 ಗ್ರಾಂ ತೂಕದ ಬೆಳ್ಳಿಯ ಪಾಪೆ, ಅರ್ಧ ಪವನ್ ತೂಕದ ಬಂಗಾರದ ಕರಿಮಣಿ ಸರ ಮತ್ತು ಕಲ್ಕುಡ ಕಲುರ್ಟಿ ದೈವದ ಗುಡಿಯಲ್ಲಿನ ಒಂದುವರೆ ಕಿಲೋಗ್ರಾಂ ತೂಕದ ಬೆಳ್ಳಿಯ ಕಡ್ತಲೆ, ಚವಲ, ಚೆಂಬು ಹಾಗೂ ಕಾಣಿಕೆ ಡಬ್ಬಿಗಳಲ್ಲಿನ ಹಣವನ್ನು ಕದ್ದೊಯ್ದಿದ್ದಾರೆ. ದೇವಿಯ ಬಂಗಾರದ ಕರಿಮಣಿ ಸರ ಮತ್ತು ಬಳೆಗಳು ತೋಡಿಸಿದ ಸ್ಥಿತಿಯಲ್ಲಿಯೇ ಬಿಟ್ಟಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಸ್ಥಳಕ್ಕೆ ಮುಲ್ಕಿ ಪೋಲಿಸರು, ಶ್ವಾನ ದಳ, ಬೆರಳಚ್ಚು ತಜ್ಞರು ಬೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ. ಅಭಯಚಂದ್ರ ಜೈನ್ ತ್ವರಿತ ತನಿಖೆ ನಡೆಸುವಂತೆ ಪೋಲೀಸ್ ಇಲಾಖೆಗೆ ಆದೇಶಿಸಿದರು. ಶಾಸಕರ ಅನುದಾನದಲ್ಲಿ ದೇವಳಕ್ಕೆ ಸಿ.ಸಿ. ಕ್ಯಾಮಾರ ಅಳವಡಿಸಲಾಗುವುದು ಎಂದು ತಿಳಿಸಿದರು.

ನಾಲ್ಕು ವರ್ಷದಲ್ಲಿ ಮೂರು ಬಾರಿ ಕಳ್ಳತನ
ಮಹಾಮ್ಮಯಿ ದೇವಳಲ್ಲಿ ನಾಲ್ಕು ವರ್ಷದಲ್ಲಿ ಮೂರನೇ ಬಾರಿಗೆ ಕಳವು ನಡೆದಿದೆ, ಹಿಂದೆ ಎರಡು ಬಾರಿ ನುಗ್ಗಿದ ಕಳ್ಳರು, ದೇವರ ಗಂಟೆ, ದೀಪ, ಇನ್ನಿತರ ಚಿಕ್ಕಪುಟ್ಟ ಸಾಮಾಗ್ರಿಗಳನ್ನು ಕಳವು ಗೈದಿದ್ದು ಈ ಸಲ ದೊಡ್ಡ ಮಟ್ಟದಲ್ಲಿ ಕಳವುಗೈದಿದ್ದಾರೆ.

ಕಿನ್ನಿಗೋಳಿ ಮುಲ್ಕಿ ಪರಿಸರದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು. ಪ್ರಕರಣಗಳಲ್ಲಿನ ಕಳ್ಳರು ಇನ್ನೂ ಪತ್ತೆಯಾಗುತ್ತಿಲ್ಲ ಕಳೆದ ನವೆಂಬರ್ ತಿಂಗಳಲ್ಲಿ ಕಿನ್ನಿಗೋಳಿ ಎಸ್.ಕೆ.ಗೋಲ್ಡ್ ಸ್ಮಿತ್ ಇಂಡಸ್ಟ್ರೀಯಲ್ ಕೋ-ಒಪರೇಟಿವ್ ಸೊಸೈಟಿ ಬ್ಯಾಂಕ್‌ಗೆ ಕಳ್ಳರು ನುಗ್ಗಿ 5 ಕೋಟಿಗೂ ಮಿಕ್ಕಿ ಚಿನ್ನದ ಒಡವೆಗಳನ್ನು ಕಳವುಗೈದಿದ್ದರು. ಪಕ್ಷಿಕೆರೆಯಲ್ಲಿನ ಸರಣಿ ಮನೆ ಕಳ್ಳತನ, ತೋಕೂರು, ಮುಲ್ಕಿ ನಾರಾಯಣಗುರು ಮಂದಿರದಲ್ಲಿ ನಡೆದ ಕಳವು ಪ್ರಕರಣಗಳು ಪೂಲೀಸರಿಗೆ ನಿದ್ದೆಗೆಡಿಸಿದಂತಾಗಿದೆ.
ದೇವಳಗಳಲ್ಲಿರುವ ದೇವರ ಬಂಗಾರ, ಬೆಳ್ಳಿಯ ಆಭರಣ ಹಾಗೂ ಮೌಲ್ಯಯುತ ಸೊತ್ತುಗಳ ಭದ್ರತೆಯ ಬಗ್ಗೆ ಸೂಕ್ತ ಸಲಹೆ ಸೂಚನೆಗಳು ಮತ್ತು ದೇವಳಗಳಿಗೆ ನಂಬಿಕಸ್ಥ ಸೆಕ್ಯುರಿಟಿ ಗಾರ್ಡ್, ಸಿ.ಸಿ ಕ್ಯಾಮರಾ, ಸೈರನ್ ವ್ಯವಸ್ಥೆಯನ್ನು ಅಳವಡಿಸುವುದಲ್ಲದೆ ವಿಶೇಷ ಹಬ್ಬ ಹಾಗೂ ಜಾತ್ರೆಗಳ ಸಮಯದಲ್ಲಿ ಮಾತ್ರ ಚಿನ್ನಾಭರಣಗಳನ್ನು ಗರ್ಭಗುಡಿಯಲ್ಲಿರಿಸಿ ನಂತರ ಲಾಕರ್‌ನಲ್ಲಿ ಇರಿಸುವಂತೆ ಸಂಬಂಧಪಟ್ಟ ಇಲಾಖೆಗಳು ಹಲವು ಬಾರಿ ಸೂಚಿಸಿದ್ದರೂ ಕೆಲವು ದೇವಳದ ಆಡಳಿತ ಮಂಡಳಿಗಳು ಹಾಗೂ ಸಾರ್ವಜನಿಕರು ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳದಿರುವುದು ವಿಷಾದನೀಯ ಸಂಗತಿ.

Kinnigoli-18011603 Kinnigoli-18011604 Kinnigoli-18011605 Kinnigoli-18011606

Comments

comments

Comments are closed.

Read previous post:
Kinnigoli-18011602
ಕಿನ್ನಿಗೋಳಿ ರಾಷ್ಟ್ರೀಯ ರಸ್ತೆ ಸುರಕ್ಷಿತ ಸಪ್ತಾಹ – 2016

ಕಿನ್ನಿಗೋಳಿ: ಮಂಗಳೂರು ನಗರ ಸಂಚಾರ ಪೊಲೀಸ್ ಹಾಗೂ ಕಿನ್ನಿಗೋಳಿ ಬಸ್ಸು ಮಾಲಕರ ಸಂಘ, ಲಾರಿ ಮಾಲಕರ ಸಂಘ, ಬಸ್ಸು ಚಾಲಕ ನಿರ್ವಾಹಕರ ಸಂಘ, ಕಿನ್ನಿಗೋಳಿ ಟೆಂಪೋ ಚಾಲಕ...

Close