ಕಟೀಲು ಜಿಲ್ಲಾ ಪಂಚಾಯಿತಿ

ಕಿನ್ನಿಗೋಳಿ: ಪುರಾಣ ಪ್ರಸಿದ್ಧ ಕಟೀಲು ದೇವಳವನ್ನು ಹೊಂದಿರುವ ಕಟೀಲು ಜಿಲ್ಲಾ ಪಂಚಾಯಿತಿ ಕ್ಷೇತ್ರ ನಿಡ್ಡೋಡಿಯಿಂದ ಚೇಳ್ಯಾರು ತನಕ ನಂದಿನಿ ನದಿಯ ತೀರವನ್ನು ಹೊಂದಿರುವ ಕೃಷಿಯಾಧರಿತ ವಿಶಿಷ್ಟ ಜಿಲ್ಲಾ ಪಂಚಾಯಿತಿಯಾಗಿದೆ.
ಕಟೀಲು ಜಿ. ಪಂ. ಕ್ಷೇತ್ರದಲ್ಲಿ ಮೆನ್ನಬೆಟ್ಟು, ಕಟೀಲು, ಚೇಳಾರು, ಎಕ್ಕಾರು, ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿಗಳು ವ್ಯಾಪ್ತಿಯಲ್ಲಿ ಬರುತ್ತವೆ.

ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿಕ್ಕೊಳಪಟ್ಟ ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಿಂದ ಕರ ಸೇವಾ ತೆರಿಗೆಗಳ ಆದಾಯದಲ್ಲಿ ಬಹಳಷ್ಟು ಹಿಂದುಳಿದಿದ್ದ ಕಟೀಲು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮೆನ್ನಬೆಟ್ಟು ಹಾಗೂ ಇತರ ಗ್ರಾಮ ಪಂಚಾಯಿತಿಗಳು ಕಳೆದ ಹತ್ತು ವರ್ಷಗಳಿಂದ ಎಲ್ಲಾ ಮೂಲ ಸೌಕರ್ಯಗಳಿಗೆ ಒತ್ತು ಕೊಟ್ಟು ಕೆಲಸ ಕಾರ್ಯ ಕೆಲಸಗಳು ನಡೆದಿದ್ದರಿಂದ ಅಲ್ಲದೆ ಪ್ರಸಿದ್ಧ ಕಟೀಲು ದೇವಳದ ಅಭಿವೃದ್ದಿಯಾದಂತೆ ಗ್ರಾಮ ಪಂಚಾಯಿತಿಗಳು ಏಳಿಗೆ ಕಂಡುಕೊಂಡವು.
ಈ ಬಾರಿ ಸಾಮಾನ್ಯ ಮಹಿಳಾ ಮೀಸಲಾತಿ ಬಂದಿದ್ದು ಕಾಂಗ್ರೆಸ್‌ನಿಂದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಾ ಸಿಕ್ವೇರಾ ಹಾಗೂ ಬಿಜೆಪಿಯಿಂದ ಕೆಮ್ರಾಲ್ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೆಸರು ಅಂತಿಮವಾಗಿದೆ.
ಇತ್ತಿಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಕಟೀಲು ಜಿಲ್ಲಾ ಪಂಚಾಯಿತಿಗೆ ಸೇರಿದ ಕಲ್ಲಮುಂಡ್ಕೂರು, ಕಟೀಲು, ಎಕ್ಕಾರು, ಸೂರಿಂಜೆ, ಚೇಳ್ಯಾರು ಕೆಮ್ರಾಲ್ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಜಯಬೇರಿಯೊಂದಿಗೆ ಉತ್ತಮ ಸ್ಥಿತಿಯಲ್ಲಿದೆ. ಅಲ್ಲದೆ ಕಳೆದ 2010 ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ 1953 ಮತಗಳಿಂದ ಜಯಗಳಿಸಿತ್ತು. ಈಗ ಕಾಂಗ್ರೇಸ್ ಸರಕಾರವಿರುವುದರಿಂದ ಸ್ಪರ್ಧೆ ತುರುಸಾಗುವ ಸಾಧ್ಯತೆಗಳೇ ಹೆಚ್ಚು.
ಕಳೆದ ಬಾರಿ ಹಿಂದುಳಿದ ವರ್ಗ ‘ಎ’ ಮೀಸಲಾತಿ ಇದ್ದು ಬಿಜೆಪಿಯ ಈಶ್ವರ್ ಕಟೀಲ್ 8909 ಮತಗಳನ್ನು ಪಡೆದು ಜಯಶಾಲಿಯಾಗಿದ್ದರು. ಕಾಂಗ್ರೆಸ್‌ನ ಪ್ರಮೋದ್ ಕುಮಾರ್ 6956, ಜೆಡಿಎಸ್‌ನ ಕೆ. ಎ. ಅಬ್ದುಲ್ಲಾ 1471 ಮತಗಳನ್ನು ಪಡೆದಿದ್ದರು.
ಎರಡು ರಾಜಕೀಯ ಪಕ್ಷಗಳಲ್ಲಿ ಗುಂಪುಗಾರಿಕೆ ಕಂಡು ಬರುತ್ತಿದ್ದು ಸಣ್ಣ ಪುಟ್ಟ ಎಡವಟ್ಟುಗಳು ಕೂಡ ಪಕ್ಷಗಳ ಗೆಲುವಿಗೆ ಮಾರಕವಾಗಬಲ್ಲುದು. ಪಕ್ಷಗಳು ಒಗ್ಗಟ್ಟಾಗಿ ಶ್ರಮಿಸಿದಲ್ಲಿ ತೆಳು ಅಂತರದಲ್ಲಿ ಗೆಲ್ಲಬಹುದು. ಕಾಂಗ್ರೇಸ್ ಇಲ್ಲಿ ಜಾಣ ನಡೆ ನಡೆಸುವಲ್ಲಿ ತಯಾರಿ ಮಾಡುತ್ತಿದೆ.
ಸುಮಾರು 80 ಲಕ್ಷದ ರಸ್ತೆ, 50 ಲಕ್ಷದ ಪೈಪ್ ಲೈನ್ ಕಾಮಗಾರಿ, 6 ನೀರಿನ ಟಾಂಕಿ, ಬಾವಿಗಳು ಹಾಗೂ ಇನ್ನಿತರ ಇಲಾಖೆಗಳ ಶಿಫರಾಸುಗಳ ಮೂಲಕ ಹಲವು ಕಾಮಗಾರಿಗಳು ನಡೆದಿವೆ. ಸುವರ್ಣ ಗ್ರಾಮ ಯೋಜನೆಗಳು ಪ್ರಗತಿಯಲ್ಲಿವೆ.

ಕಳೆದ 3 ಚುನಾವಣೆಗಳಲ್ಲಿ ಜಿಲ್ಲಾ ಪಂಚಾಯತ್‌ನಲ್ಲಿ ಗೆದ್ದವರು
2005 ರಲ್ಲಿ ಶೈಲಾ ಸಿಕ್ವೇರಾ (ಕಾಂಗ್ರೇಸ್), 2010- ಈಶ್ವರ್ ಕಟೀಲ್ (ಬಿಜೆಪಿ) ಸುವರ್ಣ ಗೆಲುವು ಸಾಧಿಸಿದ್ದಾರೆ.
ಒಟ್ಟು 30833 ಮತದಾರರಿದ್ದಾರೆ. 14813 ಪುರುಷರು ಹಾಗೂ 16020 ಮಹಿಳಾ ಮತದಾರರಿದ್ದು ಹೊಸ ಪಟ್ಟಿ ಸೇರ್ಪಡೆಯಾದರೆ 35000 ಸಮೀಪ ಬರಬಹುದು.

ಕೃಷಿಯಾಧರಿತ ಗ್ರಾಮೀಣ ಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಹಲವು ಕಿಂಡಿ ಅಣೆಕಟ್ಟುಗಳು, ಕೃಷಿ ತೋಡುಗಳನ್ನು ಹೂಳೆತ್ತುವ ಕಾರ್ಯ, ಹೆಚ್ಚಿನ ಕೊಂಡಿ ರಸ್ತೆಗಳು ಕಾಂಕ್ರೀಟಿಕರಣ, ಡಾಮಾರೀಕರಣ ಹಾಗು ಕುಡಿಯುವ ನೀರಿನ ವ್ಯವಸ್ಥೆಗಳು ಅಭಿವೃದ್ಧಿಗೊಂಡಿವೆ. ಸುವರ್ಣ ಗ್ರಾಮ ಯೋಜನೆ ಮತ್ತಿತರ ಅನುದಾನಗಳ ಮೂಲಕ ಕ್ಷೇತ್ರದಲ್ಲಿ ಹಲವು ಕೋಟಿ ರೂ.ಗಳ ಕಾಮಗಾರಿಗಳು ನಡೆದಿವೆ.

ಗ್ರಾಮೀಣ ಪ್ರದೇಶದಲ್ಲಿ ಕೆಲವು ವರ್ಷದ ಮೊದಲು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸಂಯೋಜನೆಯಲ್ಲಿ ರಾಜ್ಯದಲ್ಲಿ ಪ್ರಥಮವಾಗಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭ ಮಾಡಲಾಗಿದ್ದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಕಟೀಲು ದೇವಳ ಮತ್ತು ಜನಪ್ರತಿನಿಧಿಗಳ ನಿರಂತರ ಹೋರಾಟದಿಂದ ಕಟೀಲು ದೇವಳದಲ್ಲಿ ದ್ರವತ್ಯಾಜ್ಯ ಘಟಕ ಕಾರ್ಯಾಚರಿಸುತ್ತಿದೆ. ಘನ ತ್ಯಾಜ್ಯ ಘಟಕ ಮಾಡುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.

ಆಗಬೇಕಾದದ್ದು
ಕಟೀಲು ದೇವಳದ ರಥ ಬೀದಿಯಲ್ಲಿ ವಾಹನ ಸಂಚಾರ ಮುಕ್ತವಾಗಬೇಕು, ಮೂಲಸೌಲಭ್ಯಗಳನ್ನೊಳಗೊಂಡ ಬಸ್ಸು ತಂಗುದಾಣ, ಶೌಚಾಲಯ ಸ್ನಾನಗೃಹ ವಸತಿ ವ್ಯವಸ್ಥೆ ಆಗಬೇಕಾಗಿದೆ.
ಅಧಿಕ ಆದಾಯವಿರುವ ದೇವಳಗಳಲ್ಲಿ ಒಂದಾಗಿರುವ ಕಟೀಲು ದೇವಳ ಪರಿಸರದಲ್ಲಿ ಹಲವಾರು ವರ್ಷಗಳಿಂದ ಒಳಚರಂಡಿ ವ್ಯವಸ್ಥೆಯೇ ಇಲ್ಲದಿರುವುದು ವಿಪರ್ಯಾಸ. ಹಲವು ವರ್ಷಗಳಿಂದ ಈ ಇಲಾಖೆಯಿಂದ ಇಲಾಖೆಗೆ ಕಡತಗಳು ಹೋಗುತ್ತಿದೆ ವಿನಾ: ಫಲಿತಾಂಶ ಮಾತ್ರ ಶೂನ್ಯವಾಗಿದೆ. ಗ್ರಾಮಸ್ಥರು, ಜನಪ್ರತಿನಿಧಿಗಳು ಸಂಬಂದಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಯೋಜನೆ ಮಾತ್ರ ಇನ್ನೂ ಕಾರ್ಯಗತವಾಗಿಲ್ಲ. ಪ್ರವಾಸೋಧ್ಯಮ ಇಲಾಖೆ ಮತ್ತು ಧಾರ್ಮಿಕ ದತ್ತಿ ಇಲಾಖೆ ಜಂಟೀಯಾಗಿ ಈ ಬಗ್ಗೆ ಗಮನಕೊಡಬೇಕಾಗಿದೆ.

ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಗುಮ್ಮ ಕಲ್ಲಮುಂಡ್ಕೂರು ಗ್ರಾಮಸ್ಥರಿಗೆ ನುಂಗಲಾರದ ತುತ್ತಾಗಿದೆ. ಇದರ ಬಗ್ಗೆ ಯಾರಲ್ಲೂ ಸ್ಪಷ್ಟ ಮಾಹಿತಿಯಿಲ್ಲ. ಜನಪ್ರತಿನಿಧಿಗಳು ಇಲಾಖಾಧಿಕಾರಿಗಳು ನಿಖರ ಉತ್ತರ ಗ್ರಾಮಸ್ಥರಿಗೆ ನೀಡಬೇಕಾಗಿದೆ.
ಕಟೀಲು – ಕಿನ್ನಿಗೋಳಿ ಬೈಪಾಸ್ ರಸ್ತೆ ಆಗಬೇಕಾಗಿದೆ.
ನೆರೆಪೀಡಿತ ನಡುಗೋಡು ಕಿಲೆಂಜೂರು, ಶಿಬರೂರು ಪಂಜ ಪ್ರದೇಶದಲ್ಲಿ ಸುಸಜ್ಜಿತ ತಡೆಗೋಡೆ ಆಗಬೇಕಾಗಿದೆ. ಪಂಜ-ಮಧ್ಯ ಖಡ್ಗೇಶ್ವರೀ ದೇವಳದ ರಸ್ತೆ ಪೂರ್ಣವಾಗಬೇಕು ಇಲ್ಲಿಯೇ ನದಿಗೆ ಸೇತುವೆ ಆದಲ್ಲಿ ಕಿನ್ನಿಗೋಳಿ ಸುರತ್ಕಲ್ ದಾರಿ ಹತ್ತಿರವಾಗಲಿದೆ.

ಸುಮಾರು 50 ವರ್ಷಗಳ ಹಿಂದೆ ಕಟ್ಟಿದ ಸಿತ್ಲ ಪರಕಟ್ಟ ಅಣೆಕಟ್ಟು ಪರಿಸರದ ಮುನ್ನೂರು ಎಕರೆಗೂ ಮಿಕ್ಕಿ ಕೃಷಿ ಭೂಮಿಗೆ ನೀರು ಉಣಿಸುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ನಬಾರ್ಡ್ ಯೋಜನೆಯಡಿ ಕಟ್ಟಿದ್ದ ಹೊಸ ಕಿಂಡಿ ಅಣೆಕಟ್ಟು ಬಳಕೆಯಾಗದೆ ಉಳಿದಿದ್ದು ಸರಿಯಾದ ನಿರ್ವಹಣೆ ಇಲ್ಲದೆ ಹಾಗೂ ವೈಜ್ಞಾನಿಕ ತಾಂತ್ರಿಕ ದೋಷಗಳಿಂದ ಹಾಗು ಸಂಬಂಧಪಟ್ಟವರ ನಿರ್ಲಕ್ಷ ದೋರಣೆಯಿಂದ ಕಿಂಡಿ ಅಣೆಕಟ್ಟು ನೆನೆಗುದಿಗೆ ಬಿದ್ದಿದೆ. ಅಣೆಕಟ್ಟಿನ ಎರಡು ಬದಿಯಲ್ಲಿ ತಡೆಗೋಡೆ ನಿರ್ಮಿಸಿದರೆ ಮಾತ್ರ ಪರಿಸರ ಸುರಕ್ಷಿತವಾಗಬಲ್ಲುದು ಇಲ್ಲವಾದಲ್ಲಿ ಮಳೆಗಾಲದಲ್ಲಿ ಕೃಷಿ ಭೂಮಿ ನೆರೆಯಲ್ಲಿ ಹಾನಿ ಅಥವಾ ಕೃಷಿಭೂಮಿ ಕುಸಿತವಾಗಿ ಅಪಾರ ನಷ್ಟವಾಗಲಿದೆ. ಕಿಂಡಿ ಅಣೆಕಟ್ಟು ಸೂಕ್ತ ರೀತಿ ಕಾರ್ಯಾಚರಿಸಿದಲ್ಲಿ ಸಮೀಪದ ಅಜಾರು ಪರಿಸರದಲ್ಲಿ ನೀರಿನ ಅಂತರ್ಜಲ ಸಾಕಷ್ಟು ಹೆಚ್ಚಾಗಲಿದೆ. ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತ್ವರಿತ ಗಮನಕೊಡಬೇಕಾಗಿದೆ.

Kateel-10021606

Comments

comments

Comments are closed.

Read previous post:
Mulki-10021605
ನೂತನ ರಜತ ರಥ ಸಮರ್ಪಣಾ ಸಮಾರಂಭ

ಮೂಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನೂತನ ರಜತ ರಥ ಸಮರ್ಪಣಾ ಸಮಾರಂಭ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದಂಗಳ ಅಮೃತ ಹಸ್ತಗಳಿಂದ ವಿಜೃಂಭಣೆಯಿಂದ ಸಮರ್ಪಿಸಲಾಯಿತು.

Close