ಟೋಲ್ ಗೇಟ್ ಅವ್ಯವಸ್ಥಿತ ಸುಂಕ ವಸೂಲಿ

Kinnigoli-0703201608

ಕಿನ್ನಿಗೋಳಿ: ಸುರತ್ಕಲ್ ಸಮೀಪದ ಎನ್‌ಐಟಿಕೆ ಟೋಲ್ ಗೇಟ್ ಗುತ್ತಿಗೆದಾರ ಸಂಸ್ಥೆಯು ಇದೀಗ ದಿನಂಪ್ರತಿ ಸಂಚರಿಸುವ ಖಾಸಗಿ ಬಸ್‌ಗಳಿಗೆ ಏಕಮುಖ ಸಂಚಾರಕ್ಕೆ 75 ರೂ. ವಿಧಿಸುವ ಮೂಲಕ ಬಸ್ ಮಾಲಕರನ್ನು ಬೆದರಿಸಿ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷ ದುರ್ಗಾ ಪ್ರಸಾದ್ ಹೆಗ್ಡೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದಾರೆ. ಕಿನ್ನಿಗೋಳಿ ಸುರತ್ಕಲ್ ಮಾರ್ಗವಾಗಿ ಮಂಗಳೂರು ಕಡೆಗೆ 33 ಬಸ್ಸುಗಳು ಸಂಚರಿಸುತ್ತಿದ್ದು ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಗುತ್ತಿಗೆದಾರ ಸಂಸ್ಥೆ ಖಾಸಗಿ ಬಸ್ ಮಾಲಕರೊಂದಿಗೆ ಮಾತುಕತೆ ಮೂಲಕ ತಿಂಗಳಿಗೆ 5,100 ರೂ ಟೋಲ್ ಪಾವತಿಸುತ್ತಿದ್ದು, ಮುಂದಿನ ದಿನಗಳಲ್ಲಿ ಟೋಲ್ ನಲ್ಲಿ ರಿಯಾಯತಿ ನೀಡುವಂತೆ ಮನವಿ ಮಾಡಲಾಗಿತ್ತು. ಗುತ್ತಿಗೆದಾರರು, ಟೋಲ್ ಗೇಟ್ ನಿರ್ಮಾಣ ಕಾರ್ಯ ವಿಳಂಬಗೊಂಡಿದ್ದರಿಂದ ನಾವು ತೀವ್ರ ನಷ್ಟದಲ್ಲಿರುವ ಕಾರಣ ಎರಡು ತಿಂಗಳ ನಂತರ ಇನ್ನಷ್ಟು ರಿಯಾಯತಿ ಮಾಡುವ ಭರವಸೆ ನೀಡಿದ್ದರು. ಇದೀಗ ಎರಡು ತಿಂಗಳು ಮುಗಿದಿದ್ದು ಈಗ ಗುತ್ತಿಗೆದಾರರು ಬಸ್ಸು ಮಾಲಕರ ಯಾವುದೇ ಯಾವುದೇ ಕರೆಗಳನ್ನು ಸ್ವೀಕರಿಸದೆ ಮಾತುಕತೆಗೂ ಮುಂದಾಗದೆ ಏಕಮುಖ ಸಂಚಾರಕ್ಕೆ 75 ರೂಪಾಯಿಯಂತೆ ವಸೂಲು ಮಾಡುತ್ತಿದ್ದು ಹಗಲು ದರೋಡೆ ನಡೆಸುತ್ತಿದ್ದಾರೆ, ಹಲವು ಬಸ್ಸುಗಳು ದಿನಕ್ಕೆ ಐದಾರು ಬಾರಿ ಸಂಚರಿಸುತ್ತಿದ್ದು ತುಂಬಾ ದುಬಾರಿ ಮೊತ್ತ ನೀಡಬೇಕಾಗುತ್ತದೆ. ದಬ್ಬಾಳಿಕೆಯ ಪ್ರವೃತ್ತಿ ಖಂಡನೀಯ ಎಂದರು.
ಈಗಾಗಲೇ ಸರಕಾರಿ ಬಸ್ಸುಗಳು ದರ ಏರಿಸಿದರೂ, ಖಾಸಗಿ ಬಸ್ಸುಗಳು ದರ ಏರಿಸದೆ ವಿದ್ಯಾರ್ಥಿಗಳಿಗೆ 50 ಶೇಕಡ, ನಿತ್ಯ ಪ್ರಯಾಣಿಕರಿಗೆ 30 ಶೇಕಡ ರಿಯಾಯಿತಿ ನೀಡಿ ಜನಪರ ಸೇವೆ ನೀಡುತ್ತಿದ್ದೇವೆ. ತಾರತಮ್ಯದ ಸುಂಕ ವಸೂಲಿ ನಡೆಯುತ್ತಿದೆ ಎಂಬ ಗುಮಾನಿಯ ಬಗ್ಗೆ ಜನರಾಡಿಕೊಳ್ಳುತ್ತಿದ್ದಾರೆ.
ಗುತ್ತಿಗೆದಾರರ ದಬ್ಬಾಳಿಕೆಯ ಪ್ರವೃತ್ತಿಬಗ್ಗೆ ಸಂಸದರು ಶಾಸಕರು, ದ.ಕ. ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಇಲಾಖೆಗೆ ದೂರು ಹಗೂ ಮನವಿ ನೀಡುತ್ತೇವೆ. ಜಿಲ್ಲಾಡಳಿತ ಮತ್ತು ಸಂಬಂದ ಪಟ್ಟವರು ಮಧ್ಯಸ್ಥಿಕೆ ವಹಿಸಿ ತ್ವರಿತ ಸಮಸ್ಯೆಯನ್ನು ಪರಿಹರಿಸಬೇಕು, ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಟೋಲ್ ಗೇಟ್ ಮೂಲಕ ಹಾದು ಹೋಗುವ ಮಂಗಳೂರು, ಉಡುಪಿಯ ಎಲ್ಲಾ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು. ಎಲ್ಲಾ ಬಸ್ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳು ಇದಕ್ಕೆ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು
ಸುದ್ದಿಗೋಷ್ಠಿಯಲ್ಲಿ ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘದ ಕಾರ್ಯದರ್ಶಿ ಸ್ವರಾಜ್ ಶೆಟ್ಟಿ, ಶಶಿ ಅಮೀನ್, ಜಗದೀಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಪಿ ಸತೀಶ್ ರಾವ್, ಸುದೇಶ್ ಮರೋಳಿ, ಮಂಜುನಾಥ್, ಕಿನ್ನಿಗೋಳಿ ವಲಯ ಬಸ್ ಚಾಲಕ ನಿರ್ವಾಹಕರ ಸಂಘದ ಅಧ್ಯಕ್ಷ ಭಾಸ್ಕರ್ ಪೂಜಾರಿ, ಗುಲಾಮ್ ಹುಸೈನ್ ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-0703201607
ಎಪ್ರಿಲ್ 27 ಕಟೀಲು ಉಚಿತ ಸಾಮೂಹಿಕ ವಿವಾಹ

ಕಿನ್ನಿಗೋಳಿ: ಕಟೀಲು ದಿ. ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಕಟೀಲು ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿಯ ಆಶ್ರಯದಲ್ಲಿ ಉಚಿತ ಸಾಮೂಹಿಕ ವಿವಾಹ ಎಪ್ರಿಲ್ 27 ರಂದು ಕಟೀಲಿನ...

Close