ಕಟೀಲು ಪ್ರಾಥಮಿಕ ಶಾಲೆ ಶತಮಾನೋತ್ಸವ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಗೆ ಶತಮಾನೋತ್ಸವದ ಸಂಭ್ರಮ. ಎಪ್ರಿಲ್ ದಿನಾಂಕ 22, 23 ಮತ್ತು 24 ರಂದು ಕಟೀಲು ಶಾಲಾ ಸರಸ್ವತೀ ಸದನದಲ್ಲಿ ಶತಮಾನೋತ್ಸವ ಕಾರ‍್ಯಕ್ರಮಗಳು ನಡೆಯಲಿವೆ ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಅನಂತಪದ್ಮನಾಭ ಆಸ್ರಣ್ಣ ತಿಳಿಸಿದ್ದಾರೆ.
1916ರಲ್ಲಿ ಆರಂಭಗೊಂಡ ಹಿರಿಯ ಪ್ರಾಥಮಿಕ ಶಾಲೆಯು ಇಂದು ಪ್ರೌಢಶಾಲೆ, ಪದವೀಪೂರ್ವ, ಪದವಿ ಕಾಲೇಜು ಅಲ್ಲದೆ ಸಂಸ್ಕೃತ ಸ್ನಾತಕೋತ್ತರ ಪದವಿ ಕಾಲೇಜಿನವರೆಗೆ ಇಲ್ಲಿನ ವಿದ್ಯಾಸಂಸ್ಥೆ ಬೆಳೆದಿದ್ದು ಮೂರು ಸಾವಿರದಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸಲುವಾಗಿ ಈ ವರುಷದಿಂದ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭವಾಗಲಿದೆ.
ಮೂರು ದಿನಗಳ ಕಾಲ ನಡೆಯಲಿರುವ ಶತಮಾನೋತ್ಸವ ವರ್ಷಾಚರಣೆಯ ಸಮಾರಂಭಗಳಿಗೆ ಅಭಯಚಂದ್ರ ಜೈನ್, ಬಿ. ರಮಾನಾಥ ರೈ, ಯು.ಟಿ.ಖಾದರ್, ಮನೋಹರ ತಹಶಿಲ್ದಾರ್, ಕಿಮ್ಮನೆ ರತ್ನಾಕರ, ವಿನಯಕುಮಾರ್ ಸೊರಕೆ, ಶಾಸಕರಾದ ಪ್ರಮೋದ್ ಮಧ್ವರಾಜ್, ಶಕುಂತಳಾ ಶೆಟ್ಟಿ, ಮೊಹಿಯುದ್ದೀನ್ ಬಾವ, ಐವನ್ ಡಿಸೋಜ, ಮಲ್ಲಿಕಾರ್ಜುನ, ಶ್ರೀನಿವಾಸ ಪೂಜಾರಿ, ಪ್ರತಾಪಚಂದ್ರ ಶೆಟ್ಟಿ, ಸಂಸದರಾದ ನಳಿನ್‌ಕುಮಾರ್ ಕಟೀಲು, ಕೇಂದ್ರ ಸರಕಾರದ ಸಚಿವರಾದ ಸದಾನಂದ ಗೌಡ, ವೀರಪ್ಪ ಮೊಯಿಲಿ, ಆಸ್ಕರ್ ಫೆರ್ನಾಂಡಿಸ್, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರು ಮಾಜಿ ಶಾಸಕರು ಹಾಗೂ ಚಲನಚಿತ್ರ ನಟರು, ವೈದ್ಯಕೀಯ ಸಾಧಕರು, ಹಳೇ ವಿದ್ಯಾರ್ಥಿ ಸಾಧಕರು, ಶಿಕ್ಷಣ ಕ್ಷೇತ್ರದ ಕುಲಪತಿಗಳು, ಮುಂಬೈ ಸೇರಿದಂತೆ ವಿದೇಶಗಳ ಹಾಗೂ ಸ್ಥಳೀಯ ಉದ್ಯಮಿಗಳು ಹಾಗೂ ಹಳೇ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ.
ಸಾಧಕರ ಸನ್ಮಾನ ಸಮಾರಂಭ, ಗುರುವಂದನಾರ್ಪಣಾ ಸಮಾರಂಭ, ಸಮಾರೋಪ ಸಮಾರಂಭವು ಜರಗಲಿದೆ. ದಿನಂಪ್ರತಿ 8.00 ರಿಂದ ರಾತ್ರಿ 10.00 ರವರೆಗೆ ಕೊನೆಯ ದಿನ 24 ಗಂಟೆಯೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದ್ದು, ಹಿರಿಯ ಪ್ರಾಥಮಿಕ ಶಾಲಾ, ಪ್ರೌಢಶಾಲಾ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಸಂಸ್ಕೃತ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಹಾಗೂ ಜಿಲ್ಲೆಯ ಹೆಸರಾಂತ ಕಲಾವಿದರಿಂದ ನಾಟ್ಯ, ಸುಗಮಸಂಗೀತ, ಶಾಸ್ತ್ರೀಯ ಸಂಗೀತ, ಜಾನಪದ ನೃತ್ಯ, ಯಕ್ಷಗಾನ, ನಾಟಕ, ಜಾದೂ ಹೀಗೆ ವಿಭಿನ್ನ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು. ಶಿಕ್ಷಣ ಕ್ಷೇತ್ರವನ್ನು ಬಾನೆತ್ತರಕ್ಕೆ ಬೆಳೆಸಿದ, ಬೆಳೆಸುವ ಧರ್ಮಪಾಲನಾಥ ಸ್ವಾಮೀಜಿ, ವಿಶ್ವಪ್ರಿಯತೀರ್ಥ ಸ್ವಾಮೀಜಿ, ಚಾರುಕೀರ್ತಿ ಭಟ್ಟಾರಕ ಜೈನಮಠ ಸ್ವಾಮೀಜಿ, ವಿದ್ಯಾಧೀಶತೀರ್ಥ ಸ್ವಾಮೀಜಿ, ಯೋಗಾನಂದ ಸರಸ್ವತಿ ಸ್ವಾಮೀಜಿ, ಮೋಹನದಾಸ ಸ್ವಾಮೀಜಿ, ಗುರುದೇವಾನಂದ ಸ್ವಾಮೀಜಿ, ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಗಳ ಆಶೀರ್ವಚನ ನೀಡಲಿರುವರು. ಸುಧೀರ್ ಶೆಟ್ಟಿ. ಚರಿಷ್ಮಾ ಬಿಲ್ಡರ‍್ಸ್, ಮುಂಬಯಿ ಇವರು ಸಮಾರಂಭವನ್ನು ಉದ್ಘಾಟನೆ ಮಾಡಲಿದ್ದಾರೆ.
ಶತಮಾನೋತ್ಸವದ ಸವಿನೆನಪಿಗಾಗಿ ಕಟೀಲು ಶಿಕ್ಷಣ ಸಂಸ್ಥೆಗಳ ಎಲ್ಲ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಉಚಿತ ಊಟಕ್ಕಾಗಿ ಎರಡು ಕೋಟಿ ರೂಪಾಯಿಯ ಅಕ್ಷರ ದಾಸೋಹ ಕಟ್ಟಡ ನಿರ್ಮಾಣಗೊಳ್ಳುತ್ತಿದೆ ಎಂದು ಅನಂತ ಆಸ್ರಣ್ಣ ತಿಳಿಸಿದರು. ಶ್ರೀಹರಿನಾರಾಯಣದಾಸ ಆಸ್ರಣ್ಣ, ಎಕ್ಕಾರು ರತ್ನಾಕರ ಶೆಟ್ಟಿ, ತಿಮ್ಮಪ್ಪ ಕೋಟ್ಯಾನ್ ಮುಖ್ಯ ಶಿಕ್ಷಣ ಗೋಪಾಲ ಶೆಟ್ಟಿ, ನೀಲಯ ಕೋಟ್ಯಾನ್, ಈಶ್ವರ ಕಟೀಲ್ ಮತ್ತಿತರರಿದ್ದರು.

ಪ್ರಾಥಮಿಕ ಶಾಲೆಯಿಂದ ಸಂಸ್ಕೃತ ಸ್ನಾತಕೋತ್ತರ ಪದವಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಅನ್ನದಾಸೋಹವನ್ನು ಸುಮಾರು 35 ವರ್ಷಗಳಿಂದ ನೀಡುತ್ತಾ ಬಂದಿದ್ದು ಈಗಿನ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವ ಕಾರಣ ಶತಮಾನೋತ್ಸವದ ಸವಿನೆನಪಿಗಾಗಿ ನೂತನ ಅನ್ನದಾಸೋಹ ಕಟ್ಟಡವನ್ನು ದಾನಿಗಳು, ಹಳೇ ವಿದ್ಯಾರ್ಥಿಗಳು, ಮಂಗಳೂರು ಕ್ಷೇತ್ರದ ಸಂಸತ್ ಸದಸ್ಯರಾದ ನಳಿನ್‌ಕುಮಾರ್ ಕಟೀಲು ಹಾಗೂ ಶಾಸಕ ಸಚಿವ ಅಭಯಚಂದ್ರ ಜೈನ್ ಅವರ ನಿಧಿಯಿಂದ 2, 00 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಸಮಾರಂಭಕ್ಕೆ ಹಳೆ ವಿದ್ಯಾರ್ಥಿಗಳು, ಅತ್ತೂರು ಕೊಡೆತ್ತೂರು, ಎಕ್ಕಾರು ಶಿಬರೂರು ಗ್ರಾಮಸ್ಥರು, ಕಟೀಲು ಕ್ಷೇತ್ರದ ಭಕ್ತಾಭಿಮಾನಿಗಳು, ವಿದ್ಯಾಭಿಮಾನಿಗಳು, ಊರ ಪರವೂರಿನ ದಾನಿಗಳು ಆಗಮಿಸಬೇಕಾಗಿ ಪತ್ರಿಕಾ ಪ್ರಕಟಣೆಯ ಮೂಲಕ ಕೋರುತ್ತಿದ್ದೇವೆ.

Kateel-20041601

Comments

comments

Comments are closed.