ನೆನೆಗುದಿಗೆ ಬಿದ್ದ ಮೂಲ್ಕಿ-ಮೂಡಬಿದ್ರಿ ರಾಜ್ಯ ಹೆದ್ದಾರಿ

ಮೂಲ್ಕಿ: ಮೂಲ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅರ್ಧಂಬರ್ಧ  ಕಾಮಗಾರಿಯಿಂದ ನೆನೆಗುದಿಗೆ ಬಿದ್ದ ಮೂಲ್ಕಿ-ಮೂಡಬಿದ್ರಿ ರಾಜ್ಯ ಹೆದ್ದಾರಿ ಸಂಪರ್ಕ ರಸ್ತೆ.
ಕಳೆದ ವರ್ಷ ಮೂಲ್ಕಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಚತುಷ್ಫಥ ಕಾಮಗಾರಿಯ ಸಂದರ್ಭದಲ್ಲಿ ಮೂಲ್ಕಿಯ ವಿಜಯ ಬ್ಯಾಂಕ್ ಎದುರುಗಡೆಯಲ್ಲಿ ಮೂಡಬಿದ್ರಿ, ಕಟೀಲು, ಬಜಪೆಯಿಂದ ಬರುವ ರಾಜ್ಯ ಹೆದ್ದಾರಿ ರಸ್ತೆಯನ್ನು ಮೂಲ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವಲ್ಲಿ ತುಂಡರಿಸಿ ಹಾಕಿದ್ದಾರೆ. ಬಳಿಕ ಮೂಲ್ಕಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ರಸ್ತೆಯ ಕಾಮಗಾರಿ ನಡೆದಿದ್ದು ಸರ್ವಿಸ್ ರಸ್ತೆಯನ್ನು ಒಂದು ಬದಿಯಲ್ಲಿ ಮಾಡಿ ಮತ್ತೊಂದು ಬದಿಯಲ್ಲಿ ಕೆಲವು ಕಟ್ಟಡ ಮಾಲೀಕರ ಲಾಬಿಯಿಂದ ಅರ್ಧದಲ್ಲಿ ನಿಲ್ಲಿಸಿದ್ದಾರೆ. ಮೂಲ್ಕಿ ಪೇಟೆಯಲ್ಲಿ ಮಣ್ಣು ತಂದು ಹಾಕಿ ಅದರ ಮೇಲೆ ರಸ್ತೆ ನಿರ್ಮಿಸಿದ್ದು ರಸ್ತೆಯ ಬದಿಗೆ ತಡೆ ಗೋಡೆ ನಿರ್ಮಿಸಿಲ್ಲ. ರಸ್ತೆಯ ಒಂದು ಬದಿಯಲ್ಲಿ ಚರಂಡಿಯನ್ನು ಮಾಡಿದ್ದು ಮತ್ತೊಂದು ಬದಿಯಲ್ಲಿ ಚರಂಡಿ ನಿರ್ಮಿಸಿಲ್ಲ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರು ಜನವರಿ ತಿಂಗಳಿನಲ್ಲಿ ಅರ್ಧಂಬರ್ಧ ಕಾಮಗಾರಿ ಮಾಡಿ ಬಳಿಕ ಬೇರೆ ಕಡೆಗೆ ಹೋಗಿದ್ದಾರೆ. ಇದೀಗ ಮಳೆಗಾಲ ಆರಂಭಗೊಳ್ಳಲಿದ್ದು ಹೆದ್ದಾರಿ ರಸ್ತೆಯ ಒಂದು ಬದಿಯಲ್ಲಿ ಚರಂಡಿ ಹಾಗೂ ತಡೆ ಗೋಡೆ ನಿರ್ಮಿಸದ ಕಾರಣ ಮಳೆಗೆ ರಸ್ತೆಯ ಅಡಿಯಲ್ಲಿ ಹಾಕಿರುವ ಮಣ್ಣು ಕುಸಿಯುವ ಸಾಧ್ಯತೆಯಿದೆ.ರಸ್ತೆಯ ಬದಿಯಲ್ಲಿ ಆಳವಾದ ಕಣಿವೆಯಿದ್ದು ಇದರಿಂದ ತೊಂದರೆಯಾಗಲಿದೆ.ಚರಂಡಿಯಿಲ್ಲದಿರುವುದರಿಂದ ಮಳೆ ನೀರು ಹರಿದು ಹೋಗಲು ಅಸಾಧ್ಯವಾಗಿದ್ದು ತಗ್ಗು ಪ್ರದೇಶದಲ್ಲಿ ನೀರು ನಿಂತು ತಾತ್ಕಾಲಿಕ ನೆರೆಯಾಗುವ ಸಾಧ್ಯತೆಯಿದೆ.
ಉಡುಪಿ ಕಡೆಯಿಂದ ಮೂಡಬಿದ್ರಿ, ಕಟೀಲು, ಬಜಪೆ ಕಡೆಗೆ ಹೋಗುವವರಿಗೆ ಇದೀಗ ಮೂಲ್ಕಿ ಬಿಲ್ಲವ ಸಂಘದ ಎದುರುಗಡೆ ತಿರುವು ಪಡೆದು ಬಳಿಕ ಮೂಲ್ಕಿ-ಮೂಡಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸ ಬೇಕಾಗಿದೆ. ಮೂಡಬಿದ್ರಿ, ಕಟೀಲು, ಬಜಪೆ ಕಡೆಯಿಂದ ಬರುವ ವಾಹನಗಳು ಕೂಡ ಬಿಲ್ಲವ ಸಂಘದ ಎದುರುಗಡೆಯ ಕಿರು ತಿರುವು ರಸ್ತೆಯಲ್ಲಿ ಸಂಚರಿಸಬೇಕಾಗಿದ್ದು ಇಲ್ಲಿ ಪ್ರತಿದಿನ ಟ್ರಾಫಿಕ್ ಜಾಮ್ ಆಗುತ್ತಿದ್ದು ಜೊತೆಗೆ ಕೆಲವು ವಾಹನಗಳು ವೇಗವಾಗಿ ಬರುವುದರಿಂದ ಅಪಘಾತಗಳು ನಿರಂತರ ನಡೆಯುತ್ತಿದೆ.ಮೂಡಬಿದ್ರಿಯಿಂದ ಮೂಲ್ಕಿಗೆ ವಿಜಯ ಬ್ಯಾಂಕ್ ಎದುರುಗಡೆ ಅಗೆದು ಹಾಕಿರುವ ರಸ್ತೆಗೆ ಸಂಪರ್ಕ ಕಲ್ಪಿಸಿದಲ್ಲಿ ಉಡುಪಿಯಿಂದ ಬರುವ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಿದಲ್ಲಿ ಬಿಲ್ಲವ ಸಂಘದ ಎದುರುಗಡೆಯ ರಸ್ತೆಯಲ್ಲಿ ಉಡುಪಿ, ಮೂಲ್ಕಿ ಕಡೆಗೆ ಹೋಗುವ ವಾಹನಗಳಿಗೆ ಸುಗಮವಾಗಿ ಸಂಚರಿಸಲು ಸಾಧ್ಯವಿದೆ. ಇದರಿಂದ ಟ್ರಾಫಿಕ್ ಜಾಮ್ ಅನ್ನು ತಪ್ಪಿಸಲು ಸಾಧ್ಯವಿದೆ. ಈ ಬಗ್ಗೆ ಮೂಲ್ಕಿ ನಗರ ಪಂಚಾಯತ್ ಆಸಕ್ತಿ ವಹಿಸುತ್ತಿಲ್ಲ. ರಾಷ್ತ್ರೀಯ ಹೆದ್ದಾರಿ ಇಲಾಖೆಗೆ ತಿಳಿಸಿದ್ದು ಅವರು ಸರಿಪಡಿಸಿ ಕೊಡುವುದಾಗಿ ಉತ್ತರ ನೀಡುತ್ತಾರೆ.
ಮೂಲ್ಕಿ ನಗರ ಪಂಚಾಯತ್ ನ ನಿರ್ಲಕ್ಷತನದಿಂದಾಗಿ ವಿಜಯ ಬ್ಯಾಂಕ್ ಎದುರುಗಡೆಯ ರಸ್ತೆಯೀಗ ವಾಹನಗಳ ಪಾರ್ಕಿಂಗ್ ಗೆ ಉಪಯೋಗವಾಗುತ್ತಿದೆ. ಕೆಲವರ ಲಾಬಿಯಿಂದಾಗಿ ನಗರ ಪಂಚಾಯತ್ ಕೂಡ ರಸ್ತೆಯನ್ನು ಸಂಪರ್ಕ ಕಲ್ಪಿಸಲು ಆಸಕ್ತಿ ವಹಿಸುತ್ತಿಲ್ಲ. ರಾಷ್ಟ್ರೀಯ ಹೆದ್ದಾರಿಯವರು ಹೆದ್ದಾರಿ ರಸ್ತೆ ನಿರ್ಮಿಸುವಾಗ ಸುಮಾರು ಮೂರರಿಂದ ನಾಲ್ಕು ಅಡಿ ಹೆದ್ದಾರಿ ರಸ್ತೆಯನ್ನು ಎತ್ತರಿಸಿದ್ದು ಇದರಿಂದ ಹಳೆ ಸಂಪರ್ಕ ರಸ್ತೆ ತೀರ ಕೆಳಗಿದೆ. ಹೆದ್ದಾರಿಯ ಗುತ್ತಿಗೆದಾರರು ಕೆಲವು ಟಿಪ್ಪರ್ ಮಿಕ್ಷಿಂಗ ಜಲ್ಲಿ ತಂದು ಹಾಕಿ ಬಳಿಕ ಅರ್ಧದಲ್ಲಿ ಬಿಟ್ಟು ಹೋಗಿದ್ದಾರೆ. ನಗರ ಪಂಚಾಯತ್ ಮನಸ್ಸು ಮಾಡಿದಲ್ಲಿ ಸುಮಾರು ೧೦ ಲೋಡ್ ಮಣ್ಣು ಹಾಕಿ ಮೂಡಬಿದ್ರಿ-ಮೂಲ್ಕಿ ರಾಜ್ಯ ಹೆದ್ದಾರಿಗೆ ತಾತ್ಕಾಲಿಕವಾಗಿ ಸಂಪರ್ಕ ಕಲ್ಪಸಲು ಸಾಧ್ಯವಿದೆ.ಆದರೆ ಪಂಚಾಯತ್ ಆಡಳಿತ ಆಸಕ್ತಿ ವಹಿಸುತ್ತಿಲ್ಲ.ಮೂಲ್ಕಿ ಬಸ್ಸು ನಿಲ್ದಾಣದ ಬಳಿ ಕೂಡ ಸರ್ವಿಸ್ ರಸ್ತೆ ನಿರ್ಮಾಣವಾಗದೇ ಸಮಸ್ಯೆಯಾಗಿದ್ದು ಪ್ರಯಾಣಿಕರಿಗೆ ಪ್ರತಿದಿನ ಧೂಳಿನ ಅಭಿಷೇಕ ಹಾಗೂ ದುರ್ನಾತದ ಸುವಾಸನೆ ದೊರೆಯುತ್ತಿದೆ.
ಸಂಸದ ನಳಿನ್ ಕುಮಾರ್ ಕಟೀಲುರವರು ಜೂನ್ ತಿಂಗಳ ಒಳಗೆ ಮೂಲ್ಕಿ ಪೇಟೆಯಲ್ಲಿ ಸರ್ವಿಸ್ ರಸ್ತೆ ಚರಂಡಿ ನಿರ್ಮಾಣ ಸಂಪೂರ್ಣ ಗೊಳ್ಳಲಿದೆಯೆಂದು ತಿಳಿಸಿದ್ದು ಆದರೆ ಗುತ್ತಿಗೆದಾರರು ನಾಪತ್ತೆಯಾಗಿದ್ದು ಸದ್ಯದಲ್ಲಿ ಯಾವುದೇ ಕಾಮಗಾರಿ ನಡೆಯುವ ಸಾಧ್ಯತೆಯಿಲ್ಲ.
ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ:
ಮೂಡಬಿದ್ರಿ-ಮೂಲ್ಕಿ ರಾಜ್ಯ ಹೆದ್ದಾರಿ ರಸ್ತೆಯನ್ನು ಸಂಪರ್ಕಿಸುವ ಕಾಮಗಾರಿ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪತ್ರ ಬರೆದಿದ್ದು ಶೀಘ್ರದಲ್ಲಿ ಸರಿ ಪಡಿಸುವುದಾಗಿ ತಿಳಿಸಿದ್ದಾರೆ.ಮೂಲ್ಕಿ ಬಸ್ಸು ನಿಲ್ದಾಣದ ಸಮಸ್ಯೆ ಬಗ್ಗೆ ಕೂಡ ಪಂಚಾಯತ್ ಶೀಘ್ರದಲ್ಲಿ ವ್ಯವಸ್ತೆ ಮಾಡಲಿದೆ.

ಮೂಲ್ಕಿ ನಗರ ಪಂಚಾಯತ್ ನಿರ್ಲಕ್ಷತನದಿಂದಾಗಿ ಮೂಲ್ಕಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ ಬಂದಿದ್ದು ಮೂಲ್ಕಿ ಪೇಟೆಯಲ್ಲಿ ಅಂಡರ್ ಪಾಸ್ ಅಥವಾ ಓವರ್ ಬ್ರಿಡ್ಜ್ ನೀಡದಿರುವುದರಿಂದ ಜನರಿಗೆ ಹಾಗೂ ವಾಹನಗಳಿಗೆ ರಸ್ತೆ ದಾಟಲು ತುಂಬಾ ತೊಂದರೆಯಾಗುತ್ತಿದೆ.ಪ್ರಾಣವನ್ನು ಕೈಯಲ್ಲಿಟ್ಟುಕೊಂಡು ಹೆದ್ದಾರಿ ದಾಟುವ ಪರಿಸ್ತಿತಿ ಬಂದಿದೆ.ಮೂಡಬಿದ್ರಿ ಸಂಪರ್ಕ ರಸ್ತೆಯನ್ನು ಕೆಡವಿದ್ದರಿಂದ ಮೂಡಬಿದ್ರಿ ಕಡೆಗೆ ಹೋಗುವ ವಾಹಗಳಿಗೆ ತೊಂದರೆಯಾಗುತ್ತಿದ್ದು ಪಂಚಾಯತ್ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ.
ಸಾಧು ಮೂಲ್ಕಿ

Kinnigoli-15061602

Comments

comments

Comments are closed.

Read previous post:
Kinnigoli-15061601
ವಿಭಾಗೀಯ ಮಟ್ಟದ ಕಾರ್ಯಗಾರ

ಮೂಲ್ಕಿ: ದೇಶದ ಅಭಿವೃದ್ಧಿ ಯೋಜನೆಗಳಿಗೆ ಸಿಂಹಪಾಲು ನೀಡುತ್ತಾ 60ವರ್ಷಗಳಿಂದ ನಿರಂತರವಾಗಿ ಸಾಧನೆ ಸೇವೆ ನಂಬಿಕೆಗಳಿಂದ ವಿಶ್ವಾಸಾರ್ಹವಾಗಿ ವಿಶ್ವ ಮಟ್ಟದ ಹತ್ತು ಹಲವಾರು ಪ್ರಶಸ್ತಿಗಳನ್ನು ಗಳಿಸಿದ ಭಾರತೀಯ ಜೀವ...

Close