ಸಹಪಾಠಿಗಳನ್ನು ಒಂದುಗೂಡಿಸಿದ ವಾಟ್ಸಪ್

ಕಿನ್ನಿಗೋಳಿ: ಬರಿಗಾಲಲ್ಲಿ ಸ್ಕೂಲಿಗೆ ಹೋಗಿದ್ದು ಅಪ್ಪ ಅಮ್ಮನೊಡನೆ ತನಗೆ ಬೇಕಾದ್ದು ಸಿಗದಾಗ ಮುನಿಸಿ ದೂರ ನಿಂತು ಗಳ ಗಳ ಅತ್ತಿದ್ದು ಎಲ್ಲಾ ಬರೀ ನೆನಪುಗಳು…………

ಮಗ ಡಾಕ್ಟರಾಗುತ್ತಾನೆ, ಇಂಜಿನಿಯರ್, ಆದರ್ಶ ವ್ಯಕ್ತಿಯಾಗುತ್ತಾನೆ ಎಂಬ ಅಮ್ಮ ಅಪ್ಪನ ಕನಸನ್ನು ನನಸು ಮಾಡಿ ತಮ್ಮ ಬದುಕು ಎಳೆ ಎಳೆಯಾಗಿ ಬಿಚ್ಚಿ ಸ್ನೇಹಿತರೊಡನೆ ಹಂಚಿಕೊಂಡು ನೆನಪುಗಳ ಮುತ್ತುಗಳನ್ನು ಪೋಣಿಸುವುದು ಸಂತಸದ ವಿಷಯ.

ಸ್ನೇಹವೇ ಹಾಗೆ ಅದು ನಿಂತ ನೀರಲ್ಲ ನಿರಂತರ ಪ್ರವಹಿಸುವ ನೀರು. ತಮ್ಮ ಬಾಲ್ಯ ಶಾಲಾ ಕಾಲೇಜು ದಿನಗಳ ಒಡನಾಟ, ಚೇಷ್ಟೆ, ತಮಾಷೆ ಜಗಳ ಇವೆಲ್ಲವೂ ಜೀವನ ಪರ್ಯಂತ ಆಗಾಗ ನೆನೆಪಿಗೆ ಬರುತ್ತದೆ.

ಇತ್ತಿಚಿನ ವರ್ಷಗಳಲ್ಲಿ ಯುವ ಜನರು ಅರ್ಕುಟ್ ತಂತ್ರಾಶವನ್ನು ಬಿಟ್ಟು ವಾಟ್ಸಪ್, ಫೇಸ್‌ಬುಕ್ ಮತ್ತು ಟ್ವಿಟರ್ ಮೊರೆ ಹೋಗುತ್ತಿದ್ದಾರೆ. ವಾಟ್ಸಪ್ ತಂತ್ರಜ್ಞಾನ ಸ್ನೇಹಿತರನ್ನು ಹೇಗೆ ಒಗ್ಗೂಡಿಸುತ್ತೆ ತಮ್ಮ ತಮ್ಮ ಶಾಲಾ ಕಾಲೇಜು ದಿನಗಳ ಸವಿನೆನಪನ್ನು ಹೇಗೆ ಮರುಕಳಿಸುತ್ತದೆ ಎಂದು ಕಿನ್ನಿಗೋಳಿ ಸಮೀಪದ ಪೊಂಪೈ ಪದವಿ ಪೂರ್ವ ಕಾಲೇಜಿನಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮದಲ್ಲಿ ಅನಾವರಣಗೊಂಡಿತು.

1987-1989ನೇ ವರ್ಷದ ಸಾಲಿನ ಪೊಂಪೈ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿ. ಯು.ಸಿ. ಮುಗಿಸಿ ತಮ್ಮ ವಿದ್ಯಾಬ್ಯಾಸ ಮುಂದುವರೆಸಿ, ಬಾಲ್ಯವನ್ನು ಕಳೆದು ಯೌವನದ ಕನಸು ಹೊತ್ತು ಆಸೆ ಆಕಾಂಕ್ಷೆಗಳನ್ನು ಸಾಕ್ಷತ್ಕಾರಿಸಿ ಜೀವನದ ಸ್ಪಷ್ಟವಾದ ಹೊಸ ಗುರಿಯನ್ನು ಅರಸಿ ಉದ್ಯೋಗ ಹುಡುಕಾಟದಲ್ಲಿ ತಲ್ಲೀನರಾಗಿ ತಮ್ಮ ತಮ್ಮ ಪುಟ್ಟ ಸಂಸಾರ ಪ್ರಾರಂಭಿಸಿದ್ದರು. ಶಾಲಾ ದಿನಗಳಲ್ಲಿ ಮಾಡುತ್ತಿದ್ದ ಡ್ಯಾನ್ಸ್, ಹಾಡುತ್ತಿದ್ದ ಹಾಡು, ಹೇಳುತ್ತಿದ್ದ ಭಾಷಣ…ಹೀಗೆ ಆಸಕ್ತಿ ಇಲ್ಲದ ವಿಷಯಗಳೇ ಇರಲಿಲ್ಲ. ಹಳೆಯ ಗೆಳೆಯರು ಇಂಟರ್ ನೆಟ್ ನಲ್ಲಿ ಸಿಕ್ಕಾಗ ಮನಸ್ಸಿನ ಸಂತೋಷಕ್ಕೆ ಉಲ್ಲಾಸಕ್ಕೆ ಪಾರವಿರುತ್ತಿರಲ್ಲಿಲ್ಲ.
ಕೆಲವು ತಿಂಗಳ ಹಿಂದೆ ತಮ್ಮ ಸಹಪಾಠಿಗಳ ಒಂದು ವಾಟ್ಸಪ್ ಗುಂಪು ಪ್ರಾರಂಭಿಸಿ ಸಂಪರ್ಕವಿಲ್ಲದ ಸಹಪಾಠಿಗಳನ್ನು ಒಂದಾಗಿಸುವ ಕೆಲಸ ಮಾಡಿ ತಮ್ಮ ತಮ್ಮಲ್ಲಿ ಜೋಕ್ಸ್, ಉಭಯಕುಶಲೋಪಾರಿ ಚರ್ಚೆ ಇತ್ಯಾದಿಗಳಲ್ಲಿ ಪಾಲ್ಗೊಂಡು ಶಾಲಾ ಜೀವನದ ನೆನಪಿನ ಬುತ್ತಿಯನ್ನು ಬಿಚ್ಚಿಡುತ್ತಿದ್ದರು. ಅವರಲ್ಲಿ ಅನೇಕರು ದೇಶವಿದೇಶಗಳಲ್ಲಿ ವೃತ್ತಿ ಬದುಕು ಪ್ರಾರಂಭಿಸಿದ್ದವರು ತಿಂಗಳು ಕಳೆದಂತೆ ವಾಟ್ಸಪ್ ಮುಖಾಂತರ ಒಂದಾದರು. ದಿನಂಪ್ರತಿ ವಾಟ್ಸಪ್ಪಿನಲ್ಲಿ ಮಾತುಕತೆ ವೀಡಿಯೋ ಮೂಲಕ ಜೀವನ ಬದುಕಿನ ಸಾರವನ್ನು ಹಂಚಿಕೊಳ್ಳಿತ್ತಿದ್ದರು.
ವಿದೇಶದವರು ಬರದಿದ್ದರೂ ಸಂಪರ್ಕಕ್ಕೆ ಬಂದರು. ಐವತ್ತೊಂದು ಜನ ಒಟ್ಟಾಗಿದ್ದಾರೆ ಯಾರೆಲ್ಲಿದ್ದಾರೆಂಬುದನ್ನು ಶಾಲಾ ಹಾಜರಾತಿ ಪುಸ್ತಕ ತೆಗೆಸಿ, ವಿಳಾಸ ಹುಡುಕಿ, ಹಿರಿ-ಕಿರಿಯ ಸಹಪಾಠಿಗಳನ್ನು ಸಂಪರ್ಕಿಸಿ ಒಟ್ಟಾದರು. ಇನ್ನೂ ಇಪ್ಪತ್ತು ಮಂದಿ ಸಂಪರ್ಕಕ್ಕೆ ಸಿಗಬೇಕಂತೆ.

ಪರಸ್ಪರ ವಿನಿಮಯ ಮಾತುಕತೆ ಮೂಲಕ ತಮ್ಮ ಕಾಲದಲ್ಲಿದ್ದಂತೆ ಲೈಬ್ರೇರಿಯಲ್ಲಿ ಓದಲು ಪುಸ್ತಕಗಳ ಕೊರತೆ ಅಭಾವ ಬರದಂತೆ ಈಗಿನ ತಂತ್ರಜ್ಞಾನಕ್ಕೆ ತಕ್ಕ ರೀತಿಯಲ್ಲಿ ಪುಸ್ತಕಗಳನ್ನು ತಮ್ಮ ಕಾಲೇಜಿಗೆ ನೀಡಲು ಮನಸ್ಸು ಮಾಡಿ ಬಹುತೇಕ ಮಂದಿ ಬೆಂಗಳೂರು, ಮುಂಬೈ, ವಿದೇಶಗಳಲ್ಲಿದ್ದವರು ತಾವು ಕಲಿತ ಕಾಲೇಜಿಗೆ ಸುಮಾರು ಒಂದು ಲಕ್ಷ ರೂಪಾಯಿಗಳಿಗೂ ಮಿಕ್ಕಿದ ಬಹು ಅಮೂಲ್ಯ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಅಂದು ತಮಗೆ ಕಲಿಸಿದ ಗುರುಗಳಿಗೆ ಗೌರವಾರ್ಪಣೆ, ಪುಸ್ತಕ ಹಸ್ತಾಂತರ ನಡೆಯಿತು. ಮುಂದಿನ ಡಿಸೆಂಬರ್ ತಿಂಗಳಲ್ಲಿ ಕ್ರಿಸ್ಮಸ್ ಸಮಯಕ್ಕೆ ವಿದೇಶದವರೂ
ಬಂದಾಗ ಇನ್ನೂ ವಿಶೇಷ ಸಹಯ ಹಸ್ತ ನಡೆಯಲಿದೆ ಎಂದೂ ಪ್ರಕಟಿಸಿದರು.

ಉಳಿದವರಿಗೆ ಮಾರ್ಗದರ್ಶಿ. ಈ ರೀತಿಯ ವಿದ್ಯಾರ್ಥಿಗಳು ಬೇರೆ ಬೇರೆ ವರ್ಷದವರೂ ನಾಳೆ ಬಂದಾರು. ಸಂಸ್ಥೆಯ ಬೆಳವಣಿಗೆಗೆ ಇದು ಪೂರಕ.
ನನಗೆ ಇದು ವಿಶೇಷವೆನ್ನಿಸಲು ಕಾರಣ ಈ ಹಳೆ ವಿದ್ಯಾರ್ಥಿಗಳಲ್ಲಿ ಕೈಗಾರಿಕೋದ್ಯಮಿಗಳು, ಸಮಾಜದಲ್ಲಿ ಉನ್ನತ ಸ್ಥಾನ ಪಡೆದವರಿದ್ದಾರೆ. ಹಣ ಅವರಿಗೆ ಮಹತ್ವವಲ್ಲ. ನೆನಪಿಡುವ ಗುಣ ದೊಡ್ಡದು. ಅವರ ಮನೋಭಾವ ಆದರ್ಶಮಯವಾದುದು. ನಾನೂ ಅವರ ಗುರುವಾಗಿ ಧನ್ಯತೆಯಿಂದ ಗೌರವ ಪಡೆದೆ. ವಾಟ್ಸಪ್ ಎಂತಹ ಕೆಲಸ ಮಾಡುತ್ತದೆ ನೋಡಿ.

ಶ್ರೀಧರ್ ಡಿ ಎಸ್.
ನಿವೃತ್ತ ಕನ್ನಡ ಉಪನ್ಯಾಸಕರು. (ಯಕ್ಷ ಕವಿ)
ಪೊಂಪೈ ಪದವಿಪೂರ್ವ ಕಾಲೇಜು

ತಂತ್ರಜ್ಞಾನ ಸ್ನೇಹಕ್ಕೆ ಕೊಂಡಿಯಾಗಿದೆ. ಸ್ನೇಹ ನಿರಂತರವಾಗಲಿ ಎಂದು ನಮ್ಮೆಲ್ಲರ ಹಾರೈಕೆ. ಕೆಲವು ಘಟನೆಗಳು ನೆನಪಿನಾಳದಲ್ಲಿ ಮರುಕಳಿಸಿ ಅಂದಿನ ಅನುಭವಗಳು ಮನಸ್ಸಿಗೆ ಮುದ ನೀಡುತ್ತದೆ. ಇಂತಹ ನೆನಪುಗಳು ಮನುಷ್ಯನ ಜೀವನಕ್ಕೆ ಉತ್ಸಾಹ ತುಂಬುತ್ತದೆ.

ಡಾ. ಕಿಶೋರ್ ಶೆಟ್ಟಿ
ದಂತವೈದ್ಯರು ಕಿನ್ನಿಗೋಳಿ

Kinnigoli--16061606

 

Comments

comments

Comments are closed.

Read previous post:
ಬೋರ್ ವೆಲ್ ನೀರನ್ನು ಕುಡಿಯಲು ಅಸಾಧ್ಯ

ಮೂಲ್ಕಿ: ಮೂಲ್ಕಿಯ ಗೇರುಕಟ್ಟೆಯಲ್ಲಿ ಕುಡಿಯಲು ಅಸಾಧ್ಯವಾದ ಬೋರ್ ವೆಲ್ ನೀರಿನ ಬಗ್ಗೆ,ಕುದ್ಕಪಳ್ಳದ ಮಾತಾ ಅಮೃತಾಮಯಿ ನಗರದಲ್ಲಿ ಒಳ ಚರಂಡಿ ಸಮಸ್ಯೆ ಬಗ್ಗೆ, ನಳ್ಳಿ ನೀರಿನ ಬಿಲ್ಲನ್ನು ಮನ್ನಾ ಮಾಡುವ...

Close