ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಕಳ್ಳತನ

ಕಿನ್ನಿಗೋಳಿ : ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ದೇವರ ಗರ್ಭಗುಡಿಯಿಂದ ಮಂಗಳವಾರ ಮುಂಜಾನೆ ಸುಮಾರು 33 ಸಾವಿರ ರೂ. ಮೌಲ್ಯದ ಮತ್ತು ಬೆಳ್ಳಿಯ ಪ್ರಭಾವಳಿ ಸಹಿತ ವಿವಿಧ ಸೊತ್ತು, ಆಭರಣಗಳು ಕಳವಾಗಿವೆ.
ದೇವಳದ ಅರ್ಚಕರು ಬೆಳಗ್ಗಿನ ಪೂಜೆಗೆಂದು ಆಗಮಿಸಿದಾಗ ಕಳವು ಕೃತ್ಯ ಅರಿವಿಗೆ ಬಂತು. ದೇವಳದ ಮುಂಭಾಗದಲ್ಲಿನ ವಿದ್ಯುತ್ ಮೈನ್ ಸ್ವಿಚ್ ಆರಿಸಿ ದೇವಳದ ಮುಖ್ಯ ಬಾಗಿಲಿನ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ಗರ್ಭ ಗುಡಿಯ ಬಾಗಿಲಿನ ಮುಂದೆ ಅಳವಡಿಸಿದ ಶೆಟರ್ ನ ಬೀಗ ಮುರಿದು ಒಳಹೊಕ್ಕಿ ಒಳಗಿದ್ದ ಬೆಳ್ಳಿಯ ಪ್ರಭಾವಳಿ, ದೇವರ ಬೆಳ್ಳಿಯ ಎರಡು ಪಾದುಕೆ, ಬೆಳ್ಳಿ ಮುಖವಾಡ, ಐದು ಹೆಡೆಯ ಬೆಳ್ಳಿಯ ನಾಗನ ಮೂರ್ತಿ, ಬೆಳ್ಳಿಯ ತುಳಸಿ ಮಾಲೆ, ದೇವರ ಅಭಿಷೇಕದ ಶಂಖ, ಗಣಪತಿ ದೇವರ ಗುಡಿಯ ಗಣಪತಿಯ ಬೆಳ್ಳಿಯ ಎರಡು ದೃಷ್ಟಿ, ಕಾಂತೇರಿ ಧೂಮಾವತಿ ಗುಡಿಯ ದೈವದ ಪಂಚಲೋಹದ ಮೂರ್ತಿಯನ್ನು ಕದ್ದೊಯಿದಿದ್ದಾರೆ.
ಕಾಣಿಕೆ ಡಬ್ಬಿಗಳು ಲಾಕರ್‌ಗಳು ಯಥಾ ಸ್ಥಿತಿಯಲ್ಲಿದ್ದು ಬಂಗಾರದ ಒಡವೆಗಳು ಬ್ಯಾಂಕ್ ಲಾಕರ್ ನಲ್ಲಿದ್ದು ವಿಶೇಷ ಸಂದರ್ಭಗಳಲ್ಲಿ ಮಾತ್ರ ದೇವರಿಗೆ ಆಭರಣ ತೊಡಿಸಲಾಗುತ್ತಿದ್ದರಿಂದ ಹೆಚ್ಚಿನ ಬಂಗಾರದ ಒಡವೆಗಳು ಸುರಕ್ಷಿತವಾಗಿವೆ. ದೇವಳದಲ್ಲಿ ಈ ಮುಂಚೆ ನಾಲ್ಕು ಬಾರಿ ಕಳ್ಳತನ ಪ್ರಕರಣ ನಡೆದಿದೆ. ದೇವಳದ ಹೊರಾಂಗಣ ಮತ್ತು ಒಳಾಂಗಣದಲ್ಲಿ ನಾಲ್ಕು ಸಿ.ಸಿ ಕ್ಯಾಮಾರ ಅಳವಡಿಸಲಾಗಿದ್ದು ಯಥಾಸ್ಥಿತಿಯಲ್ಲಿತ್ತು. ಆದರೆ ದೇವಳದ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮಾರ ರೆಕಾರ್ಡರ್‌ನ್ನು ಕಳ್ಳರು ಕದ್ದೊಯಿದಿದ್ದಾರೆ.

ಮುಲ್ಕಿ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ನಿರೀಕ್ಷಕ ಆರ್. ಶಾಂತಪ್ಪ, ಶ್ವಾನ ದಳ, ಬೆರಳಚ್ಚು ತಜ್ಞರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್, ಗ್ರಾಮಕರಣಿಕ ಮೋಹನ್, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ಕ.ಸಾ.ಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮಳೆಗಾಲದಲ್ಲಿ ಪ್ರಕರಣಗಳ ಸರಮಾಲೆ
ಹೆಚ್ಚಿನ ಕಡೆಗಳಲ್ಲಿ ಮಳೆಗಾಲದಲ್ಲಿಯೇ ಕಳ್ಳತನ ಪ್ರಕರಣಗಳು ನಡೆಯುತ್ತಿದೆ ಸಾಮಾನ್ಯವಾಗಿಬಿಟಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಕಿನ್ನಿಗೋಳಿಯಲ್ಲಿ ನಡೆದ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ- ಅಪರೇಟಿವ್ ಸೋಸೈಟಿಯ ೫ ಕೋಟಿಗೂ ಮಿಕ್ಕಿ ಚಿನ್ನದ ಒಡವೆಗಳ ಕಳ್ಳತನ ದಿನ ಜೋರಾಗಿ ಮಳೆ ಸುರಿದಿದ್ದು ಇಲ್ಲಿಯೂ ಕೂಡಾ ಜೋರಾಗಿ ಮಳೆ ಸುರಿಯುವ ಸಂದರ್ಭ ಕಳ್ಳತನ ನಡೆದಿದೆ, ಮಳೆ ಸಂದರ್ಭ ಜನ ಸಂಚಾರ ಕಡಿಮೆ, ಬೀಗ ಮುರಿಯುವ ಶಬ್ದ ಹೊರಗೆ ಕೇಳಿಸದಿರುವುದು ಕಳ್ಳರಿಗೆ ವರವಾಗಿ ಪರಿಣಮಿಸಿದೆ.

ಹೆಚ್ಚುತಿರುವ ಕಳ್ಳತನ ಪ್ರಕರಣ
ಮುಲ್ಕಿ, ಕಿನ್ನಿಗೋಳಿ ಸುತ್ತ ಮುತ್ತ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು ಕಿನ್ನಿಗೋಳಿ ಜ್ಯುವೆಲ್ಲರಿ, ಮಾರಿಗುಡಿಯಲ್ಲಿನ ಕಳ್ಳತನ ಮುಲ್ಕಿ ನಾರಾಯಣಗುರು ಮಂದಿರ, ಹಳೆಯಂಗಡಿ ಪಕ್ಷಿಕೆರೆ ತೋಕೂರು ಮತ್ತಿತರ ಕಡೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳು ಪ್ರಕರಣಗಳು ಪೂಲೀಸರ ನಿದ್ದೆಗೆಡಿಸಿದೆ.

Kinnigoli-28061601 Kinnigoli-28061602 Kinnigoli-28061603

Comments

comments

Comments are closed.

Read previous post:
Kinnigoli-27061604
ಕೆಮ್ರಾಲ್ : ಜಿಪಂ. ತಾಪಂ. ಸದಸ್ಯರಿಗೆ ಸನ್ಮಾನ

ಕಿನ್ನಿಗೋಳಿ : ದ.ಕ. ಜಿಲ್ಲಾ ಪಂಚಾಯಿತಿ ಚುನವಣೆಯಲ್ಲಿ ವಿಜೇತರಾದ ಕಸ್ತೂರಿ ಪಂಜ, ವಿನೋದ್ ಬೊಳ್ಳೂರು ಹಾಗೂ ಮಂಗಳೂರು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಶುಭಲತಾ ಶೆಟ್ಟಿ, ವಜ್ರಾಕ್ಷಿ ಶೆಟ್ಟಿ...

Close