ಕೃಷಿಗೆ ಆಂಧ್ರಪ್ರದೇಶದ ಕಾರ್ಮಿಕರು

ಕಟೀಲು : ಕರಾವಳಿಯ ಗದ್ದೆಗಳಲ್ಲಿ ನಾಟಿ ಕೆಲಸಕ್ಕೆ ಆಂಧ್ರಪ್ರದೇಶದ ಕಾರ್ಮಿಕರ ತಂಡ ಬಂದಿದೆ. ಮಂಗಳೂರು, ಕಾರ್ಕಳ, ಉಡುಪಿ ತಾಲೂಕುಗಳ ಗದ್ದೆಗಳಲ್ಲಿ ಭತ್ತದ ನೇಜಿ ತೆಗೆದು ನಾಟಿ ಮಾಡುವುದನ್ನು ಕಾಣುವಂತಾಗಿದೆ.
ಕರಾವಳಿಯ ಗದ್ದೆಗಳಲ್ಲಿ ಕೃಷಿ ಕಾರ್ಮಿಕರ ಕೊರತೆ ಈಗಾಗಲೇ ರೈತರನ್ನು ಕಂಗೆಡಿಸಿದೆ. ಐದು ಸೇರು ಅಕ್ಕಿ ಜೊತೆಗೆ ಇಪ್ಪತ್ತರಿಂದ ಐವತ್ತು ರೂಪಾಯಿ ನೀಡಿದರೂ ಕೃಷಿ ಕಾರ್ಮಿಕರು ಸಿಗದ ಪರಿಸ್ಥಿತಿಯಿಂದ ಕೃಷಿಕರು ಕಂಗೆಟ್ಟಿದ್ದರು.
ಇದೀಗ ಆಂದ್ರಪ್ರದೇಶದಿಂದ ಕೃಷಿ ಕಾರ್ಮಿಕರನ್ನು ತಂದು ಗದ್ದೆ ಕೆಲಸಕ್ಕೆ ತೊಡಗಿಸುವ ಗುತ್ತಿಗೆದಾರರು ಕರಾವಳಿಯ ರೈತರ ಸಮಸ್ಯೆಗೆ ಸ್ಪಂದಿಸಿದಂತಾಗಿದೆ.
ಮೂವತ್ತರಷ್ಟು ಮಂದಿ ಒಂದು ಎಕರೆಗೆ ರೂ. ಮೂರೂವರೆ ಸಾವಿರಗಳಿಗೆ ನಾಟಿ ಮಾಡಿ ಕೊಡುತ್ತಾರೆ. ಇವರ ಕೆಲಸದಲ್ಲಿ ತುಂಬ ವೇಗವಿದೆ. ಆದರೆ ನಾಟಿಯ ಕ್ರಮ ಬೇರೆ ರೀತಿ ಇದೆ. ಆದರೂ ಕೃಷಿ ಕೆಲಸಗಾರರ ಸಮಸ್ಯೆ ನೋಡಿದರೆ ದಿನವೊಂದಕ್ಕೆ ಐದು ಎಕರೆಯಷ್ಟು ನಾಟಿ ಮಾಡುವ ಇವರ ಕೆಲಸ ಕೃಷಿಕರಿಗೆ ತುಂಬ ಸಹಾಯಕಾರಿಯಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ ಕೊಡೆತ್ತೂರಿನ ಕೃಷಿಕ ಬರ್ಕೆ ಚಂದ್ರಶೇಖರ ಶೆಟ್ಟಿ.
ಜಗನ್ನಾಥ ಶೆಟ್ಟರ ಪ್ರಕಾರ ಗದ್ದೆ ಕೆಲಸಕ್ಕೆ ಎತ್ತು ಕೋಣಗಳ ಬದಲಿಗೆ ಟಿಲ್ಲರ್, ಟ್ರಾಕ್ಟರ್ ಬಂದ ಮೇಲೆ ಸುಲಭವಾಗಿದೆ. ಕಟಾವಿಗೂ ಯಂತ್ರ ಬಂದ ಮೇಲೆ ಭತ್ತದ ಕೃಷಿ ನಷ್ಟವಲ್ಲ ಎನ್ನಬಹುದು. ಆದರೆ ಕಾರ್ಮಿಕರ ಕೊರತೆ ಹೆಚ್ಚು ಇತ್ತು. ಮಹಿಳೆಯರೂ ನೇಜಿ ನೆಡಲು ಬರುತ್ತಿಲ್ಲ. ಹಾಗಾಗಿ ಆಂಧ್ರಪ್ರದೇಶ ಅಥವಾ ಬೇರೆಡೆಗಳಿಂದ ಕೆಲಸಗಾರರು ಬಂದಿರುವುದು ಸಮಾಧಾನಕರ. ಕಾಫಿ ಅಥವಾ ಚಾ ಮಾತ್ರ ಕೊಟ್ಟರೆ ಸಾಕು. ಊಟ ತಿಂಡಿ ಎಲ್ಲವೂ ಅವರದ್ದೇ ಹಾಗಾಗಿ ಹೆಚ್ಚು ತಲೆಬಿಸಿ ಇಲ್ಲ ಎನ್ನುತ್ತಾರೆ ಬಳಕುಂಜೆಯ ಜಗದೀಶರು.
ಮುಂದಿನ ಜುಲೈ 14ರವರೆಗೆ ಬುಕಿಂಗ್ ಆಗಿದೆ. ಗದ್ದೆ ಕೆಲಸಕ್ಕೆ ಜನರಿಗೆ ಡಿಮಾಂಡ್ ಇದೆ. ಇದರಿಂದ ರೈತರಿಗೆ ಖುಷಿಯಾಗಿದೆ ಎನ್ನುತ್ತಾರೆ ಕೃಷಿ ಕಾರ್ಮಿಕರನ್ನು ಕರೆದುಕೊಂಡು ಬರುವ ಗುತ್ತಿಗೆದಾರ, ಈ ಹಿಂದೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ಉದ್ಯೋಗಕ್ಕಿದ್ದ ಮಾದೇಶ. ಅವರು ನಾಟಿ ಕೆಲಸಕ್ಕಿಂತ ಮುಂಚೆ ಗದ್ದೆಗಳನ್ನು ನೋಡಿಕೊಂಡು ಬರುತ್ತಾರೆ. ಅಲ್ಲಿ ಆಗಬೇಕಾದ ಉಳುಮೆ ಕಾರ‍್ಯದ ಬಗ್ಗೆ ಖಚಿತ ಪಡಿಸಿಕೊಂಡು ಮರುದಿನ ಕಾರ್ಮಿಕರನ್ನು ಕರೆದುಕೊಂಡು ಬರುತ್ತಾರೆ.

Kinnigoli-07071603

Comments

comments

Comments are closed.

Read previous post:
Mulki-07071602
ಜನಾಕರ್ಷಣೆಯ ಮುಂಡ ಬೀಚ್

ಮೂಲ್ಕಿ: ಮುಂಗಾರು ಆಗಮನದ ಬಳಿಕ ಪ್ರಕೃತಿ ಹರಿದ್ವರ್ಣಗೊಳ್ಳುತ್ತಿದ್ದಂತೆ ಮಳೆ ಬಿರುಗಾಳಿಯ ಆರಂಭ. ನೆರೆ ನೀರು ಸಮುದ್ರ ಪ್ರವೇಶಿಸಿ ಕೆಂಪು ಮತ್ತು ಕಡು ಕಪ್ಪು ವರ್ಣದೊಂದಿಗೆ ಪ್ರಕ್ಷುಬ್ರ ಸ್ಥಿತಿಯಲ್ಲಿ...

Close