ವರಮಹಾಲಕ್ಷ್ಮೀ ಪೂಜೆ ತುಳುನಾಡಿನ ಆರಾಧನೆಯಲ್ಲ – ಕೆ.ಎಲ್.ಕುಂಡಂತಾಯ

ಮೂಲ್ಕಿ: ತುಳುನಾಡಿನ ನಂಬಿಕೆ ನಡವಳಿಕೆಗಳ ಬಗ್ಗೆ ಸರಿಯಾಗಿ ತಿಳಿಯದೆ ಹಾದಿ ತಪ್ಪುತ್ತಿದ್ದೇವೆ. ನಾಗಾರಾಧನೆ ತುಳುನಾಡಿನ ಆರಾಧನೆ ಹೌದು. ಆದರೆ ನಾಗರ ಪಂಚಮಿ ಇಲ್ಲಿನ ಅರಾಧನಾ ಪರ್ವ ದಿನವಲ್ಲ. ಅದೇ ರೀತಿ ವರಮಹಾಲಕ್ಷ್ಮೀ ಪೂಜೆಯೂ ನಮ್ಮದ್ದಲ್ಲ ಎಂದು ವಿದ್ವಾಂಸ ಕೆ. ಎಲ್. ಕುಂಡಂತಾಯ ಹೇಳಿದರು.
ಅವರು ಮೂಲ್ಕಿಯಲ್ಲಿ ನಡೆಯುತ್ತಿರುವ ತುಳು ಸಮ್ಮೇಳನದಲ್ಲಿ ಅಜೆ ತತ್ತಿ ಬದ್‌ಕ್ ಗೋಷ್ಟಿಯಲ್ಲಿ ತುಳು ಆರಾಧನೆ ಆಚರಣೆಗಳ ಬಗ್ಗೆ ಮಾತನಾಡಿದರು.
ಕೃಷಿ ಸಂಸ್ಕೃತಿಯ ಆರಾಧನಾ ರೂಪವಾಗಿ ಕೊರಳು ಕಟ್ಟುವ ಹಬ್ಬ, ದೀಪಾವಳಿಯ ಹಬ್ಬದಂದು ಗೋಪೂಜೆ, ಭತ್ತದ ಪೂಜೆ, ಗದ್ದೆಯಲ್ಲಿ ದೀಪ ಇಡುವ ಬಲೀಂದ್ರ ಪೂಜೆಗಳೆಲ್ಲ ತುಳುನಾಡಿನ ಲಕ್ಷ್ಮೀ ಪೂಜೆಯ ಅಥವಾ ಸಂಪತ್ತಿನ ಆರಾಧನಾ ಕ್ರಮಗಳು. ಇತ್ತೀಚಿಗೆ ಆರಂಭವಾಗಿರುವ ವರಮಹಾಲಕ್ಷ್ಮೀ ಪೂಜೆ ತುಳುನಾಡಿನದ್ದಲ್ಲ. ನಮ್ಮ ನೆಲದ ಖೆಡ್ಡಸ, ಹೊಸ್ತಿಲು ಬರೆಯುವುದು ಮುಂತಾದ ಆಚರಣೆಗಳನ್ನು ಮರೆಯುತ್ತಿದ್ದೇವೆ. ಆಟಿ ಮತ್ತು ಆಷಾಢದ ವ್ಯತ್ಯಾಸ ನಮಗೆ ಗೊತ್ತಿಲ್ಲ. ಕೃಷಿ ಕೇಂದ್ರಿತ ತುಳುನಾಡಿನ ಹಬ್ಬಗಳನ್ನು ಫ್ಲಾಟ್‌ಗಳಲ್ಲಿ ಆಚರಿಸಲು ಸಾಧ್ಯವಿಲ್ಲ. ಕೃಷಿಯೇ ಇಲ್ಲದಿದ್ದರೆ ಯುಗಾದಿಗೆಲ್ಲಿಯ ಅರ್ಥ? ತುಳುನಾಡಿನವರ ಗಣಪತಿ ವಿಗ್ರಹದ ರೂಪದ್ದಲ್ಲ, ಕಬ್ಬಿನ ಗಣಪ, ಎಲೆಯ ಮೇಲೆ ಭತ್ತ, ತೆಂಗಿನ ಕಾಯಿ ಇಟ್ಟು ಸ್ವಸ್ತಿಗೆ ಮಾಡಿ ಅದನ್ನೇ ಗಣಪತಿ ಎಂದು ನಂಬುವ ಕೃಷಿ ಕಲ್ಪನೆಯ ಗಣಪನೇ ತುಳುನಾಡಿನ ಆರಾಧನೆಯ ದೇವರಾಗುತ್ತಾನೆ ಎಂದು ಕೆ. ಎಲ್. ಕುಂಡಂತಾಯ ಹೇಳಿದರು.
ಬನ್ನಂಜೆ ಬಾಬು ಅಮೀನ್ ಮಾತನಾಡಿ ತುಳುನಾಡಿನ ದೈವಾರಾಧನೆ ಹಾದಿ ತಪ್ಪಿದೆ. ಲಕ್ಷಗಟ್ಟಲೆ ಖರ್ಚಿನ ದೈವಾರಾಧನೆ ಭಕ್ತಿಯನ್ನು ಬಿಟ್ಟು ವೈಭವದ ಹಾದಿ ಹಿಡಿದಿದೆ. ತುಳುನಾಡಿನ ಆರಾಧನೆ ಭಕ್ತಿ ಪ್ರೀತಿ ನಂಬಿಕೆಗಳಿಂದ ಕೂಡಿದ್ದದು ಹೊರತು ಆಡಂಬರದ್ದಲ್ಲ ಎಂದರು.
ಡಾ. ವಾಸುದೇವ ಬೆಳ್ಳೆ ಮಾತನಾಡಿ ಭೂಮಿಯನ್ನು ತಾಯಿ ಎಂದು ಭಾವಿಸುವ ಭಕ್ತಿಯ ಕಲ್ಪನೆ ದೂರವಾಗಿ ವ್ಯಾಪಾರದ ದೃಷ್ಟಿ ಬಂದಿದೆ. ಹಾಗಾಗಿ ನದಿ ತಿರುಗಿಸುವ ಚಿಂತನೆಗಳು ಬರತೊಡಗಿವೆ. ಬದಲಾವಣೆಗಳಿಂದ ಹಾದಿ ತಪ್ಪಿದ್ದೇವೆ ಎನ್ನಲಾಗದು. ಹಾಗಾಗಿ ಮುಂಬೈ, ದುಬೈನಲ್ಲೂ ದೈವಗಳ ಆರಾಧನೆ ಆರಂಭವಾಗಿರುವುದನ್ನು ವಿರೋಧಿಸುವುದು ಸರಿಯಲ್ಲ. ಆರಾಧನೆ ಭಕ್ತಿಯ ನಂಬಿಕೆಯ ಪ್ರತೀಕಗಳಾಗಬೇಕೇ ಹೊರತು ದುಡ್ಡು ಹುಡಿಮಾಡುವಂತಹುಗಳಾಗಬಾರದು ಎಂದರು. ಶಶಿ ಶೆಟ್ಟಿ ಗೋವಾ, ಡಾ. ವೈ. ಎನ್. ಶೆಟ್ಟಿ ಮತ್ತಿತರರಿದ್ದರು.

Comments

comments

Comments are closed.

Read previous post:
ತುಳು ಕಲಿಕೆ : 20 ಶಾಲೆಗಳಲ್ಲಿ 956 ವಿದ್ಯಾರ್ಥಿಗಳು

ಪುತ್ತೂರಲ್ಲೇ 723 ವಿದ್ಯಾರ್ಥಿಗಳು ಮೂಲ್ಕಿ : ಶಾಲೆಗಳಲ್ಲಿ ಆರನೇ ತರಗತಿಯಿಂದ ೧೦ನೇ ತರಗತಿಯವರೆಗೆ ಮೂರನೇ ಭಾಷೆಯಾಗಿ ತುಳು ಕಲಿಸಲು ಸರಕಾರ 2010 ರಲ್ಲಿ ಮುಂದಾಗಿದ್ದು, ಈ ವರುಷ...

Close