ಕಟೀಲು : ಮನೆ ದರೋಡೆ

ಕಿನ್ನಿಗೋಳಿ: ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣ ಅವರ ಮನೆಗೆ ನುಗ್ಗಿ ಮನೆಯವರನ್ನು ಬೆದರಿಸಿ ಹಲ್ಲೆ ನಡೆಸಿ ಲಕ್ಷಾಂತರ ಮೌಲ್ಯದ ನಗನಗದು ದರೋಡೆ ನಡೆಸಿ ಪರಾರಿಯಾದ ಘಟನೆ ಸೋಮವಾರ ತಡ ರಾತ್ರಿ ನಡೆದಿದೆ.

ಕಟೀಲು ದೇವಳದಲ್ಲಿ ನವರಾತ್ರಿ ಪೂಜೆ ನಡೆಯುತ್ತಿದ್ದು ವಾಸುದೇವ ಆಸ್ರಣ್ಣರು ನಾಂದಿಯ ಕಂಕಣ ತೊಟ್ಟಿದ್ದು ಜನ ನಿಭಿಡತೆ ಕಾರಣ ದೇವತಾ ಕಾರ್ಯ ನಿರತರಾಗಿದ್ದರು.

ಕಟೀಲು ದೇವಳದಲ್ಲಿ ನವರಾತ್ರಿ ಪ್ರಯುಕ್ತ ತೃತೀಯ ದಿನದ ನವರಾತ್ರಿ ಮೆರವಣಿಗೆ ಮುಗಿಸಿಕೊಂಡು ರಾತ್ರಿ 11.30ರ ಸುಮಾರಿಗೆ ಕಟೀಲು ಸಮೀಪದ ಗಿಡಿಗೆರೆ ಶೇಡಿಗುರಿ ಬಳಿಯ ಮನೆಗೆ ವಾಸುದೇವ ಆಸ್ರಣ್ಣರ ಪತ್ನಿ ನಿರಂಜನಾಕ್ಷಿ, ಮಗಳು ರೂಪಾ ಹಾಗೂ ಇಬ್ಬರು ಮಕ್ಕಳು ಮಗ ಕುಮಾರ ಆಸ್ರಣ್ಣ ಮನೆಗೆ ಬಂದು ನಿದ್ರಿಸುತ್ತಿದ್ದರು. ಆದರೆ ಕುಮಾರ ಆಸ್ರಣ್ಣರ ಪತ್ನಿ ಸರಿತಾ ಹಾಗೂ ಮಗು ದೇವಳಕ್ಕೆ ಹೋಗದೆ ಮನೆಯಲ್ಲಿಯೇ ಇದ್ದರು.
ಅರ್ಧ ಗಂಟೆ ನಂತರ ಮನೆಗೆ ಠಳಾಯಿಸಿದ ದರೋಡೆಕೋರರು ಮನೆ ಮುಂಬಾಗದ ಕಾಲಿಂಗ್ ಬೆಲ್ ಒತ್ತಿದಾಗ ಆಸ್ರಣ್ಣರ ಪತ್ನಿ ನಿರಂಜನಾಕ್ಷಿ ಯಾರು ಎಂದು ಕಿಟಿಕಿಯ ಮೂಲಕ ಒಳಗಿನಿಂದಲೇ ವಿಚಾರಿಸಿದಾಗ ದರೋಡೆಗಾರರು ಮಾತನಾಡಿ ನಮ್ಮವರೊಬ್ಬರಿಗೆ ಅನಾರೋಗ್ಯ ಕಾಡುತ್ತಿದ್ದು ಅದಕ್ಕಾಗಿ ಆಸಣ್ಣರ ಹತ್ತಿರ ಪ್ರಸಾದ ಸ್ವೀಕರಿಸಲು ಬಂದಿದ್ದಾಗಿ ಹೇಳಿಕೊಂಡರು ಆದರೆ ಬಾಗಿಲು ತೆರೆಯಲು ಹಿಂದೇಟು ಹಾಕಿದರು.
ಆ ಸಮಯ ಭಯಭೀತರಾದ ಮನೆಯವರು ಕೂಡಲೇ ವಾಸುದೇವ ಆಸ್ರಣ್ಣರ ತಮ್ಮ ವೆಂಕಟರಮಣ ಆಸ್ರಣ್ಣರಿಗೆ ಮೊಬೈಲ್ ಮೂಲಕ ವಿಷಯ ಪ್ರಯತ್ನಿಸಿದಾಗ ಆರು ಮಂದಿ ದರೋಡೆಗಾರರು ಬಾಗಿಲು ಮುರಿದು ಒಳ ಪ್ರವೇಶಿಸಿದರು. ಅದೇ ಸಮಯ ಇಬ್ಬರು ದರೋಡೆಗಾರರು ಮನೆಯ ಮಾಳಿಗೆ ಮೂಲಕ ಮಾರಕಾಯುಧಗಳೊಂದಿಗೆ ಕೆಳಗಿಳಿದು ರಿವಾಲ್ವರ್ ತಲವಾರು ರಾಡ್ ತೋರಿಸಿ ಮನೆಯವರೆಲ್ಲರನ್ನೂ ಬೆದರಿಸಿದರು. ಮನೆಒಳಗೆ ಪ್ರವೇಶಿಸಿದ್ದ ದರೋಡೆಕೋರರಲ್ಲಿ ಒಬ್ಬ ರಿವಾಲ್ವರ್ ತೋರಿಸಿ ಮೊಬೈಲ್ ಮಾಡದಂತೆ ತಾಕೀತು ಮಾಡಿ ಗದರಿಸಿದರು.
ಬಳಿಕ ಕುಮಾರ ಆಸ್ರಣ್ಣರ ಮೇಲೆ ಹಲ್ಲೆ ನಡೆಸಿ ಬೆದರಿಸಿ ಮನೆಯಲ್ಲಿರುವ ನಗ ನಗದನ್ನು ದೋಚಿ ಮನೆಯವರನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದಾರೆ.

ಅಲ್ಪ ಸ್ವಲ್ಪ ಮೊಬೈಲ್‌ನಲ್ಲಿ ಮಾತು ಕೇಳಿದ ವಾಸುದೇವ ಆಸ್ರಣ್ಣ ಅವರ ತಮ್ಮ ವೆಂಕಟರಮಣ ಆಸ್ರಣ್ಣ ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಮನೆಗೆ ಧಾವಿಸಿದ್ದು ಕೋಣೆಯಲ್ಲಿದ್ದವರನ್ನು ಬಂದ ಮುಕ್ತಗೊಳಿಸಿದರು.

ದರೋಡೆಗಾರರು ಹಿಂದಿ ಹಾಗೂ ತುಳು ಮಿಶ್ರಿತ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಕುಮಾರ ಆಸ್ರಣ್ಣ ತಿಳಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚುತಜ್ಞರು ಹಾಗೂ ರೇಖಾ ಚಿತ್ರಗಾರರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಸಿನಮೀಯ ಮಾದರಿಯಲ್ಲಿ ನಡೆದ ಈ ದರೋಡೆ ಪ್ರಕರಣ ಕಟೀಲು ಪರಿಸರದ ಜನತೆಯಲ್ಲಿ ಭಯಬೀತ ವಾತಾವರಣ ಸೃಷ್ಠಿಸಿದೆ. ಮನೆಯವರ ಚಲನವಲನ ನೋಡಿಕೊಂಡೇ ಈ ಕೃತ್ಯ ನಡೆಸಲಾಗಿದೆ ಎಂಬ ಗುಮಾನಿ ಇದೆ. ದರೋಡೆಗಾರರಲ್ಲಿ ಒಬ್ಬ ಮಾತ್ರ ತನ್ನ ಮುಖಕ್ಕೆ ಮುಸುಕು ಹಾಕಿದ್ದದ್ದು ವಿಶೇಷವಾಗಿತ್ತು. ಈತ ಪರಿಚಿತ ಕಳ್ಳನಾಗಿರಬಹುದು ಅಥವಾ ಸ್ಥಳೀಯನಾಗಿರಬಹುದು ಎಂಬ ಸಂಶಯ ಮೂಡುತ್ತಿದೆ.
ಬಜಪೆ ಪೊಲೀಸರು ಸ್ಥಳಕ್ಕೆ ದಾವಿಸಿ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಮುಲ್ಕಿ ಮೂಡಬಿದರೆ ಶಾಸಕ ಕೆ. ಅಭಯಚಂದ್ರ ಜೈನ್ ಹಾಗೂ ಉನ್ನತ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಮೊಬೈಲನ್ನು ಕೊಂಡುಹೋದ ದರೋಡೆಗಾರರು
3 ಮೊಬೈಲು ಹಾಗೂ 1 ಟ್ಯಾಬ್ ಕೊಂಡುಹೋಗಿದ್ದು, ಅದರಲ್ಲಿ 1 ಮೊಬೈಲ್ ಮನೆಯ ಹಿಂದೆ ಬಿಸಾಡಿ ಹೋಗಿದ್ದಾರೆ.
ಮಹಿಳೆಯರ ಕರಿಮಣಿ ಸರವನ್ನು ಕೂಡಾ ಬಿಡದೆ ದೋಚಿದಾಗ. ದರೋಡೆಕೋರರಲ್ಲಿ ಒಬ್ಬರು ಒಂದು ಕರಿಮಣಿಯನ್ನು ಹಿಂತಿರುಗಿಸಿ ಸ್ವಲ್ಪ ಮಾನವೀಯತೆ ತೋರಿಸಿದ್ದಾರೆ.

ಕಳ್ಳರಲ್ಲೂ ಧಾರ್ಮಿಕ ನಂಬಿಕೆ
ಕಳ್ಳನೊಬ್ಬ ದೇವರ ಕೋಣೆಗೆ ನುಗ್ಗಲು ಮುಂದಾದಾಗ ಇನ್ನೊಬ್ಬ ಕಳ್ಳ ಚಪ್ಪಲಿ ತೆಗೆದಿಟ್ಟು ಒಳ ಹೋಗು ಎಂದು ಆದೇಶಿಸಿದ್ದ ಕಳ್ಳರಲ್ಲೂ ಧಾರ್ಮಿಕತೆ ಇದೆಯಾ ಎಬ ಸಂಶಯ.

ಜುಲೈ 4 2014 ಶುಕ್ರವಾರ ಕಿನ್ನಿಗೋಳಿಯಲ್ಲಿ ಇದೇ ರೀತಿಯ ಘಟನೆ
ಜುಲೈ 4 2014 ಶುಕ್ರವಾರ ಬೆಳಗ್ಗಿನ ಜಾವ ಇದೇ ರೀತಿಯ ದರೋಡೆಯನ್ನು ಕಿನ್ನಿಗೋಳಿ ಮುಖ್ಯರಸ್ತೆಯ ಭಟ್ಟಕೋಡಿಯ ಬಳಿಯ ರೋಟರಿ ಭವನದ ಪಕ್ಕದ ಲವ್ ಪ್ಯಾರಡೈಜ್ ಎಂಬ ಒಂದು ಅಂತಸ್ತಿನ ತಾರಸಿ ಮನೆಯಲ್ಲಿ ನಡೆಸಿದ್ದರು. ಮನೆಯಿಂದ ಹೋಗುವಾಗ ಮೂವರ ಕೈಕಾಲಿಗೆ ಕಟ್ಟಿದ್ದ ಸೀರೆಯನ್ನು ಬಿಚ್ಚಿ, ನೀರು ಕೊಟ್ಟು ಸಂತೈಸಿ ಹೋಗಿದ್ದರು. ಇದಕ್ಕೂ ಆ ಘಟನೆಗೂ ಸ್ವಲ್ಪ ಸಾಮ್ಯತೆ ಕಂಡು ಬರುತ್ತಿದೆ.

Kateel-04101601 Kateel-04101602 Kateel-04101603 Kateel-04101604 Kateel-04101605 Kateel-04101606

Comments

comments

Comments are closed.

Read previous post:
Kinnigoli-15091604
ಶ್ರೀವರ ಕ್ಲೇ ಮಾಡಲಿಂಗ್‌

ಕಿನ್ನಿಗೋಳಿ: ಬಂಟ್ವಾಳ ವಗ್ಗ ಪ.ಪೂ. ಕಾಲೇಜಿನಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಳ್ಕುಂಜೆ ಸಂತ ಪೌಲರ ಹಿ. ಪ್ರಾ. ಶಾಲೆಯ ವಿದ್ಯಾರ್ಥಿ ಶ್ರೀವರ ಕ್ಲೇ ಮಾಡಲಿಂಗ್‌ನಲ್ಲಿ...

Close