ಅ.16 ರಿಂದ 28 ಸಂತ ಜೂದರ ವಾರ್ಷಿಕ ಉತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದ ವಾರ್ಷಿಕ ಉತ್ಸವ ಅಕ್ಟೋಬರ್ 28ರಂದು ನಡೆಯಲಿದೆ ಎಂದು ಚರ್ಚ್‌ನ ಪ್ರಧಾನ ಧರ್ಮಗುರು ಫಾ| ಆಂಡ್ರ್ಯೂ ಲಿಯೊ ಡಿ’ಸೋಜ ತಿಳಿಸಿದ್ದಾರೆ.
ಅ. 16 ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಯೋಗ ಶಿಬಿರ ಹಾಗೂ ಪರಿಸರ ಸ್ವಚ್ಚತೆಯನ್ನು ಚರ್ಚ್ ಪಾಲನ ಸಮಿತಿ, ಭಾರತೀಯ ಕೆಥೋಲಿಕ್ ಯುವ ಸಂಚಾಲನ ಹಾಗೂ ಎ.ಜೆ. ಆಸ್ಪತ್ರೆ ಸಹಯೋಗದಲ್ಲಿ ನಡೆಯಲಿದೆ.
ಅ.19 ರಿಂದ 22ರವರೆಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಮೂರು ದಿನಗಳ ಧ್ಯಾನ ಕೂಟಗಳನ್ನು ಫಾ. ಜೆರಿ ಕುಟಿನ್ಹೊ ಫಾ. ಲ್ಯಾನ್ಸಿ ರೆಬೆಲ್ಲೋ, ಫಾ. ಸುನಿಲ್ ಪಿಂಟೊ ಮತ್ತು ಫಾ. ಮೆಲ್ವಿನ್ ನೊರೊನ್ಹಾ ನೆರವೇರಿಸಲಿದ್ದಾರೆ.
ಅ.23ನೇ ಭಾನುವಾರ ಸಂಜೆ 4.30 ಗಂಟೆಗೆ ಪಕ್ಷಿಕೆರೆ ಚರ್ಚಿಗೆ ಸರ್ವ ಭಕ್ತರಿಂದ ಹೊರೆಕಾಣಿಕೆ ಮೆರವಣಿಗೆ ಹಾಗೂ ತೀರ್ಥಹಳ್ಳಿ ಧರ್ಮಗುರು ಫಾ. ರೋಮನ್ ಪಿಂಟೊ ಅವರಿಂದ ಪಕ್ಷಿಕೆರೆ ಪೇಟೆಯಲ್ಲಿ ಕನ್ನಡದಲ್ಲಿ ಪ್ರವಚನ ನಡೆಯಲಿದೆ.
ಅ.24 ರಿಂದ ಅ.26 ರವರೆಗೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಮೂರು ದಿನಗಳ ಕ್ಯಾರೆಸ್ಮೆಟಿಕ್ ಧ್ಯಾನಕೂಟಗಳನ್ನು ದಾವಣಗೆರೆ ದೈವಿಕ ಸ್ಪರ್ಶ ಧ್ಯಾನ ಕೂಟ ಪಂಗಡದಿಂದ ನಡೆಯಲಿದೆ.
ಅ.27 ರಂದು ಸಂಜೆ 6 ಗಂಟೆಗೆ ಸಂತ ಜೂದರ ದಿವ್ಯ ಪ್ರತಿಮೆಯ ಮೆರವಣಿಗೆ, ದಿವ್ಯ ಬಲಿ ಪೂಜೆ ನೊವೆನಾ ಪ್ರಾರ್ಥನೆ ಹಾಗೂ ಆರಾಧನೆಯನ್ನು ಅಲಂಗಾರ್ ಚರ್ಚ್ ಫಾ. ಬಾಜಿಲ್ ವಾಸ್ ನೇತೃತ್ವದಲ್ಲಿ ನಡೆಯಲಿದೆ.
ಅ.28 ರಂದು ತ್ರಿವಳಿ ಸಂಭ್ರಮ ವಾರ್ಷಿಕ ಮಹೋತ್ಸವ, ದಿವ್ಯ ಬಲಿಪೂಜೆ, ನೂತನ ಸಭಾಭವನದ ಉದ್ಘಾಟನೆ ಹಾಗೂ ಬಡಕುಟುಂಬದವರ 15 ಜೋಡಿಗಳ ಸಾಮೂಹಿಕ ವಿವಾಹವನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ರೆ. ಫಾ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ, ಕಿನ್ನಿಗೋಳಿ ವಲಯದ ಹಾಗೂ ವಿವಿಧ ಧರ್ಮಕೇಂದ್ರಗಳ ವಿವಿಧ ಧರ್ಮಗುರುಗಳು ಮತ್ತು ಗಣ್ಯ ಅತಿಥಿಗಳ ಸಮ್ಮುಖದಲ್ಲಿ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇವದಾಸ್ ಕಾಫಿಕಾಡ್ ವಿರಚಿತ ಬಂಗಾರ್ ತುಳು ನಾಟಕ ಪ್ರರ್ದಶನಗೊಳ್ಳಲಿದೆ. ಎಂದು ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ. ಡಿ. ವಿರೇಂದ್ರ ಹೆಗ್ಡೆ ಸುಮಾರು ಮೂರು ಕೋಟಿ ವೆಚ್ಚದ 800 ಆಸನಗಳಿಂದ ಕೂಡಿದ ಸುಸಜ್ಜಿತ ನೂತನ ಸಭಾಭವನವನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ. ಸಂಸದ ನಳಿನ್ ಕುಮಾರ್, ಕರ್ನಾಟಕ ರಾಜ್ಯ ಅರಣ್ಯ ಸಚಿವ ರಮಾನಾಥ ರೈ, ಅಭಯಚಂದ್ರ ಜೈನ್, ಮೊದಿನ್ ಬಾವ, ಜೆ.ಆರ್. ಲೋಬೊ, ಐವಾನ್ ಡಿಸೋಜ, ಮುಲ್ಕಿ ಸೀಮೆ ಅರಸರಾದ ದುಗ್ಗಣ್ನ ಸಾವಂತರು, ಆಳ್ವಾಸ್ ಸಮೂಹ ಸಂಸ್ಥೆಯ ನಿರ್ದೇಶಕ ಡಾ. ಮೋಹನ ಆಳ್ವ ಕಿನ್ನಿಗೋಳಿ ವಲಯ ಚರ್ಚ್‌ಗಳ ಮುಖ್ಯಸ್ಥ ಫಾ. ವಿನ್ಸೆಂಟ್ ಮೊಂತೆರೊ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಕಳೆದ 12 ವರ್ಷಗಳಿಂದ ನಡೆಯುತ್ತಿರುವ ಸಾಮೂಹಿಕ ವಿವಾಹದಲ್ಲಿ ಸುಮಾರು 115 ಕ್ಕೂ ಮಿಕ್ಕಿ ಜೋಡಿಗಳು ಲಗ್ನ ಸಂಸ್ಕಾರ ಸ್ವೀಕರಿಸಿದ್ದಾರೆ. ಸುಮಾರು ಐದು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಾರ್ವಜನಿಕರಿಗೆ ಸಸ್ಯಾಹಾರಿ ಅನ್ನಸಂತರ್ಪಣೆ ನಡೆಯಲಿದೆ. ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷಿಕೆರೆ ಧರ್ಮಗುರು ಫಾ. ಆಂಡ್ರ್ಯೂ ಲಿಯೊ ಡಿ’ಸೋಜ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಮತ್ತು ಕಾರ್ಯದರ್ಶಿ ಲೂಸಿ ಡಿಸೋಜ ಉಪಸ್ಥಿತರಿದ್ದರು.

Comments

comments

Comments are closed.

Read previous post:
photo
ಅ.16 ಕಿನ್ನಿಗೋಳಿ ವಿಶ್ವ ಹಿಂದೂ ಪರಿಷತ್

ಕಿನ್ನಿಗೋಳಿ: ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃ ಮಂಡಳಿ ದುರ್ಗಾವಾಹಿನಿ ಕಿನ್ನಿಗೋಳಿ ನಗರ ಹಾಗೂ ಸ್ಥಳೀಯ ಘಟಕಗಳ ಉದ್ಘಾಟನಾ ಸಮಾರಂಭ ಅ.16 ಭಾನುವಾರ ಬೆಳಿಗ್ಗೆ 10 ಗಂಟೆಗೆ ಕಿನ್ನಿಗೋಳಿಯ...

Close