ಯಕ್ಷ ದಿಗ್ಗಜ ಮುಖ್ಯಪ್ರಾಣ ಪ್ರಶಸ್ತಿಯ ಗರಿ.

ಕಿನ್ನಿಗೋಳಿ : ಯಕ್ಷಗಾನ ಕ್ಷೇತ್ರದಲ್ಲಿ ಕಿನ್ನಿಗೋಳಿ ಅಂದರೆ ಅದು ಮುಖ್ಯಪ್ರಾಣರೇ ಎಂದು ಪ್ರತೀತಿ. ಕಟೀಲು ಮೇಳದಲ್ಲಿ 4, ಇರಾ 2, ಸುಬ್ರಹ್ಮಣ್ಯ, ಮಂತ್ರಾಲಯ, ಕುಮುಟ ಮೇಳಗಳಲ್ಲಿ ತಲಾ ಒಂದೊಂದು ವರುಷ, ಸಾಲಿಗ್ರಾಮದಲ್ಲಿ 14, ಪೆರ್ಡೂರಿನಲ್ಲಿ 8, ಕದ್ರಿಯಲ್ಲಿ 3 ಪ್ರಸ್ತುತ ಮಂದಾರ್ತಿ ಮೇಳದಲ್ಲಿ 16 ವರುಷಗಳಿಂದ ಹೀಗೆ ಐವತ್ತು ವರುಷಗಳಿಂದ ತೆಂಕು ಬಡಗಿನ ಒಂಭತ್ತು ಮೇಳಗಳಲ್ಲಿ ಯಕ್ಷಗಾನ ಹಾಸ್ಯ ಕಲಾವಿದನಾಗಿ ಪ್ರಸಿದ್ಧರಾದ ಮುಖ್ಯಪ್ರಾಣ ಕಿನ್ನಿಗೋಳಿಯವರಿಗೆ ನವೆಂಬರ್ ಒಂದರಂದು ರಾಜ್ಯೋತ್ಸವ ಪ್ರಶಸ್ತಿಯ ಗರಿ.
ಮುಖ್ಯಪ್ರಾಣರು ಹುಟ್ಟಿದ್ದು 1941 ರ ಮಾರ್ಚ್ 12ರಂದು. ಐದನೇ ತರಗತಿ ವರೆಗೆ ಕಲಿಕೆ. ತನ್ನ ತಂದೆ ಯಕ್ಷಗಾನ ತಾಳಮದ್ದಳೆಯಲ್ಲಿ ಅರ್ಥ ಹೇಳುತ್ತದ್ದನ್ನು ಗಮನವಿಟ್ಟು ಕೇಳಿ ನೋಡಿ ಯಕ್ಷಗಾನದತ್ತ ಆಕರ್ಷಿತರಾದರು.
ಛಂದೋಬ್ರಹ್ಮ ಡಾ. ನಾರಾಯಣ ಶೆಟ್ಟರು, ಮಿಜಾರು ಅಣ್ಣಪ್ಪ, ಸೀತಾರಾಮ ಶೆಟ್ಟಿಗಾರ್, ಸೂರಪ್ಪ ಶೆಟ್ಟಿಗಾರ್, ದಿ. ರಾಮ ನಾಯರಿ ಮುಂತಾದವರಿಂದ ಯಕ್ಷಗಾನದ ಅರ್ಥ, ನಾಟ್ಯ, ಹಾಸ್ಯ ಕಲಿತ ಮುಖ್ಯಪ್ರಾಣರು ನಾಲ್ಕು ವರುಷಗಳ ಕಾಲ ಹವ್ಯಾಸಿ ಕಲಾವಿದನಾಗಿದ್ದವರು ಕಟೀಲು ಮೇಳದ ಮೂಲಕ ವೃತ್ತಿಪರ ಕಲಾವಿದನಾದರು. ಮಳೆಗಾಲದಲ್ಲಿ ಕುಲಕಸುಬು ನೇಕಾರಿಕೆಯನ್ನು ಮಾಡುತ್ತಿದ್ದರು.
ಮೊತ್ತ ಸ್ತ್ರೀ ವೇಷದಾರಿಯಾಗಿದ್ದು ನಂತರ ಹಾಸ್ಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡರು.
ನಳದಮಯಂತಿಯ ಬಾವುಕ, ಕೃಷ್ಣ ಲೀಲೆಯ ನಾರದ, ವಿಜಯ, ರಜಕ, ಭೀಷ್ಮೋತ್ತಿಯ ಕಂದರ, ಪಟ್ಟಾಭಿಷೇಕದ ಮಂಥರೆ ಹೀಗೆ ಪೌರಾಣಿಕ ಪ್ರಸಂಗಗಳಲ್ಲಿ ಹೆಸರು ಮಾಡಿದ ಮುಖ್ಯಪ್ರಾಣರು, ಕಾಲ್ಪನಿಕ ಪ್ರಸಂಗಗಳಾದ ಚೆಲುವ ಚಿತ್ರಾವತಿಯ ಅಡಗೂಲಜ್ಜಿ, ಮುರಳಿ, ಶೂದ್ರ ತಪಸ್ವಿನಿಯ ರಂಗಾಚಾರಿ, ಕಾಂಚನಶ್ರೀಯ ಪ್ರೇತ, ಸ್ವಪ್ನ ಸಾಮ್ರಾಜ್ಯದ ಶೂರಸೇನ, ಕಲಿಕ್ರೋಧನದ ಮಡಿವಾಳ ಪಾತ್ರಗಳಿಂದ ಖ್ಯಾತರಾದರು. ನಾಗಶ್ರೀಯ ಬಸ್ತ ಕೈರವ ಪಾತ್ರ ಅವರಿಗೆ ತೃಪ್ತಿ ಮತ್ತು ಪ್ರಸಿದ್ದಿಯನ್ನೂ ತಂದುಕೊಟ್ಟಿತು.
ನರಸಿಂಹ ಭಾಗವತರು, ಕಾಳಿಂಗ ನಾವಡರು, ಕಡತೋಕರು, ಧಾರೇಶ್ವರರು, ಶಿರಿಯಾರ ಮಂಜುನಾಯ್ಕರು, ಮೂರೂರು ದೇವರು ಹೆಗ್ಡೆ, ಜಲವಳ್ಳಿ ವೆಂಕಟೇಶ ರಾವ್, ಕುಂಜಾಲು ರಾಮಕೃಷ್ಣ ಹೀಗೆ ಅತಿರಥರ ಒಡನಾಟದೊಂದಿಗೆ ಯಕ್ಷಪಯಣ ನಡೆಸುತ್ತಿರುವ ಮುಖ್ಯಪ್ರಾಣರಿಗೀಗ 76 ರ ಹರೆಯ. ಮಂದಾರ್ತಿ ಮೇಳದಲ್ಲಿ ಈಗಲೂ ಅವರು ಹಾಸ್ಯಗಾರರು.
ಸಜ್ಜನಿಕೆ, ಸರಳತೆಯಿಂದ ಆತ್ಮೀಯರಾಗುವ ಮುಖ್ಯಪ್ರಾಣ ಕಿನ್ನಿಗೋಳಿ ಅವರಿಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ, ದ.ಕ. ಜಿಲ್ಲಾ ರಾಜ್ಯೋತ್ಸವ, ಉಡುಪಿ ಕಲಾರಂಗ, ದ.ಜ.ಜಿಲ್ಲಾ ಪದ್ಮಶಾಲಿ ಒಕ್ಕೂಟ, ಮುಂಬಯಿ ಕಲಾಪ್ರಕಾಶ ಪ್ರತಿಷ್ಟಾನ, ಯಕ್ಷಕುಟೀರ ಬೆಂಗಳೂರು, 50 ವರ್ಷ ಸಂಭ್ರಮದ ಸನ್ಮಾನ ಹೀಗೆ ವಿವಿಧೆಡೆ ಐವತ್ತಕ್ಕೂ ಹೆಚ್ಚು ಸಂಮಾನ, ಗೌರವಗಳು ಸಂದಿವೆ.
ಪತ್ನಿ ಗುಲಾಬಿ ಮಗ ಯಶವಂತ ಸೊಸೆ ಜಯಲಕ್ಷ್ಮೀ ಮೊಮ್ಮಕ್ಕಳ ಇಶಿಕ್ ಮತ್ತು ಇಶಾನ್ ಸುಖೀ ಕುಟುಂಬ ಹೊಂದಿದ್ದಾರೆ.

Kinnigoli3010201606 Kinnigoli-3110201601

 

Comments

comments

Comments are closed.

Read previous post:
Kinnigoli-3110201602
ಕಟೀಲು ಗೋಪೂಜೆ

ಕಿನ್ನಿಗೋಳಿ: ಕಟೀಲು ಕ್ಷೇತ್ರದಲ್ಲಿ ಗೋವುಗಳಿಗೆ ವಿಶೇಷ ಮಹತ್ವ ಕಲ್ಪಿಸಲಾಗುತ್ತಿದೆ. ಗೋವಿನ ಪೂಜೆಯಿಂದ ಸನಾತನ ಸಂಸ್ಕ್ರತಿ ಜಾಗೃತಿಯಾಗುತ್ತದೆ. ಎಂದು ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು. ಕಟೀಲು...

Close