ನಾಪತ್ತೆ ಯುವಕ ಶವವಾಗಿ ಪತ್ತೆ

ಕಿನ್ನಿಗೋಳಿ : ಕಳೆದ ಡಿಸೆಂಬರ್ 28 (2016) ಬುಧವಾರದಂದು ನಾಪತ್ತೆಯಾದ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಂಬಳಿಮನೆ ನಿವಾಸಿ ಉಮೇಶ್ ಶೆಟ್ಟಿ(29 ವರ್ಷ) ಭಾನುವಾರ ಮಧ್ಯಾಹ್ನ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ಗುಡ್ಡ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಕಿಲೆಂಜೂರು ರಾಮಕೃಷ್ಣ ಶೆಟ್ಟಿ ಹಾಗೂ ಪ್ರಭಾವತಿ ಶೆಟ್ಟಿ ಅವರ ಮಗನಾದ ಉಮೇಶ್ ಶೆಟ್ಟಿ ಸ್ಥಳೀಯವಾಗಿ ಉತ್ತಮ ನಡತೆಯುಳ್ಳವರಾಗಿದ್ದು ಯಾರೊಂದಿಗೂ ಹೆಚ್ಚಾಗಿ ಬೆರೆಯದೆ ತಮ್ಮ ಪಾಡಿಗೆ ಕೆಲಸ ವ್ಯವಹಾರ ಮಾಡಿಕೊಂಡಿದ್ದರು. ಮೂರು ವರ್ಷದ ಹಿಂದೆ ಮುಂಬಯಿಂದ ಊರಿಗೆ ಆಗಮಿಸಿ ಕಳೆದ ಕೆಲವು ತಿಂಗಳಿನಿಂದ ಪಣಂಬೂರಿನ ಟ್ರಾನ್ಸ್‌ಫೋರ್ಟ್ ಉದ್ಯಮದಲ್ಲಿ ಪಾಲುದಾರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಒಂದು ವಾರದ ಹಿಂದೆ ತನ್ನ ಗೆಳೆಯರೊಂದಿಗೆ ತಾನು ಕೋರೆ ಉದ್ಯಮವನ್ನು ಪ್ರಾರಂಭಿಸುವ ಇರಾದೆಯಿದೆ ಎಂದು ತಿಳಿಸಿದ್ದರು.
ದಿನಂಪ್ರತಿ ಪಣಂಬೂರಿಗೆ ಬಸ್ಸಿನಲ್ಲಿ ಹೋಗಿ ಬರುತ್ತಿದ್ದರು ಎಂದು ಮನೆಯವರು ತಿಳಿಸಿದ್ದಾರೆ. ಡಿಸೆಂಬರ್ 28 ರಂದು ಸಂಜೆ ಪಕ್ಷಿಕೆರೆ ಬಳಿ ಬಸ್ಸಿನಿಂದ ಇಳಿದಿದ್ದು ಬಳಿಕ ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಹೋಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡು ಹುಡುಕಾಟ ನಡೆಸುತ್ತಿದ್ದರು.
ಗಲ್ಪ್ ರಾಷ್ಟ್ರದಿಂದ ಕ್ರೈಸ್ತ ಕುಟುಂಬವೊಂದು ನಿಡ್ಡೋಡಿಗೆ ಕ್ರಿಸ್ಮಸ್ ರಜೆಗಾಗಿ ಊರಿಗೆ ಬಂದಿದ್ದರು. ಡಿಸೆಂಬರ್ 30 ರಂದು ತಮ್ಮ ಜಮೀನು ವೀಕ್ಷಣೆಗೆಂದು ಬಂದಿದ್ದಾಗ ಉಮೇಶ್ ಶೆಟ್ಟಿ ಅವರ ಮತದಾರರ ಗುರುತು ಚೀಟಿ ಹಾಗೂ ಪರ್ಸ್ ಭಾವ ಚಿತ್ರ ಸಿಕ್ಕಿತ್ತು. ಫೇಸ್ ಬುಕ್‌ನಲ್ಲಿ ಜಾಲಾಡಿ ಉಮೇಶ್ ಶೆಟ್ಟಿಯವರ ಪುಟ ಕಂಡು ಹಿಡಿಯಲಾಗಿತ್ತಾದರೂ ಆ ಪುಟಕ್ಕೆ ಸಂಪರ್ಕಕ್ಕಾಗಿ ತಡಕಾಡಿ ಯಾವುದೇ ಪ್ರೆಂಡ್ ರಿಕ್ವೆಷ್ಟ್ ಆಗಿಲ್ಲದಿರುವುದು ಮನಗಂಡು ಕಟೀಲು ಅಜಾರು ಸಮೀಪದ ಸ್ನೇಹಿತ ವ್ಯಕ್ತಿಯೋರ್ವರಿಗೆ ಕಿಲೆಂಜೂರಿನಲ್ಲಿ ಈ ಬಗ್ಗೆ ವಿಚಾರಿಸಿ ತಿಳಿಸಿ ಎಂದು ಪರ್ಸ್ ಹಾಗೂ ಗುರುತು ಚೀಟಿ ನೀಡಿ ಗಲ್ಪ್ ರಾಷ್ಟ್ರಕ್ಕೆ ಹಿಂದಿರುಗಿದ್ದರು.
ಇಂದು ಬೆಳಿಗ್ಗೆ ಗುರುತು ಚೀಟಿ ಬಗ್ಗೆ ಹುಡುಕಾಟ ನಡೆಸಿದಾಗ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ಮುಖ್ಯ ರಸ್ತೆಯಿಂದ ಸುಮಾರು ಒಂದು ಕಿಲೋ ಮೀಟರ್ ದೂರದ ಗುಡ್ಡ ಪ್ರದೇಶದಲ್ಲಿ ಉಮೇಶ್ ಶೆಟ್ಟಿ ಅವರು ಶವವಾಗಿ ಪತ್ತೆಯಾಗಿದ್ದಾರೆ.
ಇದು ವ್ಯವಸ್ಥಿತ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ಪೋಲೀಸರ ಉನ್ನತ ತನಿಖೆಯಿಂದ ಹೊರಬೀಳಬೇಕಾಗಿದೆ.
ಸ್ಥಳಕ್ಕೆ ಎಸಿಪಿ ರಾಜೇಂದ್ರ, ಡಿಸಿಪಿ ಕಾಂತರಾಜು, ಮುಲ್ಕಿ ಠಾಣಾಧಿಕಾರಿ ಅನಂತ ಪದ್ಮನಾಭ ಮೂಡಬಿದಿರೆ ಠಾಣಾಧಿಕಾರಿ ರಾಮಚಂದ್ರ ನಾಯಕ್, ಶ್ವಾನದಳ, ಬೆರಳಚ್ಚು ಹಾಗೂ ಪೊರೆನಿಕ್ಸ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿಉನ್ನತ ತನಿಖೆ ನಡೆಸುತ್ತಿದ್ದಾರೆ.

Kinnigoli-0201201707 Kinnigoli-0201201708 Kinnigoli-0201201709Kinnigoli-02012017010

Comments

comments

Comments are closed.

Read previous post:
Kinnigoli-0201201706
ಕಟೀಲು ಸ್ವಚ್ಚತಾ ಅಭಿಯಾನ

ಕಿನ್ನಿಗೋಳಿ : ದೇಶದಲ್ಲಿ ಪ್ರಸಿದ್ದ ಯಾತ್ರಾ ಸ್ಥಳವಾದ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳ ಹಾಗೂ ಪರಿಸರದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಸ್ವಚ್ಚತಾ ಅಭಿಯಾನ ಕೈಗೊಳ್ಳಬೇಕು ಎಂದು ಸಂಸದ ನಳಿನ್...

Close