ಉಮೇಶ್ ಶೆಟ್ಟಿ ಕ್ರೈಮ್ ಫಾಲೋ ಅಪ್

ಕಿನ್ನಿಗೋಳಿ: ಡಿಸೆಂಬರ್ 28 ರಂದು ನಾಪತ್ತೆಯಾಗಿ ಜನವರಿ 1 ರಂದು ಶವವಾಗಿ ಪತ್ತೆಯಾದ ಉಮೇಶ ಶೆಟ್ಟಿ ಕೊಲೆಯಾಗಿರುವ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ. ಈ ಬಗ್ಗೆ ಪೋಲಿಸರು ತೀವ್ರವಾಗಿ ವಿವಿಧ ಮಜಲುಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಡಿಸೆಂಬರ್ 28 ರಂದು ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯಿಂದ ನಾಪತ್ತೆಯಾದ ಉಮೇಶ್ ಶೆಟ್ಟಿ, ಜನವರಿ 1 ರಂದು ಮೂಡಬಿದ್ರೆಯ ನಿಡ್ಡೋಡಿ ಚರ್ಚ್ ಬಳಿಯ ಅನತಿ ದೂರದ ಗುಡ್ಡದಲ್ಲಿ ಶವವಾಗಿ ಪತ್ತೆಯಾಗಿದ್ದರು. ಉಮೇಶ್ ಶೆಟ್ಟಿ ಅವರು ಎರಡು ಮೊಬೈಲ್‌ಗಳನ್ನು ಹೊಂದಿದ್ದು ಮೃತ ದೇಹದಲ್ಲಿ ಮೊಬೈಲ್‌ಗಳು ಪತ್ತೆಯಾಗಿಲ್ಲ, ಪ್ಯಾಂಟ್ ಜೇಬಿನಲ್ಲಿ ಪೆನ್ ಡ್ರೈವ್ ಒಂದು ಪತ್ತೆಯಾಗಿದೆ. ಮೃತದೇಹದ ಸಮೀಪ ಒಂದು ಬಿಸ್ಲೆರಿ ನೀರಿನ ಬಾಟಲ್ ಮತ್ತು ಕಿನ್ಲೆ ನೀರಿನ ಬಾಟಲ್ ನ ಮುಚ್ಚಳ ಮಾತ್ರ ಪತ್ತೆಯಾಗಿದ್ದು ಬಾಟಲ್ ಇರಲಿಲ್ಲ. ಮೃತ ದೇಹ ಸ್ವಲ್ಪ ಕೊಳೆತ ಸ್ಥಿತಿಯಲ್ಲಿದ್ದು ನಾಪತ್ತೆಯಾದ ದಿನವೇ ಕೊಲೆ ಅಥವಾ ಆತ್ಮಹತ್ಯೆ ನಡೆದಿರುವ ಸಾದ್ಯತೆ ಇದೆ. ಮೃತ ದೇಹದಲ್ಲಿ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿಲ್ಲ, ನಾಪತ್ತೆಯಾದ ದಿನ ಸುಮಾರು 6.30 ಸಮಯದಲ್ಲಿ ತನ್ನ ಗೆಳೆಯನ ಮೊಬೈಲ್ ಗೆ ಕರೆ ಮಾಡಿದ್ದು, ಗೆಳೆಯ ಎಂ.ಆರ್.ಪಿ.ಎಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು ಮೊಬೈಲ್ ಬಳಸಲು ಅನುಮತಿ ಇರದ ಕಾರಣ ಬೇರೆ ಕಡೆಯಲ್ಲಿ ಬಿಟ್ಟು ಹೋಗಿದ್ದ, ಕೆಲಸ ಮುಗಿಸಿ ಬಂದು ನೋಡುವಾಗ ಉಮೇಶ್ ಕರೆ ಮಾಡಿದ್ದನ್ನು ಗಮನಿಸಿ ವಾಪಾಸು ಕರೆ ಮಾಡುವಾಗ ನಾಟ್ ರೀಚೆಬಲ್ ಬರುತ್ತಿತ್ತು ಎನ್ನಲಾಗಿದೆ.

ಕಲ್ಲು ಕೋರೆ ವ್ಯಾಪಾರದಲ್ಲಿ ಆಸಕ್ತಿ
ಉಮೇಶ್ ಕಲ್ಲು ಕೊರೆ ವ್ಯಾಪಾರ ನಡೆಸಲು ಆಸಕ್ತಿ ಹೊಂದಿದ್ದ ಎನ್ನಲಾಗಿದ್ದು, ತನ್ನ ಗೆಳೆಯರ ಬಳಿ ಕಲ್ಲು ಕೋರೆ ಇದ್ದರೆ ತಿಳಿಸುವಂತೆ ಹೇಳುತ್ತಿದ್ದ, ಶವ ಸಿಕ್ಕಿದ ಜಾಗದ ಅನತಿ ದೂರದಲ್ಲಿ ಹಳೆಯ ಕಲ್ಲು ಕೋರೆ ಒಂದು ಇದ್ದು ಈ ನಿರ್ಜನ ಸ್ಥಳದಲ್ಲಿ ಹಗಲು ಹೊತ್ತಿನಲ್ಲೇ ಒಬ್ಬಂಟಿಯಾಗಿ ಹೋಗಲು ಭಯದ ವಾತವಾರಣವಿದ್ದು ಸ್ಥಳ ತೋರಿಸುವ ನೆಪದಲ್ಲಿ ಯಾರೋ ಕರೆ ತಂದು ಕೊಲೆ ನಡೆಸಿರುವ ಸಾದ್ಯತೆ ಇದೆ ಎಂದು ಭಾವಿಸಲಾಗಿದೆ

ಬೆದರಿಕೆ ಕರೆಗಳ ಗುಮಾನಿ ?
ಉಮೇಶ್ ಶೆಟ್ಟಿಗೆ ಬೆದರಿಕೆಯ ಬಗ್ಗೆ ಸಂಶಯವಿದ್ದು ಕಳೆದ ಕೆಲ ಸಮಯದ ಹಿಂದೆ ಇವರಿಗೆ ಬೆದರಿಕೆ ಕರೆಗಳು ಬಂದಿದೆ ಎಂದು ತನ್ನ ಗೆಳೆಯರ ಬಳಿ ಹೇಳುತ್ತಿದ್ದ ಎನ್ನಲಾಗಿದೆ.

ಬಡತನದಿಂದ ಮೇಲೆದ್ದು ಬಂದ ಕುಟುಂಬ
ಕಿನ್ನಿಗೋಳಿ ಸಮೀಪದ ಕಿಲೆಂಜೂರು ನಿವಾಸಿ ರಾಮಕೃಷ್ಣ ಮತ್ತು ಪ್ರಭಾವತಿ ದಂಪತಿಗಳಿಗೆ ಮೂರು ಜನ ಗಂಡು ಮಕ್ಕಳಲ್ಲಿ ಉಮೇಶ್ ಶೆಟ್ಟಿ ಎರಡನೆಯವರು, ಮುಂಬಾಯಿ ಹೊಟೇಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉಮೇಶ್ ಮೂರು ವರ್ಷದ ಹಿಂದೆ ಹುಟ್ಟೂರಿಗೆ ಆಗಮಿಸಿದ್ದ. ಪಣಂಬೂರಿನಲ್ಲಿ ಟ್ರಾನ್ಸ್ ಪೋರ್ಟ್ ಏಜನ್ಸಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇತ್ತಿಚಿನ ಕೆಲ ತಿಂಗಳಿನಿಂದ ಉದ್ಯಮಕ್ಕೆ ಸಂಬಂಧಿಸಿದಂತೆ ಕಂಟೇನರ್ ಸಾಗಿಸುವ ಎರಡು ಟ್ರಕ್‌ಗಳನ್ನು ಖರೀದಿಸಿದ್ದ ಎನ್ನಲಾಗಿದೆ. ವಾಹನ ಚಾಲನೆ ಸರಿಯಾಗಿ ಗೊತ್ತಿರಲಿಲ್ಲ, ವಾಹನ ಚಾಲನೆ ಕಲಿಯಲು ಹಳೆಯ ವಾಹನವೊಂದನ್ನು ಖರೀದಿಸಿದ್ದ ಇನ್ನು ಕೆಲವೇ ದಿನದಲ್ಲಿ ಸುಮಾರು ೧೬ ಲಕ್ಷ ಮೌಲ್ಯದ ಕಾರು ಖರೀದಿಸುವವನಿದ್ದ, ತನ್ನ ಕುಟುಂಬದ ಆಸ್ತಿ ಹಣ ಲಭಿಸಿದ್ದು ಇದನ್ನು ತನ್ನ ವ್ಯಾಪಾರಕ್ಕೆ ತೊಡಗಿಸಿಕೊಂಡಿದ್ದಾನೆ ಎನ್ನಲಾಗಿದೆ.

ಸರಳ ಸ್ವಭಾವ
ತಾನಾಯಿತು ತನ್ನ ಕೆಲಸವಾಯಿತು, ಯಾರೊಂದಿಗೂ ಹೆಚ್ಚು ಬೆರೆಯದ ಉಮೇಶ್ ಸರಳ ಸ್ವಭಾವದವ, ಸರಿಯಾದ ಸಮಯಕ್ಕೆ ಮನೆಯಿಂದ ಹೊರಟು ಕ್ಲಪ್ತ ಸಮಯಕ್ಕೆ ಮನೆ ತಲುಪುತ್ತಿದ್ದ ಖಾಸಗಿ ಬಸ್ಸಿನಲ್ಲೇ ಸಂಚರಿಸುತ್ತಿದ್ದು ಅಗತ್ಯ ಬಿದ್ದಲ್ಲಿ, ಡ್ರೈವರ್ ಮೂಲಕ ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದ. ಮನೆ ಸಮೀಪದಲ್ಲೇ ಬಸ್ಸಿನಿಂದ ಇಳಿಯುತ್ತಿದ್ದ ಆದರೆ ನಾಪತ್ತೆಯಾದ ದಿನ ಮನೆಗಿಂತ ಸುಮಾರು ೨ ಕಿ.ಲೋ ಮೀಟರ್ ದೂರದ ಪಕ್ಷಿಕೆರೆ ಪೇಟೆಯಲ್ಲಿ ಇಳಿದು ಅಪರಿಚಿತ ವಾಹನದಲ್ಲಿ ಹೋಗಿದ್ದ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಉಮೇಶ್ ಶೆಟ್ಟಿ ಕೊಲೆಯಾಗಿದ್ದರೆ ಇದನ್ನು ಯಾರು ಮಾಡಿದ್ದರು ಎಂಬುದು ಯಕ್ಷಪ್ರಶ್ನೆಯಾಗಿದೆ.

Comments

comments

Comments are closed.

Read previous post:
ಜ.3-7 ಪಟ್ಟೆ ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ: ಜ.3 ರಿಂದ 7ರ ವರೆಗೆ ಕಿನ್ನಿಗೋಳಿ ಸಮೀಪದ ಪಟ್ಟೆ ಶ್ರೀ ಜಾರಂದಾಯ ಬಂಟ ದೈವಸ್ಥಾನದ ವಾರ್ಷಿಕ ನೇಮೋತ್ಸವ ಹಾಗೂ ಬಂಡಿ ಬಲಿ ನಡೆಯಲಿದೆ. ಜ.೩ರಂದು ಭಂಡಾರದ ಮನೆಯಿಂದ...

Close