ಅಣೆಕಟ್ಟು – ಪೋಲಾದ ಸರಕಾರದ ಹಣ

ಕಿನ್ನಿಗೋಳಿ: ಅಂತರ್ಜಲ ರಕ್ಷಣೆ ಹಾಗೂ ಕೃಷಿಕರ ಏಳಿಗೆಗಾಗಿ ಸರಕಾರ ಹಲವು ಕ್ರಮ ಕೈಗೊಳ್ಳುತ್ತದೆ ಎಂಬುದು ಸರಕರದ ಮಟ್ಟದಲ್ಲಿ ಉಳಿದಿದೆ ಕೆಲವರ ಅವೈಜ್ಞಾನಿಕ ಯೋಜನೆ ಯೋಜನೆಗಳಿಗೆ ಸರಕಾರದ ಹಣ ಪೋಲಾಗುತ್ತಿರುವುದು ಮಾತ್ರ ವಿಪರ್ಯಾಸ. ಕಟೀಲು ಅಜಾರು ಬಳಿಯ ಸಿತ್ಲ ಪರಕಟ್ಟ ಕಿಂಡಿ ಅಣೆಕಟ್ಟು ಕೈಗೆ ಹಿಡಿದ ಕನ್ನಡಿಯಂತಿದೆ.
ಸುಮಾರು ಆರು ವರ್ಷಗಳ ಹಿಂದೆ ಮೆನ್ನಬೆಟ್ಟು ಹಾಗೂ ಎಕ್ಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕಟೀಲಿನಲ್ಲಿ ಹರಿಯುವ ನಂದಿನಿ ನದಿಗೆ ಸಿತ್ಲ ಪರಕಟ್ಟ ಬಳಿ ನಬಾರ್ಡ್‌ನಿಂದ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಕಿಂಡಿ ಆಣೆಕಟ್ಟು ನಿರ್ಮಾಣವಾಗಿತ್ತು. ಆದರೆ ಇವರೆಗೂ ತಾಂತ್ರಿಕ ತೊಂದರೆಗಳಿಂದ ಅಣೆಕಟ್ಟಿಗೆ ಹಲಗೆ ಹಾಕಲಾಗಿಲ್ಲ ಸುದ್ದಿಮಾಧ್ಯಮಗಳಲ್ಲಿ ಕಳೆದೆರಡು ವರ್ಷಗಳಿಂದ ಈ ಬಗ್ಗೆ ಸುದ್ದಿ ಬಂದರೂ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ದಿವ್ಯ ಮೌನದಿಂದಿದೆ.

ಕಟೀಲು ನಂದಿನಿ ನದಿಯ ಮಧ್ಯ ಭಾಗವಾಗಿದ್ದು ಕಟೀಲಿನಿಂದ ಹದಿನಾರು ಮೈಲು ದೂರದಲ್ಲಿ ಹುಟ್ಟಿ ಮುಚ್ಚೂರು, ಮೂಡುಪೆರಾರ, ಬಡಗ ಎಡಪದವು, ಪೆರ್ಮುದೆ, ಎಕ್ಕಾರು, ಕಟೀಲು, ಮೆನ್ನಬೆಟ್ಟು, ಸೂರಿಂಜೆ, ಚೇಳ್ಯಾಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯುದ್ದಕ್ಕೂ ಹರಿದು ಬಳಿಕ ಸಮುದ್ರ ಸೇರುತ್ತದೆ. ನದಿಯ ಉದ್ದ ಕೇವಲ ಮೂವತ್ತೆರಡು ಮೈಲುಗಳು. ಸಣ್ಣ ನೀರಾವರಿ ಇಲಾಖೆಯ ಪ್ರಕಾರ ನಂದಿನಿ ನದಿ ಉದ್ದ ೪೦ ಕಿ.ಮೀ.ಗಳಾದರೆ ಜಲಾನಯನ ಇಲಾಖೆಯ ಪ್ರಕಾರ ನದಿಯ ಜಲಾಯನದ ವ್ಯಾಪ್ತಿ 9112 ಹೆಕ್ಟೇರ್ ಪ್ರದೇಶ. ನದಿಗೆ ನದಿಗೆ ಕನಕಬೆಟ್ಟು, ಪಿಜಿನಬೆಟ್ಟು, ಒಂಟಿಮಾರು, ಗುಂಡಾವು, ನೀರ್‌ಕೆರೆ, ಮುಚ್ಚೂರು ಕಾನ, ಕಾಯರ್‌ಮುಗೇರ್, ಮುಚ್ಚೂರು ಕೊಂಠಿಕಟ್ಟ, ಮಚ್ಚಾರು, ನಿಡ್ಡೋಡಿ, ಸಿತ್ಲಪರಕಟ್ಟ, ಅಜಾರು ಜಲಕದ ಕಟ್ಟೆ, ಕಟೀಲು, ಎಕ್ಕಾರು ಕಂಬಳಪದವು, ಶಿಬರೂರು, ಪುಚ್ಚಾಡಿ, ಸೂರಿಂಜೆ, ಚೇಳಾಯರುಗಳಲ್ಲಿ ರೈತರು ಹಾಗೂ ಇಲಾಖೆಗಳು ಕಟ್ಟಿದ ಕಿಂಡಿ ಅಣೆಕಟ್ಟುಗಳಿವೆ. ಸುಮಾರು ಎರಡು ಸಾವಿರಕ್ಕೂ ಎಕರೆಗೂ ಹೆಚ್ಚು ಕೃಷಿ ತೋಟಗಳಿಗೆ ನೀಡುತ್ತದೆ.
ಸುಮಾರು 50 ವರ್ಷಗಳ ಹಿಂದೆ ಇಲ್ಲಿ ಕಟ್ಟಿದ ಅಣೆಕಟ್ಟು ಪರಿಸರದ ಮುನ್ನೂರಕ್ಕೂ ಹೆಚ್ಚು ಎಕರೆಯ ಕೃಷಿ ಭೂಮಿಗೆ ಬೇಸಿಗೆಗಾಲದಲ್ಲಿ ಧಾರಾಳ ನೀರು ದೊರಕುತ್ತಿದ್ದು. ಪರಿಸರದ ಎಲ್ಲಾ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುತ್ತಿತ್ತು. ವರ್ಷಂಪ್ರತಿ ಬರುವ ಮಳೆಗಾಲದ ನೆರೆಯ ಹೊಡೆತಕ್ಕೆ ಒಳಗಾಗಿ ಅಣೆಕಟ್ಟು ಮುರಿದು ಬಿದ್ದ ಬಳಿಕ ನಬಾರ್ಡ್ ಯೋಜನೆಯಲ್ಲಿ ಕಟ್ಟಿದ್ದ ಈ ಹೊಸ ಕಿಂಡಿ ಅಣೆಕಟ್ಟು ಬಳಕೆಯಾಗದೆ ಉಳಿದಿದೆ. ಕಾರಣ ನೆರೆಯ ಹೊಡೆತಕ್ಕೆ ನದಿಯ ಇಕ್ಕೆಲಗಳು ಪ್ರತಿ ವರ್ಷ ಕುಸಿದು ಬೀಳುತ್ತಿದೆ.
2012ನೆ ವರ್ಷದಲ್ಲಿ ಸುರಿದ ಭಾರಿ ಜಡಿ ಮಳೆಗೆ ನಿರ್ಮಾಣಗೊಂಡ ಪರಕಟ್ಟೆ ಕಿಂಡಿ ಅಣೆಕಟ್ಟುವಿನ ಬದಿಯ ತೆಂಗಿನ ಮರಗಳು, ಪಂಪು, ಬಾವಿ ಸಮೇತ ಕುಸಿದು ಹಾಗೂ ನಂದಿನಿ ನದಿಯಲ್ಲಿ ಕೊಚ್ಚಿ ಹೋಗಿವೆ. ನದಿಯ ಇನ್ನೊಂದು ಬದಿಯಾದ ಎಕ್ಕಾರು ಗ್ರಾಮದ ಕುಕ್ಕುಂಡೇಲ್‌ನಲ್ಲಿ ತಡೆಗೋಡೆ ಹಾನಿಯಾಗಿದೆ. ನೀರಿನ ರಭಸಕ್ಕೆ ಹಳೆ ಕಿಂಡಿ ಅಣೆಕಟ್ಟು ಸ್ಲಾಬ್ ಕುಸಿದು ಹೊಸ ಅಣೆಕಟ್ಟಿಗೆ ತಡೆಯನ್ನು ಉಂಟು ಮಾಡಿ ಕೃತಕ ನೆರೆಗೆ ಎಡೆ ಮಾಡಿಕೊಟ್ಟಿವೆ. ಪ್ರತಿವರ್ಷದ ಮಳೆಗೆ ಸ್ವಲ್ಪಸ್ವಲ್ಪ ಪರಿಸರದ ತೋಟ, ಗದ್ದೆಗಳು ನದಿ ಪಾಲಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.
ಅಣೆಕಟ್ಟಿನ ನದಿಯ ಎಕ್ಕಾರು ಹಾಗೂ ಕಟೀಲು ಪಂಚಾಯಿತಿಯ ಎರಡೂ ಬದಿಗಳಲ್ಲಿ ತಡೆಗೋಡೆ ನಿರ್ಮಾಣವಾಗಬೇಕು. ಇಲ್ಲವಾದಲ್ಲಿ ನೀರು ಶೇಖರಣಾ ಸಮಯದಲ್ಲಿ ಎರಡು ಬದಿಯ ಮಣು ಕುಸಿದು ಅಥವಾ ಮಳೆಗಾಲದಲ್ಲಿ ನೆರೆಯ ನೀರಿಗೆ ಕೊಚ್ಚಿಹೋಗಬಹುದು ಈ ಬಗ್ಗೆ ಎಕ್ಕಾರು ಹಾಗೂ ಕಟೀಲು ಪಂಚಾಯಿತಿಗಳೆರಡು ಕಾರ್ಯ ಪ್ರವೃತ್ತಗೊಂಡರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ ಇಲ್ಲವಾದರೆ ಸರಕಾರದ ಹಣ ಮಾತ್ರ ಪೋಲಾಗುತ್ತಿದೆ. ಜನಪ್ರತಿನಿಗಳು ಸ್ಥಳ ಪರಿಶೀಲನೆ ಮಾಡಿ ಇಲಾಖೆಗಳಿಗೆ ತಿಳಿಸಿದರೂ ಪ್ರಯೋಜನಕ್ಕೆ ಭಾರದಂತಿದೆ. ಇಲಾಖೆ ನಿದ್ರಿಸುತ್ತಿದೆಯೇ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಅನಾಥ ಹಲಗೆಗಳು : 
ಕಾಮಾಗಾರಿ ಪೂರ್ತಿಯಾದ ನಂತರ ನಿರ್ವಹಣಾ ಸಮಿತಿ ಆಗಿದೆಯೋ ಇಲ್ಲವೋ ಎಂಬುದೇ ಜಿಜ್ಞಾಸೆಯಲ್ಲಿದೆ. ಕಿಂಡಿ ಅಣೆಕಟ್ಟಿಗೆ ಅಳವಡಿಸಲು ತಂದ ಹಲಗೆಗಳ ರಾಶಿ ಅನಾಥವಾಗಿ ಬಿದ್ದಿವೆ. ಹೀಗೆ ಆದರೆ ಇವು ಗೆದ್ದಲು ಹಿಡಿಯಲೂಬಹುದು. ಮುಂದಿನ ದಿನಗಳಲ್ಲಿ ತಡೆಗೋಡೆ ನಿರ್ಮಿಸಿ ಹಲಗೆ ಹಾಕಿ ಅಣೆಕಟ್ಟು ಉಪಯೋಗಕ್ಕೆ ಬರುವಂತೆ ಮಾಡಬೇಕಾದ ಕರ್ತವ್ಯ ಜನಪ್ರತಿನಿಗಳಿದೆ.

ಪ್ರತೀ ಗ್ರಾಮ ಸಭೆಗಳಲ್ಲಿ ಪುನರಾವರ್ತನೆಗೊಳ್ಳುವ ಅಣೆಕಟ್ಟು ಯೋಜನೆ
ಸುಮಾರು ನಾಲ್ಕು ವರ್ಷಗಳಿಂದ ಗ್ರಾಮ ಸಭೆಗಳಲ್ಲಿ ಕಿಂಡಿ ಅಣೆಕಟ್ಟು ಬಗ್ಗೆ ಸಿತ್ಲ ಪರಿಸರದ ರೈತರು ಪಂಚಾಯಿತಿ ಆಡಳಿತದಲ್ಲಿ ಕಾರಣ ಕೇಳಿದರೂ ಪಂಚಾಯಿತಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಉತ್ತರ ದೊರಕಿಲ್ಲ. ಜನವರಿಯಲ್ಲಿ ನಡೆದ ಕಟೀಲು ಪಂಚಾಯಿತಿ ವಾರ್ಡು ಸಭೆಯಲ್ಲಿ ರೈತರು ನೀರಾವರಿ ಇಲಾಖೆಯವರನ್ನು ಕಟೀಲು ಗ್ರಾಮ ಸಭೆಗೆ ಕರೆಸಬೇಕು ಎಂದು ಮನವಿ ಮಾಡಿದ್ದರೂ ಗ್ರಾಮ ಸಭೆಗೆ ಮಾತ್ರಾ ಅಕಾರಿಗಳು ಹಾಜಾರಾಗಲೇ ಇಲ್ಲ. ಆಕ್ರೋಶಭರಿತರಾದ ರೈತರಿಗೆ ಸಮಧಾನ ಪಡಿಸಿದ ಪಂಚಾಯಿತಿ ಆಡಳಿತ ಪಂಚಾಯಿತಿ ಸಾಮಾನ್ಯ ಸಭೆಗೆ ನೀರಾವರಿ ಇಲಾಖಾಕಾರಿಗಳನ್ನು ಕರೆಸುವ ಭರವಸೆ ನೀಡಿದ್ದಾರೆ.

ನದಿಯ ಎರಡು ಬದಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಕೃಷಿ ಭೂಮಿಗೆ ಹಾನಿಯಾಗದಂತೆ ತಡೆಗೋಡೆ ನಿರ್ಮಾಣ ಆಗಬೇಕಾಗಿದೆ. ತಡೆಗೋಡೆಯಿರದೆ ಅಣೆಕಟ್ಟು ಬಾಗಿಲು ಹಾಕಿದಲ್ಲಿ ನೀರಿನ ಹರಿವಿಗೆ ಕೃಷಿ ಭೂಮಿ ಕೊಚ್ಚಿ ಹೋಗಿ ಅಪಾರ ನಷ್ಟವಾಗಲಿದೆ. ಜನಪ್ರತಿನಿಗಳು ಹಾಗೂ ಇಲಾಖಾಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳವಾಗಲಿದೆ.
ಜಗನ್ನಾಥ ಶೆಟ್ಟಿ ಸಿತ್ಲ ಕಟೀಲು,
ಪ್ರಗತಿಪರ ಕೃಷಿಕರು.

ಶಾಸಕರು ಮತ್ತು ಸಂಸದರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಸ್ಥಳ ಪರಿಶೀಲನೆ ಆಗಿದ್ದು ತ್ವರಿತವಾಗಿ ತಡೆಗೋಡೆ ನಿರ್ಮಾಣಗೊಳ್ಳುವ ಭರವಸೆ ನಮ್ಮಲ್ಲಿದೆ.
ಗೀತಾ ಪೂಜಾರಿ
ಅಧ್ಯಕ್ಷರು ಕಟೀಲು ಗ್ರಾಮ ಪಂಚಾಯಿತಿ

ನದಿಯ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸಿದಾಗ ಕೃಷಿ ಭೂಮಿಗಳ ಭೂಮಿ ಕುಸಿತ, ನೆರೆ ಹಾನಿ ತಪ್ಪುತ್ತದೆ. ಇದು ಜಿಲ್ಲಾ ಪಂಚಾಯಿತಿ ಯೋಜನೆಯಡಿ ಬರದೆ ಸಣ್ಣ ನೀರಾವರಿ ಇಲಾಖೆಯಡಿ ಬರುತ್ತದೆ. ಈ ಬಗ್ಗೆ ಇಲಾಖೆಗೆ ತಿಳಿಸಿ ಕ್ರಮಕೈಗೊಳ್ಳಲು ತಿಳಿಸಲಾಗುವುದು.
ಕಸ್ತೂರಿ ಪಂಜ
ದ.ಕ. ಜಿ.ಪಂ. ಉಪಾಧ್ಯಕ್ಷೆ
ಕಟೀಲು ಜಿಪಂ ಸದಸ್ಯರು.

Kinnigoli-2701201702 Kinnigoli-2701201703 Kinnigoli-2701201704

Comments

comments

Comments are closed.

Read previous post:
Kinnigoli-2701201701
ಕೆಮ್ರಾಲ್ ನೀರಸ ಗ್ರಾಮ ಸಭೆ

ಕಿನ್ನಿಗೋಳಿ : ಕೆಮ್ರಾಲ್ ಗ್ರಾಮ ಪಂಚಾಯಿತಿ 2016-17 ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಎಮ್. ಅಂಚನ್ ಅಧ್ಯಕ್ಷತೆಯಲ್ಲಿ ಮಂಗಳವಾರ ಗ್ರಾಮ ಪಂಚಾಯತ್...

Close