ಕಿನ್ನಿಗೋಳಿ : ಆಧುನಿಕತೆಯ ದಾವಂತದಲ್ಲಿ ಯಕ್ಷಗಾನದ ರೂಪು ರೇಷೆಗಳು ಬದಲಾಗುವ ವಾತಾವರಣ ಕಂಡು ಬರುತ್ತಿದೆ. ಹಳೆಯ ರಂಗ ಕ್ರಮಗಳು ಮೂಲ ಚೌಕಟ್ಟಿಗೆ ಯಾವುದೇ ರೀತಿಯಲ್ಲಿ ದಕ್ಕೆಯಾಗದಂತೆ ಪರಂಪರೆಯನ್ನು ಉಳಿಸಿಕೊಂಡು ಬದಲಾಗಬೇಕು. ಎಂದು ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ, ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕಟೀಲು ಶ್ರೀ ದುರ್ಗಾಮಕ್ಕಳ ಮೇಳದ ಸಹಯೋಗದಲ್ಲಿ ಕಟೀಲು ಸರಸ್ವತಿ ಸದನದಲ್ಲಿ ಭಾನುವಾರ ನಡೆದ ಆಸಕ್ತ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರಿಗಾಗಿ ರಂಗಪ್ರಸಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು.
ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಯಕ್ಷಗಾನ ಕಲೆಯ ಬಗ್ಗೆ ಕಲಾವಿದರಿಗೆ ಆಸಕ್ತಿ ಹಾಗೂ ಕಲಿಯುವ ಮನಸ್ಥಿತಿ ಗಾಡವಾಗಿ ಬೆಳೆದಾಗ ಹಾಗೂ ಪ್ರೇಕ್ಷಕ ವರ್ಗ ಪ್ರೋತ್ಸಾಹ ನೀಡಿದಾಗ ಮಾತ್ರ ಕಲೆಯೂ ಕಲಾವಿದರೂ ಬೆಳೆಯಬಲ್ಲರು. ಎಂದು ಹೇಳಿದರು.
ಕಟೀಲು ದುರ್ಗಾಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ, ವೇಣುಗೋಪಾಲ ತತ್ವಮಸಿ, ಸಂಘಟಕ ಸಿರಿಬಾಗಿಲು ರಾಮಕೃಷ್ಣ ಮಯ್ಯ ಉಪಸ್ಥಿತರಿದ್ದರು.
ಯೋಗೀಶ್ ರಾವ್ ಚಿಗುರುಪಾದೆ ಸ್ವಾಗತಿಸಿ ಪ್ರಸ್ತಾವನೆಗೈದರು. ವಿನಯ್ಆಚಾರ್ ಹೊಸಬೆಟ್ಟು ವಂದಿಸಿದರು. ಹರೀಶ ಬಳಂತಿಮೊಗರು ಕಾರ್ಯಕ್ರಮ ನಿರೂಪಿಸಿದರು.
ಬಲಿಪ ನಾರಾಯಣ ಭಾಗವತರ ಮಾರ್ಗದರ್ಶನದಲ್ಲಿ ಕರ್ಣಪರ್ವ, ಅತಿಕಾಯ, ಮೈರಾವಣ ಕಾಳಗ, ಶ್ರೀ ಕೃಷ್ಣಪಾರಿಜಾತ ಪ್ರಸಂಗಗಳ ಅಧ್ಯಯನ ಯೋಗ್ಯ ಪ್ರದರ್ಶನ ಹಾಗೂ ದಾಖಲಾತಿ ನಡೆಯಿತು. ಶ್ರೀ ದುರ್ಗಾ ಮಕ್ಕಳ ಮೇಳದ ಪೂರ್ವರಂಗ ಹಾಗೂ ಒಡ್ಡೋಲಗಗಳ ಪ್ರಾಕಾರಗಳನ್ನು ದಾಖಲಿಸಿಲಾಯಿತು.