ಕಿನ್ನಿಗೋಳಿ : ಶಿಕ್ಷಣಾ ಕ್ಷೇತ್ರದಲ್ಲಿ 50 ಸಂವತ್ಸರಗಳ ಸಾರ್ಥಕ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಜ್ಞಾನದಾಹ ತಣಿಸಿ ಅವರ ಬಾಳನ್ನು ಬೆಳಗಿಸಿದ ಕರಾವಳಿಯ ಪ್ರಖ್ಯಾತ ಶಿಕ್ಷಣ ಸಂಸ್ಥೆ ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜು, ಹಳೆಯಂಗಡಿ ಸುವರ್ಣ ಸಂಭ್ರಮ ಫೆ. 12 ಭಾನುವಾರ ನಡೆಯಲಿದೆ.
1963ರಲ್ಲಿ ಮಂಗಳೂರು ತಾಲೂಕು ಬೋರ್ಡ್ ಅಧ್ಯಕ್ಷ ರಾಜೀವ ಭಂಡಾರಿ, ಎಚ್. ನಾರಾಯಣ ಸನಿಲ್ ಮತ್ತು ಗಣೇಶ್ ಶೆಣೈ ಅವರ ಅವಿರತ ಪ್ರಯತ್ನದಿಂದ ಸ್ಥಾಪನೆಗೊಂಡಿರುವ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಫೆ.12 ಭಾನುವಾರ ಬೆಳಿಗ್ಗೆ 9.00ಗಂಟೆಗೆ ಮುಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ ಸಾವಂತರು ಧ್ವಜಾರೋಹಣಗೈಯಲಿದ್ದಾರೆ. ಸಾಯಂಕಾಲ 4.00 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
ಸುವರ್ಣ ಮಹೋತ್ಸವದ ಕೊಡುಗೆಯಾಗಿ ನಿರ್ಮಿಸಲಾದ ನಾರಾಯಣ ಸನಿಲ್ ರಂಗ ಮಂದಿರದ ಉದ್ಘಾಟನೆಯನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ನೆರವೇರಿಸಲಿದ್ದಾರೆ. ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ *ಪೊನ್ನ ಕದಿರು* ವನ್ನು ನಿಟ್ಟೆ ವಿಶ್ವ ವಿದ್ಯಾಲಯ ಸಹ ಕುಲಾಪತಿ ಡಾ. ಎಂ. ಶಾಂತಾರಾಮ ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಹಾಗೂ ಹಳೆಯಂಗಡಿ ಮೂಲದ ಚೆನೈನ ಉದ್ಯಮಿ ಅಶೋಕ್ ಶೆಟ್ಟಿ ಭಾಗವಹಿಸಲಿದ್ದಾರೆ. ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಎಸ್.ಎಸ್. ಸತೀಶ್ ಭಟ್, ಜಿ.ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯ ಜೀವನ್ ಪ್ರಕಾಶ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜ, ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್ ಭಾಗವಹಿಸಲಿದ್ದಾರೆ ಎಂದು ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಪಂಜದಗುತ್ತು ಶ್ರೀ ಶಾಂತಾರಾಮ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.