ಬಪ್ಪನಾಡಿನಲ್ಲಿ ಶತಚಂಡಿಕಾಧ್ವರ ಯಾಗ

ಮೂಲ್ಕಿ: ತುಳುನಾಡಿನ ಐತಿಹಾಸಿಕ ಕ್ಷೇತ್ರವಾಗಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕರ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಒಂಭತ್ತು ಮಾಗಣೆಯ ಭಕ್ತರ ಕೂಡುವಿಕೆಯಲ್ಲಿ ಮೇ. 3ರಿಂದ 5ರವರೆಗೆ ಶತ ಚಂಡಿಕಾಧ್ವರ ಯಾಗವನ್ನು ನಡೆಸುವ ಸಂಕಲ್ಪವನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಬೆಳ್ಳಿಯ ಕವಚದ ಸ್ವರ್ಣ ಲೇಪಿತ ದೇವಿಯ ಪ್ರತಿಬಿಂಬವನ್ನು ಸಮರ್ಪಿಸುವ ಕಾರ್ಯವನ್ನು ಸಹ ಸಮಿತಿ ಮಾಡಲಿದೆ ಎಂದು ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮೂಲ್ಕಿ ಚಂದ್ರಶೇಖರ ಸುವರ್ಣ ತಿಳಿಸಿದರು.
ಅವರು ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜ್ಞಾನಮಂದಿರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ನಡೆದ ಒಂಭತ್ತು ಮಾಗಣೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ವಿಶೇಷ ಸಭೆಯಲ್ಲಿ ಈ ಮಾಹಿತಿ ನೀಡಿದರು.
ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹಾಗೂ ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆಯನ್ನು ವಹಿಸಿ, ಕ್ಷೇತ್ರದ ಬೆಳವಣಿಗೆಯಲ್ಲಿ ಶತ ಚಂಡಿಕಾಧ್ವರ ಯಾಗವು ಒಳ್ಳೆಯ ಧಾರ್ಮಿಕ ಚಿಂತನೆಯಾಗಿದೆ. ಮುಂದಿನ ವರ್ಷದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೂ ಇದು ಪ್ರೇರಣೆಯಾಗಲಿ ಎಂದರು.
ಆಡಳಿತ ಸಮಿತಿಯ ಅಧ್ಯಕ್ಷ ಹಾಗೂ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಿಗೆ ಹಾಗೂ ದೇವಳದ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರವನ್ನು ಮುಕ್ತವಾಗಿ ನೀಡಲಾಗುವುದು, ಎಲ್ಲಾ ಭಕ್ತರು ಇಂತಹ ಕಾರ್ಯದಲ್ಲಿ ತಮ್ಮನ್ನು ತೊಡಗಿಕೊಳ್ಳಬೇಕು ಎಂದು ಹೇಳಿದರು.
ಶತ ಚಂಡಿಕಾಧ್ವರ ಯಾಗದ ಧಾರ್ಮಿಕ ವಿಧಿ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವೇ.ಮೂ. ಕೊಲೆಕಾಡಿ ವಾದಿರಾಜ ಉಪಾಧ್ಯಾಯ ನೀಡಿ, ಬಪ್ಪನಾಡಿನ ಇತಿಹಾಸದಲ್ಲಿಯೇ ಇಂತಹ ಯಾಗವೊಂದು ಪ್ರಥಮವಾಗಿ ನಡೆಯುತ್ತಿದ್ದು, ಸರ್ವ ಭಕ್ತರ ಇಷ್ಠಾರ್ಥದಂತೆ ಲೋಕಕಲ್ಯಾಣಾರ್ಥವಾಗಿ ನಡೆಸುವ ಸತ್ ಸಂಕಲ್ಪವೇ ಮೂಲವಾಗಿದೆ ಎಂದರು.
ಕಿನ್ನಿಗೋಳಿ ಸ್ವಾಮೀ ವಿವೇಕಾನಂದ ಸೇವಾ ಟ್ರಸ್ಟ್‌ನ ಅಧ್ಯಕ್ಷ ಚಾವಡಿಮನೆ ಜಗನ್ನಾಥ ಶೆಟ್ಟಿ ಮಾತನಾಡಿ, ಸ್ನೇಹ, ಸಾಮರಸ್ಯದ ನಾಡಿಗಾಗಿ ತಮ್ಮ ಆಶಯದಂತೆ ದೇವಿಗೆ ವಿಶೇಷ ಸೇವೆಯನ್ನು ನೀಡಬೇಕು ಎಂದು ಸಂಕಲ್ಪಿಸಿದಾಗ ಗಣೇಶೋತ್ಸವ ಸಮಿತಿ ಸಹಕಾರ ನೀಡಿದೆ. ಇದು ದೇವಳ ಬೆಳಗುವುದಕ್ಕೂ ಹಾಗೂ ಭಕ್ತಿಯ ಶಕ್ತಿ ಹೆಚ್ಚುವುದಕ್ಕೂ ಪರೋಕ್ಷವಾಗಿ ಕಾರಣವಾಗಲಿ, ಮುಂದಿನ ಬ್ರಹ್ಮಕಲಶೋತ್ವವಕ್ಕೂ ಶಕ್ತಿ ತುಂಬಲಿ ಎಂದು ಹೇಳಿದರು.
ದೇವಳದ ತಂತ್ರಿಗಳಾದ ವೇ.ಮೂ. ಶಿಬರೂರು ವೇದವ್ಯಾಸ ತಂತ್ರಿ, ಅರ್ಚಕ ವೇ.ಮೂ.ಶ್ರೀಪತಿ ಉಪಾಧ್ಯಾಯ, ವೇ.ಮೂ. ನರಸಿಂಹ ಭಟ್, ವೇ.ಮೂ. ಕೃಷ್ಣ ರಾಜ್ ಭಟ್ ಮಾತನಾಡಿದರು.
ಸಮಿತಿಯ ಅಧ್ಯಕ್ಷ ಚಂದ್ರಶೇಖರ ಸುವರ್ಣ ಸ್ವಾಗತಿಸಿ, ಪ್ರಸ್ತಾವನೆಗೈದರು, ಪ್ರಧಾನ ಕಾರ್ಯದರ್ಶಿ ಸುನಿಲ್ ಆಳ್ವಾ ನಿರೂಪಿಸಿದರು.

Mulki-01031709

 

Comments

comments

Comments are closed.

Read previous post:
Kinnigoli01031703
ಯಶೋಗಾಥೆ ಕೃತಿ ಬಿಡುಗಡೆ

ಕಿನ್ನಿಗೋಳಿ : ಜನಪರ ಚಿಂತನೆ ಹಾಗೂ ಸರಳ ಜೀವನವನ್ನು ಮೈಗೂಡಿಸಿ ಕೊಂಡ ಕೊಡೆತ್ತೂರು ಉಡುಪ ಕುಟುಂಬ ಕಲೆ ಸಂಸ್ಕೃತಿ, ಶಿಕ್ಷಣ ಧಾರ್ಮಿಕ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಿದ್ದು ಎಲ್ಲರಿಗೂ...

Close